'ಟಿಕ್‌ಟಾಕ್' ಬಳಕೆದಾರರೇ ಒಮ್ಮೆ ಇದನ್ನು ಓದಿ ನೋಡಿ!
ಟಿಕ್‌ಟಾಕ್‌ನಲ್ಲಿ ಕೆಲ ಲೈಕ್‌ಗಳ ಹುಚ್ಚಿಗಾಗಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತುತಂದುಕೊಂಡ ಉದಾಹರಣೆಗಳಿವೆ. ಆದರೆ, ಇದೀಗ ನಮ್ಮದೇ ರಾಜ್ಯದ ತುಮಕೂರು ಜಿಲ್ಲೆಯ ಟಿಕ್‌ಟಾಕ್ ಬಳಕೆದಾರ ಯುವಕನೊಬ್ಬ ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ. ಇದಿಷ್ಟೇ ಅಲ್ಲದೇ, ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ 24 ವರ್ಷದ ವಿವಾಹಿತೆಯೊಬ್ಬಳು, ಗಂಡ ತನಗೆ ಟಿಕ್‌ಟಾಕ್ ಬಳಸಲು ಬಿಡುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿ ಕೂಡ ಹೊರಬಿದ್ದಿತ್ತು. ಅಂದರೆ ನಮ್ಮ ಭಾರತವೀಗ ಟಿಕ್‌ಟಾಕ್ ಮಯವಾಗಿದೆ. ಅಲ್ಲಲ್ಲ ಈ ಟಿಕ್‌ಟಾಕ್ ಆಪ್ ವ್ಯಸನಿಯಾಗಿದೆ.

ಹೌದು, ಇಂತಹ ಹಲವು ದುರ್ಘಟನೆಗಳಿಗೆ ಟಿಕ್‌ಟಾಕ್‌ನಂತರ ಒಂದು ಆಪ್ ಕಾರಣವಾಗಿದೆ. ಆದರೆ, ಇಲ್ಲಿ ಟಿಕ್‌ಟಾಕ್ ಕಂಪೆನಿಯ ಯಾವುದೇ ತಪ್ಪು ಕಂಡುಬರುತ್ತಿಲ್ಲ. ಅದರ ಬದಲಾಗಿ ಜನರ ವ್ಯಸನವು ಕಂಡುಬರುತ್ತಿದೆ. ಈ ಆಪ್‌ನಲ್ಲಿ ಪೆದ್ದು ಪೆದ್ದಾಗಿ ವರ್ತಿಸುವವರಿಗೂ ಲಕ್ಷ ಲಕ್ಷ ಲೈಕ್‌ಗಳು ಸಿಗುತ್ತಿರುವುದರಿಂದ ಜನರು ಹದ್ದುಮೀರುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಅವರ ವಿಡಿಯೋಕ್ಕೆ ಬರುವ ಅಸಂಖ್ಯ ಲೈಕ್‌ಗಳು ಬಳಕೆದಾರರನ್ನು ತೀವ್ರ ವ್ಯಸನಕ್ಕೆ ದೂಡುತ್ತಿವೆ. ಇದು ಯಾವ ಮಟ್ಟಕ್ಕೆಂದರೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ಮೊಬೈಲ್‌ನಲ್ಲೇ ಮುಳುಗಿ ಹೋಗುವಷ್ಟು ಜನರು ಟಿಕ್‌ಟಾಕ್ ಆಪ್‌ಗೆ ಅಡಿಕ್ಟ್ ಆಗುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ದಿಢೀರ್ ಪ್ರಖ್ಯಾತಿ ಪಡೆಯುವ ಸಲುವಾಗಿ ಇಂತಹ ಹುಚ್ಚಾಟಕ್ಕಿಳಿಯುವುದನ್ನು ಬಿಡಬೇಕಿದೆ. ನೀವು ಈಗಲೇ ಎಚ್ಚೆತ್ತುಕೊಂಡು ಇಂತಹ ಡಿಜಿಟಲ್ ವ್ಯಸನದಿಂದ ಮುಕ್ತರಾಗಲು ಪ್ರಯತ್ನ ಆರಂಭಿಸುವುದು ಒಳಿತು. ಏಕೆಂದರೆ, ಸಮಯ ಮತ್ತು ಮಾನಸಿಕ ಸಮತೋಲನವನ್ನು ಹಾಳು ಮಾಡುತ್ತಿರುವ ಇಂತಹ ಆಪ್‌ಗಳ ಮೇಲಿರುವ ವ್ಯಾಮೋಹದಿಂದ ಹೊರಬರಲೇಬೇಕಾದ ಅಗತ್ಯವಿದೆ. ಒಂದು ವೇಳೆ ನೀವು ಕೂಡ ಈ ಟಿಕ್‌ಟಾಕ್ ಆಪ್‌ಗೆ ಅಡಿಕ್ಟ್ ಆಗಿದ್ದರೆ ಅದರಿಂದ ಹೊರಬರುವುದು ಹೇಗೆ ಎಂಬುದನ್ನು ನಾನಿಂದು ಚರ್ಚಿಸುತ್ತೇನೆ. ಟಿಕ್ ಟಾಕ್ ತಮ್ಮದೇ ಆದ ಫ್ಯಾಂಟಸಿ ಜಗತ್ತನ್ನು ಸೃಷ್ಟಿಸಿಕೊಂಡಿರುವವರಿಗೆ ಇದು ಖಂಡಿತವಾಗಿಯೂ ಸಹಾಯವಾಗುತ್ತದೆ. ಆದರೆ, ಟಿಕ್‌ಟಾಕ್ ಮೂಲಕ ನೀವು ಜನಪ್ರಿಯವಾಗಬೇಕು ಎಂದು ಅಂದುಕೊಂಡಿದ್ದರೆ ಈ ಲೇಖನವನ್ನು ಓದುವುದನ್ನು ಇಲ್ಲಿಗೆ ನಿಲ್ಲಿಸಿ.

ಹಂತಹಂತವಾಗಿ ದೂರಾಗಬೇಕು.
ಯಾವುದೇ ಗೀಳು ಅಥವಾ ಚಟದಿಂದ ಹೊರಕ್ಕೆ ಬರುವಾಗ ಮನಸ್ಸಿನಲ್ಲಿ ಆಗುವ ಏರಿಳಿತಗಳು ತಾತ್ಕಾಲಿಕ. ಹಾಗಾಗಿ, ಟಿಕ್ ಟಾಕ್ ಗೀಳಿಗೆ ಒಳಗಾದವರು ಒಂದೇ ಕ್ಷಣದಲ್ಲಿ ಅದರಿಂದ ಹೊರ ಬರಲು ಸಾಧ್ಯವಿಲ್ಲ. ಹಂತಹಂತವಾಗಿ ಅದರಿಂದ ದೂರಾಗಬೇಕು. ಇದು ಕೂಡ ಒಂದು ರೀತಿಯಲ್ಲಿ ಪೇಸ್‌ಬುಕ್ ರೀತಿಯಲ್ಲಿಯೇ, ಇಷ್ಟವಿಲ್ಲದಿದ್ದರೂ ಬಳಸಲೇಬೇಕಾದ ಪರಿಸ್ಥಿತಿ.

ವೇಳಾಪಟ್ಟಿಯನ್ನು ರಚಿಸಿಕೊಳ್ಳಿ!
ಟಿಕ್ ಟಾಕ್, ಫೇಸ್‌ಬುಕ್ ಸೇರಿದಂತೆ ಯಾವುದಕ್ಕೇ ನೀವು ಅಡಿಕ್ಟ್ ಆಗಿದ್ದರೆ, ನೀವು ದಿನನಿತ್ಯ ಮಾಡಬೇಕಾದ ಕೆಲಸಗಳ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಒಮ್ಮೆ ನೀವು ಅದನ್ನು ಪಾಲಿಸುತ್ತಾ ಬಂದರೆ, ಓದು, ಬರಹ, ಊಟ, ಆಟ, ನಿದ್ದೆ ಮತ್ತು ಮನರಂಜನೆ ಹೀಗೆ ಪ್ರತಿಯೊಂದಕ್ಕೂ ಇಂತಿಷ್ಟೇ ಸಮಯ ಅಂತ ನಿಗದಿಯಾಗಿ ಟಿಕ್‌ಟಾಕ್‌ನಿಂದ ದೂರಾಗಬಹುದು.

ಗ್ಯಾಜೆಟ್ ಟೈಮ್ ನಿರ್ಧರಿಸಿ
ನೀವು ನಿಮ್ಮ ಮೊಬೈಲ್‌ನಿಂದ ಟಿಕ್ ಟಾಕ್ ಅನ್ನು ಡಿಲೀಟ್ ಮಾಡಬಹುದು. ಆದರೆ, ನೀವು ಅದಕ್ಕಿಂತಲೂ ಮಾಡಬೇಕಾದ ಕೆಲಸವೆಂದರೆ, ಸ್ಕ್ರೀನ್‌ಟೈಮ್ ಅಥವಾ ಗ್ಯಾಜೆಟ್ ಟೈಮ್‌ಗೆ ನಿಗದಿಯಾಗಿರುವ ಸಮಯದಲ್ಲಿ ಮಾತ್ರ ಮೊಬೈಲ್ ಬಳಸುವುದು. ಶುರುವಿನಲ್ಲಿ ಸ್ಕ್ರೀನ್‌ಟೈಮ್‌ಗೆ ಒಂದು ಗಂಟೆ ನಿಗದಿಸಿದ್ದರೆ, ಕ್ರಮೇಣ ಅದನ್ನು ಕಡಿಮೆ ಮಾಡುತ್ತಾ ಬರಬಹುದು.

ಜಾಗೃತಿ ಮೂಡಿಸಿಕೊಳ್ಳಿ
ಮಕ್ಕಳೇನಾದರೂ ಈ ಟಿಕ್ ಟಾಕ್‌ಗೆ ಅಡಿಕ್ಟ್ ಆಗಿದ್ದರೆ ಹಿರಿಯರು ತಮ್ಮ ಮೊಬೈಲ್ ಅನ್ನು ಲಾಕ್ ಮಾಡಿ ಇಟ್ಟುಕೊಳ್ಳಬಹುದು. ಆದರೆ, ಇಂದಿನ ಬಹುತೇಕ ಯುವ ಜನಾಂಗವೇ ಈ ಟಿಕ್‌ಟಾಕ್‌ಗೆ ಅಡಿಕ್ಟ್ ಆಗಿರುವುದರಿಂದ ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಿ. ಟಿಕ್‌ಟಾಕ್ ಜೊತೆಗೆ ಮೊಬೈಲ್ ಗೀಳು ತಪ್ಪಿಸಲು ಇತರೆ ಕಾರ್ಯಗಳತ್ತ ಗಮನಹರಿಸಿ.

ಪ್ರಚೋದನೆಗೆ ಒಳಗಾಗಬೇಡಿ
ವಯಸ್ಸಿಗೆ ಮೀರಿದ ಕೆಲವು ಕಂಟೆಂಟ್‌ಗಳು ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಟಿಕ್ ಟಾಕ್ ವಿಡಿಯೊಗಳನ್ನು ನೋಡಿ, ನಕ್ಕು ಸುಮ್ಮನಾಗದೇ ಬೇರೆಯವರ ವಿಡಿಯೊಗಳನ್ನು ನೋಡಿ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗಬೇಡಿ. ಸೆಲಬ್ರಿಟಿ ಭ್ರಮೆಯ ಬಲೂನಿಗೆ ಸೂಜಿ ಚುಚ್ಚಿದಂತೆ ಇರುತ್ತದೆ.


Click it and Unblock the Notifications