Truecaller ಅಪ್‌ಡೇಟ್: ಭಾರತೀಯರಿಗೆ ಉಚಿತವಾಗಿ ವಾಯ್ಸ್‌ಮೇಲ್ ಫೀಚರ್!
ಟ್ರೂಕಾಲರ್ ಭಾರತದಲ್ಲಿ ತನ್ನ ಅಂಡ್ರಾಯ್ಡ್ ಬಳಕೆದಾರರಿಗೆ ಹೊಸದಾಗಿ ವಾಯ್ಸ್‌ಮೇಲ್ ಫೀಚರ್ ಅನ್ನು ಪರಿಚಯಿಸಿದೆ. ಭಾರತೀಯ ಬಳಕೆದಾರರ ದಿನನಿತ್ಯದ ಕರೆ ಅನುಭವವನ್ನು ಇನ್ನಷ್ಟು ಸರಳ ಮತ್ತು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಈ ಹೊಸ ಫೀಚರ್ ಅನ್ನು ಪರಿಚಯಿಸಲಾಗಿದ್ದು, ಮಿಸ್ ಆದ ಕರೆಗಳಿಗೆ ಕರೆಮಾಡಿದವರು ಧ್ವನಿ ಸಂದೇಶಗಳನ್ನು ಕಳುಹಿಸಬಹುದು. ಇಷ್ಟೇ ಅಲ್ಲದೆ, ಅದನ್ನು ಪಠ್ಯ ರೂಪದಲ್ಲೂ ಓದಲು ಸಾಧ್ಯವಾಗುತ್ತದೆ. ಪ್ರಸ್ತುತ ಈ ಹೊಸ ವಾಯ್ಸ್‌ಮೇಲ್ ಫೀಚರ್ ಭಾರತಕ್ಕೆ ಮಾತ್ರ ಸೀಮಿತವಾಗಿದ್ದು, ಸಂಪೂರ್ಣ ಉಚಿತವಾಗಿದೆ.
ಈ ವಾಯ್ಸ್‌ಮೇಲ್ ಫೀಚರ್ ಪ್ರಸ್ತುತ ಭಾರತದಲ್ಲಿನ ಎಲ್ಲಾ ಟ್ರೂಕಾಲರ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದ್ದು, ಪ್ರೀಮಿಯಂ ಚಂದಾದಾರಿಕೆ ಅಗತ್ಯವಿಲ್ಲ. ಆದರೆ, ಈ ಸೌಲಭ್ಯವನ್ನು ಬಳಸಲು ಮೊಬೈಲ್ ಸಂಖ್ಯೆಯಲ್ಲಿ ಕಾಲ್ ಫಾರ್ವರ್ಡಿಂಗ್ ಸಕ್ರಿಯವಾಗಿರಬೇಕು. ಸೆಟಪ್ ಪೂರ್ಣಗೊಂಡ ನಂತರ, ಮಿಸ್ ಕಾಲ್ ಬಂದಾಗ ಕರೆಮಾಡಿದ ವ್ಯಕ್ತಿ ಧ್ವನಿ ಸಂದೇಶವನ್ನು ಕಳುಹಿಸಬಹುದು ಮತ್ತು ಅದು ಸ್ವಲ್ಪ ಸಮಯದಲ್ಲಿ ಪಠ್ಯ ರೂಪಕ್ಕೆ ಪರಿವರ್ತನೆಯಾಗುತ್ತದೆ.
ಟ್ರೂಕಾಲರ್‌ನ ಹೊಸ ವಾಯ್ಸ್‌ಮೇಲ್ ವ್ಯವಸ್ಥೆ ಬಳಕೆದಾರರಿಗೆ ಸಮಯ ಉಳಿಸುವಲ್ಲಿ ಸಹಾಯಕವಾಗಿದೆ. ಸಂಪೂರ್ಣ ಧ್ವನಿ ಸಂದೇಶವನ್ನು ಕೇಳದೇಯೇ, ಕರೆಮಾಡಿದ ಕಾರಣವನ್ನು ಪಠ್ಯವಾಗಿ ಓದಿ ತಕ್ಷಣ ನಿರ್ಧಾರ ಕೈಗೊಳ್ಳಬಹುದು. ಎಲ್ಲ ವಾಯ್ಸ್‌ಮೇಲ್ ಸಂದೇಶಗಳು ಆಪ್‌ನಲ್ಲಿರುವ ವಿಶೇಷ Voicemail ಟ್ಯಾಬ್ ನಲ್ಲಿ ಲಭ್ಯವಿರುತ್ತವೆ. ಈ ಫೀಚರ್ ಬಳಸಲು ಟ್ರೂಕಾಲರ್ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿರುವುದು ಅಗತ್ಯವಾಗಿರುತ್ತದೆ.
ಗೌಪ್ಯತೆ ಮತ್ತು ಭದ್ರತೆಗೂ ಟ್ರೂಕಾಲರ್ ಹೆಚ್ಚಿನ ಒತ್ತು ನೀಡಿದೆ. ಕಂಪನಿಯ ಪ್ರಕಾರ, ಎಲ್ಲಾ ವಾಯ್ಸ್‌ಮೇಲ್ ಧ್ವನಿ ಸಂದೇಶಗಳು ನೇರವಾಗಿ ಬಳಕೆದಾರರ ಸಾಧನದಲ್ಲೇ ಸಂಗ್ರಹವಾಗುತ್ತವೆ. ಇದರಿಂದ ಬಳಕೆದಾರರಿಗೆ ತಮ್ಮ ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ. ಜೊತೆಗೆ, ಸ್ಪ್ಯಾಮ್ ಕರೆಗಳನ್ನು ತಡೆಹಿಡಿಯುವ ಫಿಲ್ಟರ್, ಕರೆಗಳ ಸ್ಮಾರ್ಟ್ ವರ್ಗೀಕರಣ ಮತ್ತು ಧ್ವನಿ ಪ್ಲೇಬ್ಯಾಕ್ ವೇಗವನ್ನು ಹೊಂದಾಣಿಕೆ ಮಾಡುವ ಆಯ್ಕೆಯೂ ಈ ಫೀಚರ್‌ನಲ್ಲಿ ಇದೆ.

ಈ ವಾಯ್ಸ್‌ಮೇಲ್ ಫೀಚರ್‌ನಲ್ಲಿ AI ಆಧಾರಿತ ಟ್ರಾನ್ಸ್ಕ್ರಿಪ್ಷನ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದು ಭಾರತದ 12 ಪ್ರಮುಖ ಭಾಷೆಗಳಿಗೆ ಬೆಂಬಲ ನೀಡುತ್ತದೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ, ಗುಜರಾತಿ, ಪಂಜಾಬಿ, ನೇಪಾಳಿ, ಸಂಸ್ಕೃತ ಮತ್ತು ಉರ್ದು ಭಾಷೆಗಳಲ್ಲಿ ಧ್ವನಿ ಸಂದೇಶಗಳನ್ನು ಪಠ್ಯ ರೂಪಕ್ಕೆ ಪರಿವರ್ತಿಸಬಹುದು. ಇದರಿಂದ ಸ್ಥಳೀಯ ಭಾಷೆಯ ಬಳಕೆದಾರರಿಗೆ ಈ ಫೀಚರ್ ಹೆಚ್ಚು ಪ್ರಸ್ತುತವಾಗುತ್ತದೆ.
ಇಷ್ಟೇ ಅಲ್ಲದೆ, ಟ್ರೂಕಾಲರ್ ಪ್ರೀಮಿಯಂ ಬಳಕೆದಾರರಿಗೆ ಇನ್ನೂ ಸುಧಾರಿತ ಅನುಭವ ದೊರೆಯಲಿದೆ. ಟ್ರೂಕಾಲರ್ ಅಸಿಸ್ಟೆಂಟ್ ಮೂಲಕ ಕರೆಗಳಿಗೆ ಸ್ವಯಂಚಾಲಿತ ಉತ್ತರ, ಕರೆಮಾಡುವವರೊಂದಿಗೆ ಸಂವಾದ, ವೈಯಕ್ತಿಕ ಶುಭಾಶಯಗಳು ಮತ್ತು ಮುಂದುವರಿದ ಕರೆ ನಿರ್ವಹಣಾ ಆಯ್ಕೆಗಳು ಲಭ್ಯವಿರುತ್ತವೆ. ಇದರಿಂದ ಬ್ಯುಸಿ ಬಳಕೆದಾರರಿಗೆ ಕರೆ ನಿರ್ವಹಣೆ ಇನ್ನಷ್ಟು ಸುಲಭವಾಗುತ್ತದೆ.
ಪ್ರಸ್ತುತ ಈ ಹೊಸ ವಾಯ್ಸ್‌ಮೇಲ್ ಫೀಚರ್ ಭಾರತಕ್ಕೆ ಮಾತ್ರ ಸೀಮಿತವಾಗಿದ್ದು, ಬಳಕೆದಾರರಿಂದ ಲಭಿಸುವ ಪ್ರತಿಕ್ರಿಯೆ ಆಧರಿಸಿ ಇತರ ದೇಶಗಳಿಗೂ ವಿಸ್ತರಿಸುವ ಯೋಜನೆ ಟ್ರೂಕಾಲರ್ ಹೊಂದಿದೆ. ಭಾರತೀಯ ಮಾರುಕಟ್ಟೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾದ ಈ ಫೀಚರ್, ಟ್ರೂಕಾಲರ್ ಬಳಕೆದಾರರಿಗೆ ಹೆಚ್ಚು ಬುದ್ಧಿವಂತ ಮತ್ತು ಸುರಕ್ಷಿತ ಕರೆ ಅನುಭವವನ್ನು ನೀಡುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








