ಚಂದ್ರನಂಗಳದಲ್ಲಿ ಭಾರತದ ಜೊತೆಗೆ ಪೈಪೋಟಿ ನಡೆಸಲು ಮುಂದಾಯ್ತಾ ರಷ್ಯಾ?
ಚಂದ್ರನ ದಕ್ಷಿಣ ಧ್ರುವಭಾಗದಲ್ಲಿ ಮೊದಲ ಭಾರಿಗೆ ಉಪಗ್ರಹ ಇಳಿಸಿದ ಖ್ಯಾತಿ ಪಡೆಯಲು ಮುಂದಾಗಿದ್ದ ಇಸ್ರೋ ಸಂಸ್ಥೆಗೆ ರಷ್ಯಾ ಟಕ್ಕರ್ ನೀಡಿದೆ. ಈಗಾಗಲೇ ಚಂದ್ರಯಾನ-3 ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ರಾಕೆಟ್ ಲ್ಯಾಂಡ್ ಆಗಲಿದೆ. ಇದರ ನಡುವೆ ರಷ್ಯಾ ಕೂಡ ಹೊಸ ರಾಕೆಟ್ ಉಡಾವಣೆ ಮಾಡಿದೆ.
ಹೌದು, ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಲೂನಾ-25 ಮಿಷನ್ ಅನ್ನು ಲಾಂಚ್ ಮಾಡಿದೆ. ಇಂದು (ಶುಕ್ರವಾರ, ಏಪ್ರಿಲ್ 11 ರಂದು) ಬೆಳಿಗ್ಗೆ 4 ಗಂಟೆಗೆ ರಷ್ಯಾ ದೇಶದ ಪೂರ್ವದಲ್ಲಿರುವ ವೊಸ್ಟೋಚ್ನಿ ಕಾಸ್ಮೊಡ್ರೋಮ್‌ನಿಂದ ರಾಕೆಟ್ ಉಡಾವಣೆ ಮಾಡಿದೆ. ಇದು ಇಸ್ರೋದ ಚಂದ್ರಯಾನ -3 ಕ್ಕಿಂತ ಮೊದಲು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬಹುದು ಎನ್ನಲಾಗಿದೆ. ಹಾಗಾದ್ರೆ ರಷ್ಯಾ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸುವುದಕ್ಕೆ ಮುಂದಾಗಿರುವುದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕಳೆದ ತಿಂಗಳು ಚಂದ್ರಯಾನ -3 ರಾಕೆಟ್ ಉಡಾವಣೆ ಮಾಡಿದೆ. ಈಗಾಗಲೇ ಚಂದ್ರಯಾನ -3 ರಾಕೆಟ್ ಚಂದ್ರನ ಕಕ್ಷೆಯ ಕಡೆಗೆ ಯಶಸ್ವಿಯಾಗಿ ಸಾಗಿದೆ. ಅಷ್ಟೇ ಅಲ್ಲ ಚಂದ್ರಯಾನ-3ರ ನೌಕೆ ಚಂದ್ರ ಮತ್ತು ಭೂಮಿಯ ನಡುವೆ ಹೇಗೆ ಕಾಣಲಿದೆ ಎಂಬ ಚಿತ್ರವನ್ನು ಸಹ ಕಳುಹಿಸಿದೆ. ಈ ಫೋಟೋ ನೋಡಿ ಇಡೀ ಭಾರತವೇ ಸಂಭ್ರಮಿಸುವ ಸಂದರ್ಭದಲ್ಲಿ ಅತ್ತ ರಷ್ಯಾ ಭಾರತಕ್ಕೆ ಟಕ್ಕರ್ ಕೊಡುವ ಕೆಲಸ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಉಪಗ್ರಹ ನೌಕೆ ಎಂಬ ಖ್ಯಾತಿ ಪಡೆಯುವ ಭಾರತದ ಆಸೆಗೆ ತಣ್ಣೀರು ಎರಚಿದೆ.
ಇದಕ್ಕಾಗಿ ರಷ್ಯಾ ಲೂನಾ -25 ಮಿಷನ್ ಅನ್ನು ಉಡಾವಣೆ ಮಾಡಿದೆ. ಇದು ಕೇವಲ ಸುಮಾರು ಐದೂವರೆ ದಿನಗಳಲ್ಲಿ ಚಂದ್ರನಿಗೆ ಪ್ರಯಾಣಿಸಲಿದೆ. ಅಲ್ಲದೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಮೊದಲು 100 ಕಿಲೋಮೀಟರ್ ಕಕ್ಷೆಯಲ್ಲಿ ಮೂರರಿಂದ ಏಳು ದಿನಗಳನ್ನು ಕಳೆಯುತ್ತದೆ. ಏಕೆಂದರೆ ತಾನು ಇಳಿಯುವುದಕ್ಕೆ ಸೂಕ್ತವಾದ ಜಾಗ ಯಾವುದು ಅನ್ನೊದನ್ನ ಮೊದಲು ಗುರುತಿಸುವ ಕೆಲಸವನ್ನು ಈ ನೌಕೆ ಮಾಡಲಿದೆ. ನಂತರ ಚಂದ್ರನ ದಕ್ಷಿಣ ಧ್ರುವಭಾಗದಲ್ಲಿ ಅಧ್ಯಯನ ಮಾಡಲಿದೆ. ಅಮದರೆ ಇಸ್ರೋ ಚಂದ್ರಯಾನ-3 ಅನ್ನು ಇಳಿಸಲು ಯೋಜಿಸಿರುವ ಅದೇ ದಿನವೇ ಆಗಸ್ಟ್ 23 ರಂದು ಲೂನಾ -25 ಕೂಡ ಇಳಿಯಲಿದೆ.
ಈ ಮೂಲಕ ಚಂದ್ರನ ದಕ್ಷಿಣ ಧ್ರುವಭಾಗದಲ್ಲಿ ಯಶಸ್ವಿಯಾಗಿ ಉಪಗ್ರಹ ನೌಕೆ ಇಳಿಸಿದ ರಾಷ್ಟ್ರ ಎನ್ನುವ ಖ್ಯಾತಿ ಪಡೆಯುವ ನಿಟ್ಟಿನಲ್ಲಿ ಇಸ್ರೋ ಜೊತೆಗೆ ಪೈಪೋಟಿಗೆ ಬಿದ್ದಿದೆ. ಸದ್ಯ ರಾಯಿಟರ್ಸ್ ವರದಿಯ ಪ್ರಕಾರ, ಚಂದ್ರನ ದಕ್ಷಿಣ ಧ್ರುವವು ಅಮೂಲ್ಯವಾದ ಗುರಿಯಾಗಿದೆ. ಏಕೆಂದರೆ ಇದು ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗಾಗಿ ಆಮ್ಲಜನಕ ಮತ್ತು ಇಂಧನವನ್ನು ಹೊರತೆಗೆಯಲು ಬಳಸಬಹುದಾದ ಗಮನಾರ್ಹ ಪ್ರಮಾಣದ ಮಂಜುಗಡ್ಡೆಯನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆಯಲು ರಷ್ಯಾ ಮತ್ತು ಭಾರತ ಮುಂಚೂಣಿಯಲ್ಲಿವೆ.
ಇನ್ನು ರಷ್ಯಾ ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ಚಂದ್ರನೆಡೆಗೆ ರಾಕೆಟ್ ಕಳುಹಿಸಿದೆ. ಇನ್ನು ರಷ್ಯಾದ ಲೂನಾ-25 ಉಪಗ್ರಹ ನೌಕೆ ಚಂದ್ರನಂಗಳದಲ್ಲಿ ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸುತ್ತದೆ. ಅಲ್ಲದೆ ಚಂದ್ರನ ಮೇಲ್ಮೈಯಲ್ಲಿ ಒಂದು ವರ್ಷದ ಅವಧಿಯ ತನಕ ವೈಜ್ಞಾನಿಕ ಸಂಶೋಧನೆಯನ್ನು ನಡೆಸುತ್ತದೆ ಎಂದು ರೋಸ್ಕೊಸ್ಮೊಸ್ ಹೇಳಿದೆ. ಭಾರತದ ಇಸ್ರೋ ಕಳುಹಿಸಿರುವ ಚಂದ್ರಯಾನ-3 ಮಿಷನ್ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತೊಯ್ದಿದೆ. ಇದರಲ್ಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲ್ಮೈಯಲ್ಲಿ 14 ದಿನಗಳವರೆಗೆ ಅಧ್ಯಯನ ಮಾಡುವುದಕ್ಕೆ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.


Click it and Unblock the Notifications








