ಮಾಡಿದುಣ್ಣೋ ಮಹರಾಯ: ಪರೀಕ್ಷೆಯಲ್ಲಿ ಕಾಪಿ ಮಾಡಲು AI ಬಳಸಿದ ಮಹಾಶಯ.. ಜೈಲು
ಶಿಕ್ಷಣ ಅಂದ್ರೆ ತುಂಬಾ ಇಷ್ಟ. ಪರೀಕ್ಷೆ ಅಂದ್ರೆ ಕಷ್ಟ! ಪರೀಕ್ಷೆಯಲ್ಲಿ ಫೇಲ್ ಆಗುವೆ ಅನ್ನೋ ಭಯ. ಪರೀಕ್ಷೆ ಪಾಸ್ ಮಾಡುವುದೇ ಹಲವು ವಿದ್ಯಾರ್ಥಿಗಳಿಗೆ ತಲೆನೋವು. ಇದರಿಂದ ಪಾರಾಗಲು ವಿದ್ಯಾರ್ಥಿಗಳು ಹುಡುಕುವ ಮಾರ್ಗವೇ ಕಾಪಿ. ಪರೀಕ್ಷೆಯಲ್ಲಿ ನಕಲು ಮಾಡುವ ವಿಚಾರ ಬಂದಾಗ ವಿಧ್ಯಾರ್ಥಿಗಳಲ್ಲಿ ಅದೆಷ್ಟೋ ಐಡಿಯಾಗಳು ಬರುತ್ತವೆ. ಈ ನಡುವೆ ತಂತ್ರಜ್ಞಾನವು ಇವರಿಗೆ ನಕಲು ಮಾಡಲು ಹೂಡುವ ತಂತ್ರಗಳಿಗೆ ಮತ್ತಷ್ಟು ಬಲವನ್ನು ತುಂಬಿದೆ. ಅದರಂತೆ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಹೈಟೆಕ್ ನಕಲು ಮಾಡಲು AI ಬಳಸಿ ಜೈಲುಪಾಲಾಗಿದ್ದಾನೆ. ಈ ಘಟನೆ ನಡೆದಿದ್ದು ಎಲ್ಲಿ? ಮುಂದೆ ವಿದ್ಯಾರ್ಥಿ ಕಥೆ ಏನಾಯಿತು? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರಸ್ತುತ ಇಡೀ ಜಗತ್ತು ತಂತ್ರಜ್ಞಾನದಿಂದ ರೂಪುಗೊಂಡಿದೆ. ಈ ಮಧ್ಯೆ ಶೈಕ್ಷಣಿಕ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ನಕಲು ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಿರುವುದು ವ್ಯಾಪಕ ಚರ್ಚೆ ಮತ್ತು ಆತಂಕ ಮೂಡಿಸಿದೆ. ಈ ಘಟನೆ AIನ ನೈತಿಕ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬದಲಾಗುತ್ತಿರುವ ಕಲಿಕಾ ವಿಧಾನಗಳೊಂದಿಗೆ ಶಾಲೆಗಳು ಮತ್ತು ವಿದ್ಯಾರ್ಥಿಗಳು ಹೇಗೆ ವ್ಯವಹರಿಸಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಬಂಧಿತ ವಿದ್ಯಾರ್ಥಿಯ ಕೈಚಳಕ ಬಯಲಾಗಿದ್ದು ಹೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಈ ಘಟನೆ ಟರ್ಕಿಯಲ್ಲಿ ನಡೆದಿದೆ. ನಕಲು ಮಾಡಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಗೆ ಸಹಾಯ ಮಾಡುತ್ತಿದ್ದ ಮತ್ತೊಬ್ಬನನ್ನು ಕೂಡ ಪೊಳಿಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಎಐ (AI) ಸಾಫ್ಟ್‌ವೇರ್‌ಗೆ ಸಂಪರ್ಕಗೊಂಡ ಸಾಧನವನ್ನು ಬಳಸಿಕೊಂಡು ಕಾಪಿ ಮಾಡುತ್ತಿದ್ದನು. ಇದು, ಟರ್ಕಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಸದ್ಯ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಬಂಧಿತನು ಎಲ್ಲಾ ವಿದ್ಯಾರ್ಥಿಗಳಂತೆಯೇ ಪರೀಕ್ಷಾ ಕೊಠಡಿಗೆ ಬಂದಿದ್ದ. ಸಮಯಕ್ಕೆ ಸರಿಯಾಗಿ ಪರೀಕ್ಷೆ ಕೂಡ ಆರಂಭವಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಉತ್ತರ ಬರೆಯುವುದರಲ್ಲಿ ತಲ್ಲೀನರಾಗಿದ್ದರು. ಆದರೆ, ಈ ವಿದ್ಯಾರ್ಥಿ ಉತ್ತರ ಬರೆಯಲು ತಿಣುಕಾಡುತ್ತಿದ್ದನು. ಈ ವೇಳೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಕೂಡಲೇ ಆತನ ಬಳಿ ತೆರೆಳಿ ಪ್ರಶ್ನೆ ಮಾಡಿದ್ದಾರೆ. ಆಗ ವಿದ್ಯಾರ್ಥಿ ಕಕ್ಕಾಬಿಕ್ಕಿಯಾಗಿದ್ದಾನೆ. ಆಗಲೇ ಆತನ ನಿಜಬಣ್ಣ ಬಯಲಾಗಿದೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಶರ್ಟ್ ಬಟನ್‌ನಲ್ಲಿ AI ಸಾಫ್ಟ್‌ವೇರ್ ಬಳಕೆ
ಈ ಕುರಿತು ಇಸ್ಪಾರ್ಟಾದ ನೈಋತ್ಯ ಪ್ರಾಂತ್ಯದ ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ ಅನ್ನು ವಿದ್ಯಾರ್ಥಿಯ ಶರ್ಟ್ ಬಟನ್‌ನಲ್ಲಿ ಬಳಕೆ ಮಾಡಿದ್ದಾನೆ. ಶೂ ಸೋಲ್‌ನಲ್ಲಿ ಮರೆಮಾಡಲಾಗಿರುವ ರೂಟರ್ ಮೂಲಕ ಸಂಪರ್ಕಿಸಲಾಗಿದೆ. ಚಿಕ್ಕ ಕ್ಯಾಮರಾವನ್ನು ಹೇಗೆ ಬಳಸಿಕೊಂಡಿದ್ದ ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ವೀಡಿಯೊದಲ್ಲಿ, ಪೊಲೀಸರು ಪ್ರಶ್ನೆಯನ್ನು ಸ್ಕ್ಯಾನ್ ಮಾಡುವ ಮೂಲಕ ಸಿಸ್ಟಮ್ ಅನ್ನು ಪ್ರದರ್ಶಿಸುತ್ತಾರೆ. ನಂತರ AI ಸಾಫ್ಟ್‌ವೇರ್ ಸರಿಯಾದ ಉತ್ತರವನ್ನು ಒದಗಿಸುತ್ತದೆ. ಅದನ್ನು ಇಯರ್‌ಪೀಸ್ ಮೂಲಕ ರವಾನಿಸುತ್ತದೆ.
AI ತಂತ್ರಜ್ಞಾನದಲ್ಲಿ ಆಘಾತಕಾರಿ ಬೆಳವಣಿಗೆ
ಈ ಘಟನೆಯು AI ತಂತ್ರಜ್ಞಾನ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಆಘಾತಕಾರಿ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ. ಅದರ ಸಂಭಾವ್ಯ ಪ್ರಯೋಜನಗಳು ಮತ್ತು ಅಪಾಯಗಳೆರಡನ್ನೂ ತಿಳಿಸುತ್ತದೆ. AI ಮುಂದುವರಿದಂತೆ, ಶಿಕ್ಷಣದಲ್ಲಿನ ಅದರ ಅಪ್ಲಿಕೇಶನ್‌ಗಳು ವೈಯಕ್ತಿಕಗೊಳಿಸಿದ ಕಲಿಕೆ, ಆಡಳಿತಾತ್ಮಕ ಕಾರ್ಯಗಳ ಯಾಂತ್ರೀಕರಣ ಮತ್ತು ನವೀನ ಮೌಲ್ಯಮಾಪನ ವಿಧಾನಗಳಿಗೆ ಭರವಸೆಯ ಮಾರ್ಗಗಳನ್ನು ನೀಡುತ್ತವೆ. ಇದು ಉತ್ತಮ ಬೆಳವಣಿಗೆಯೇ ಆಗಿದೆ.
ಮಾಡಿದ ತಪ್ಪಿಗೆ ಜೈಲಿಗೆ ಸೇರಿದ ವಿದ್ಯಾರ್ಥಿ
ಈ ಮಧ್ಯೆ ಬೆಳಕಿಗೆ ಬಂದಿರುವ ಈ ಪ್ರಕರಣದಿಂದ AI ತಂತ್ರಜ್ಞಾನದ ದುರುಪಯೋಗವು ನೈತಿಕ ಮತ್ತು ಪ್ರಾಯೋಗಿಕ ಸವಾಲುಗಳನ್ನು ಒಡ್ಡುತ್ತದೆ. ಇದು ಪ್ರಸ್ತುತ ಮೇಲ್ವಿಚಾರಣಾ ವ್ಯವಸ್ಥೆಗಳ ಸಮರ್ಪಕತೆ ಮತ್ತು ಶೈಕ್ಷಣಿಕ ವಿಧಾನಗಳಲ್ಲಿ ಅದರ ಬಳಕೆಯನ್ನು ನಿಯಂತ್ರಿಸಲು ದೃಢವಾದ ನೈತಿಕ ಮಾರ್ಗಸೂಚಿಗಳ ಅಗತ್ಯವನ್ನು ಪ್ರಶ್ನಿಸುತ್ತದೆ. ಒಟ್ನಲ್ಲಿ, ವಿದ್ಯಾರ್ಥಿಯು ತಾನು ಮಾಡಿದ ತಪ್ಪಿನಿಂದ ಜೈಲಿಗೆ ಸೇರಿದ್ದಾನೆ. ವಿದ್ಯಾರ್ಥಿಗೆ ಸಹಾಯ ಮಾಡಿದ್ದ ವ್ಯಕ್ತಿಯೂ ಪೊಲೀಸರ ಅತಿಥಿಯಾಗಿದ್ದಾನೆ.


Click it and Unblock the Notifications








