ದರ ಹೆಚ್ಚಳದ ನಂತರ ಬದಲಾಗುತ್ತಿದೆ ಭಾರತೀಯ ಟೆಲಿಕಾಂ ಲೋಕ..!
ಟೆಲಿಕಾಂ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಟ್ಯಾರಿಫ್ ದರ ಹೆಚ್ಚಿಸಲಾಗಿದ್ದು, ದರ ಹೆಚ್ಚಳದ ನಂತರ ಮೊಬೈಲ್ ಫೋನ್ ಬಳಕೆದಾರರು ಪ್ರಿಪೇಯ್ಡ್ ರೀಚಾರ್ಜ್‌ಗಳಿಗೆ ಹೆಚ್ಚುವರಿಯಾಗಿ ಶೇ.40ರಷ್ಟು ಹಣ ಪಾವತಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮತ್ತು ಚಾನೆಲ್ ಪಾಲುದಾರರು ತಿಳಿಸಿದ್ದಾರೆ. ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮಾಸಿಕ ಪ್ಲಾನ್‌ಗಳಿಗಿಂತ ದೀರ್ಘಾವಧಿ ಯೋಜನೆಗಳನ್ನು ಆಯ್ಕೆ ಮಾಡಲು ಸೂಚಿಸುತ್ತಿದ್ದು, ಗ್ರಾಹಕರನ್ನು ರಕ್ಷಿಸಿಕೊಳ್ಳಲು ಸರ್ಕಸ್ ಮಾಡುತ್ತಿವೆ.

ಎಂಎನ್‌ಪಿ ಭಯ..!
ಟೆಲಿಕಾಂ ಕಂಪನಿಗಳಿಗೆ ಎಂಎನ್‌ಪಿ ಭಯ ಕಾಡುತ್ತಿದೆ. ಮಾಸಿಕ ಪ್ಲಾನ್‌ಗಳಿಂದ ಗ್ರಾಹಕರು ಬೇಗ ಹೊರಬಂದು ಬೇರೆ ಕಂಪನಿಗೆ ಸ್ವಿಚ್ಚಿಂಗ್ ಆಗಬಹುದೆಂಬ ಆತಂಕ ಕಂಪನಿಗಳದ್ದು. ಅದಕ್ಕಾಗಿಯೇ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ವಾರ್ಷಿಕ ರೀಚಾರ್ಜ್ ಪ್ಲಾನ್‌ಗಳಿಗೆ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿವೆ.

ಸಾಲದ ಹೊರೆ
ಸುಪ್ರೀಂ ಕೋರ್ಟ್ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿಗಾಗಿ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ಅಕ್ಟೋಬರ್‌ನಲ್ಲಿ ಆದೇಶ ನೀಡಿದೆ. ಈ ಆದೇಶದಿಂದ ಟೆಲಿಕಾಂ ಕಂಪನಿಗಳು ಮತ್ತಷ್ಟು ಸಂಕಷ್ಟಕ್ಕಿಡಾಗಿದ್ದು, ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಪ್ಲಾನ್‌ಗಳ ದರವನ್ನು ಹೆಚ್ಚಿಸಿವೆ.

ರೀಚಾರ್ಜ್ ಮಾದರಿಯು ಬದಲು
ದರ ಹೆಚ್ಚಳದ ನಂತರ ಹೆಚ್ಚಿನ ಬಳಕೆದಾರರು ತಮ್ಮ ಖರ್ಚು ಮಾದರಿಗಳನ್ನು ಬದಲಾಯಿಸಿದ್ದು, ಕೆಲವು ಬಳಕೆದಾರರು ಡೇಟಾ ರೀಚಾರ್ಜ್‌ಗಳತ್ತ ಮಾತ್ರ ಗಮನ ಹರಿಸುತ್ತಿದ್ದಾರೆ. ಉಬರ್ ಡ್ರೈವರ್ ತನ್ನ ಟ್ಯಾಕ್ಸಿ ಚಲಾಯಿಸಲು ಜಿಪಿಎಸ್ ಸಾಧನಕ್ಕೆ ಮಾತ್ರ ರೀಚಾರ್ಜ್ ಮಾಡುತ್ತಿದ್ದಾನೆ, ಮತ್ತು ಕರೆಗಳಿಗಾಗಿ ತನ್ನ ವೈಯಕ್ತಿಕ ಸಾಧನಕ್ಕೆ ರೀಚಾರ್ಜ್ ಮಾಡಲು ಮುಂದಾಗುತ್ತಿಲ್ಲ ಎಂದು ವೊಡಾಫೋನ್ ಸ್ಟೋರ್ ವ್ಯವಸ್ಥಾಪಕ ರವಿ ದೇಶ್ವಾಲ್ ಹೇಳುತ್ತಾರೆ.

ಈಗಿನ ದರ ಕಡಿಮೆ..!
ಈಗಿನ ದರ ಹೆಚ್ಚಳ ಕಡಿಮೆ ಎಂದು ಫೋನ್ ಕಂಪನಿ ಲಾಬಿ ಸಮೂಹ ಹೇಳಿದೆ. ದಶಕದ ಹಿಂದೆ, ಭಾರತೀಯ ಗ್ರಾಹಕರು ತಮ್ಮ ವಾರ್ಷಿಕ ಆದಾಯದ ಶೇ.6ರಷ್ಟನ್ನು ಮೊಬೈಲ್ ಬಿಲ್‌ಗಳಿಗಾಗಿ ಖರ್ಚು ಮಾಡುತ್ತಿದ್ದರು. ಈಗ ಅದು ಶೇ.1 ಕ್ಕಿಂತ ಕಡಿಮೆಯಾಗಿದೆ ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ (ಸಿಒಎಐ) ಮಹಾನಿರ್ದೇಶಕ ರಾಜನ್ ಮ್ಯಾಥ್ಯೂಸ್ ಹೇಳಿದ್ದು, ಹೆಚ್ಚಿನ ದರಗಳು ಪರೋಕ್ಷವಾಗಿ ಕರೆ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಸಲಹೆ ನೀಡಿದ್ದಾರೆ.

2016ರ ನಂತರ ಬೆಲೆ ಹೆಚ್ಚಳ
ಡಿಸೆಂಬರ್ ಆರಂಭದಲ್ಲಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಜಿಯೋ ನಡೆಸಿದ ದರ ಹೆಚ್ಚಳ 2016ರ ನಂತರ ಆದ ಮೊದಲನೆಯ ಏರಿಕೆಯಾಗಿದೆ. ಶೇ.90ರಷ್ಟು ಬಳಕೆದಾರರಿರುವ ಪ್ರಿಪೇಯ್ಡ್‌ನಲ್ಲಿ ಮಾತ್ರ ಬೆಲೆಗಳನ್ನು ಹೆಚ್ಚಿಸಲಾಯಿತು, ಆರ್ಥಿಕ ಒತ್ತಡದಿಂದ ಉದ್ಯಮ ಚೇತರಿಸಿಕೊಳ್ಳಲು ಈ ಪ್ರಯತ್ನವನ್ನು ಟೆಲಿಕಾಂ ಕಂಪನಿಗಳು ಮಾಡಿವೆ.

ಸರಾಸರಿ ಆದಾಯದಲ್ಲಿ ಏರಿಕೆ
ಮುಂದಿನ ಎರಡು ತ್ರೈಮಾಸಿಕಗಳಲ್ಲಿ ವೊಡಾಫೋನ್ ಐಡಿಯಾದ ಸರಾಸರಿ ಆದಾಯ 107 ರೂ.ಗಳಿಂದ 143 ರೂಗಳಿಗೆ ಏರಿಕೆ ಕಾಣಲಿದೆ. ಇನ್ನು, ಭಾರ್ತಿ ಏರ್‌ಟೆಲ್‌ನ ಸರಾಸರಿ ಆದಾಯ 128 ರೂ.ಗಳಿಂದ 145-150 ರೂ.ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 2020ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದ ವೇಳೆಗೆ ರಿಲಯನ್ಸ್ ಜಿಯೋನ ಆದಾಯವು ಕೂಡ 140 ರೂ.ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಪ್ರಮಾಣ 120 ರೂ. ಆಗಿತ್ತು.

ಜನವರಿ 24 ಡೆಡ್‌ಲೈನ್
ಸುಪ್ರೀಂ ಕೋರ್ಟ್ ತೀರ್ಪಿನಿಂದ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಜರ್ಜರಿತವಾಗಿವೆ. ಜನವರಿ 24ರೊಳಗೆ ಎರಡು ಕಂಪನಿಗಳು 89,000 ಕೋಟಿ ರೂ. ಆವತಿಸುವ ಅನಿವಾರ್ಯತೆ ಹೊಂದಿವೆ. ಅದಕ್ಕಾಗಿ ಡಿಸೆಂಬರ್ 3ರಂದು ಟ್ಯಾರಿಫ್ ದರಗಳನ್ನು ಹೆಚ್ಚಿಸಿವೆ. ಜಿಯೋ ಕೂಡ ದರ ಹೆಚ್ಚಿಸಿದ್ದರು, ತನ್ನ ಪ್ರತಿಸ್ಪರ್ಧಿಗಳಿಗಿಂತ ಶೇ.25ರಷ್ಟು ಅಗ್ಗದ ದರದಲ್ಲಿ ಪ್ಲಾನ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಗ್ರಾಹಕರಿಗಾಗಿ ಹೋರಾಟ
ಭಾರತೀಯ ಟೆಲಿಕಾಂ ಲೋಕದಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳಲು ಮೂರು ಟೆಲಿಕಾಂ ಕಂಪನಿಗಳು ಹೋರಾಟ ನಡೆಸಿವೆ. ಸದ್ಯ ರಿಲಾಯನ್ಸ್ ಜಿಯೋ 350 ದಶಲಕ್ಷಕ್ಕೂ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ವೊಡಾಫೋನ್ ಐಡಿಯಾ 311 ಮಿಲಿಯನ್ ಮತ್ತು ಭಾರ್ತಿ ಏರ್ಟೆಲ್ 280 ಮಿಲಿಯನ್ ಬಳಕೆದಾರರನ್ನು ಹೊಂದಿವೆ.


Click it and Unblock the Notifications








