ಚೀನಾದಿಂದ ಹೊರಬರುತ್ತಿದೆಯಾ ಸ್ಯಾಮ್‌ಸಂಗ್..? ಮೇಕ್ ಇನ್ ಇಂಡಿಯಾಕ್ಕೆ ಬಲ..!
ಮೊಬೈಲ್ ಮಾರುಕಟ್ಟೆಯ ದೈತ್ಯ ಸ್ಯಾಮ್‌ಸಂಗ್ ಭಾರತ, ಚೀನಾ ಸೇರಿ ವಿಶ್ವದ ಎಲ್ಲಾ ಕಡೆ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಆದರೆ, ಚೀನಾದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಲು ಸ್ಯಾಮ್‌ಸಂಗ್ ಯೋಚನೆ ಮಾಡುತ್ತಿದೆಯಂತೆ.

ಹೌದು, ಚೀನಾದಲ್ಲಿರುವ ಮೊಬೈಲ್ ಉತ್ಪಾದನೆ ಕಾರ್ಖಾನೆಗಳ ಕಾರ್ಯನಿರ್ವಹಣೆ ನಿಲ್ಲಿಸುವ ಯೋಜನೆಯನ್ನು ಸ್ಯಾಮ್‌ಸಂಗ್ ಕೈಗೊಂಡಿದೆ. ಚೀನಾದ ಮಾರುಕಟ್ಟೆಯಲ್ಲಿನ ಪ್ರಾಬಲ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು, ಕಾರ್ಮಿಕರ ವೆಚ್ಚ ಹೆಚ್ಚಾಗುತ್ತಿರುವುದರಿಂದ ಸ್ಯಾಮ್‌ಸಂಗ್ ಈ ನಿರ್ಧಾರಕ್ಕೆ ಬಂದಿದೆ ಎಂದು ಎಲೆಕ್ಟ್ರಾನಿಕ್ ಟೈಮ್ಸ್ ವರದಿ ಮಾಡಿದೆ.

ತೈಂಜಾಯಿನ್ ಘಟಕ ಮುಚ್ಚುವ ಸಾಧ್ಯತೆ
ಸ್ಯಾಮ್‌ಸಂಗ್ ಈ ವರ್ಷ ಉತ್ತರ ಚೀನಾದ ತೈಂಜಾಯಿನ್‌ನಲ್ಲಿರುವ ತೈಂಜಾಯಿನ್ ಸ್ಯಾಮ್‌ಸಂಗ್ ಟೆಲಿಕಾಂ ಟೆಕ್ನಾಲಜಿ ಘಟಕವನ್ನು ಮುಚ್ಚುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾ ಸುದ್ದಿ ಪತ್ರಿಕೆ ವರದಿ ಮಾಡಿದ್ದು, ಚೀನಾದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸುವ ಎಲ್ಲಾ ಸಾಧ್ಯತೆಗಳನ್ನು ವರದಿ ಮಾಡಿದೆ.

ಇನ್ನು ನಿರ್ಧಾರವಾಗಿಲ್ಲ
ಪತ್ರಿಕಾ ವರದಿಗಳಿಗೆ ಸಂಬಂಧಿಸಿದಂತೆ ಸ್ಯಾಮ್‌ಸಂಗ್ ಸೋನಮವಾರ ಸ್ಪಷ್ಟನೆ ನೀಡಿದ್ದು, ಚೀನಾದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದರಂತೆ ತೈಂಜಾಯಿನ್ ಉತ್ಪಾದನಾ ಘಟಕವನ್ನು ಮುಚ್ಚುವ ಕುರಿತು ಇನ್ನು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದೆ.

ನಿಧಾನ ಬೆಳವಣಿಗೆ
ಒಟ್ಟಾರೆ ಸ್ಮಾರ್ಟ್‌ಫೋನ್ ಮಾರುಕಟ್ಟೆ ನಿಧಾನ ಬೆಳವಣಿಗೆಗಳಿಂದ ಅನೇಕ ನ್ಯೂನತೆಗಳನ್ನು ಹೊಂದಿದೆ. ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತೈಂಜಾಯಿನ್ ಟೆಲಿಕಾಂ ಎಂಟರ್‌ಪ್ರೈಸ್ ಗುಣಮಟ್ಟ, ಸ್ಪರ್ಧೆ, ಸಾಮರ್ಥ್ಯವನ್ನು ವಿಸ್ತರಿಸುವ ಕಡೆ ಗುರಿಯನ್ನು ಹೊಂದಿದೆ ಎಂದು ಸ್ಯಾಮ್‌ಸಂಗ್ ತನ್ನ ಸ್ಪಷ್ಟನೆಯಲ್ಲಿ ತಿಳಿಸಿದೆ.

ಮಾರುಕಟ್ಟೆ ಪ್ರಾಬಲ್ಯ ಗಣನೀಯ ಕುಸಿತ
ಚೀನಾದಲ್ಲಿ 5 ವರ್ಷದ ಹಿಂದೆ ಸ್ಯಾಮ್‌ಸಂಗ್ ಶೆ.20ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ಆದರೆ, ಈ ವರ್ಷ ಈ ಪ್ರಮಾಣ ಶೇ.1ಕ್ಕೆ ಇಳಿದಿದ್ದು, ದರಸಮರದಲ್ಲಿ ಹುವಾವೇ, ಶಿಯೋಮಿ, ಒನ್‌ಪ್ಲಸ್‌ನಂತಹ ಚೀನಾ ಕಂಪನಿಗಳು ಸ್ಯಾಮ್‌ಸಂಗ್ ಪ್ರಾಬಲ್ಯವನ್ನು ತಗ್ಗಿಸಿವೆ.

ಒತ್ತಡದಲ್ಲಿ ಸ್ಯಾಮ್‌ಸಂಗ್
ದಕ್ಷಿಣ ಕೊರಿಯಾದ ಟೆಕ್ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್ ಸದ್ಯ ಒತ್ತಡದಲ್ಲಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೆಳಗಿಳಿಯುತ್ತಿದೆ. ಈ ವರ್ಷ ಬಹಳ ನಿಧಾನವಾಗಿ ತ್ರೈಮಾಸಿಕ ಆದಾಯದ ಅಭಿವೃದ್ಧಿಯನ್ನು ಕಾಣುತ್ತಿದೆ. ಗ್ರಾಹಕ ಅಗ್ಗದ ದರದಲ್ಲಿ ಬಹಳಷ್ಟು ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ ಖರೀದಿಸಲು ಉತ್ಸುಕನಾಗಿರುವುದರಿಂದ ಸ್ಯಾಮ್‌ಸಂಗ್‌ಗೆ ಹೊಡೆತ ಬಿದ್ದಿದೆ.

ಚೀನಾದಲ್ಲಿದೆ ಎರಡು ಉತ್ಪಾದನಾ ಘಟಕಗಳು
ತೈಂಜಾನಿಯಾ ಸೇರಿ ಚೀನಾದಲ್ಲಿ ಸ್ಯಾಮ್‌ಸಂಗ್ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಹ್ಯೂಜಾವೋದಲ್ಲಿ ಮತ್ತೊಂದು ಘಟಕವನ್ನು ಹೊಂದಿದೆ. ಆದರೆ, ಸ್ಯಾಮ್‌ಸಂಗ್ ಕೇವಲ ಮೊಬೈಲ್ ಉತ್ಪಾದನೆ ನಿಲ್ಲಿಸಿ ಬೇರೆ ಉತ್ಪನ್ನಗಳನ್ನು ಮುಂದುವರೆಸುವ ಸಾಧ್ಯತೆ ಹೆಚ್ಚು.

ಮೇಕ್ ಇನ್ ಇಂಡಿಯಾಗೆ ಬಲ
ಸ್ಯಾಮ್‌ಸಂಗ್ ಚೀನಾದಲ್ಲಿ ತನ್ನ ಕಾರ್ಯನಿರ್ವಹಣೆ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗಿದ್ದರೂ ಭಾರತ ಮತ್ತು ವಿಯೆಟ್ನಾಂನಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ವಿಸ್ತರಿಸುತ್ತಿದೆ. ಇತ್ತೀಚೆಗೆ ತಾನೇ ನೋಯ್ಡಾದಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕ ಆರಂಭಿಸಿರುವ ಸ್ಯಾಮ್‌ಸಂಗ್ ಮೇಕ್ ಇನ್ ಇಂಡಿಯಾಕ್ಕೆ ಬಲ ನೀಡಿದೆ.

ಚೀನಾಗಿಂತ ವಿಯೆಟ್ನಾಂನಲ್ಲಿಯೇ ಹೆಚ್ಚು ಉತ್ಪಾದನೆ
ಎಲೆಕ್ಟ್ರಾನಿಕ್ ಟೈಮ್ಸ್ ವರದಿಯಂತೆ ಚೀನಾದ ತೈಂಜಾಯಿನ್ ಘಟಕ 36 ಮಿಲಿಯನ್, ಹ್ಯೂಜಾವೋ ಘಟಕದಲ್ಲಿ 72 ಮಿಲಿಯನ್ ಮೊಬೈಲ್ ಫೋನ್‌ಗಳನ್ನು ವಾರ್ಷಿಕವಾಗಿ ಸ್ಯಾಮ್‌ಸಂಗ್ ತಯಾರಿಸುತ್ತಿತ್ತು. ಆದರೆ, ವಿಯೆಟ್ನಾಂ ಘಟಕದಲ್ಲಿ ಸ್ಯಾಮ್‌ಸಂಗ್ ವರ್ಷಕ್ಕೆ ಬರೋಬ್ಬರಿ 240 ಮಿಲಿಯನ್ ಮೊಬೈಲ್ ಉತ್ಪನ್ನಗಳನ್ನು ತಯಾರಿಸುತ್ತದೆ.


Click it and Unblock the Notifications








