ವಾಟ್ಸಾಪ್ ಬಳಕೆದಾರರು ಈ ಅಂಶಗಳನ್ನು ಗಮನಿಸಲೇಬೇಕು? ಇಲ್ಲದಿದ್ದರೆ ಅಪಾಯ ಗ್ಯಾರಂಟಿ!
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ಜನರನ್ನು ವಂಚನೆ ಮಾಡಿ ಹಣ ಎಗರಿಸುತ್ತಿರುವ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿವೆ. ಸಂದೇಶದ ರೂಪದಲ್ಲಿ ಸ್ಪ್ಯಾಮ್ ಲಿಂಕ್‌ಗಳನ್ನು ಕಳುಹಿಸುವ ಮೂಲಕ ಜನರನ್ನು ಯಾಮಾರಿಸುತ್ತಿರುವ ಪ್ರಕರಣಗಳು ನಡೆದಿವೆ. ಇತ್ತೀಚಿಗೆ ವಂಚಕರು ವಾಟ್ಸಾಪ್ ಮೂಲಕವೇ 17 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಹೌದು, ವಾಟ್ಸಾಪ್‌ನಲ್ಲಿ ಬಂದ ಸ್ಪ್ಯಾಮ್ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಘಟನೆ ನಡೆದಿದೆ. ಚಂಡೀಗಢದ ವ್ಯಕ್ತಿಯೊಬ್ಬರು ಅಪರಿಚಿತ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 17 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿದ ತಕ್ಷಣವೇ ವಂಚಕರು ಸಂತ್ರಸ್ಥರ ಫೋನ್ ಹ್ಯಾಕ್ ಮಾಡಿ ಹಣ ಎಗರಿಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಈ ರೀತಿಯ ಸ್ಪ್ಯಾಮ್ ಮತ್ತು ವಂಚನೆಯನ್ನು ತಡೆಗಟ್ಟಲು ನೀವು ಅನುಸರಿಸಲೇಬೇಕಾದ ನಿಯಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಸ್ಪ್ಯಾಮ್ ಮತ್ತು ವಂಚಕರ ದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಹಲವು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ವಾಟ್ಸಾಪ್‌ಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದ್ದೆ ಇದೆ. ಅದರಲ್ಲೂ ವಾಟ್ಸಾಪ್ ಬಳಕೆದಾರರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.
ಎರಡು-ಹಂತದ ಪರಿಶೀಲನೆಯನ್ನು ಆನ್ ಮಾಡಿ
ವಾಟ್ಸಾಪ್ ಬಳಸುವ ಬಳಕೆದಾರರು ಎರಡು-ಹಂತದ ಪರಿಶೀಲನೆಯನ್ನು ಬಳಸಿಕೊಂಡು ವಾಟ್ಸಾಪ್ ಖಾತೆಯ ಸುರಕ್ಷತೆಯನ್ನು ಅಪ್ಡೇಟ್ ಮಾಡಬಹುದು. ಇದರಿಂದ ನಿಮ್ಮ ವಾಟ್ಸಾಪ್ ಅಕೌಂಟ್ ಅನ್ನು ಬೇರೆಯವರು ಪ್ರವೇಶಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ನೀವು ಎರಡು ಹಂತದ ಪರಿಶೀಲನೆಯನ್ನು ಸೆಟ್ ಮಾಡುವಾದ ಆರು ಅಂಕಿಯ ಪಿನ್ ಅನ್ನು ಸೆಟ್ ಮಾಡಬೇಕಾಗುತ್ತದೆ.
ಅಪರಿಚಿತ ಹಾಗೂ ಅನುಮಾನಾಸ್ಪದ ಅಕೌಂಟ್‌ಗಳನ್ನು ಬ್ಲಾಕ್ ಮಾಡಿ
ವಾಟ್ಸಾಪ್ ಬಳಕೆದಾರರು ಅಪರಿಚಿತ ಸಂಖ್ಯೆಯ ಅಕೌಂಟ್ ಹಾಗೂ ಸಂದೇಶಗಳನ್ನು ಬ್ಲಾಕ್ ಮಾಡಿ. ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಗಳಿಂದ ಸ್ವಿಕರಿಸುವ ಸಂದೇಶಗಳ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ಅತಿ ಅವಶ್ಯಕವಾಗಿದೆ. ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳಿಗೆ ರಿಪ್ಲೆ ಮಾಡುವುದನ್ನು ನಿಲ್ಲಿಸುವುದು ಸೂಕ್ತ.

ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್ ಸೆಟ್ ಮಾಡಿ
ವಾಟ್ಸಾಪ್‌ನ ಪ್ರೈವೆಸಿ ಸೆಟ್ಟಿಂಗ್ಸ್ ಅನ್ನು ಸೆಟ್ ಮಾಡುವುದು ಸೂಕ್ತ. ಗ್ರೂಪ್ ಇನ್ವೈಟ್ ಮಾಡುವ ಮತ್ತು ಗ್ರೂಪ್‌ಗಳಿಗೆ ಬೇರೆಯವರನ್ನು ಸೇರಿಸುವ ಮುನ್ನ ಎಚ್ಚರಿಕೆ ವಹಿಸಿ. ನೀವು ಪ್ರಶ್ನಾರ್ಹ ಗುಂಪು ಚಾಟ್ ಅನ್ನು ಕಂಡರೆ, ನೀವು ಗುಂಪನ್ನು ತೊರೆದು ಅದನ್ನು ವರದಿ ಮಾಡಬಹುದು.
ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸಿ
ವಾಟ್ಸಾಪ್‌ನಲ್ಲಿ ನಿಮಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಮತ್ತು ಆನ್‌ಲೈನ್ ಸ್ಟೇಟಸ್ ಅನ್ನು ಮ್ಯಾನೇಜ್ ಮಾಡಬಹುದಾಗಿದೆ. ಇದರಲ್ಲಿ ಯಾರು ನಿಮ್ಮ ಸ್ಟೇಟಸ್ ನೋಡಬಹುದು, ಯಾರು ನೋಡಬಾರದು ಅನ್ನೊದನ್ನ ಸೆಟ್ ಮಾಡಬಹುದಾಗಿದೆ.
ವಾಟ್ಸಾಪ್ ಖಾತೆಗೆ ಲಿಂಕ್ ಮಾಡಲಾದ ಡಿವೈಸ್‌ಗಳನ್ನು ಪರಿಶೀಲಿಸಿ
ನೀವು ಆಗಾಗ ವಾಟ್ಸಾಪ್‌ಗೆ ಲಿಂಕ್ ಮಾಡಲಾದ ಡಿವೈಸ್‌ಗಳ ಲಿಸ್ಟ್ ಅನ್ನು ಪರಿಶೀಲಿಸುವುದು ಸೂಕ್ತ. ಯಾವುದೇ ಪರಿಚಯವಿಲ್ಲದ ಡಿವೈಸ್‌ಗಳನ್ನು ಕಂಡರೆ ತ್ವರಿತವಾಗಿ ಲಾಗ್ ಔಟ್ ಮಾಡಿ. ಅಪರಿಚಿತ ವಾಟ್ಸಾಪ್ ವೆಬ್/ ಡೆಸ್ಕ್‌ಟಾಪ್ ಮೂಲಕ ಯಾರಾದರೂ ನಿಮ್ಮ ಖಾತೆಗಯನ್ನು ಪ್ರವೇಶಿಸಿದ್ದರೆ ಕೂಡಲೇ ಲಾಗ್ ಔಟ್ ಮಾಡಿರಿ. ಅವಶ್ಯಕತೆ ಇಲ್ಲದ ಸಂದರ್ಭದಲ್ಲಿ ನಿಮ್ಮ ಫೋನ್ ಬಳಸುವ ಎಲ್ಲಾ ಕಂಪ್ಯೂಟರ್‌ಗಳಿಂದ ಲಾಗ್ ಔಟ್ ಮಾಡಿ.

ವಾಟ್ಸಾಪ್ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರವಿರಲಿ
ವಾಟ್ಸಾಪ್‌ನಲ್ಲಿ ಬರುವ ಎಲ್ಲಾ ಲಿಂಕ್‌ಗಳನ್ನು ಸುಖಾಸುಮ್ಮನೇ ಕ್ಲಿಕ್ ಮಾಡಬೇಡಿ. ಆಫರ್‌ಗಳ ಹೆಸರಿನಲ್ಲಿ, ಬಹುಮಾನದ ಹೆಸರಿನಲ್ಲಿ ಬರುವ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
ವೈಯುಕ್ತಿಕ ಮಾಹಿತಿಯನ್ನು ಶೇರ್ ಮಾಡಬೇಡಿ
ನಿಮ್ಮ ವಾಟ್ಸಾಪ್ ಮೂಲಕ ಪರಿಚಯವಾಗುವ ಯಾರ ಜೊತೆಗೂ ಕೂಡ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಶೇರ್ ಮಾಡಬೇಡಿ. ಅದರಲ್ಲೂ ನಿಮ್ಮ ವಿಳಾಸ, ಫೋನ್ ಸಂಖ್ಯೆ, ಪಾಸ್‌ವರ್ಡ್‌ಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆ ಮಾಹಿತಿಯಂತಹ ಸೂಕ್ಷ್ಮ ವಿವರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ.


Click it and Unblock the Notifications








