Sanchar Saathi ಆ್ಯಪ್ ವಿವಾದ: ಒಂದೇ ದಿನದಲ್ಲಿ ದೇಶ ತಣ್ಣಗಾಗಿದ್ದು ಹೇಗೆ?
ಸಂಚಾರ್ ಸಾಥಿ (Sanchar Saathi) ಅಪ್ಲಿಕೇಶನ್ ಅನ್ನು ದೇಶದಾದ್ಯಂತ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಲಾಗುತ್ತದೆ ಎನ್ನಲಾದ ವರದಿಯು ಕೇವಲ ಒಂದು ದಿನದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಗೌಪ್ಯತೆ ಮತ್ತು ಡಿಜಿಟಲ್ ಸ್ವಾತಂತ್ರ್ಯದ ಕುರಿತು ದೇಶದಾದ್ಯಂತ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದ ಸಂದರ್ಭದಲ್ಲೇ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೊಸ ಸ್ಪಷ್ಟೀಕರಣದಿಂದ ದೇಶದ ಪರಿಸ್ಥಿತಿ ಬದಲಾಗಿದೆ.! ANI ಗೆ ನೀಡಿದ ಸಂದರ್ಶನದಲ್ಲಿ ಅವರು, Sanchar Saathi ಆ್ಯಪ್ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಜವಾಬ್ದಾರಿ ಸುರಕ್ಷಿತ ಮತ್ತು ಉಪಯುಕ್ತ ಅಪ್ಲಿಕೇಶನ್ ಅನ್ನು ಜನರಿಗೆ ಪರಿಚಯಿಸುವುದು, ಆದರೆ ಬಳಸಬೇಕೋ ಬೇಡವೋ ಎಂಬುದು ಸಂಪೂರ್ಣವಾಗಿ ವ್ಯಕ್ತಿಯ ಸ್ವತಂತ್ರ ಆಯ್ಕೆ ಎಂದಿದ್ದಾರೆ.!
ಹೌದು, ನೆನ್ನೆಯಷ್ಟೇ ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ Sanchar Saathi ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಲು ಕೇಂದ್ರ ಸರ್ಕಾರವು ಸೂಚಿಸಿದೆ ಎಂದು ವರದಿಯಾಗಿತ್ತು. ಈ Sanchar Saathi ಆ್ಯಪ್ ಅನ್ನು ಎಲ್ಲ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ತೆಗೆದುಹಾಕಲಾಗದಂತೆ ಮತ್ತು ಪ್ರೀ-ಇನ್‌ಸ್ಟಾಲ್ ಆಗಿ ಸೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಇದರಿಂದ ದೇಶಾದ್ಯಂತ ಡಿಜಿಟಲ್ ಗೌಪ್ಯತೆ ಕುರಿತ ಗೊಂದಲಗಳು ಮತ್ತು ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಸಚಿವರ ಹೇಳಿಕೆ ನಂತರ ದೇಶದಾದ್ಯಂತ ವಾದ-ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಹಾಗಾದರೆ, ಏನಿದು Sanchar Saathi ಅಪ್ಲಿಕೇಶನ್?, ಈ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಲು ಮುಂದಾಗಿದ್ದ ಉದ್ದೇವಾದರೂ ಏನು? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ನೋಡೋಣ ಬನ್ನಿ.

ಏನಿದು Sanchar Saathi ಅಪ್ಲಿಕೇಶನ್
Sanchar Saathi 2023ರಲ್ಲಿ ಪರಿಚಯಗೊಂಡ ಸರ್ಕಾರದ ಅಧಿಕೃತ ಟೆಲಿಕಾಂ ಸುರಕ್ಷತಾ ಆ್ಯಪ್. ಇದು CEIR (Central Equipment Identity Register) ವ್ಯವಸ್ಥೆಯೊಂದಿಗೆ ನೇರವಾಗಿ ಸಂಪರ್ಕಿಸಿದೆ. ಇದರ ಸಹಾಯದಿಂದ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಸಾಧ್ಯವಾಗುವ ಹಲವು ಆಧುನಿಕ ವೈಶಿಷ್ಟ್ಯಗಳಿದ್ದು, ಇವುಗಳಲ್ಲಿ ಕಳುವಾದ ಫೋನ್‌ಗಳನ್ನು ಬ್ಲಾಕ್ ಮತ್ತು ಟ್ರಾಕ್ ಮಾಡುವುದು, ನಕಲಿ ಅಥವಾ ಕ್ಲೋನ್ IMEI ಪತ್ತೆ ಸೇರಿದಂತೆ ಹಲವಾರು ಮೊಬೈಲ್ ಆಧಾರಿತ ತಂತ್ರಜ್ಞಾನ ಉಪಯೋಗಗಳಿವೆ. ಒಂದು ರೀತಿಯಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್‌ಫೋನ್‌ಗಳ ಆಧಾರ್ ಎನ್ನಬಹುದು.!
Sanchar Saathi ಅಪ್ಲಿಕೇಶನ್ ವೈಶಿಷ್ಟ್ಯಗಳೇನು?
Sanchar Saathi ಅಪ್ಲಿಕೇಶನ್ ಸಹಾಯದಿಂದ ಈ ಕೆಳಗಿನ ಎಲ್ಲಾ ಸೇವೆಗಳನ್ನು ಪಡೆಯಬಹುದು. ಇವುಗಳಲ್ಲಿ,
ಕಳುವಾದ ಫೋನ್‌ಗಳನ್ನು ಟ್ರಾಕ್ ಮಾಡಬಹುದು: IMEI ಸಂಖ್ಯೆಯಿಂದ ಬಳಕೆದಾರರು ತಮ್ಮ ಫೋನ್ ಅನ್ನು ಟ್ರಾಕ್ ಮಾಡಬಹುದು.
ಕಳುವಾದ ಫೋನ್‌ಗಳನ್ನು ಬ್ಲಾಕ್ ಮಾಡಬಹುದು: ಸ್ಮಾರ್ಟ್‌ಫೋನ್ ಮಾಲಿಕತ್ವ ಪರಿಶೀಲನೆಯಾದ ನಂತರ, ಆ ಫೋನ್ ದೇಶದ ಯಾವುದೇ ನೆಟ್ವರ್ಕ್‌ನಲ್ಲಿ ಕಾರ್ಯನಿರ್ವಹಿಸದಂತೆ ಈ ಆ್ಯಪ್ ತಡೆಹಿಡಿಯುತ್ತದೆ.
ನಕಲಿ ಅಥವಾ ಕ್ಲೋನ್ IMEI ಪತ್ತೆ: ಸ್ಮಾರ್ಟ್ ಫೋನ್ ಮೂಲವೋ ನಕಲಿಯೋ ಎಂಬುದನ್ನು ಬಳಕೆದಾರರು ಆ್ಯಪ್ ಮೂಲಕ ಪರಿಶೀಲಿಸಬಹುದು, ಇದು ಕಳವು-ಮಾರುಕಟ್ಟೆಯನ್ನು ಕಡಿಮೆ ಮಾಡಲು ಸಹಕಾರಿ.
ಮೋಸದ ಕರೆ, SMS, WhatsApp ವಂಚನೆ ವರದಿ: ಈ ಅಪ್ಲಿಕೇಶನ್ ಮೂಲಕ ಫಿಷಿಂಗ್ ಕರೆಗಳು, OTP ವಂಚನೆ, ಮತ್ತು ಅನುಮಾನಾಸ್ಪದ ಸಂದೇಶಗಳನ್ನು ನೇರವಾಗಿ ವರದಿ ಮಾಡುವ ಅವಕಾಶ ಇದೆ.
ನಿಮ್ಮ ಹೆಸರಿನಲ್ಲಿ ನೋಂದಾಯವಾಗಿರುವ SIMಗಳ ಪಟ್ಟಿ: ಯಾರಾದರೂ ನಿಮ್ಮ ಹೆಸರಿನಲ್ಲಿ SIM ತೆಗೆದುಕೊಂಡಿರುವ ಶಂಕೆಯಿದ್ದರೆ, ಅದನ್ನು ಗುರುತಿಸಿ ಅಳಿಸಲು ಸಹಾಯವಾಗುತ್ತದೆ.

ಕಡ್ಡಾಯಗೊಳಿಸಲು ಮುಂದಾಗಿದ್ದು ಏಕೆ?
Sanchar Saathi ಅಪ್ಲಿಕೇಶನ್ ಈ ಮೇಲೆ ತಿಳಿಸಿದ ಎಲ್ಲಾ ಉಪಯೋಗಗಳನ್ನು ಹೊಂದಿದೆ. ಇದರಿಂದ ಡಿಜಿಟಲ್ ವಂಚನೆಯನ್ನು ತಡೆಯಬಹುದು ಎಂಬುದು ಕೇಂದ್ರ ಸರ್ಕಾರದ ನಿಲುವಾಗಿರಬಹುದು. ಈ ಪ್ಲಾಟ್‌ಫಾರ್ಮ್ ಮೂಲಕ ಈಗಾಗಲೇ 26 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕಳ್ಳತನಗೊಂಡ ಫೋನ್‌ಗಳು ಟ್ರೇಸ್ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಇದು ಕಡ್ಡಾಯಗೊಳಿಸಲು ಮುಂದಾಗಿದ್ದ ಕಾರಣವಾಗಿರಬಹುದು.
ವಿವಾದವಾಗಿದ್ದು ಏಕೆ?
ಫೋನ್‌ಗಳಲ್ಲಿ Sanchar Saathi ಆ್ಯಪ್ ಕಡ್ಡಾಯವಾಗಲಿದೆ ಎಂಬ ವರದಿ ಹೊರಬಿದ್ದ ನಂತರ ವಿರೋಧ ಪಕ್ಷಗಳು ತೀವ್ರ ಟೀಕೆ ಮಾಡಿವೆ. ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಅನೇಕ ಬ್ಲೋಟ್‌ವೇರ್‌ಗಳು ಇವೆ. ಈ ಸಂದರ್ಭದಲ್ಲಿ ಮತ್ತೊಂದು ಸರ್ಕಾರಿ ಆ್ಯಪ್ ಅನ್ನು ಬಲವಂತವಾಗಿ ಸೇರಬಹುದು ಎಂಬ ಆತಂಕ ಹಲವರಲ್ಲಿ ತೀವ್ರ ವಿರೋಧ ಹುಟ್ಟಿಸಿತು. ಶಶಿ ತರೂರ್ ಸೇರಿದಂತೆ ಹಲವು ನಾಯಕರು, ಜನರ ಫೋನ್‌ಗಳಲ್ಲಿ ಕಡ್ಡಾಯವಾಗಿ ಯಾವುದೇ ಸರ್ಕಾರಿ ಆ್ಯಪ್ ಸೇರಿಸುವುದು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧ ಎಂದು ಅಭಿಪ್ರಾಯಪಟ್ಟರು. ಸಂಸತ್ತಿನಲ್ಲಿ ವಿಶೇಷ ಚರ್ಚೆಗೆ ನೋಟಿಸ್ ಕೂಡ ಅಲ್ಲಿಸಲಾಗಿತ್ತು. ಆದರೆ, ಸುರಕ್ಷತೆಗಾಗಿ ಇದು ಅಗತ್ಯ ಕ್ರಮ ಎಂದು ಕೆಲವರು ಸ್ವಾಗತಿಸಿದರೂ ಕೂಡ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ನೀವು ಡಿಜಿಟಲ್ ಗೌಪ್ಯತೆ ಪರವಾಗಿದ್ದೀರಾ ಅಥವಾ ಬಳಕೆದಾರರ ಸ್ವಾತಂತ್ರ್ಯದ ಪರವಾಗಿದ್ದೀರಾ?


Click it and Unblock the Notifications








