Jio: ಶೀಘ್ರದಲ್ಲೇ ಜಿಯೋ ಟೆಲಿಕಾಂನಿಂದ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆ ಪ್ರಾರಂಭ: ವರದಿ
ಭಾರತದ ಟೆಲಿಕಾಂ ದೈತ್ಯ ಜಿಯೋ ಶೀಘ್ರದಲ್ಲೇ ಭಾರತದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡುವ ಸುದ್ದಿ ಹರಿದಾಡ್ತಿದೆ. ಸದ್ಯದಲ್ಲೇ ಭಾರತದಲ್ಲಿ ಸ್ಯಾಟ್‌ಲೈಟ್ ಆಧಾರಿತ ಗಿಗಾಬಿಟ್ ಫೈಬರ್ ಸೇವೆ (JioSpaceFiber) ಪ್ರಾರಂಭಿಸಬಹುದು ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಅನುಮತಿಯನ್ನು ಪಡೆಯುವುದಕ್ಕೆ ಜಿಯೋ ಅರ್ಜಿಯನ್ನು ಸಹ ಸಲ್ಲಿಸಿದೆ.
ಹೌದು, ಜಿಯೋ ಸ್ಪೇಸ್ ಫೈಬರ್ ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ ಅನುಮತಿ ಪಡೆಯಲು ಬೇಕಾದ ದಾಖಲೆಗಳನ್ನು ರಿಲಯನ್ಸ್ ಜಿಯೋ ಸಲ್ಲಿಕೆ ಮಾಡಿದೆ. ಅಲ್ಲದೆ ನಿಯಂತ್ರಕದಿಂದ ಅನುಮೋದನೆಯನ್ನು ಪಡೆದ ನಂತರ ಜಿಯೋ ತನ್ನ ಉಪಗ್ರಹ ಸಂವಹನ ಸೇವೆಗಳನ್ನು ದೇಶದಲ್ಲಿ ಪ್ರಾರಂಭಿಸಲು ಅನುಮತಿಸುತ್ತದೆ. ಹಾಗಾದ್ರೆ ಏನಿದೆ JioSpaceFiber ಸೇವೆ? ಇದರ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಟೆಲಿಕಾಂ ಭಾರತದಲ್ಲಿ JioSpaceFiber ಸೇವೆಯನ್ನು ಪರಿಚಯಿಸಲು ಮುಂದಾಗಿದೆ. ಜಿಯೋ ಟೆಲಿಕಾಂ ತನ್ನ ಸ್ಯಾಟ್‌ಕಾಮ್ ತಂತ್ರಜ್ಞಾನವನ್ನು ಕಳೆದ ವರ್ಷ 2023 ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಿದೆ. ಇದು ಶೀಘ್ರದಲ್ಲೇ ದೇಶದಲ್ಲಿ ಪ್ರಾರಂಭವಾಗುವುದರಿಂದ ಇದುವೇ ದೇಶದ ಮೊದಲ ಉಪಗ್ರಹ ಆಧಾರಿತ ಗಿಗಾ ಫೈಬರ್ ಇಂಟರ್ನೆಟ್ ಸೇವೆ ಆಗಿರಲಿದೆ ಎಂದು ವರದಿಯಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವರದಿ ಮಾಡಿರುವ ದಿ ಎಕನಾಮಿಕ್ ಟೈಮ್ಸ್ ಸ್ಯಾಟ್‌ಕಾಮ್ ಸೇವೆಗಳನ್ನು ಪ್ರಾರಂಭಿಸಲು ಜಿಯೋ IN-SPAce ನಿಂದ ಅಗತ್ಯವಿರುವ ಎಲ್ಲಾ ಅನುಮೋದನೆಗಳು ಮತ್ತು ಅಧಿಕಾರಗಳನ್ನು ಶೀಘ್ರದಲ್ಲೇ ಸ್ವೀಕರಿಸಬಹುದು ಎಂದು ಹೇಳಿದೆ. ಭಾರತದಲ್ಲಿ ಉಪಗ್ರಹ ಸೇವೆಗಳನ್ನು ನಿಯೋಜಿಸಲು ಅನುಮೋದನೆಯನ್ನು ಪಡೆಯಲು, ನಿರ್ವಾಹಕರು ಭದ್ರತಾ ಅನುಮತಿಗಳನ್ನು ಮತ್ತು ಹಲವಾರು ಸಚಿವಾಲಯಗಳಿಂದ ಅನುಮೋದನೆಯನ್ನು ಪಡೆಯಬೇಕಿದೆ ಎಂದು ವರದಿಯಾಗಿದೆ.

ಇನ್ನು ಕಳೆದ ವರ್ಷ ಜಿಯೋ ಟೆಲಿಕಾಂ ತನ್ನ JioSpaceFiber ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಿ ಗಮನಸೆಳೆದಿತ್ತು. ಅಲ್ಲದೆ ಈಗಾಗಲೇ ಗುಜರಾತ್‌ನ ಗಿರ್, ಛತ್ತೀಸ್‌ಗಢದ ಕೊರ್ಬಾ, ಒಡಿಶಾದ ನಬ್ರಂಗ್‌ಪುರ ಮತ್ತು ಅಸ್ಸಾಂನ ONGC-ಜೋರ್ಹತ್ ಪ್ರದೇಶದಲ್ಲಿ JioSpaceFiber ಸೇವೆಯ ಮೂಲಕ ದೂರದ ಸ್ಥಳಗಳನ್ನು ಸಂಪರ್ಕಿಸಿರುವುದಾಗಿ ಹೇಳಿಕೊಂಡಿತ್ತು. ಇದು ಜಿಯೋದ ಉಪಗ್ರಹ ಆಧಾರಿತ ಗಿಗಾ ಫೈಬರ್ ಇಂಟರ್ನೆಟ್ ಸೇವೆಯ ಮೊದಲ ಹೆಜ್ಜೆಯಾಗಿದೆ.
ಇದಲ್ಲದೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕಕ್ಕೆ ಪ್ರವೇಶವನ್ನು ಒದಗಿಸುವ ಸಲುವಾಗಿ, SES ನ O3b ಮತ್ತು ಹೊಸ O3b mPOWER ಅನ್ನು ಬಳಸಿಕೊಂಡು ತನ್ನ ಮಧ್ಯಮ ಭೂಮಿಯ ಕಕ್ಷೆಯ (MEO) ಉಪಗ್ರಹಗಳಿಗೆ ಪ್ರವೇಶಕ್ಕಾಗಿ ಲಕ್ಸೆಂಬರ್ಗ್ ಮೂಲದ ಉಪಗ್ರಹ ದೂರಸಂಪರ್ಕ ಜಾಲ ಪೂರೈಕೆದಾರ Société Européenne des Satellites (SES) ಜೊತೆಗೆ Jio ಪಾಲುದಾರಿಕೆ ಹೊಂದಿರುವುದು ಗಮನಿಸಬೇಕಾದ ವಿಚಾರ. ಇದು ದೇಶದ ಮೊದಲ ಸ್ಯಾಟ್‌ಲೈಟ್ ಗಿಗಾಬಿಟ್ ಫೈಬರ್ ಸೇವೆಗೆ ಇಂಬುಕೊಡುವಂತೆ ಮಾಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜಿಯೋದ ಸ್ಯಾಟ್‌ಕಾಮ್ ಸೇವೆಗಳು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್, ಯುಟೆಲ್‌ಸ್ಯಾಟ್ ಗ್ರೂಪ್‌ನ ಒನ್‌ವೆಬ್ ಮತ್ತು ಅಮೆಜಾನ್‌ನ ಪ್ರಾಜೆಕ್ಟ್ ಕೈಪರ್‌ನೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ. ಈಗಾಗಲೇ ಎಲೋನ್ ಮಸ್ಕ್ ಅವರ ಸ್ಟಾರ್ ಲಿಂಕ್ ಭಾರತದಲ್ಲಿ ತಮ್ಮ ಸೇವೆಗಳನ್ನು ಪ್ರಾರಂಭಿಸಲು ಅನುಮತಿ ಪಡೆಯುವುದಕ್ಕೆ ಪ್ರಯತ್ನಿಸುತ್ತಿದೆ. ಇದರ ನಡುವೆ ಜಿಯೋ ಇಟ್ಟಿರುವ ಹೆಜ್ಜೆ ಹೊಸ ಕ್ರಾಂತಿಯನ್ನು ಬರೆಯುವ ಸೂಚನೆ ನೀಡಿದೆ. ಸದ್ಯ ದೇಶದಲ್ಲಿ ಜಿಯೋ ಟೆಲಿಕಾಂ ಬಿಟ್ಟರೆ ಬೇರೆ ಯಾವ ಕಂಪೆನಿ ಕೂಡ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸುವ ಯೋಜನೆಗಳ ಬಗ್ಗೆ ಪ್ರಕಟಿಸಿಲ್ಲ ಅನ್ನೊದು ಇಂಟ್ರೆಸ್ಟಿಂಗ್ ವಿಚಾರವಾಗಿದೆ.


Click it and Unblock the Notifications








