5G ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕೂಡ 5G ನೆಟ್‌ವರ್ಕ್ ಸಿಗ್ತಿಲ್ಲ ಯಾಕೆ?
ಭಾರತದಲ್ಲಿ 5G ಸೇವೆ ಪ್ರಾರಂಭವಾಗಿ ಎರಡು ವಾರಗಳು ಕಳೆದಿವೆ. ಈ ನಡುವೆ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂಗಳು ದೇಶದ ಕೆಲವು ಆಯ್ದ ನಗರಗಳಲ್ಲಿ ಮಾತ್ರ 5G ಸೇವೆಯನ್ನು ಪ್ರಾರಂಭಿಸಿವೆ. ಆದರೆ 5G ಲಭ್ಯವಿರುವ ನಗರಗಳಲ್ಲಿಯೂ ಕೂಡ 5G ಸೇವೆ ದೊರಕುತ್ತಿಲ್ಲ ಅಂತಾ ಹೆಚ್ಚಿನ ಬಳಕೆದಾರರು ವರದಿ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸ್ಮಾರ್ಟ್‌ಫೋನ್‌ಗಳ ಸಾರ್ಫ್‌ವೇರ್ ಇನ್ನು ಕೂಡ ಭಾರತದ 5G ಸೇವೆಗೆ ಅಪ್ಡೇಟ್ ಆಗಿಲ್ಲ ಎಂದು ಹೇಳಲಾಗಿದೆ.

ಹೌದು, ಭಾರತದಲ್ಲಿ 5G ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಇನ್ನು ಕೂಡ ಸಾಫ್ಟ್‌ವೇರ್ ಅಪ್ಡೇಟ್ ಮಾಡದ ಕಾರಣ 5G ಬಳಸಲು ಸಾಧ್ಯವಾಗ್ತಿಲ್ಲ. ಇದರಿಂದ ಭಾರತದ ದೂರಸಂಪರ್ಕ ಇಲಾಖೆ (DoT) ಇತ್ತೀಚಿನ ತಲೆಮಾರಿನ ಮೊಬೈಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಫ್ಟ್‌ವೇರ್ ಬೆಂಬಲವನ್ನು ತ್ವರಿತವಾಗಿ ಹೊರತರುವಂತೆ ಸ್ಮಾರ್ಟ್‌ಫೋನ್ ತಯಾರಕರನ್ನು ಕೇಳಿದೆ. ಇದಕ್ಕಾಗಿ ದೂರಸಂಪರ್ಕ ಇಲಾಖೆ ಮತ್ತು ಐಟಿ ಸಚಿವಾಲಯದ ಉನ್ನತ ಅಧಿಕಾರಿಗಳ ನಡುವೆ ಸಭೆಯನ್ನು ಕೂಡ ಮಾಡಲಾಗಿದೆ. ಹಾಗಾದ್ರೆ ಭಾರತದಲ್ಲಿ 5G ಸೇವೆ ಬೆಂಬಲಿಸುವ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡೊದು ಯಾವಾಗ? ಇದಕ್ಕೆ ಸ್ಮಾರ್ಟ್‌ಫೋನ್ ತಯಾರಕರು ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಈಗಾಗಲೇ 5G ಸೇವೆಯನ್ನು ಲಾಂಚ್ ಮಾಡಲಾಗಿದೆ. ಇದಕ್ಕೆ ಅನುಗುಣವಾಗಿ ಏರ್‌ಟೆಲ್ ಮತ್ತು ಜಿಯೋ ದೇಶದ ಕೆಲವು ಆಯ್ದ ನಗರಗಳಲ್ಲಿ 5G ಸೇವೆ ಪ್ರಾರಂಭಿಸಿವೆ. ಇದರಲ್ಲಿ ಏರ್‌ಟೆಲ್ ಬೆಂಗಳೂರು ನಗರದಲ್ಲಿಯೂ ಕೂಡ 5G ಸೇವೆಯನ್ನು ಪ್ರಾರಂಭಿಸಿದೆ. ಆದರೆ 5G ಆಕ್ಟಿವ್ ಆಗಿರುವ ಫೋನ್‌ಗಳಲ್ಲಿಯು ಕೂಡ ಇನ್ನು 5G ಸೇವೆ ಬಳಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಏಕೆಂದರೆ ಸ್ಮಾರ್ಟ್‌ಫೋನ್‌ಗಳು ಇನ್ನು ಕೂಡ 5G ನೆಟ್‌ವರ್ಕ್‌ಗಳಿಗೆ ಹೊಂದಿಕೆಯಾಗುವ ಪ್ರಸಾರದ ಸಾಫ್ಟ್‌ವೇರ್ ಅಪ್ಡೇಟ್ ಮಾಡಬೇಕಿದೆ.

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರಸಂಪರ್ಕ ಇಲಾಖೆ ಸ್ಮಾರ್ಟ್‌ಫೋನ್ ತಯಾರಕರ ಬಳಸಿ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡುವಂತೆ ಕೇಳಿದೆ. ಅದರಂತೆ ಆಪಲ್ ಕಂಪೆನಿ ತನ್ನ ಐಫೋನ್ ಬಳಕೆದಾರರಿಗೆ ಡಿಸೆಂಬರ್ ತಿಂಗಳಲ್ಲಿ 5G ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ. ಈ ಅಪ್ಡೇಟ್ ಐಫೋನ್ 14, 13, 12 ಮತ್ತು ಐಫೋನ್ SE ಮಾದರಿಗಳನ್ನು ಹೊಂದಿರಲಿದೆ. ಅಲ್ಲದೆ ನೆಟ್‌ವರ್ಕ್ ಕಾರ್ಯಕ್ಷಮತೆಯ ಪರೀಕ್ಷೆ ಪೂರ್ಣಗೊಂಡ ತಕ್ಷಣ 5G ಅನುಭವವನ್ನು ನೀಡಲು ಭಾರತದಲ್ಲಿ ವಾಹಕ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಆಪಲ್ ಹೇಳಿದೆ.

ಇನ್ನು ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಕೂಡ ಭಾರತದಲ್ಲಿ 5G ಸೇವೆಗೆ ಸೂಕ್ತವಾದ ಅಪ್ಡೇಟ್ ಅನ್ನು ನವೆಂಬರ್ ತಿಂಗಳ ಮಧ್ಯದಲ್ಲಿ ತರುವುದಾಗಿ ಹೇಳಿದೆ. ಇದಕ್ಕಾಗಿ ನಾವು ನಮ್ಮ ಆಪರೇಟರ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. ಅದರಂತೆ ನಮ್ಮ ಎಲ್ಲಾ 5G ಸಾಧನಗಳಲ್ಲಿ OTA ಅಪ್ಡೇಟ್‌ಗಳನ್ನು ತರಲಿದ್ದೇವೆ ಎಂದು ಹೇಳಿಕೊಂಡಿದೆ.

ದೇಶದಲ್ಲಿ 5G ಸೇವೆ ಪ್ರಾರಂಭವಾದರೂ ಕೂಡ ಸ್ಮಾರ್ಟ್‌ಫೋನ್‌ಗಳ ಸಾಫ್ಟ್‌ವೇರ್ 5G ಸೇವೆ ಬೆಂಬಲಿಸದಿರುವುದರ ಬಗ್ಗೆ ಟೆಲಿಕಾಂ ಆಪ್‌ರೇಟರ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ 5G ಗೆ ಹೊಂದಿಕೆಯಾಗುವ 128 ಸ್ಮಾರ್ಟ್‌ಫೋನ್ ಮಾದರಿಗಳು ಲಭ್ಯವಿವೆ. ಭಾರತದಲ್ಲಿ 5G-ರೆಡಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು 2023 ರಲ್ಲಿ 5G ಚಂದಾದಾರಿಕೆಗೆ ಅಪ್‌ಗ್ರೇಡ್ ಮಾಡಲು ಬಯಸುತ್ತಾರೆ ಎಂದು ವರದಿಯೊಂದು ಹೇಳಿದೆ.

ಪ್ರಸ್ತುತ, ಜಿಯೋ ಟೆಲಿಕಾಂ ಭಾರತದಲ್ಲಿ 5G ಸೇವೆ ಬೀಟಾ ಪ್ರಯೋಗಗಳನ್ನು ಪ್ರಾರಂಭಿಸಿದೆ. ಆದರೆ ಏರ್‌ಟೆಲಿಕಾಂ ಭಾರತದಲ್ಲಿ ವಾಣಿಜ್ಯಿಕವಾಗಿ 5G ಸೇವೆಗಳನ್ನು ಪ್ರಾರಂಭಿಸಿದೆ.ಅದರಂತೆ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿಯಲ್ಲಿ 5G ಸೇವೆ ಪ್ರಾರಂಭಿಸಿದೆ. ಡಿಸೆಂಬರ್ 2023 ರ ವೇಳೆಗೆ ಜಿಯೋ ಮತ್ತು ಮಾರ್ಚ್ 2024 ರ ವೇಳೆಗೆ ಭಾರ್ತಿ ಏರ್‌ಟೆಲ್ ದೇಶದಾದ್ಯಂತ 5G ಸೇವೆ ನೀಡುವುದಾಗಿ ಹೇಳಿಕೊಂಡಿವೆ.


Click it and Unblock the Notifications








