ಬರ್ತಿದೆ ಜಿಯೋ ಹಬ್..! ನಿಮ್ಮೂರಿನಲ್ಲಿಯೇ ಮಾಲ್ ಒಪನ್..!
ದೇಶದ ಅತಿ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ದೇಶಿಯ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ನಂತರ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಚಿಂತಿಸುತ್ತಿದ್ದಾರೆ. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಸಣ್ಣ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬೀಳುವುದು ಗ್ಯಾರಂಟಿ. ಹೀಗಾಗಲೇ ಟೆಲಿಕಾಂ, ಡಿಟಿಎಚ್, ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸಲು ಮುಂದಾಗುತ್ತಿರುವ ಜಿಯೋ ಕಣ್ಣಿಗೆ ಈಗ ಗ್ರಾಮೀಣ ಭಾರತ ಬಿದ್ದಿದೆ.

ಹೌದು, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ತನ್ನ ಉತ್ಪನ್ನಗಳನ್ನು ಗ್ರಾಮೀಣ ಭಾರತಕ್ಕೂ ತಲುಪಿಸುಬೇಕು ಎನ್ನುವ ಉದ್ದೇಶದಿಂದ ಸಣ್ಣ ಸಣ್ಣ ನಗರ, ಪಟ್ಟಣಗಳಲ್ಲಿ ರಿಲಾಯನ್ಸ್ ಜಿಯೋ ಹಬ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಎಲ್ಲಾ ತರಹದ ಗ್ರಾಹಕರಿಗೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಂದ ದಿನಸಿ ಉತ್ಪನ್ನಗಳವರೆಗೂ ಎಲ್ಲಾ ವಸ್ತುಗಳು ಇಲ್ಲಿ ಸಿಗುತ್ತವೆ. ಸಣ್ಣ ನಗರಗಳ ಜನರಿಗೆ ಜಿಯೋ ಹಬ್‌ಗಳು ಮೊದಲ ಮಾಲ್ ಶಾಪಿಂಗ್ ಅನುಭವವನ್ನು ನೀಡುತ್ತವೆ ಎಂದು ಹೇಳಿಕೊಂಡಿದೆ. ಜಿಯೋ ಹಬ್ ಏನೇಲ್ಲಾ ವಿಶೇಷತೆ ಹೊಂದಿದೆ ಎಂಬುದನ್ನು ಮುಂದೆ ನೋಡಿ.

ಗ್ರಾಮೀಣ ಭಾರತದಲ್ಲಿ ವ್ಯಾಪಾರ ಉತ್ತೇಜನ
ರಿಲಾಯನ್ಸ್ ರಿಟೇಲ್ ಲಿಮಿಟೆಡ್‌ನ ಭೌತಿಕ ಸ್ಟೋರ್ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಡಿಜಿಟಲ್ ಇನ್‌ಫ್ರಾಸ್ಟ್ರಕ್ಚರ್ ವ್ಯಾಪಾರವನ್ನು ಸಣ್ಣ ಸಣ್ಣ ನಗರಗಳಿಗೆ ವಿಸ್ತರಿಸಬೇಕು ಎನ್ನುವ ಉದ್ದೇಶದೊಂದಿಗೆ ಜಿಯೋ ಹಬ್ ಸ್ಥಾಪಿಸಲು ಅಂಬಾನಿ ಮುಂದಾಗಿದ್ದಾರೆ. ಆಧುನಿಕ ರಿಟೇಲ್ ಮಾರುಕಟ್ಟೆ ಮತ್ತು ಆನ್‌ಲೈನ್ ಶಾಪಿಂಗ್‌ನಲ್ಲಿ ತೊಡಗಿಸಿಕೊಳ್ಳದ ಪ್ರದೇಶಗಳನ್ನು ಜಿಯೋ ಟಾರ್ಗೇಟ್ ಮಾಡಿದೆ.

ಗಿಗಾಫೈಬರ್ ನಂತರ ದೊಡ್ಡ ಯೋಜನೆ
ರಿಲಾಯನ್ಸ್ ಜಿಯೋ ಹಬ್ ಯೋಜನೆ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ನಂತರ RIL ಕಂಪನಿಗೆ ಅತಿದೊಡ್ಡ ಕೇಂದ್ರೀಕೃತ ಯೋಜನೆಯಾಗಿದೆ. ಅಂಬಾನಿ ಕನಸಿನಂತೆ ಟೆಲಿಕಾಂ, ರಿಟೇಲ್ ಮತ್ತು ಇ-ಕಾಮರ್ಸ್‌ಗಳನ್ನು ಒಂದೇ ತಂತ್ರಜ್ಞಾನ ವೇದಿಕೆಯನ್ನಾಗಿ ಮಾಡಲು ಜಿಯೋ ಹಬ್ ಯೋಜನೆ ಸಹಕಾರಿಯಾಗಲಿದೆ ಎಂದು ಜಿಯೋದ ಹೆಸರೆಳಲಿಚ್ಚಿಸದ ಅಧಿಕಾರಿ ಹೇಳಿದ್ದಾರೆ.

ಅಂಬಾನಿ ಕನಸಿನ ಯೋಜನೆ
ಜಿಯೋ ಹಬ್ ಯೋಜನೆ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್‌ಮನ್ ಮುಖೇಶ್ ಅಂಬಾನಿಯವರ ಕನಸಿನ ಯೋಜನೆಯಾಗಿದೆ. ಸಣ್ಣ ಪಟ್ಟಣಗಳಿಗೆ ದೊಡ್ಡ ಪ್ರಮಾಣದಲ್ಲಿ ನಾವೂ ತಲುಪಬೇಕೆಂಬುದನ್ನು ಕಂಪನಿ ಅರಿತಿದೆ. ಜುಲೈ 5ರಂದು ಆಯೋಜಿಸಿದ್ದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಮಾತನಾಡಿ, ಆನ್‌ಲೈನ್‌ನಿಂದ ಆಫ್‌ಲೈನ್‌ವರೆಗೆ ಹೊಸ ಕಾಮರ್ಸ್‌ನಂತಹ ಹೈಬ್ರಿಡ್ ಪ್ಲಾಟ್‌ಫಾರ್ಮ್ ಸೃಷ್ಟಿಸಿದರೆ ರಿಲಾಯನ್ಸ್ ಬೆಳವಣಿಗೆಗೆ ದೊಡ್ಡ ಅವಕಾಶ ಸಿಗುತ್ತದೆ ಎಂದು ಹೇಳಿದ್ದರು. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ.

ಅನುಭವ ಕೇಂದ್ರವೂ ಹೌದು..!
ಜಿಯೋ ಹಬ್ ಲಭ್ಯವಿರುವ ಉತ್ಪನ್ನಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲದೇ ಅನುಭವ ಕೇಂದ್ರವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. ಹಾಗೂ ದಾಸ್ತಾನು ಮಳಿಗೆಯಾಗಿಯೂ ಚಟುವಟಿಕೆ ನಡೆಸುತ್ತದೆ. ಹಾಗೂ ಹೊಸ ಇ-ಕಾಮರ್ಸ್ ಕರಡು ನೀತಿಯಂತೆ ಶೇ.100ರಷ್ಟು ಭಾರತದ ಮಾಲೀಕತ್ವವನ್ನು ಹೊಂದಿರುವುದರಿಂದ ಕಾರ್ಯಾರಂಭಕ್ಕೆ ಯಾವುದೇ ಅಡಚಣೆಯಿಲ್ಲ. ಕಳೆದ ತಿಂಗಳು ಕೇಂದ್ರ ಸರ್ಕಾರ ಹೊಸ ಇ-ಕಾಮರ್ಸ್ ಪಾಲಿಸಿಯನ್ನು ತಂದು ಕೇವಲ ಭಾರತೀಯರ ಮಾಲೀಕತ್ವದ ಕಂಪನೆಗಳು ರಿಟೇಲ್ ಕಂಪನಿಗಳನ್ನು ಸ್ಥಾಪಿಸಬಹುದು ಎಂದು ಹೇಳಿದೆ.

800 ಜಿಯೋ ಹಬ್
ಭಾರತದಾದ್ಯಂತ 800 ಜಿಯೋ ಹಬ್‌ಗಳನ್ನು ತೆರೆಯಲು ರಿಲಾಯನ್ಸ್ ನಿರ್ಧರಿಸಿದೆ. ಜಿಯೋ ಹಬ್ ಸ್ಥಾಪನೆಗೆ ಬೇಕಾದ ಹೂಡಿಕೆಯ ಮೌಲ್ಯವನ್ನು ಆದಷ್ಟು ಬೇಗ ಅಂತಿಮಗೊಳಿಸಿ ಜಿಯೋ ಹಬ್‌ಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ ಎಂದು ರಿಲಾಯನ್ಸ್ ಸಿಬ್ಬಂದಿ ಹೇಳಿದ್ದಾರೆ.

ಪ್ರಾದೇಶಿಕತೆಗೆ ಹೆಚ್ಚು ಒತ್ತು
ರಿಲಾಯನ್ಸ್‌ನ ಹೊಸ ಯೋಜನೆಯೂ ಸ್ಥಳೀಯ ಮಾರುಕಟ್ಟೆಯನ್ನು ತಲುಪುವ ಉದ್ದೇಶ ಹೊಂದಿದೆ. ಇದರಿಂದ ಗ್ರಾಮೀಣ ವ್ಯಾಪಾರಿಗಳ ಹಾಗೂ ಗ್ರಾಮೀಣ ಗ್ರಾಹಕರ ಆಯ್ಕೆಯನ್ನು ತಿಳಿಯಲು ಸಹಾಯವಾಗುತ್ತದೆ. ಭಾರತೀಯ ಗ್ರಾಹಕರಲ್ಲಿ ದೊಡ್ಡ ಮಟ್ಟದ ಸಂಖ್ಯೆಯ ಗ್ರಾಹಕರು ಇನ್ನೂ ಆಫ್‌ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. 2015ರಿಂದ ಭಾರತದಲ್ಲಿ ಆನ್‌ಲೈನ್ ರಿಟೇಲ್ ಮಾರುಕಟ್ಟೆ ಮೂರು ಪಟ್ಟು ಹೆಚ್ಚಾಗಿದೆ ಎಂದು eMarketer ವರದಿ ಹೇಳಿದೆ.

ಹೀಗಾಗಲೇ 7500 ಸ್ಟೋರ್‌ಗಳು
ರಿಲಾಯನ್ಸ್ ಹೀಗಾಗಲೇ 4,400 ನಗರಗಳಲ್ಲಿ ತನ್ನ 7,500 ಸ್ಟೋರ್‌ಗಳನ್ನು ಹೊಂದಿದೆ. ರಿಲಾಯನ್ಸ್ ಫ್ರೆಶ್, ರಿಲಾಯನ್ಸ್ ಡಿಜಿಟಲ್, ರಿಲಾಯನ್ಸ್ ಜುವೆಲ್ಸ್, ರಿಲಾಯನ್ಸ್ ಟ್ರೆಂಡ್ ತರಹದ ಬ್ರಾಂಡ್‌ಗಳ ಮೂಲಕ ಮೂಲಕ ದಿನಸಿ, ಎಲೆಕ್ಟ್ರಾನಿಕ್ಸ್, ಆಭರಣ, ಬಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

ಜಿಯೋ ಪಾಯಿಂಟ್ಸ್
ಹೀಗಾಗಲೇ ಭಾರತದಾದ್ಯಂತ 5,000 ಜಿಯೋ ಪಾಯಿಂಟ್‌ಗಳನ್ನು ಹೊಂದಿದೆ. ಇವುಗಳು 500 ಚ.ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಉಪ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಲೆ ಎತ್ತಿವೆ. ಸರ್ವೀಸ್ ಮತ್ತು ಗ್ರಾಹಕ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಬ್ರಾಂಡ್ ಜಿಯೋ
ಜಿಯೋ ಮೂಲಕ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿರುವಾಗ ಮುಖೇಶ್ ಅಂಬಾನಿ ಜಿಯೋವನ್ನು ಬ್ರಾಂಡ್ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿಯೇ ಜಿಯೋ ಹಬ್ ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಲಿದೆ. ಹಾಗೂ ಬ್ರಾಂಡ್ ಜಿಯೋ ಮೇಲೆಯೇ ಬಂಡವಾಳ ಹೂಡಿಕೆಯಾಗಲಿದೆ. ಗ್ರಾಮೀಣ ಭಾಗದಲ್ಲಿ 4G ನೆಟ್‌ವರ್ಕ್ ಮೂಲಕ ಜನಪ್ರಿಯತೆ ಗಳಿಸಿರುವ ಜಿಯೋ. ಈಗ ಅದೇ ಜನಪ್ರಿಯತೆಯಿಟ್ಟುಕೊಂಡು ಮತ್ತೊಂದು ಉದ್ಯಮವನ್ನು ಸ್ಥಾಪಿಸಲು ಮುಂದಾಗಿದೆ.

ಗ್ರಾಮೀಣದಲ್ಲಿ ಜಿಯೋ ಬೆಸ್ಟ್
ಭಾರತದ ಗ್ರಾಮೀಣ ಮಾರುಕಟ್ಟೆಗಳಲ್ಲಿ (B ಮತ್ತು C ವಲಯಗಳಲ್ಲಿ) ಜಿಯೋ 4G ನೆಟ್‌ವರ್ಕ್‌ನ್ನು ಉತ್ತಮವಾಗಿಯೇ ನೀಡುತ್ತಿದೆ. ಜೂನ್ 2018ರ ಹೊತ್ತಿಗೆ 25 ದಶಲಕ್ಷ ಜಿಯೋಫೋನ್‌ಗಳನ್ನು ಮಾರಾಟ ಮಾಡಿ ಯಶಸ್ಸು ಕಂಡಿದೆ. ಮಾರ್ಚ್ 2020ರ ಹೊತ್ತಿಗೆ 40 ಕೋಟಿ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.


Click it and Unblock the Notifications








