ಭಾರತದಲ್ಲಿ Twitter Blue ಶುಲ್ಕ ಘೋಷಣೆ; ತಿಂಗಳಿಗೆ ಎಷ್ಟು ಹಣ ಪಾವತಿಸಬೇಕು?
ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಬಿಲಿಯನೇರ್ ಎಲೋನ್ ಮಸ್ಕ್ ಕೈ ಸೇರಿದ ನಂತರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಟ್ವಿಟರ್ ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಟ್ವಿಟರ್ ಕಂಪೆನಿಯದ್ದೇ ಸುದ್ದಿ ಟ್ರೆಂಡ್ ಆಗುವ ಮಟ್ಟಿಗೆ ಅನೇಕ ಬದಲಾವಣೆಗಳು ನಡೆದಿವೆ. ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಬ್ಲೂಟಿಕ್ ಗಾಗಿ ಶುಲ್ಕ ನಿಗಧಿಪಡಿಸುವ ಪ್ರಸ್ತಾಪವೂ ಒಂದಾಗಿದೆ. ಅದರಂತೆ ಇದೀಗ ಎಲೋನ್ ಮಸ್ಕ್ ಬ್ಲೂಟಿಕ್‌ಗಾಗಿ ಎಷ್ಟು ಶುಲ್ಕ ಪಾವತಿಸಬೇಕು ಅನ್ನೊದನ್ನ ಬಹಿರಂಗಪಡಿಸಿದ್ದಾರೆ.

ಹೌದು, ಇನ್ಮುಂದೆ ಟ್ವಿಟರ್‌ನಲ್ಲಿ ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕಾಗುತ್ತದೆ. ಅದರಂತೆ ಭಾರತದಲ್ಲಿ ಟ್ವಿಟರ್ ಬ್ಲೂಟಿಕ್‌ನ ಬೆಲೆ ಬಹಿರಂಗವಾಗಿದೆ. ಭಾರತದಲ್ಲಿ ಡೆಸ್ಕ್‌ಟಾಪ್ ಮೂಲಕ ಟ್ವಿಟರ್ ಬಳಕೆ ಮಾಡುವವರಿಗೆ ಬ್ಲೂಟಿಕ್ ಶುಲ್ಕ 650ರೂ. ಇರಲಿದೆ. ಹಾಗೆಯೇ iOS ಮತ್ತು ಆಂಡ್ರಾಯ್ಡ್ ಬಳಕೆದಾರರು 900ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹಾಗಾದ್ರೆ ಟ್ವಿಟರ್ ಬ್ಲೂ ಶುಲ್ಕ ಎಂದಿನಿಂದ ಪ್ರಾರಂಭವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಬೆಲೆ ಎಷ್ಟು?
ಎಲೋನ್ ಮಸ್ಕ್ ಟ್ವಿಟರ್ ಬ್ಲೂಟಿಕ್‌ನ ಚಂದಾದಾರಿಕೆಯನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಪಡೆಯುವುದಕ್ಕೆ ವಿಭಿನ್ನ ಚಂದಾದಾರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನೀವು ಮೊಬೈಲ್‌ನಲ್ಲಿ ಟ್ವಿಟರ್ ಬ್ಲೂ ಟಿಕ್ ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಂಡರೆ ತಿಂಗಳಿಗೆ 900ರೂ. ಪಾವತಿಸಬೇಕಾಗುತ್ತದೆ. ಇನ್ನು ಡೆಸ್ಕ್‌ಟಾಪ್ ಟ್ವಿಟರ್ ಬ್ಲೂಟಿಕ್ ಚಂದಾದಾರಿಕೆ ತಿಂಗಳಿಗೆ 650ರೂ. ಆಗಿದೆ. ಇದಲ್ಲದೆ ಟ್ವಿಟರ್ ವೆಬ್‌ನಲ್ಲಿ ವಾರ್ಷಿಕ ಚಂದಾದಾರಿಕೆಯನ್ನು ಸಹ ಘೋಷಿಸಲಾಗಿದ್ದು, ಇದು 6,800ರೂ. ಬೆಲೆಯನ್ನು ಹೊಂದಿದೆ.

ಬ್ಲೂಟಿಕ್ ಖರೀದಿಸುವುದು ಹೇಗೆ?
ಟ್ವಿಟರ್‌ನ ಬ್ಲೂಟಿಕ್ ಚಂದಾದಾರಿಕೆ ಪಡೆಯಬೇಕಾದರೆ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ನೀವು ಮೊಬೈಲ್ ಮೂಲಕ ಪ್ರಯತ್ನಿಸಿದರೆ ಮೊದಲಿಗೆ ನಿಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ನಿಮ್ಮ ಪ್ರೊಫೈಲ್ ಪಿಕ್ ಐಕಾನ್ ಅನ್ನು ಟ್ಯಾಪ್ ಮಾಡಬೇಕು. ಇದರಲ್ಲಿ ನೀವು 'ಟ್ವಿಟರ್ ಬ್ಲೂ' ಅನ್ನು ಕಾಣಬಹುದು, ಅದರ ಮೇಲೆ ಕ್ಲಿಕ್ ಮಾಡಿದರೆ ಟ್ವಿಟರ್ ನಿಮ್ಮನ್ನು ಚಂದಾದಾರಿಕೆಯನ್ನು ಖರೀದಿಸಬಹುದಾದ ಪುಟಕ್ಕೆ ರಿ ಡೈರೆಕ್ಷನ್ ಮಾಡಲಿದೆ. ಇದರಲ್ಲಿ ನೀವು ಅಗತ್ಯವಾದ ಚಂದಾದಾರಿಕೆಯನ್ನು ಖರೀದಿಸಬಹುದಾಗಿದೆ.
ಏನಿದು ಬ್ಲೂಟಿಕ್ ಚಂದಾದಾರಿಕೆ?
ಟ್ವಿಟರ್ ಬ್ಲೂ ಟಿಕ್ ಬಳಕೆದಾರರಿಗೆ ವಿಶೇಷ ಚೆಕ್‌ಮಾರ್ಕ್ ಅನ್ನು ನೀಡಲಿದೆ. ಈ ಹಿಂದೆ ಟ್ವಿಟರ್ ಬ್ಲೂ ಟಿಕ್ ಕೇವಲ ಸಾರ್ವಜನಿಕ ವ್ಯಕ್ತಿಗಳು ಮತ್ತು ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಇದೀಗ ಬ್ಲೂಟಿಕ್ ಎಲ್ಲರಿಗೂ ಲಭ್ಯವಾಗಲಿದೆ. ಆದರೆ ಇದಕ್ಕಾಗಿ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಬ್ಲೂಟಿಕ್ ಹೊಂದಿರುವ ಬಳಕೆದಾರರು ಪ್ರತ್ಯುತ್ತರಗಳು, ಮೆನ್ಶನ್ ಮತ್ತು ಸರ್ಚ್‌ನಲ್ಲಿ ಹೆಚ್ಚಿನ ಆದ್ಯತೆ ಹೊಂದಿರುತ್ತಾರೆ.

ಬ್ಲೂಟಿಕ್ ನಿಂದ ಏನೆಲ್ಲಾ ಲಾಭ!
ಬ್ಲೂಟಿಕ್ ಹೊಂದಿರುವ ಬಳಕೆದಾರರು ಟ್ವಿಟರ್‌ನಲ್ಲಿ ಲಾಂಗ್ ಡ್ಯುರೇಷನ್ ವೀಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಬುಕ್‌ಮಾರ್ಕ್ ಫೋಲ್ಡರ್‌ಗಳು, ಕಸ್ಟಮ್ ಅಪ್ಲಿಕೇಶನ್ ಐಕಾನ್‌ಗಳು, ಟ್ವೀಟ್ ಡಿಲೀಟ್ ಮಾಡುವ ಅವಕಾಶ ಕೂಡ ದೊರೆಯಲಿದೆ. ಇದಲ್ಲದೆ ಬ್ಲೂಟಿಕ್ ಚಂದಾದಾರರು ತಮ್ಮ ಹ್ಯಾಂಡಲ್, ಡಿಸ್‌ಪ್ಲೇ ಹೆಸರು ಅಥವಾ ಪ್ರೊಫೈಲ್ ಫೋಟೋವನ್ನು ಬದಲಾಯಿಸಬಹುದು. ಆದರೆ ಅವರ ಅಕೌಂಟ್ ಅನ್ನು ಮತ್ತೊಮ್ಮೆ ವೆರಿಫಿಕೇಶನ್ ಮಾಡುವ ತನಕ ಬ್ಲೂಟಿಕ್ ಅನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಇದರೊಂದಿಗೆ ಟ್ವಿಟರ್ ಕಂಪೆನಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ನಿರ್ಬಂಧಗಳನ್ನು ಕೂಡ ಪರಿಚಯಿಸಿದೆ. ಇದರಲ್ಲಿ ಟ್ವಿಟರ್ ಬಳಕೆದಾರರು ದಿನಕ್ಕೆ ಗರಿಷ್ಠ 2,400 ಟ್ವೀಟ್‌ಗಳು ಮತ್ತು ರಿಟ್ವೀಟ್‌ಗಳನ್ನು ಮಾತ್ರ ಪೋಸ್ಟ್ ಮಾಡಬಹುದು. ಅಲ್ಲದೆ ಬಳಕೆದಾರರು ದಿನಕ್ಕೆ 500 ನೇರ ಸಂದೇಶಗಳನ್ನು ಕಳುಹಿಸಬಹುದು ಎಂದು ಹೇಳಿದೆ. ಹಾಗೆಯೇ ದಿನಕ್ಕೆ 400 ಖಾತೆಗಳನ್ನು ಮಾತ್ರ ಫಾಲೋ ಮಾಡುವ ಮಿತಿಯನ್ನು ಸಹ ವಿಧಿಸಿದೆ. ಇದಲ್ಲದೆ ಒಂದು ಖಾತೆಯು 5000 ಖಾತೆಗಳನ್ನು ಅನುಸರಿಸಬಹುದು ಮತ್ತು ಹೆಚ್ಚಿನ ಖಾತೆಗಳನ್ನು ಅನುಸರಿಸುವ ಪ್ರಯತ್ನಗಳನ್ನು "ಖಾತೆ-ನಿರ್ದಿಷ್ಟ ಅನುಪಾತಗಳಿಂದ ಸೀಮಿತಗೊಳಿಸಲಾಗುತ್ತದೆ ಎಂದು ಹೇಳಿದೆ.


Click it and Unblock the Notifications








