2024ರಲ್ಲಿ ಭಾರತಕ್ಕೆ ಎಂಟ್ರಿ ನೀಡುವ ಮೊದಲ ಫೋನ್ ಯಾವುದು ಗೊತ್ತಾ: ಇದರ ವಿಶೇಷತೆ ಏನು?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಟೀಸರ್, ಲುಕ್, ಡಿಸೈನ್ ಮೂಲಕ ಸಾಕಷ್ಟು ಗಮನಸೆಳೆದಿರುವ ಈ ಫೋನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಕಂಪೆನಿ ಹಂಚಿಕೊಂಡಿರುವ ಟೀಸರ್ ಪ್ರಕಾರ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 2024 ಜನವರಿ 3 ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.
ಹೌದು, ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಜನವರಿ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಟೆಕ್ನೋ ಬಹಿರಂಗಪಡಿಸಿದೆ. ಇದು 2024 ರಲ್ಲಿ ಭಾರತಕ್ಕೆ ಎಂಟ್ರಿ ನೀಡಲಿರುವ ಮೊದಲ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಗೆ ಪಾತ್ರವಾಗುವುದು ಪಕ್ಕಾ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಬರಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಪಾಪ್ 8 ಫೀಚರ್ಸ್ ನಿರೀಕ್ಷೆ ಏನು?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 720 × 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದ್ದು, ಸೆಂಟರ್ಡ್ ಪಂಚ್ ಹೋಲ್ ನಾಚ್, ಮತ್ತು ಡೈನಾಮಿಕ್ ಪೋರ್ಟ್ ಹೊಂದಿರಲಿದೆ ಎಂದು ವರದಿಯಾಗಿದೆ.
ಟೆಕ್ನೋ ಪಾಪ್ 8 ಪ್ರೊಸೆಸರ್ ಯಾವುದು?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಯುನಿಸೋಕ್ T606SoC ಪ್ರೊಸೆಸರ್ ಹೊಂದಿದೆ. ಇದಕ್ಕೆ ಪೂರಕವಾಗಿ Mali G57 GPU ಸಪೋರ್ಟ್ ಪಡೆದಿದೆ. ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ)ಯಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM ಮತ್ತು 64GB ಹಾಗೂ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸುವುದಕ್ಕೆ ಸಾಧ್ಯವಾಗಲಿದೆ.
ಟೆಕ್ನೋ ಪಾಪ್ 8 ಕ್ಯಾಮೆರಾ ರಚನೆ ಹೇಗಿದೆ?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ f/1.8 ಅಪರ್ಚರ್, AI ಲೆನ್ಸ್ ಮತ್ತು LED ಫ್ಲಾಷ್ ನೊಂದಿಗೆ ಬರಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಡ್ಯುಯಲ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಟೆಕ್ನೋ ಪಾಪ್ 8 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮೂಲಕ 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, ವೈಫೈ, ಬ್ಲೂಟೂತ್ ಮತ್ತು GPS ಅನ್ನು ಬೆಂಬಲಿಸಲಿದೆ.
ಬೆಲೆ ಮತ್ತು ಲಭ್ಯತೆ
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್‌ನ ಮೈಕ್ರೋ-ಸೈಟ್ ಈಗಾಗಲೇ ಅಮೆಜಾನ್ ಇಂಡಿಯಾದಲ್ಲಿ ಲೈವ್ ಆಗಿದ್ದು, ಸಾಧನದ ಅಮೆಜಾನ್ ಲಭ್ಯತೆಯನ್ನು ದೃಢೀಕರಿಸುತ್ತದೆ. ಇದು ಗ್ರಾವಿಟಿ ಬ್ಲ್ಯಾಕ್ ಮತ್ತು ಮಿಸ್ಟರಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದರ ಬೆಲೆ 5000 ದಿಂದ 6000ರೂ ಗಳ ವರೆಗೆ ಇರಲಿದೆ ಎಂದು ವರದಿಯಾಗಿದೆ.


Click it and Unblock the Notifications








