ಈ ರೆಸ್ಟೋರೆಂಟ್‌ನಲ್ಲಿ ರೋಬೋಗಳೇ ಸರ್ವರ್..!
ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಗಮನಿಸುತ್ತಿದ್ದ ಕೆಲವರು ಬಾಯಿ ಮಾತಿಗೆ ಮುಂದೊಂದು ದಿನ ಊಟ ಮಾಡಿಸೋಕು ಮಿಷಿನ್ ಬರುತ್ತೆ ಅಂತ ಹೇಳುತ್ತಿದ್ದರು. ಆದರೆ ಬಾಯಿ ಮಾತಿಗೆ ಹೇಳುತ್ತಿದ್ದ ವಿಚಾರ ನಿಜವಾಗಿ ಬಿಟ್ಟಿದೆ. ರೊಬೋಟ್ ಗಳೇ ನಿಮಗೆ ಊಟ ಬಡಿಸುವ ಕೆಲಸವನ್ನು ಮಾಡುತ್ತವೆ. ನಿಮಗೆ ಯಾವ ಊಟ ಬೇಕು ಎಂಬುದನ್ನು ಅವುಗಳೇ ಕೇಳಿ ತಿಳಿದುಕೊಳ್ಳುತ್ತವೆ.
ನಿಮ್ಮ ಊಟದ ಆರ್ಡರ್ ನ್ನು ನೀವು ಯಾವುದೋ ವ್ಯಕ್ತಿಗೆ ಅಲ್ಲ ಬದಲಾಗಿ ಒಂದು ರೊಬೋಟ್ ಗೆ ನೀಡಬೇಕು. ಅರೆ ಇದೇನಿದು? ರೊಬೋಟ್ ಊಟ ಬಡಿಸುತ್ತಾ ಎಂದು ಕೇಳುತ್ತಿದ್ದೀರಾ? ಹೌದು. ಅದೇನು ವಿಷಯ ಎಂದು ತಿಳಿಯಲು ಮುಂದೆ ಓದಿ.

ನೇಪಾಳದ ರಾಜಧಾನಿಯಲ್ಲಿ ಹೊಸದಾಗಿ ಒಂದು ರೆಸ್ಟೋರೆಂಟ್ ತೆರೆಯಲಾಗಿದೆ. ಆ ರೆಸ್ಟೋರೆಂಟ್ ನ ಮುಂಭಾಗದಲ್ಲಿ "where food meets technology" ಅಂತ ಬರೆಯಲಾಗಿದೆ. ಅಂದರೆ ಇಲ್ಲಿ ಆಹಾರವು ತಾಂತ್ರಿಕವಾಗಿದೆ ಎಂದರ್ಥ. ಹೌದು. ಕಠ್ಮಂಡುವಿನಲ್ಲಿ ತೆರೆಯಲಾದ ಒಂದು ರೆಸ್ಟೋರೆಂಟ್ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಯಾಕೆಂದರೆ ಇಲ್ಲಿ ಆಹಾರವನ್ನು ಮನುಷ್ಯರು ಸರ್ವ್ ಮಾಡುವುದಿಲ್ಲ ಬದಲಾಗಿ ರೊಬೋಟ್ ಗಳು ಸರ್ವ್ ಮಾಡುತ್ತದೆ.
ಆ ರೆಸ್ಟೋರೆಂಟ್ ನ ಹೆಸರು ನೌಲೋ (naulo) ಅಂದರೆ ನೇಪಾಳಿ ಭಾಷೆಯಲ್ಲಿ ಹೊಸತು ಎಂದರ್ಥ. ಈ ರೆಸ್ಟೋರೆಂಟ್ ನಲ್ಲಿ ಸದ್ಯ ಐದು ರೊಬೋಟ್ ಗಳು ಕೆಲಸ ಮಾಡುತ್ತದೆ. ಮೂರು ರೊಬೋಟ್ ಗಳನ್ನು ಜಿಂಜರ್ ಮತ್ತು ಎರಡು ರೊಬೋಟ್ ಗಳನ್ನು ಫೆರ್ರಿ ಎಂದು ಹೆಸರಿಸಲಾಗಿದೆ. ಇದನ್ನು ಪಾಯಿಲಾ ಟೆಕ್ನಾಲಜಿ ಸಂಸ್ಥೆಯವರು ಡಿಸೈನ್ ಮಾಡಿ ಮ್ಯಾನುಫ್ಯಾಕ್ಚರ್ ಮಾಡಿದ್ದಾರೆ.
ಇದು ನೇಪಾಳದಲ್ಲೇ ಇರುವ ಸಂಸ್ಥೆಯಾಗಿದ್ದು 6 ಮಂದಿ ಯುವ ಇಂಜಿನಿಯರ್ಸ್ ಗಳ ತಂಡ ಇದನ್ನು ನಿರ್ಮಿಸಿದೆ. ಇವರು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ರೋಬೋಟಿಕ್ಸ್ ನಲ್ಲಿ ಸ್ಪೆಷಲೈಜೇಷನ್ ಮಾಡಿದ್ದಾರೆ. ಈ ರೆಸ್ಟೊರೆಂಟ್ ನ ಬಗ್ಗೆ Xinhua ಸುದ್ದಿ ಏಜೆನ್ಸಿಯೊಂದು ವರದಿಯನ್ನು ಪ್ರಕಟಿಸಿದೆ.
ನೌಲಾ ರೆಸ್ಟೋರೆಂಟ್ ನೇಪಾಳದ ಮೊದಲ ರೊಬೋಟಿಕ್ ರೆಸ್ಟೋರೆಂಟ್ ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲಿ ಮೊದಲನೆಯದಾಗಿ ರೊಬೋಟ್ ಬಳಸಿ ಆಹಾರ ವಿತರಣೆ ಮಾಡುವ ಪ್ರಯೋಗಕ್ಕೆ ಇಳಿದಿರುವ ಮೊದಲ ರೆಸ್ಟೊರೆಂಟ್ ಎಂದು ಗುರುತಿಸಲ್ಪಡುತ್ತಿದೆ. ವಿಶ್ವದಲ್ಲೇ ತುಂಬಾ ಅಡ್ವಾಸ್ಡ್ ಆಗಿರುವ ರೊಬೋಟ್ ಗಳು ಇವುಗಳಾಗಿದ್ದು ಬಳಕೆದಾರ ಸ್ನೇಹಿ ಮತ್ತು ಸುಲಭದಲ್ಲೇ ಆಪರೇಟ್ ಮಾಡುವ ತಂತ್ರಜ್ಞಾನವನ್ನು ಇವುಗಳು ಒಳಗೊಂಡಿದೆ ಎಂದು ಪಾಯಿಲಾ ಟೆಕ್ನಾಲಜಿಯ ಸಿಇಓ ಮತ್ತು ನೌಲಾ ರೆಸ್ಟೋರೆಂಟ್ ನ ಮಾಲೀಕರಾಗಿರುವ ಬಿನ್ನಿ ರಾಯಿಟ್ ತಿಳಿಸಿದ್ದಾರೆ ಎಂದು Xinhua ವರದಿ ಮಾಡಿದೆ.

ರೆಸ್ಟೋರೆಂಟ್ ನಲ್ಲಿ ಡಿಜಿಟಲ್ ಸ್ಕ್ರೀನ್ ನಲ್ಲಿ ಮೆನುವನ್ನು ತೋರಿಸಲಾಗುತ್ತದೆ. ಅಲ್ಲಿ ತಮ್ಮ ಆಹಾರದ ಆರ್ಡರ್ ನ್ನು ಗ್ರಾಹಕರು ನೀಡಲು ಅವಕಾಶವಿರುತ್ತದೆ. ಇದು ನೇರವಾಗಿ ರೆಸ್ಟೋರೆಂಟ್ ನ ಅಡುಗೆ ಮನೆಗೆ ಕನೆಕ್ಟ್ ಆಗಿರುತ್ತದೆ. ನಂತರ ಆಹಾರವು ತಯಾರಾಗುತ್ತದೆ. ಅವುಗಳನ್ನು ರೊಬೋಟ್ ಗಳು ಸಂಗ್ರಹಿಸಿ ನಂತರ ಅಡುಗೆ ಮನೆಯಿಂದ ಗ್ರಾಹಕರಿಗೆ ತಂದೊಪ್ಪಿಸುವ ಕೆಲಸವನ್ನು ಅವುಗಳು ಮಾಡುತ್ತವೆ.
ಹಿಮಾಲಯದ ದೇಶಗಳಲ್ಲಿ ಪ್ರಾಯೋಗಿಕವಾಗಿ ರೋಬೋಟ್ ಗಳು ಹೀಗೆ ಕೆಲಸ ಮಾಡುವ ತಂತ್ರಜ್ಞಾನವನ್ನು ಅಳವಡಿಸಿರುವ ಹೆಗ್ಗಳಿಕೆ ನೇಪಾಳಕ್ಕೆ ಸೇರುತ್ತದೆ.
27 ವರ್ಷದ ಭಾರತ ಮತ್ತು ಯುಕೆಯಲ್ಲಿ ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ರಾಯ್ಟ್ ಹೇಳುವಂತೆ, ಆತ ಹಲವು ದೇಶಗಳಿಗೆ ಸುತ್ತಾಡಿದ್ದಾನಂತೆ, ಚೀನಾ, ಜಪಾನ್ ಗಳಲ್ಲಿ ಈ ಡಿಸೈನ್ ತಯಾರಿಕೆಗಾಗಿ ಅಧ್ಯಯನ ಮಾಡಿದ್ದಾನಂತೆ ಮತ್ತು ನೇಪಾಳದಲ್ಲಿ ಇದನ್ನು ಬಿಡುಗಡೆಗೊಳಿಸುವ ಮುನ್ನ ಫ್ರೇಮ್ ವರ್ಕ್ ಮಾಡಿ ಅವುಗಳ ಆಪರೇಟಿಂಗ್ ಸಿಸ್ಟಮ್ ನ್ನು ತಯಾರಿಸಿದರಂತೆ. ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳನ್ನು ಪರಿಚಯಿಸುವಂತ ಕೆಲಸವನ್ನು ನೇಪಾಳದ ಮೂಲಕ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಅವರು.
ರೋಬೋಟ್ ಜಿಂಜರ್ swarm intelligence ನಿಂದ ಪವರ್ಡ್ ಆಗಿದೆ, ಸ್ಪೀಚ್ ರೆಕಗ್ನಿಷನ್, ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಆಡೋ ಡಾಕ್ ಎಬಿಲಿಟಿ, ಇತ್ಯಾದಿ ಹೊಸ ಹೊಸ ಸಾಮರ್ಥ್ಯ ಮತ್ತು ವಿಶೇಷತೆಗಳನ್ನು ಒಳಗೊಂಡಿದೆ. ರೋಬೋಟ್ ಹಾಸ್ಯವನ್ನು ಕೂಡ ಮಾಡುತ್ತದೆಯಂತೆ. ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಇಂಗ್ಲೀಷ್ ಮತ್ತು ನೇಪಾಳಿ ಭಾಷೆಯಲ್ಲಿ ಉತ್ತರಿಸುವ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ ಎಂದು ತಿಳಿಸಲಾಗಿದೆ.
ನೇಪಾಳ ಎಸ್ ಬಿ ಐ ಬ್ಯಾಂಕ್ ನ ಶಾಖೆಯಲ್ಲಿ ಪಾರಿ ಎಂಬ ಹೆಸರಿನ ಮೊದಲ ಮಾನವನ ರೋಬೋಟ್ ಕಾರ್ಯಾಚರಣೆಯ ನಂತರ Paaila ಟೆಕ್ನಾಲಜಿ ಆತಿಥ್ಯ ಕ್ಷೇತ್ರಕ್ಕೆ ಪ್ರವೇಶ ಪಡೆಯಿತು.
ಇನ್ ಟಚ್ ಬ್ರ್ಯಾಂಚ್ ಹೆಸರಿನ ಡಿಜಿಟಲ್ ಬ್ಯಾಂಕ್ ಶಾಖೆಯೊಂದರಲ್ಲಿ ಇದನ್ನು ನಿಯೋಜಿಸಲಾಗಿದೆ ಮತ್ತು ಅಲ್ಲಿ ಗ್ರಾಹಕರಿಗೆ ಮಾಹಿತಿಗಳನ್ನು ಮಾರ್ಗದರ್ಶನ ನೀಡಲು ಇದನ್ನು ಬಳಸಲಾಗುತ್ತದೆ.ಇದು ಗ್ರಾಹಕರನ್ನು ಶುಭ ಮಧ್ಯಾಹ್ನ, ನೇಪಾಳ ಇನ್ ಟಚ್ ಎಸ್ ಬಿಐ ಶಾಖೆಗೆ ಸುಸ್ವಾಗತ ಎಂಬ ಸ್ವಾಗತದೊಂದಿಗೆ ಕೆಲಸ ಮಾಡಲು ಆರಂಭಿಸುತ್ತದೆ.
ಪಾಯಿಲಾ ತಂತ್ರಜ್ಞಾನ ಸಂಸ್ಥೆಯು ಸುಮಾರು 15 ಮಿಲಿಯನ್ ನೇಪಾಳಿ ರುಪಾಯಿಗಳನ್ನು ($134,568)ಗಳನ್ನು ಇದರ ಸಂಶೋಧನೆಗಾಗಿ ಕಳೆದ ಕೆಲವು ವರ್ಷಗಳಿಂದ ವ್ಯಯಿಸಿದೆಯಂತೆ. ಒಟ್ಟಾರೆ ಬಾಯಿಮಾತಿಗೆ ಮನುಷ್ಯ ಮಾಡುವ ಕೆಲಸವನ್ನು ರೊಬೋಟ್ ಗಳು ಮಾಡುವ ಕಾಲ ಬಂದಾಯ್ತು. ನಿಮಗೆ ಈ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ಆಸೆ ಇದ್ದರೆ ಒಮ್ಮೆ ನೇಪಾಳಕ್ಕೆ ಭೇಟಿ ನೀಡಬಹುದು.


Click it and Unblock the Notifications