ವರ್ಷದಲ್ಲೇ ಇಳಿಯಿತು ಶಿಯೋಮಿ ಅಬ್ಬರ..ಮತ್ತೆ ಶುರುವಾಯ್ತು ಸ್ಯಾಮ್‌ಸಂಗ್ ಪರ್ವ!!
ಶಿಯೋಮಿಯ ಅಬ್ಬರದಿಂದಾಗಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ 'ಸ್ಯಾಮ್‌ಸಂಗ್' ಮೊಬೈಲ್ ಕಂಪೆನಿ ಮತ್ತೆ ತನ್ನ ಮೊದಲ ಸ್ಥಾನವನ್ನು ವಶಪಡಿಸಿಕೊಂಡಿದೆ. ಕಳೆದ ಕೆಲವು ತಿಂಗಳಿನಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಸ್ಯಾಮ್‌ಸಂಗ್ ಭಾರತದ ನಂ.1 ಮೊಬೈಲ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಯನ್ನು ಪುನಃ ಸಂಪಾದಿಸಿದೆ.
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದೆರಡು ತ್ರೈಮಾಸಿಕಗಳಿಂದ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಸ್ಯಾಮ್‌ಸಂಗ್, ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಚೇತರಿಕೆ ಕಂಡಿದೆ. ಈ ತ್ರೈ ಮಾಸಿಕದಲ್ಲಿ ಸ್ಯಾಮ್‌ಸಂಗ್ ಕಂಪೆನಿಯು ಶಿಯೋಮಿಗಿಂತಲೂ ಹೆಚ್ಚು ಮೊಬೈಲ್‌ಗಳನ್ನು ಮಾರಾಟ ಮಾಡಿರುವುದು ಕೌಂಟರ್ ಪಾಯಿಂಟ್ ರಿಸರ್ಚ್ ವರದಿಯಿಂದ ತಿಳಿದುಬಂದಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಎದುರಾಗಿ ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಕ್ಸಿ ಜೆ 6, ಗ್ಯಾಲಾಕ್ಸಿ ಜೆ 2 2018, ಮತ್ತು ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ಗಳ ಭರ್ಜರಿ ಮಾರಾಟ ಕಂಡಿವೆ. ಹಾಗಾದರೆ, ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆ ಹೇಗಿದೆ? ಹೆಚ್ಚು ಮಾರಾಟವಾದ ಮೊಬೈಲ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಭಾರತದಲ್ಲಿ ಸ್ಯಾಮ್‌ಸಂಗ್ ಪ್ರಾಬಲ್ಯ!
ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮತ್ತೆ ತನ್ನ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದ್ದು, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.29 ರಷ್ಟು ಮಾರ್ಕೆಟ್ ಶೇರ್ ಅನ್ನು ಪಡೆಯುವ ಮೂಲಕ ಮೊದಲ ಸ್ಥಾನಕ್ಕೇರಿದೆ. ಇನ್ನು ಈ ತ್ರೈ ಮಾಸಿಕದಲ್ಲಿ ಮಾರುಕಟ್ಟೆಯ ಸ್ವಲ್ಪ ಶೇರನ್ನು ಕಳೆದುಕೊಂಡಿರುವ ಶಿಯೋಮಿ ಎರಡನೇ ಸ್ಥಾನಕ್ಕೆ ಜಾರಿದೆ.

ಟಾಪ್ 4 ಮೊಬೈಲ್ ಕಂಪೆನಿಗಳು!
ಭಾರತದ ಮೊಬೈಲ್ ಮಾರುಕಟ್ಟೆಯ ಈ ತ್ರೈಮಾಸಿಕದಲ್ಲಿ ಶೆ 29% ಮಾರ್ಕೆಟ್ ಶೇರ್ ಮೂಲಕ ಸ್ಯಾಮ್‌ಸಂಗ್ ಅಗ್ರಸ್ಥಾನದಲ್ಲಿದ್ದರೆ, ಶಿಯೋಮಿ 28% ಮಾರ್ಕೆಟ್ ಶೇರ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ಮೂರು, ನಾಲ್ಕನೆ ಸ್ಥಾನಗಳನ್ನು ಕ್ರಮವಾಗಿ ವಿವೊ (ಶೇ.12 ರಷ್ಟು) ಮತ್ತು ಒಪ್ಪೊ (ಶೇ.10 ರಷ್ಟು) ಮೊಬೈಲ್ ಕಂಪೆನಿಗಳು ಪಡೆದುಕೊಂಡಿವೆ.

ಹೆಚ್ಚು ಮಾರಾಟವಾದ ಫೋನ್‌ಗಳು
ಈ ಬಾರಿ ಸ್ಯಾಮ್‌ಸಂಗ್ ಮೊದಲ ಸ್ಥಾನಕ್ಕೇರಿದ್ದರೂ ಸಹ ಶೀಯೋಮಿ ಸ್ಮಾರ್ಟ್‌ಪೋನ್‌ಗಳ ಭರಾಟೆ ಈಗಲೂ ಹೆಚ್ಚಿದೆ. ಶಿಯೋಮಿ ರೆಡ್ಮಿ 5ಎ ಮತ್ತು ರೆಡ್ಮಿ ನೋಟ್ 5 ಪ್ರೊ ಈ ತ್ರೈ ಮಾಸಿಕದಲ್ಲಿ ಹೆಚ್ಚು ಮಾರಾಟವಾದ ಪೋನ್‌ಗಳಲಾಗಿದೆ. ಗ್ಯಾಲಾಕ್ಸಿ ಜೆ6 ಮೂರನೇ ಸ್ಥಾನದಲ್ಲಿದೆ, ರೆಡ್‌ಮಿ ನೋಟ್ 5 ಮತ್ತು ವಿವೊ ಐ71 ಫೋನ್‌ಗಳು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ರಿಯಲ್ ಮಿ1 ಭರ್ಜರಿ ಸೇಲ್
ಕಳೆದ ಮೇ ತಿಂಗಳಲ್ಲಿ ಬಿಡುಗಡೆಯಾದ ಒಪ್ಪೊ ರಿಯಲ್ ಮಿ1 ಸ್ಮಾರ್ಟ್‌ಫೋನ್ ಎರಡನೇ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟ ಕಂಡಿರುವ ಸ್ಮಾರ್ಟ್‌ಪೋನ್‌ಗಳಲ್ಲಿ ಒಂದಾಗಿದೆ. ಭಾರತದ ಮೊಬೈಲ್ ಮಾರುಕಟ್ಟೆಯ ಶೇ.1 ಪ್ರತಿಶತ ಪಾಲನ್ನು ಒಪ್ಪೊ ಕಂಪೆನಿಯ ರಿಯಲ್ ಮಿ1 ಸ್ಮಾರ್ಟ್‌ಫೋನ್ ಪಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಿಯೋಫೋನ್ ಅಬ್ಬರ.
ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಕಥೆ ಇದಾದರೆ, ಫೀಚರ್ ಪೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಜಿಯೋಪೋನ್ ಭರ್ಜರಿ ದಾಖಲೆಯನ್ನು ನಿರ್ಮಿಸಿದೆ. ಫೀಚರ್ ಫೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.47 ರಷ್ಟು ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಸ್ಯಾಮ್‌ಸಂಗ್(9%) ಮತ್ತು ನೋಕಿಯಾ (8%) ಕಂಪೆನಿಗಳು ಜಾಗ ಪಡೆದಿವೆ.


Click it and Unblock the Notifications








