ಭಾರತದಲ್ಲಿ AI-ಚಾಲಿತ ಕೃಷಿ ವೀಡಿಯೊವನ್ನು ಶೇರ್ ಮಾಡಿದ ಸತ್ಯ ನಾಡೆಲ್ಲಾ!..ಎಲೋನ್ ಮಸ್ಕ್ ಮೆಚ್ಚುಗೆ!
ಭಾರತದಲ್ಲಿ ಕೃಷಿಯ ಮೇಲೆ ಕೃತಕ ಬುದ್ಧಿಮತ್ತೆ (AI) ಯ ಪರಿವರ್ತನೆ ಕುರಿತಾದ ವೀಡಿಯೊವೊಂದು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಇತ್ತೀಚೆಗೆ ಭಾರತದಲ್ಲಿ ಕೃಷಿಯ ಮೇಲೆ ಕೃತಕ ಬುದ್ಧಿಮತ್ತೆ (AI) ಯ ಪರಿವರ್ತನೆಯ ಪರಿಣಾಮ ಹೇಗಿದೆ ಎಂದು ತೋರಿಸುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಹಂಚಿಕೊಂಡಿದ್ದರು. ಕೃಷಿಯಲ್ಲಿ AI ಯ ಪ್ರಭಾವವನ್ನು "ಅದ್ಭುತ" ಎಂದು ವಿವರಿಸಿದ ಅವರು ಈ ವೀಡಿಯೊದಲ್ಲಿ ಕೃತಕ ಬುದ್ಧಿಮತ್ತೆಯು ರೈತರಿಗೆ ಹೇಗೆ ವರವಾಗಿದೆ ಎಂಬುದನ್ನು ತೋರಿಸಿದ್ದರು. ಇದಕ್ಕೆ ವಿಶ್ವದ ನಂ.೧ ಶ್ರೀಮಂತ ಎಲೋನ್ ಮಸ್ಕ್ ಸೇರಿದಂತೆ ಹಲವಾರು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2022 ರಲ್ಲಿ, ಮೈಕ್ರೋಸಾಫ್ಟ್ ಕೃಷಿ ಅಭಿವೃದ್ಧಿ ಟ್ರಸ್ಟ್ (ADT) ಸಹಭಾಗಿತ್ವದಲ್ಲಿ ಬಾರಾಮತಿಯಲ್ಲಿ ಕೃಷಿ-ತಂತ್ರಜ್ಞಾನ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಈ ಯೋಜನೆಯು ರೈತರು ಆರೋಗ್ಯಕರ ಮತ್ತು ಸುಸ್ಥಿರ ಬೆಳೆಗಳನ್ನು ಸಾಧಿಸಲು ಸಹಾಯ ಮಾಡಲು AI ಆಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಈ ಯಶಸ್ಸನ್ನು ಸತ್ಯ ನಾಡೆಲ್ಲಾ ಅವರು ವೀಡಿಯೊದಲ್ಲಿ ತೋರಿಸಿದ್ದಾರೆ. ರೈತರು ತಮ್ಮ ಬೆಳೆ ಇಳುವರಿಯನ್ನು ಹೆಚ್ಚಿಸಲು, ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಲು ಮತ್ತು ನೀರಿನ ಬಳಕೆಯನ್ನು ಅತ್ಯುತ್ತಮವಾಗಿಸಲು AI ಹೇಗೆ ಸಬಲೀಕರಣಗೊಳಿಸಿತು ಎಂಬುದನ್ನು ಪ್ರದರ್ಶಿಸಿದ್ದಾರೆ. ಈ ವೀಡಿಯೊಗೆ ಪ್ರತಿಕ್ರಿಯಿಸಿರುವ ಎಲೋನ್ ಮಸ್ಕ್ ಎವರು "AI ಎಲ್ಲವನ್ನೂ ಸುಧಾರಿಸುತ್ತದೆ." ಎಂದು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಕೃಷಿ ಅಭಿವೃದ್ಧಿ ಟ್ರಸ್ಟ್ ಕೃಷಿ ವಲಯದಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ಹೆಚ್ಚಿಸಲು AI, ಉಪಗ್ರಹ ಚಿತ್ರಣ ಮತ್ತು ಇತರ ತಂತ್ರಜ್ಞಾನಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಸಣ್ಣ ರೈತರು ಹವಾಮಾನವನ್ನು ಊಹಿಸಲು, ಕೀಟಗಳ ವಿರುದ್ಧ ಹೋರಾಡಲು ಮತ್ತು ಉತ್ತಮ ಇಳುವರಿಯನ್ನು ಪಡೆಯಲು ಮೈಕ್ರೋಸಾಫ್ಟ್‌ನ AI ಪರಿಕರಗಳನ್ನು ಬಳಸುತ್ತಿದ್ದಾರೆ. ಇದರ ಯಶಸ್ಸನ್ನು ಹಂಚಿಕೊಂಡಿರುವ ಸತ್ಯ ನಾಡೆಲ್ಲಾ ಅವರು ಉದಾಹರಣೆಯ ಸಹಿತ ರಾಸಾಯನಿಕಗಳಲ್ಲಿನ ಕಡಿತ, ನೀರಿನ ಬಳಕೆಯಲ್ಲಿ ಸುಧಾರಣೆ ಮತ್ತು ಅಂತಿಮವಾಗಿ ಇಳುವರಿಯ ವಿಷಯದಲ್ಲಿ ರೈತರು ಹಂಚಿಕೊಂಡ ಸಂಖ್ಯೆಗಳು "ಅದ್ಭುತ" ಎಂದು ಹೇಳಿದ್ದಾರೆ.
ಮೈಕ್ರೋಸಾಫ್ಟ್‌ನ AI ಪರಿಕರಗಳನ್ನು ಬಳಸುವುದರಿಂದ ಪ್ರಯೋಜನ ಪಡೆದ ಬಾರಾಮತಿಯ ರೈತರಲ್ಲಿ ಒಬ್ಬರಾದ ಸುರೇಶ್ ಜಗ್ತಾಪ್ ಕುರಿತು ಹೈಲೈಟ್ ಮಾಡಿರುವ ಸತ್ಯ ನಾಡೆಲ್ಲಾ ಅವರು, 65 ವರ್ಷ ವಯಸ್ಸಿನ ಸುರೇಶ್ ಜಗ್ತಾಪ್ ಅವರು ತಮ್ಮ ಕಬ್ಬಿನ ತೋಟವನ್ನು AI ಪರಿಕರಗಳ ಸಹಾಯದಿಂದ ನೋಡಿಕೊಳ್ಳುತ್ತಿದ್ದಾರೆ. ಬೆಳೆ ಬೆಳೆಯುವ ಪರಿಸ್ಥಿತಿಗಳನ್ನು ಅತ್ಯುತ್ತಮವಾಗಿಸಲು ಮತ್ತು ಕಬ್ಬಿನಲ್ಲಿರುವ ಸುಕ್ರೋಸ್ ಅಂಶವು ಉತ್ತುಂಗದಲ್ಲಿದ್ದಾಗ ಬೆಳೆಗಳನ್ನು ಕೊಯ್ಲು ಮಾಡುವ ಅಂತಿಮ ಗುರಿಯತ್ತ ಕೆಲಸ ಮಾಡಲು ಅವರು AI ಅನ್ನು ಹೆಚ್ಚು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.
AI ಡೇಟಾವನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಸಹಾಯಗೊಳಿಸುತ್ತದೆ?
ಜಗ್ತಾಪ್ ಮತ್ತು ಇತರ ರೈತರ ಆಯ್ದ ಗುಂಪಿನ ರೈತರಿಗೆ ಮೈಕ್ರೋಸಾಫ್ಟ್‌ನ AI ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಮಾಡಲು ಬಾರಾಮತಿಯ ಹತ್ತಿರದ ಕೃಷಿ ಅಭಿವೃದ್ಧಿ ಟ್ರಸ್ಟ್ (ADT) ನಲ್ಲಿನ ವಿಜ್ಞಾನಿಗಳು ಸಹಾಯ ಮಾಡುತ್ತಾರೆ. ಪರೀಕ್ಷಾರ್ತವಾಗಿ ರೈತರ ಜಮೀನಿನಲ್ಲ ಹವಾಮಾನ ಕೇಂದ್ರವಾಗಿ ಕಾರ್ಯನಿರ್ವಹಿಸುವ ಎತ್ತರದ ಲೋಹದ ರಚನೆಯಿದೆ. ಇದರ ಮೇಲ್ಭಾಗದಲ್ಲಿ ಗಾಳಿ, ಮಳೆ, ಸೌರ, ತಾಪಮಾನ ಮತ್ತು ಆರ್ದ್ರತೆಯ ಮಾಪಕಗಳಿವೆ. ಹಾಗೆಯೇ ಕೆಳಭಾಗದಲ್ಲಿ, ಮಣ್ಣಿನಲ್ಲಿರುವ ಸಂವೇದಕಗಳು ತೇವಾಂಶ, pH ಮತ್ತು ವಿದ್ಯುತ್ ವಾಹಕತೆ ಹಾಗೂ ಪೊಟ್ಯಾಸಿಯಮ್ ಮತ್ತು ಸಾರಜನಕದಂತಹ ಪೋಷಕಾಂಶಗಳನ್ನು ಅಳೆಯುತ್ತದೆ. ಇದರ ಒಟ್ಟು ಡೇಟಾವನ್ನು ಉಪಗ್ರಹ ಮತ್ತು ಡ್ರೋನ್ ಚಿತ್ರಣ ಹಾಗೂ ಐತಿಹಾಸಿಕ ದತ್ತಾಂಶಗಳೊಂದಿಗೆ ಸಂಯೋಜಿಸಿ, ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರಿಗೆ ಸರಳ ದೈನಂದಿನ ಎಚ್ಚರಿಕೆಗಳನ್ನು ರಚಿಸಲು ವಿಶ್ಲೇಷಿಸಲಾಗುತ್ತದೆ ಎಂದು ಮೈಕ್ರೋಸಾಫ್ಟ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.


Click it and Unblock the Notifications








