ಟವೆಲ್ ಖರೀದಿಸಲು ಹೋದ ಮಹಿಳೆಗೆ ಆಗಿದ್ದೇನು ಗೊತ್ತಾ? ನಿಜಕ್ಕೂ ಇದು ಶಾಕಿಂಗ್ ವಿಚಾರ!
ಆನ್‌ಲೈನ್ ವಹಿವಾಟು ಹೆಚ್ಚಾದಂತೆ ಆನ್‌ಲೈನ್ ವಂಚಕರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯವೂ ದೇಶದ ಯಾವುದಾದರೂ ಒಂದು ಮೂಲೆಯಲ್ಲಿ ಸೈಬರ್ ಕ್ರಿಮಿಗಳು ತಮ್ಮ ಕೈಚಳಕ ತೋರಿರುತ್ತಾರೆ. ಆದರೆ ಮುಂಬೈನಲ್ಲಿ ನಡೆದಿರುವ ಈ ಪ್ರಕರಣ ಆನ್‌ಲೈನ್ ಶಾಪಿಂಗ್ ಮಾಡುವ ಮಹಿಳೆಯರಿಗೆ ಬಿಗ್ ಶಾಕ್ ನೀಡಿದೆ.
ಹೌದು, ಮುಂಬೈನ ಈ ಮಹಿಳೆಗೆ ಆಗಿರುವ ಆನ್‌ಲೈನ್ ವಂಚನೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಕೇವಲ ಟವೆಲ್ ಖರೀದಿಸಲು ಹೋಗಿ 8.30 ಲಕ್ಷ ರೂ. ಹಣವನ್ನು ಕಳೆದುಕೊಂಡಿರುವ ಈಕೆಯ ಬಗ್ಗೆ ನಿಮಗೆ ಅಯ್ಯೊ ಎನಿಸೋದು ಸಹಜ. ಹಾಗಾದ್ರೆ ಈ ಮಹಿಳೆ ಆನ್‌ಲೈನ್‌ನಲ್ಲಿ ಹಣ ಕಳೆದುಕೊಳ್ಳಲು ಕಾರಣ ಏನು? ವಂಚಕರು ಆಕೆಯನ್ನು ಹೇಗೆ ವಂಚನೆ ಮಾಡಿದ್ರೂ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೇಶದ ವಿವಿಧ ಭಾಗಗಳಲ್ಲಿ ಆನ್‌ಲೈನ್ ವಂಚನೆಯ ಪ್ರಕರಣಗಳು ದಾಖಲಾಗುತ್ತಲೇ ಇದೆ. ಅದರಂತೆ ಮುಂಬೈನಲ್ಲಿ ಹಿರಿಯ ನಾಗರಿಕರೊಬ್ಬರು ಆನ್‌ಲೈನ್‌ನಲ್ಲಿ ಟವೆಲ್ ಖರೀದಿಸುವಾಗ 8.30 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಪಿಟಿಐ ನೀಡಿರುವ ವರದಿಯ ಪ್ರಕಾರ, ಮೀರಾ ರೋಡ್‌ನ 70 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಇ-ಕಾಮರ್ಸ್ ಸೈಟ್‌ನಿಂದ ಆರು ಟವೆಲ್‌ಗಳನ್ನು 1,160 ರೂ. ಬೆಲೆಗೆ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಟವೆಲ್‌ಗಳಿಗೆ ಆನ್‌ಲೈನ್ ಪಾವತಿ ಮಾಡುವಾಗ ಆಕೆ 1,169 ರೂ. ಬದಲಿಗೆ 19,005 ರೂ. ವಹಿವಾಟು ನಡೆಸಿದ್ದಾರೆ.

ತಪ್ಪು ವಹಿವಾಟು ನಡೆಸಿರುವುದರಿಂದ ಅವರು ರಿಪೋರ್ಟ್ ಮಾಡಿದ್ದಾರೆ. ನಂತರ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಅಪರಿಚಿತ ವ್ಯಕ್ತಿಗಳು ಅವರಿಗೆ ನಾವು ಬ್ಯಾಂಕ್ ಸಿಬ್ಬಂದಿಯಾಗಿದ್ದು, ನಿಮಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಮಹಿಳೆ ಅವರು ಹೇಳಿದಂತೆ ಕೇಳಿದ್ದಾರೆ. ಆನ್‌ಲೈನ್ ವಹಿವಾಟಿನ ವಿವರವನ್ನು ಹಂಚಿಕೊಂಡಿದ್ದಾರೆ.

ಮಹಿಳೆಯ ಬಳಿ ಎಲ್ಲಾ ಮಾಹಿತಿ ಪಡೆದುಕೊಂಡ ವಂಚಕರು ಆಕೆಯ ಮೊಬೈಲ್‌ನಲ್ಲಿ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಲು ಹೇಳಿದ್ದಾರೆ. ಅವರು ಹೇಳಿದಂತೆ ಮಹಿಳೆ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಅಲ್ಲದೆ ಅವರು ನೀಡಿದ ಎಲ್ಲಾ ಸೂಚನೆಗಳನ್ನು ಅನುಸರಿಸಿದ್ದಾರೆ. ತಕ್ಷಣವೇ ಆಕೆಯ ಖಾತೆಯಿಂದ 1 ಲಕ್ಷ ರೂಪಾಯಿ ಡೆಬಿಟ್ ಆಗಿದೆ.ಹೀಗೆ ಒಟ್ಟು 8.3 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಆಗ ಎಚ್ಚೆತ್ತ ಮಹಿಳೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆನ್‌ಲೈನ್ ಶಾಪಿಂಗ್ ಸ್ಕ್ಯಾಮ್ ಅನ್ನು ತಡೆಯುವುದು ಹೇಗೆ?
* ಆನ್‌ಲೈನ್ ಶಾಪಿಂಗ್ ಮಾಡುವಾಗ ವಿಶ್ವಸಾರ್ಹ ಆ್ಯಪ್‌ಗಳನ್ನು ಬಳಸಿ.
* ನೀವು ಬೇಟಿ ನೀಡುವ ವೆಬ್‌ಸೈಟ್ ಅಸಲಿಯೋ ನಕಲಿಯೋ ಅದನ್ನು ಮೊದಲು ತಿಳಿದುಕೊಳ್ಳಿರಿ.
* ವೆಬ್‌ಸೈಟ್‌ಗಳಲ್ಲಿ ಬ್ಯಾಂಕ್ ಖಾತೆ ವಿವರಗಳು, ಪಾಸ್‌ವರ್ಡ್‌ಗಳು ಮತ್ತು OTP ಯಂತಹ ಸೂಕ್ಷ್ಮ ಮಾಹಿತಿಯನ್ನು ಫೋನ್‌ನಲ್ಲಿ ಶೇರ್ ಮಾಡಬೇಡಿ.
* ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಜವಾದ ಸಹಾಯವಾಣಿ ಸಂಖ್ಯೆಯನ್ನು ಪರಿಶೀಲಿಸಬಹುದು.
* ಬ್ಯಾಂಕ್ ಸಿಬ್ಬಂದಿ ಎಂದಿಗೂ ನಿಮಗೆ ಕರೆ ಮಾಡುವುದಿಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
* ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ ನಿಮ್ಮಿಂದ ಎಂದಿಗೂ ಕೂಡ ಒಟಿಪಿ ಸಂಖ್ಯೆಯನ್ನು ಕೇಳುವುದಿಲ್ಲ.
* ಆನ್‌ಲೈನ್ ಶಾಪಿಂಗ್ ಮಾಡುವ ವೆಬ್‌ಸೈಟ್‌ಗಳ ಅಸಲಿಯತೆಯ ಬಗ್ಗೆ ಗಮನವಿರಲಿ.
* ಒಂದು ವೆಬ್‌ಸೈಟ್‌ನಿಂದ ಬೇರೊಂದು ವೆಬ್‌ಸೈಟ್‌ಗೆ ಕರೆದೊಯ್ಯುವ ಸೈಟ್‌ಗಳ ಬಗ್ಗೆ ಎಚ್ಚರಿಕೆಯಿರಲಿ.


Click it and Unblock the Notifications








