'ಎಸ್‌ಬಿಐ' ಗ್ರಾಹಕನ ಖಾತೆಯಿಂದ 6.8 ಲಕ್ಷ ರೂ.ಮಾಯ!..ಕಾರಣ ಭಯಾನಕ!!
'ಎಸ್‌ಬಿಐ' ಬ್ಯಾಂಕ್ ಶಾಖೆಯೊಂದರಲ್ಲಿ ಉಳಿತಾಯ ಖಾತೆ ಹೊಂದಿದ್ದ ವ್ಯಕ್ತಿಯೋರ್ವರ ಖಾತೆಯಿಂದ 6.8 ಲಕ್ಷ ರೂ. ವಂಚನೆಗೆ ಒಳಗಾಗಿರುವ ಶಾಕಿಂಗ್ ಸುದ್ದಿಯೊಂದು ವರದಿಯಾಗಿದೆ. ಆದರೆ, ಅದಕ್ಕಿಂತಲೂ ಭಯಾನಕ ಸುದ್ದಿ ಎಂದರೆ, ಆ ಎಸ್‌ಬಿಐ ಬ್ಯಾಂಕ್ ಗ್ರಾಹಕ ಹಣ ಕಳೆದುಕೊಳ್ಳಲು ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಕಾರಣ ಎಂದು ಹೇಳಲಾಗಿದೆ.
ಹೌದು, ನೋಯ್ಡಾದ ಎಸ್‌ಬಿಐ ಬ್ಯಾಂಕ್ ಶಾಖೆಯೊಂದರಲ್ಲಿ ಉಳಿತಾಯ ಖಾತೆ ಹೊಂದಿದ್ದ ಮೋಹನ್ ಲಾಲ್ ಎಂಬುವವರ 6.8 ಲಕ್ಷ ರೂ.ಹಣವನ್ನು ಸೈಬರ್ ಕ್ರಿಮಿನಲ್‌ಗಳು ಎಗರಿಸಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಬಗ್ಗೆ ಮಾಹಿತಿ ಕೊರತೆ ವಂಚನೆಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಪಿಐ ಬಳಸಿ ಹ್ಯಾಕರ್ಸ್ ಬ್ಯಾಂಕ್ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ಸುಲಭವಾಗಿ ಪಡೆಯಬಹುದಾಗಿದ್ದು, ಯುಪಿಐ ಬಳಕೆದಾರರ ಸಿಮ್ ಅನ್ನು ಬ್ಲಾಕ್ ಮಾಡಿ ನಕಲಿ ಸಿಮ್ ಪಡೆದು ವಂಚಿಸಿರಬಹುದು (ಸಿಮ್ ಸ್ವಾಪ್) ಎಂದು ಸೈಬರ್ ಸೆಲ್ ಅಧಿಕಾರಿಯೋರ್ವರು ಹೇಳಿದ್ದಾರೆ. ಇದಾದ ನಂತರ ಸಿಮ್ ಸ್ವಾಪ್ ಎಂಬ ಹಗರಣ ಮತ್ತೊಮ್ಮೆ ಎಲ್ಲರ ನಿದ್ದೆಗೆಡಿಸುವಂತಾಗಿದೆ.

ಗ್ರಾಹಕರ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಮೊದಲ ಹೆಜ್ಜೆಯಾಗಿದ್ದು, ನಂತರ ಯುಪಿಐ ಸಹಾಯದಿಂದ ಹಣವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ, ಏನಿದು ವಂಚನೆ ಪ್ರಕರಣ? ಈ ವಂಚನೆ ಪೊಲೀಸರಿಗೂ ತಲೆನೋವಾಗಿರುವುದೇಕೆ? ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು 'ಸಿಮ್ ಸ್ವ್ಯಾಪ್'?
'ಸಿಮ್ ಸ್ವ್ಯಾಪ್' ಎಂದರೇ, 'ನಿಮ್ಮ ಬಳಿ ಈಗಾಗಲೇ ಇರುವ ಫೋನ್ ನಂಬರ್ ಅನ್ನು ಹೊಸ ಸಿಮ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು' ಎಂದರ್ಥ. ಈ ಕೆಲಸವನ್ನು ನೀವೇ ಮಾಡಿದ್ದರೆ ಯಾವ ತೊಂದರೆಯಿಲ್ಲ. ಆದರೆ, ನಿಮ್ಮ ಮಾಹಿತಿಯನ್ನು ಕದ್ದಿರುವ ಅಪರಿಚಿತರು ಈ ಕೆಲಸ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುವ ಹಗರಣ ಇದಾಗಿದೆ.

ಏನಿದು ಸಿಮ್ ಸ್ವ್ಯಾಪ್ ಹಗರಣ?
ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ ಸೈಬರ್ ಕ್ರಿಮಿನಲ್‌ಗಳು ಈಗ ಸಿಮ್ ಅನ್ನು ಸಹ ನಕಲು ಮಾಡಹೊರಟಿದ್ದಾರೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹೇಗಾದರೂ ಪಡೆದುಕೊಂಡಿರುವ ಅವರಿಗೆ ಬೇಕಾಗಿರುವುದು ಒಟಿಪಿ ಮಾತ್ರ. ಅದಕ್ಕಾಗಿಯೇ ನಡೆಯುತ್ತಿರುವುದು 'ಸಿಮ್ ಸ್ವ್ಯಾಪ್' ಹಗರಣ.

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು
ನಿಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಮೊದಲ ಹೆಜ್ಜೆಯಾಗಿರುತ್ತದೆ. ಅದಕ್ಕಾಗಿ ಅವರು ನಿಮ್ಮ ದಾಖಲೆಗಳನ್ನು ಹುಡುಕಬಹುದು ಅಥವಾ ನಿಮ್ಮಿಂದಲೇ ಸಿಮ್ ಅನ್ನು ಅವರು ನಕಲಿಸಿಕೊಳ್ಳಬಹುದು. ಈ ಎರಡೂ ರೀತಿಯಿಂದಲೂ ಅವರು ನಿಮ್ಮನ್ನು ಕ್ಷಣಾರ್ಧದಲ್ಲಿ ಮೋಸಗೊಳಿಸಬಹುದು.

ವಿಶಿಷ್ಟ 20 ಡಿಜಿಟ್ ನಂಬರ್
ಕಾಲ್‌ಡ್ರಾಫ್ಸ್ ಸೇರಿದಂತೆ ಕರೆ ಸೇವೆಯವನ್ನು ಮತ್ತಷ್ಟು ಸುಲಭಗೊಳಿಸುತ್ತೇವೆ ಎಂದು ನಿಮಗೊಂದು ಕರೆ ಬರುತ್ತದೆ. ಕಸ್ಟಮರ್ ಕೇರ್ ಸೂಗಿನಲ್ಲಿ ಕರೆ ಮಾಡುವ ಇವರು ಕರೆ ಮಾಡುವುದೇ ನಿಮ್ಮ ಸಿಮ್ ಹಿಂಬದಿಯ ನಂಬರ್ ಯಾವುದೆಂದು ತಿಳಿದುಕೊಳ್ಳಲು. ಒಮ್ಮೆ ನೀವು ಅವರ ಆದೇಶವನ್ನು ಚಾಚು ತಪ್ಪದೆ ಪಾಲಿಸಿದರೆ ನಿಮ್ಮ ಬ್ಯಾಂಕ್ ಅಂಕೌಂಟ್ ಖಾಲಿ ಖಾಲಿ.!

ಒಂದನ್ನು ಪ್ರೆಸ್ ಮಾಡಲು ಹೇಳುತ್ತಾರೆ
ನಿಮ್ಮ ಸಿಮ್‌ನ 20 ಡಿಜಿಟ್ ಸಂಖ್ಯೆ ಪಡೆದ ವಂಚಕ, ಅಧಿಕೃತವಾಗಿಹೊಸ ಸಿಮ್ ಪಡೆಯಲು ಮುಂದಾಗುತ್ತಾನೆ. ಆಗ, ನಿಮ್ಮ ಫೋನ್‌ಗೆ ಟೆಲಿಕಾಂ ಕಂಪೆನಿಯಿಂದ ಕನ್ಫರ್ಮೇಷನ್ ಎಸ್‌ಎಂಎಸ್ ಬರುತ್ತದೆ. ಆಗ ವಂಚಕ, ನಿಮಗೆ ಕರೆ ಮಾಡಿ ಒಂದನ್ನು ಪ್ರೆಸ್ ಮಾಡಲು ಸೂಚಿಸುತ್ತಾನೆ. ನೀವು ಒತ್ತಿದರೆ, ನಿಮ್ಮ ಸಿಮ್ ಬ್ಲಾಕ್ ಆಗಿ ಅವನ ಬಳಿ ನಿಮ್ಮ ಸಿಮ್ ಇರುತ್ತದೆ.

ಹಣ ಹೇಗೆ ಕಳೆದುಕೊಳ್ಳುತ್ತೀರಾ?
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆದ ವಂಚಕರು ಎಟಿಎಂ ಕಾರ್ಡ್‌ನಲ್ಲಿರುವ "ಸಿವಿವಿ" ನಂಬರ್ ಮೂಲಕ ಆನ್‌ಲೈನ್ ವ್ಯವಹಾರ ಮಾಡುತ್ತಾರೆ. ಈಗ ಸಿವಿವಿ ನಂಬರ್ ಮತ್ತು ಮೊಬೈಲ್ ಒಟಿಪಿ ಇದ್ದರೆ ಆನ್‌ಲೈನಿನಲ್ಲಿ ಹಣ ವರ್ಗಾವಣೆ ಕ್ಷಣಾರ್ಧದಲ್ಲಿ ನಡೆಯುತ್ತದೆ. ಈ ಎರಡು ಮಾಹಿತಿಗಳನ್ನು ನಿಮ್ಮಿಂದ ಪಡೆದ ಅವರು ನಿಮ್ಮ ಹಣ ದೋಚುತ್ತಾರೆ.

ಎಟಿಎಂ ಕಾರ್ಡ್ ಮಾಹಿತಿ ಅವರಿಗೆ ಸಿಗುವುದು ಹೇಗೆ?
ನಕಲಿ ವೆಬ್‌ಸೈಟ್ ಅನ್ನು ತೆರೆಯುವ ಕ್ರಿಮಿನಲ್‌ಗಳು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲು ಪ್ರೇರೇಪಿಸುತ್ತಾರೆ. ಒಮ್ಮೆ ವ್ಯವಹಾರ ನಡೆದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಪಡೆಯುತ್ತಾರೆ. ಅಥವಾ ನೀವು ನಿಮ್ಮ ಖಾಸಾಗಿ ಮಾಹಿತಿಯನ್ನು ಎಲ್ಲಿಯಾದರೂ ನೀಡಿದ್ದರೆ, ಅದನ್ನು ಹೆಕ್ಕಿ ತೆಗೆಯುವ ಕಲೆ ವಂಚಕರಿಗೆ ತಿಳಿಸಿದೆ.

ತಕ್ಷಣ ಪಾರಾಗುವುದು ಸಾಧ್ಯ.
ಮೊಬೈಲ್‌ನ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಟೆಲಿಕಾಂ ಕಂಪೆನಿ ಸಂಪರ್ಕಿಸುವುದು ಒಳ್ಳೆಯದು ಎಂದು ಕನ್ನಡದ ಪ್ರಮುಖ ತಂತ್ರಜ್ಞಾನ ಲೇಖಕರಾದ ಟಿ.ಜಿ ಶ್ರೀನಿಧಿ ಅವರು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಮ್ ಮಾಹಿತಿ ನಕಲಿಸಬಹುದು
ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು ಮತ್ತು ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಮೂಲಕ ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications