ಸದ್ಯದಲ್ಲೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ಎದುರಾಗಲಿದೆ ಬೆಲೆ ಏರಿಕೆಯ ಶಾಕ್: ಕಾರಣ ಇಲ್ಲಿದೆ
ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕು ಅಂತಾ ಪ್ಲಾನ್ ಮಾಡಿದ್ದರೆ ಒಂದೆರಡು ತಿಂಗಳಿನಲ್ಲಿಯೇ ಖರೀದಿಸಿ. ಏಕೆಂದರೆ ಏಪ್ರಿಲ್ ತಿಂಗಳ ನಂತರ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಎಕನಾಮಿಕ್ ಟೈಮ್ಸನ ವರದಿಯಂತೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಬೆಲೆಗಳು ಶೀಘ್ರದಲ್ಲೇ ಹೆಚ್ಚಳವಾಗಲಿದೆ ಎನ್ನಲಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳ (Smartphones) ಬೆಲೆಯಲ್ಲಿ ಏರಿಕೆಯಾಗಲಿದೆ ಎಂಬ ವರದಿಯನ್ನು ಎಕನಾಮಿಕ್ ಟೈಮ್ಸ್ ಬಹಿರಂಗಪಡಿಸಿದೆ. ಇದೇ ವರ್ಷದ ಎರಡನೇ ತ್ರೈಮಾಸಿಕದಿಂದ ಇದು ಶುರುವಾಗಲಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗುವುದಕ್ಕೆ ಕಾರಣವೇನು? ಇದರ ಬಗ್ಗೆ ಟೆಕ್ ವಲಯದಲ್ಲಿರುವ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್ ಬೆಲೆಗಳು ಹೆಚ್ಚಾಗುವುದಕ್ಕೆ ಕಾರಣ ಏನು?
ಏಪ್ರಿಲ್ ತಿಂಗಳ ವೇಳೆಗೆ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಗೆ ಮುಖ್ಯ ಕಾರಣ ಚೀನಾದ ಅಧಿಕೃತ ಕರೆನ್ಸಿ. ಚೀನಾದ ಕರೆನ್ಸಿಯಾದ ಯುವಾನ್‌ನ ಬಲವರ್ಧನೆಯೊಂದಿಗೆ ಮೆಮೊರಿ ಚಿಪ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಈ ಎರಡು ಅಂಶಗಳು ಸ್ಮಾರ್ಟ್‌ಫೋನ್ ಬೆಲೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎನ್ನಲಾಗಿದೆ. ಅಷ್ಟೇ ಅಲ್ಲ ಇದರಿಂದಾಗಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ 10% ರಿಂದ 15% ಏರಿಕೆ ಅಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಮಾರುಕಟ್ಟೆ ಸಂಶೋಧನಾ ಸಂಸ್ಥೆ ಟ್ರೆಂಡ್‌ಫೋರ್ಸ್ DRAM (ಮೆಮೊರಿ ಚಿಪ್ಸ್) ಬೆಲೆಗಳಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದೆ. ಏಕೆಂದರೆ ಮೆಮೊರಿ ಚಿಪ್ ಪ್ರಮುಖ ಪೂರೈಕೆದಾರರಾದ Samsung ಮತ್ತು Micron ಮಾರ್ಚ್‌ನಿಂದ ಬೆಲೆ ಹೆಚ್ಚಳವನ್ನು ಮಾಡಲಿವೆ. ಮೆಮೊರಿ ಕಾರ್ಡ್‌ಗಳ ಬೆಲೆಯಲ್ಲಿ ಹೆಚ್ಚಳ ಒಂದು ಕಡೆಯಾದರೆ ಚೀನಾದ ಕರೆನ್ಸಿಯ ಬಲವರ್ಧನೆ ಮತ್ತೊಂದು ಕಡೆ. ಈ ಎರಡು ಪ್ರಮುಖ ನಿರ್ಧಾರಗಳು ಇದೀಗ ಮೊಬೈಲ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದು ಪಕ್ಕಾ ಆಗಿದೆ.
ಸ್ಮಾರ್ಟ್‌ಫೋನ್‌ಗಳ ಪ್ರಮುಖ ಘಟಕಗಳ ಬೆಲೆ ಹೆಚ್ಚಳವಾದಾಗ ಅದರ ನೇರ ಪರಿಣಾಮ ಮೊಬೈಲ್ ಬೆಲೆಯ ಮೇಲೆ ಬೀಳಲಿದೆ. ಮೊಬೈಲ್ ಘಟಕಗಳ ಬೆಲೆ ಹೆಚ್ಚಳವಾದಾಗ ಸಹಜವಾಗಿಯೇ ಮೊಬೈಲ್ ಗಳ ಬೆಲೆ ಕೂಡ ಹೆಚ್ಚಳವಾಗಲಿದೆ . ಅದರಂತೆ ಮೆಮೊರಿ ಚಿಪ್‌ಗಳ ಮೇಲಿನ ಬೆಲೆ ಹೆಚ್ಚಳ ಅಂತಿಮವಾಗಿ ಸ್ಮಾರ್ಟ್‌ಫೋನ್ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು.

ಇದರ ನಡುವೆ ಭಾರತ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಮೊಬೈಲ್ ಘಟಕಗಳ ಮೇಲಿನ ಆಮದು ಸುಂಕದ ತೆರಿಗೆಯನ್ನು ಕಡಿತಗೊಳಿಸಿದೆ. ಇದು ಪರಿಣಾಮಕಾರಿಯಾದರೆ ಮೊಬೈಲ್‌ಗಳ ಬೆಲೆ ಹೆಚ್ಚಳವಾಗದಂತೆ ಸಮತೋಲನ ಸಾಧಿಸುವುದಕ್ಕೆ ಅವಕಾಶ ಸಿಗಬಹುದು. ಅಂದರೆ ಭಾರತ ಸರ್ಕಾರವು ಈಗಾಗಲೇ ಮಧ್ಯಂತರ ಬಜೆಟ್ ಅನ್ನು ಮಂಡಿಸಿದೆ. ಇದಕ್ಕೂ ಒಂದು ದಿನದ ಮೊದಲು ಜನವರಿ 31 ರಂದು ಮೊಬೈಲ್ ತಯಾರಿಕೆಯಲ್ಲಿ ಬಳಸುವ ಪ್ರಮುಖ ಘಟಕಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ.
ಇದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳವಾದರೂ ಅದನ್ನು ಸಮತೋಲನಗೊಳಿಸುವುದಕ್ಕೆ ಅವಕಾಶವಿದೆ. ಸರ್ಕಾರದ ನಿರ್ಣಯದಿಂದಾಗಿ ಈಗಾಗಲೇ ಮೊಬೈಲ್ ಉತ್ಪಾದನೆಗೆ ನಿರ್ಣಾಯಕವಾದ ವಿವಿಧ ಘಟಕಗಳ ಮೇಲಿನ ಆಮದು ಸುಂಕವನ್ನು 15% ರಿಂದ 10% ಕ್ಕೆ ಇಳಿಸಲಾಗಿದೆ. ಸದ್ಯ ಇದು ಮದ್ಯಂತರ ಬಜೆಟ್ ಆಗಿದೆ ಲೋಕಸಭಾ ಚುನಾವಣೆಯ ನಂತರ ಪರಿಪೂರ್ಣ ಬಜೆಟ್ ಮಂಡನೆಯಾಗಲಿದೆ. ಆ ಸಮಯದಲ್ಲಿಯೂ ಈ ಸುಂಕ ಕಡಿತವನ್ನು ಮುಂದುವರೆಸಿದರೆ ಮೊಬೈಲ್ ಬೆಲೆಯಲ್ಲಿ ಸಮತೋಲನ ಸಾಧಿಸುವುದಕ್ಕೆ ಸಾಧ್ಯವಾಗಲಿದೆ.
ಏನೇ ಇರಲಿ ನೀವು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಪ್ಲಾನ್ ಇದ್ದರೆ ಇನ್ನೆರಡು ತಿಂಗಳ ಒಳಗೆ ಖರೀದಿಸಿ ಬಿಡುವುದು ಉತ್ತಮ. ಇಲ್ಲದಿದ್ದರೆ ಬೆಲೆ ಏರಿಕೆಯ ಬಿಸಿ ನಿಮ್ಮ ಜೇಬು ಸುಡುವುದು ಪಕ್ಕಾ.


Click it and Unblock the Notifications








