ಭರ್ಜರಿ ಸಿಹಿಸುದ್ದಿ!..ಕೇಬಲ್ ಮತ್ತು ಡಿಟಿಎಚ್ ಮಾಸಿಕ ಬಿಲ್ ಮತ್ತೆ ಕಡಿಮೆಯಾಗಲಿದೆ!
ಕೇಬಲ್ ಬಿಲ್ ಹೆಚ್ಚಳದಿಂದ ಬೇಸತ್ತಿದ್ದ ಡಿಟಿಎಚ್ ಮತ್ತು ಕೇಬಲ್ ಟಿವಿ ಬಳಕೆದಾರರಿಗೆ ಇದೀಗ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದೇಶದೆಲ್ಲೆಡೆ ಡಿಟಿಎಚ್ ಮತ್ತು ಕೇಬಲ್ ಟಿವಿ ಬಳಕೆದಾರರ ಮಾಸಿಕ ಕೇಬಲ್ ಬಿಲ್‌ಗಳು ಹೆಚ್ಚಿವೆ ಎಂಬ ದೂರುಗಳು ಬಂದ ನಂತರ, ಕೇಬಲ್ ಬಿಲ್ ಹೆಚ್ಚಳವಾಗಿರುವುದನ್ನು ತಡೆಯಲು ಟ್ರಾಯ್ ಚಿಂತಿಸಿದೆ ಎಂಬ ಸಿಹಿಸುದ್ದಿ ಹೊರಬಿದ್ದಿದೆ. ಕೇಬಲ್ ಬಿಲ್‌ಗಳನ್ನು ಕಡಿಮೆಗೊಳಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಯೋಚಿಸಿದ್ದಾರೆ ಎಂದು ಟೆಲಿಕಾಂ ಟಾಕ್ ವೆಬ್‌ಸೈಟ್ ವರದಿ ಮಾಡಿದೆ.

ಹೌದು, ಈ ವರ್ಷದ ಏಪ್ರಿಲ್ 1, 2019 ರಿಂದ ಪರಿಚಯಿಸಿರುವ ಹೊಸ ಕೇಬಲ್ ನಿಯಮಗಳನ್ನು ಮತ್ತೊಮ್ಮೆ ಬದಲಾಯಿಸಲು ಅಥವಾ ಪ್ರಸ್ತುತ ರೀತಿಯಲ್ಲೇ ಕೆಲವೊಂದು ಮಾರ್ಪಾಡುಗಳನ್ನು ತರಲು ಟ್ರಾಯ್ ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಮಾಸಿಕ ಟಿವಿ ಬಿಲ್‌ಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ಕೆಲವು ಸಂಭಾವ್ಯ ಸಮಾಲೋಚನೆಯನ್ನು ನಡೆಸುತ್ತಿದೆ ಎಂದು ಟ್ರಾಯ್‌ನ ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಕೇಬಲ್ ಮತ್ತು ಡಿಟಿಎಚ್ ಬಿಲ್ ಕಡಿಮೆಯಾಗಬಹುದರ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.
ಹೊಸ ನಿಯಂತ್ರಣ ಮತ್ತು ಬೆಲೆ ಚೌಕಟ್ಟಿನ ಹೊಸ ಅನುಷ್ಠಾನದ ನಂತರದ ಸಮಯದಲ್ಲಿ ಕೇಬಲ್ ಮತ್ತು ಡಿಟಿಎಚ್ ಪಾವತಿಗಳು ಹೆಚ್ಚಿರುವ ಬಗ್ಗೆ ಟ್ರಾಯ್‌ಗೆ ಹಲವಾರು ದೂರುಗಳು ಬಂದಿವೆ. ಇದರಿಂದ ಹೊಸ ನಿಯಂತ್ರಣ ಮತ್ತು ಬೆಲೆ ಚೌಕಟ್ಟು ದೇಶದ ಕೇಬಲ್ ಮತ್ತು ಡಿಟಿಎಚ್ ಚಂದಾದಾರಿಕೆಗಳಿಗೆ ಬೆಲೆಗಳನ್ನು ಹೆಚ್ಚಿಸಿರಬಹುದು ಎಂಬ ಅಂಶವನ್ನು ಟ್ರಾಯ್ ಅಂತಿಮವಾಗಿ ಒಪ್ಪಿಕೊಂಡಿದೆ. ಹಾಗಾಗಿ, ಮುಂಬರುವ ತಿಂಗಳುಗಳಲ್ಲಿ ಅಂತಿಮವಾಗಿ ಈ ಬಗ್ಗೆ ಏನಾದರೂ ಮಾಡಲು ಟ್ರಾಯ್ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಕೇಬಲ್ ಟಿವಿ ಆಪರೇಟರ್‌ಗಳಿಗೆ ಸಹ ತೊಂದರೆಗಳು ಹೆಚ್ಚಾಗುತ್ತಿರುವುದನ್ನು ಸಹ ಟ್ರಾಯ್ ಮನಗಂಡಿದೆ ಎನ್ನಲಾಗಿದೆ. ಟಿವಿ ಆಪರೇಟರ್‌ಗಳ ಗಳಿಕೆ ಶೇ.45% ರಷ್ಟು ಕಡಿಮೆಯಾಗಿದ್ದು, ಚಂದಾದಾರಿಕೆ ಶುಲ್ಕವನ್ನು ಸಂಗ್ರಹಿಸುವ ಅಥವಾ ನಿರ್ವಹಣಾ ಕಾರ್ಯವನ್ನು ನಿರ್ವಹಿಸುವ ತಮ್ಮ ಕಾರ್ಮಿಕರಿಗೆ ಸಂಬಳ ಪಾವತಿಸಲು ಸಹ ನಿರ್ವಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ನೂತನ ನಿಯಮಗಳ ಪರಿಣಾಮದಿಂದಾಗಿ ಹೆಚ್ಚು ಕೇಬಲ್ ಟಿವಿ ಚಂದಾದಾರರು ಡಿಟಿಎಚ್ ಸೇವೆಗಳಿಗೆ ವರ್ಗಾವಣೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ನೂತನ ನಿಯಮಗಳು ಜಾರಿಗೆ ಬಂದ ನಂತರವೇ, ಹೆಚ್ಚಿನ ಗ್ರಾಹಕರು ತಾವು ಈ ಹಿಂದೆ ಹೆಚ್ಚು ಕಡಿಮೆ ಮಾಸಿಕ ಬಾಡಿಗೆಯನ್ನು ವೀಕ್ಷಿಸುತ್ತಿದ್ದ ಅದೇ ಚಾನಲ್‌ಗಳಿಗೆ ಈಗ ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ವಿದ್ಯಮಾನವನ್ನು ವಿವಿಧ ಸಂಸ್ಥೆಗಳ ಸಮೀಕ್ಷೆಗಳು ಮತ್ತು ಅಧ್ಯಯನಗಳು ಈಗಾಗಲೇ ಗುರುತಿಸಿವೆ. ಹೊಸ ನಿಯಮಗಳಿಂದಾಗಿಯೇ ಒಟಿಟಿ (Over the top ) ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ವೀಡಿಯೊದ ಬಗ್ಗೆ ಚಂದಾದಾರರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.


Click it and Unblock the Notifications








