ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಕಡಿಮೆ ಆಗೋದಕ್ಕೆ ಇಲ್ಲಿದೆ ಮುಖ್ಯ ಕಾರಣ!
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ಬ್ಯಾಟರಿ ಬ್ಯಾಕಪ್ ಸಮಸ್ಯೆ. ಮೊಬೈಲ್ ಖರೀದಿಸಿದ ಪ್ರಾರಂಭದಲ್ಲಿರುವ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ದಿನ ಕಲೆದಂತೆ ಕಡಿಮೆ ಅಗುತ್ತಾ ಹೋಗಲಿದೆ. ಇದಕ್ಕೆ ಕಾರಣ ನಿಮ್ಮ ಮೊಬೈಲ್‌ನಲ್ಲಿರುವ ಅಪ್ಲಿಕೇಶನ್‌ಗಳು ಒಂದಾದರೆ, ಮತ್ತೊಂದು ಸ್ಮಾರ್ಟ್‌ಪೋನ್‌ನ ಕಾರ್ಯದಕ್ಷತೆ ಕೂಡ ಸೇರಿದೆ.
ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಬ್ಯಾಕಪ್ ಸಮಸ್ಯೆ ಬಹುವಾಗಿ ಕಾಡಲಿದೆ. ಇದಿಗ ಮೊಬೈಲ್‌ಗಳ ಬ್ಯಾಟರಿ ಗುಣಮಟ್ಟದ ವಿವರಗಳ ಬಗ್ಗೆ DxOMark ಹೊಸ ವರದಿಯನ್ನು ಬಿಡುಗಡೆ ಮಾಡಿದೆ. DxOMark ಬ್ಯಾಟರಿ ಗುಣಮಟ್ಟ, ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಚಾಲನೆ ಮತ್ತು ಚಾರ್ಜಿಂಗ್ ಪರೀಕ್ಷೆಗಳ ಬಗ್ಗೆ ವರದಿ ಮಾಡಿದೆ. ಹಾಗಾದ್ರೆ DxOMark ನೀಡಿರುವ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

DxOMark ವರದಿಯಲ್ಲಿ ಏನಿದೆ?
DxOMark ಜನಪ್ರಿಯ ಸಂದೇಶ ಕಳುಹಿಸುವಿಕೆ, ಶಾರ್ಟ್ ವೀಡಿಯೊ ಮತ್ತು ಲಾಂಗ್ ವೀಡಿಯೊ ಫಾರ್ಮ್ಯಾಟ್ ಅಪ್ಲಿಕೇಶನ್‌ಗಳ ಬ್ಯಾಟರಿ ಬಳಕೆಯ ವಿವರಗಳನ್ನು ವರದಿ ಮಾಡಿದೆ. ಈ ವರದಿಗಾಗಿ 2023 ರಲ್ಲಿ ಬಿಡುಗಡೆಯಾದ ಮಧ್ಯಮ ಶ್ರೇಣಿಯ ಮತ್ತು ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಗುಣಮಟ್ಟವನ್ನು ಪರೀಕ್ಷೆ ಮಾಡಿದೆ. ಅದರಂತೆ ನಿಮ್ಮ ಮೊಬೈಲ್‌ನಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ವೇಗವಾಗಿ ಖಾಲಿ ಮಾಡುವ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ನೀಡಿದೆ.
ಮೊಬೈಲ್ ಬ್ಯಾಟರಿಯನ್ನು ಹೆಚ್ಚು ಖಾಲಿ ಮಾಡುವ ಅಪ್ಲಿಕೇಶನ್‌ಗಳು
DxOMark ಸಂಸ್ಥೆಯು, ಬ್ಯಾಟರಿ ಗುಣಮಟ್ಟದ ವರದಿಗಾಗಿ 24,000ರೂ ಮತ್ತು 33,000ರೂ ಬೆಲೆಯ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರೀಕ್ಷಿಸಿದೆ. ಅಲ್ಲದೆ ಬ್ಯಾಟರಿ ಡ್ರೈನ್ ಪರೀಕ್ಷೆಗಳನ್ನು ನಡೆಸಲು 66,000ರೂ ಕ್ಕಿಂತ ಹೆಚ್ಚು ಬೆಲೆಯ ಡಿವೈಸ್‌ಗಳನ್ನು ಪರೀಕ್ಷಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು 2023 ರಿಂದ ಇತ್ತೀಚಿಗೆ ಬಿಡುಗಡೆ ಆಗಿರುವ ಪ್ರಮುಖ ಡಿವೈಸ್‌ಗಳಾಗಿವೆ. ಆದರೆ ಈ ಫೋನ್‌ಗಳ ಹೆಸರನ್ನು ಬಹಿರಂಗ ಪಡಿಸಿಲ್ಲ.

SMS ಅಪ್ಲಿಕೇಶನ್ ಬಳಸುವವರೇ ಎಚ್ಚರ
DxOMark ವರದಿಯಲ್ಲಿ ಹೇಳಿರುವಂತೆ ಮಧ್ಯಮ-ಶ್ರೇಣಿಯ ಮತ್ತು ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಾಳಿಕೆ ಕಡಿಮೆಯಾಗಲು ಮುಖ್ಯ ಕಾರಣ SMS ಅಪ್ಲಿಕೇಶನ್ ಎನ್ನಲಾಗಿದೆ. ಮಧ್ಯಮ ಶ್ರೇಣಿಯ ಸಾಧನಗಳಿಗೆ ಹೋಲಿಸಿದರೆ ಉನ್ನತ-ಮಟ್ಟದ ಫ್ಲ್ಯಾಗ್‌ಶಿಪ್‌ಗಳಲ್ಲಿ SMS ಮೂಲಕ ಬ್ಯಾಟರಿ ಡಿಸ್ಚಾರ್ಜ್ ಕಡಿಮೆಯಾಗಿದೆ. ಇದಲ್ಲದೆ ಹೆಚ್ಚಿನ ಮೊಬೈಲ್‌ಗಳಲ್ಲಿ ಬ್ಯಾಟರಿ ಡ್ರೈನ್‌ಗೆ ಫೇಸ್‌ಬುಕ್ ಮೆಸೆಂಜರ್, ಸ್ನ್ಯಾಪ್‌ಚಾಟ್ ಚಾಟ್, ಇನ್‌ಸ್ಟಾಗ್ರಾಮ್ ಚಾಟ್ ಮತ್ತು ವಾಟ್ಸಾಪ್, ಅಪ್ಲಿಕೇಶನ್‌ಗಳು ಮುಖ್ಯ ಕಾರಣವಾಗಿವೆ.
ಇನ್‌ಸ್ಟಾಗ್ರಾಮ್ ರಿಲ್ಸ್ ಮಾಡಿದರೂ ಕೂಡ ಬ್ಯಾಟರಿಗೆ ಕುತ್ತು
ಇದಲ್ಲದೆ Instagram ಮತ್ತು Facebook ರೀಲ್‌ಗಳು ಕೂಡ ಮೊಬೈಲ್‌ನ ಬ್ಯಾಟರಿ ದಕ್ಷತೆಯನ್ನು ಕಡಿಮೆ ಮಾಡುತ್ತಿವೆ ಎಂದು DxOMark ವರದಿ ಹೇಳಿದೆ. ಯೂಟ್ಯೂಬ್ ಶಾರ್ಟ್ಸ್ ಮೂರನೇ ಅತಿ ಹೆಚ್ಚು ಬ್ಯಾಟರಿ ಹಾಗರ್ ಆಗಿದ್ದು, ಟಿಕ್‌ಟಾಕ್ ಮತ್ತು ಸ್ನ್ಯಾಪ್‌ಚಾಟ್ ಸ್ಪಾಟ್‌ಲೈಟ್ ನಂತರ ಬಹುತೇಕ ಒಂದೇ ರೀತಿಯ ಬ್ಯಾಟರಿ ಡಿಸ್ಚಾರ್ಜ್ ಆಗಿದೆ. ಇನ್ನು OTT ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದಂತೆ, ಡಿಸ್ನಿ, ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್ ನಂತರದ ಪ್ರತಿ ವೀಡಿಯೊಗೆ ಪ್ರೈಮ್ ವಿಡಿಯೋ ಅತಿ ಹೆಚ್ಚು ಬ್ಯಾಟರಿ ದಕ್ಷತೆಯನ್ನು ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ.
ಕೆಲವು ಅಪ್ಲಿಕೇಶನ್‌ಗಳು ಹೆಚ್ಚಿನ ಬ್ಯಾಟರಿಯನ್ನು ಬಳಸುತ್ತವೆ ಏಕೆ?
ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳು ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ಬಳಸುವುದಕ್ಕೆ ಯಾವುದೇ ಕಠಿಣ ನಿಯಮಗಳಿಲ್ಲ. ಆದರೆ ಸೆಲ್ಯುಲಾರ್ ಸಂಪರ್ಕವನ್ನು ಅವಲಂಬಿಸಿರುವ SMS ನಂತಹ ಅಪ್ಲಿಕೇಶನ್‌ಗಳು ಹೆಚ್ಚು ಬ್ಯಾಟರಿ ಶಕ್ತಿಯನ್ನು ಬಳಸುತ್ತವೆ. ಸೆಲ್ಯುಲಾರ್ ಸಂಪರ್ಕಗಳಿಗೆ ಡೇಟಾವನ್ನು ರವಾನಿಸಲು ಅಥವಾ ಸ್ವೀಕರಿಸಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಇದೇ ಕಾರಣಕ್ಕೆ ನಿಮ್ಮ ಮೊಬೈಲ್ ಬ್ಯಾಟರಿ ದಕ್ಷತೆ ಎಸ್‌ಎಂಎಸ್ ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಾದಂತೆ ಕಡಿಮೆ ಆಗಲಿದೆ.

ಇದಲ್ಲದೆ ಮೊಬೈಲ್‌ನಲ್ಲಿರುವ ಕೆಲವು ಅಪ್ಲಿಕೇಶನ್‌ಗಳು ಮಾಹಿತಿಯನ್ನು ಸಂಗ್ರಹಿಸಲು, ಡೇಟಾವನ್ನು ಸಿಂಕ್ ಮಾಡಲು ಮತ್ತು ಅಧಿಸೂಚನೆಗಳನ್ನು ಒದಗಿಸಲು ಬ್ಯಾಕ್‌ಗ್ರೌಂಡ್‌ನಲ್ಲಿ ನಿರಂತರವಾಗಿ ರನ್ ಆಗುತ್ತಿರುತ್ತವೆ. ಈ ರೀತಿ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವ ಅಪ್ಲಿಕೇಶನ್‌ಗಳು ಮೊಬೈಲ್ ಬ್ಯಾಟರಿಯನ್ನು ವೇಗವಾಗಿ ಡಿಸ್ಚಾರ್ಜ್ ಮಾಡುತ್ತದೆ.
ಇನ್ನು ನಿಮ್ಮ ಮೊಬೈಲ್‌ನಲ್ಲಿ ಯಾವ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಹೆಚ್ಚು ಖಾಲಿ ಮಾಡುತ್ತಿವೆ ಎಂಬುದನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
* ನೆಕ್ಸ್ಟ್ ಪೇಜ್‌ನಲ್ಲಿ ಬ್ಯಾಟರಿ ಮೇಲೆ ಕ್ಲಿಕ್ ಮಾಡಿ.
* ಇದೀಗ ಬ್ಯಾಟರಿ ಬಳಕೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್‌ನಲ್ಲಿ ಯಾವ ಅಪ್ಲಿಕೇಶನ್ ಬ್ಯಾಟರಿಯನ್ನು ಹೆಚ್ಚು ಖಾಲಿ ಮಾಡುತ್ತಿದೆ ಎಂಬುದನ್ನು ನೋಡಲು ಅಪ್ಲಿಕೇಶನ್ ಲಿಸ್ಟ್ ಅನ್ನು ಪರಿಶೀಲಿಸಿ.


Click it and Unblock the Notifications








