ನೀವು ಸ್ಯಾಮ್‌ಸಂಗ್ ಫೋನ್ ಹೊಂದಿದ್ದರೆ ಈ ಭರ್ಜರಿ ಸಿಹಿಸುದ್ದಿ ನೋಡಿ!
ಟೆಕ್ ದೈತ್ಯ Samsung ಕಂಪೆನಿಯು ಹೊಸ ಇಂಟರ್ಫೇಸ್ ಜೊತೆಗೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹೊಸ One UI 7 ಅಪ್‌ಡೇಟ್ ಅನ್ನು ಹೊರತರಲು ಪ್ರಾರಂಭಿಸಿದೆ. ಈ ಹೊಸ One UI 7 ಅಪ್‌ಡೇಟ್ ಹಲವು ಮಹತ್ವದ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, Android 15 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿದೆ. ಎಲ್ಲಾ ಅರ್ಹ Samsung ಸಾಧನಗಳನ್ನು ಈ ಅಪ್‌ಡೇಟ್ ತಲುಪಲು ಸ್ವಲ್ಪ ಸಮಯ ಹಿಡಿಯಬಹುದು. ಆದರೆ, Samsung ಇದೀಗ One UI 7 ಗಾಗಿ ಅಧಿಕೃತ ರೋಲ್‌ಔಟ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನೀವು ಕೂಡ ನೀವು Samsung ಸ್ಮಾರ್ಟ್‌ಫೋನ್ ಹೊಂದಿದ್ದರೆ, ಈ ಹೊಸ ಅಪ್‌ಡೇಟ್ ನಿಮ್ಮ ಸ್ಮಾರ್ಟ್‌ಫೋನಿಗೆ ಯಾವಾಗ ಬರಲಿದೆ ಮತ್ತು ಈ ಅಪ್‌ಡೇಟ್‌ನಲ್ಲಿ ದೊರೆಯಲಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Samsung ನ ಕೊರಿಯಾ ಫೋರಮ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮುಂದಿನ ಎರಡು ತಿಂಗಳುಗಳಲ್ಲಿ ಒಟ್ಟು 46 Samsung ಸಾಧನಗಳು ಈ ನವೀಕರಣವನ್ನು ಪಡೆಯಲಿವೆ. ಕಂಪನಿಯು ಈಗಾಗಲೇ Galaxy S24 ಸರಣಿ (FE ಹೊರತುಪಡಿಸಿ), Galaxy Z Fold 6, Galaxy Z Flip 6 ಮತ್ತು Galaxy Z Fold ವಿಶೇಷ ಆವೃತ್ತಿಗಳಿಗೆ One UI 7 ಅನ್ನು ಬಿಡುಗಡೆ ಮಾಡಿದೆ. ನಿಮ್ಮ Samsung ಸಾಧನವು ಯಾವಾಗ ಈ ಹೊಸ ಅಪ್‌ಡೇಟ್ ಅನ್ನು ಸ್ವೀಕರಿಸುತ್ತದೆ ಎಂಬುದರ ವಿವರ ಇಲ್ಲಿದೆ:
ಏಪ್ರಿಲ್: Galaxy Z Fold5, Galaxy Z Flip5, Galaxy Tab S10+, Galaxy Tab S10 Ultra, Galaxy S23, Galaxy S23+, Galaxy S23 Ultra, Galaxy S24 FE.
ಮೇ: Galaxy Z Fold4, Z Flip4, Tab S9 ಸರಣಿ (Tab S9, Tab S9+, Tab S9 Ultra), Galaxy S23 FE, Galaxy Z Fold3, Z Flip3, Galaxy A34, A35, Galaxy S22 ಸರಣಿ (S22, S22+, S22 Ultra), Galaxy Tab S8 ಸರಣಿ (Tab S8, Tab S8+, Tab S8 Ultra), Galaxy S21 ಸರಣಿ (S21, S21+, S21 Ultra), Galaxy A16, Galaxy Quantum5, Galaxy Quantum4.
ಜೂನ್: Galaxy Tab S9 FE, Tab S9 FE+, Galaxy A53, A33, A25, A24, A15, Galaxy Quantum3, Jump3, Jump2, Buddy3, Galaxy Tab A9, Tab A9+, Tab Active5, Tab Active4 Pro, Galaxy Wide 7.
One UI 7 ನಲ್ಲಿ ಹೊಸತೇನಿದೆ?
One UI 7 ಹೊಸತನದ ಸ್ಪರ್ಶದೊಂದಿಗೆ ನಿಮ್ಮ Samsung ಸ್ಮಾರ್ಟ್‌ಫೋನಿನ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಈ ಅಪ್‌ಡೇಟ್‌ನಲ್ಲಿ ರಿಫ್ರೆಶ್ ಆದ ಅನಿಮೇಷನ್‌ಗಳು, ಮರುವಿನ್ಯಾಸಗೊಳಿಸಲಾದ ಅಪ್ಲಿಕೇಶನ್ ಐಕಾನ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ವೇಗವಾಗಿ ತೆರೆಯುವ ಸೌಲಭ್ಯವಿದೆ. ಹೋಮ್ ಸ್ಕ್ರೀನ್ ಮತ್ತು ಲಾಕ್ ಸ್ಕ್ರೀನ್ ಅನ್ನು ಸಹ ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಬಳಕೆದಾರರಿಗೆ ತಮ್ಮ ಸಾಧನಗಳನ್ನು ಇನ್ನಷ್ಟು ವೈಯಕ್ತೀಕರಿಸಲು ಅವಕಾಶ ನೀಡುತ್ತದೆ.

Samsung ಸ್ಮಾರ್ಟ್‌ಫೋನಿನ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿಯೂ ಬದಲಾವಣೆಗಳನ್ನು ಕಾಣಬಹುದು. ಸ್ಪಷ್ಟವಾದ ನಿಯಂತ್ರಣಗಳನ್ನು ನೀಡುವ ಮೂಲಕ ಇದು ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ. ಪ್ರೊ ವೀಡಿಯೊ ಮೋಡ್‌ನಲ್ಲಿ ಹೊಸ ಜೂಮ್ ಟೂಲ್ ಅನ್ನು ಸೇರಿಸಲಾಗಿದ್ದು, ರೆಕಾರ್ಡಿಂಗ್ ಸಮಯದಲ್ಲಿ ನಿಖರವಾದ ಹೊಂದಾಣಿಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಸರಳಗೊಳಿಸಲಾಗಿದೆ.
"ನೌ ಬಾರ್" ಎಂಬ ಹೊಸ ವೈಶಿಷ್ಟ್ಯವು ಗಮನಾರ್ಹ ಸೇರ್ಪಡೆಯಾಗಿದೆ. ಇದು Apple ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಬಳಕೆದಾರರು ತಮ್ಮ ಸಾಧನವನ್ನು ಅನ್‌ಲಾಕ್ ಮಾಡದೆಯೇ ಲಾಕ್ ಸ್ಕ್ರೀನ್‌ನಿಂದಲೇ ಸಂಗೀತ ನಿಯಂತ್ರಣ, ಇಂಟರ್ಪ್ರಿಟರ್ ಮೋಡ್ ಮತ್ತು ಸ್ಟಾಪ್‌ವಾಚ್‌ನಂತಹ ಉಪಯುಕ್ತ ಪರಿಕರಗಳನ್ನು ನೇರವಾಗಿ ಬಳಸಬಹುದು.
Samsung ಕೃತಕ ಬುದ್ಧಿಮತ್ತೆಯ (AI) ಶಕ್ತಿಯನ್ನು One UI 7 ಗೆ ತಂದಿದೆ. ಇದರ ಸಹಾಯದಿಂದ ಬಳಕೆದಾರರು ದೀರ್ಘ ಟಿಪ್ಪಣಿಗಳನ್ನು ಸಂಕ್ಷಿಪ್ತಗೊಳಿಸಬಹುದು, ವ್ಯಾಕರಣ ಮತ್ತು ಕಾಗುಣಿತವನ್ನು ಪರೀಕ್ಷಿಸಬಹುದು ಮತ್ತು ದೊಡ್ಡ ಪ್ಯಾರಾಗ್ರಾಫ್‌ಗಳನ್ನು ಬುಲೆಟ್ ಪಾಯಿಂಟ್‌ಗಳಾಗಿ ಪರಿವರ್ತಿಸಬಹುದು. ಕರೆಗಳ ಪ್ರತಿಲೇಖನ ವೈಶಿಷ್ಟ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗಿದ್ದು, ಈಗ ಇದು ಇಂಗ್ಲಿಷ್ (ಭಾರತ) ಮತ್ತು ಹಿಂದಿ ಸೇರಿದಂತೆ 20 ಭಾಷೆಗಳನ್ನು ಬೆಂಬಲಿಸುತ್ತದೆ.
ಇಷ್ಟೇ ಅಲ್ಲದೆ, Samsung ಹೊಸ "ಆಡಿಯೊ ಎರೇಸರ್" ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ವಿಡಿಯೊಗಳಲ್ಲಿನ ಹಿನ್ನೆಲೆ ಶಬ್ದವನ್ನು ತೆಗೆದುಹಾಕಲು ಮತ್ತು ಧ್ವನಿಯನ್ನು ಸ್ಪಷ್ಟಪಡಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.ಒಟ್ಟಾರೆಯಾಗಿ, One UI 7 ಅಪ್‌ಡೇಟ್ ನಿಮ್ಮ Samsung ಸಾಧನಕ್ಕೆ ಹೊಸತನದ ಸ್ಪರ್ಶ ನೀಡಲಿದ್ದು, ಬಳಕೆದಾರ ಅನುಭವವನ್ನು ಇನ್ನಷ್ಟು ಸುಧಾರಿಸಲಿದೆ. ನಿಮ್ಮ ಸಾಧನವು ಮೇಲಿನ ಪಟ್ಟಿಯಲ್ಲಿದ್ದರೆ, ಶೀಘ್ರದಲ್ಲೇ ಈ ಹೊಸ ವೈಶಿಷ್ಟ್ಯಗಳನ್ನು ನೀವು ಪಡೆಯಬಹುದು.


Click it and Unblock the Notifications








