ಅಪಾಯಕಾರಿ ಚಟುವಟಿಕೆ ತಡೆಯಲು ಒಂದು ಲಕ್ಷ ಆಪ್ ಅಳಿಸಿದ ಟ್ವಿಟರ್..!
ಟ್ವೀಟರ್ ದಿನದಿಂದ ದಿನಕ್ಕೆ ಸಾಕಷ್ಟು ಜನಪ್ರಿಯಗೊಂಡಿದೆ. ಜನಪ್ರೀಯತೆ ಇದ್ದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರಲೇಬೇಕಲ್ಲವೇ? ಹಾಗೆಯೇ ಟ್ವೀಟರ್ ನಲ್ಲೂ ಕೂಡ ಉತ್ತಮ ಉದ್ದೇಶದಿಂದ ಹಂಚಲಾಗಿರುವ ಮಾಹಿತಿ ಮತ್ತು ಕೆಟ್ಟ ಉದ್ದೇಶದಿಂದ ಹಂಚಲಾಗಿರುವ ವಿಚಾರಗಳು ಎರಡೂ ಕೂಡ ಇವೆ.
ಟ್ವೀಟರ್ ಮಾತ್ರವಲ್ಲ, ಇತ್ತೀಚೆಗೆ ಎಲ್ಲಾ ಸಾಮಾಜಿಕ ಜಾಲತಾಣಗಳೂ ಕೂಡ ಸುಳ್ಳು ಸುದ್ದಿಗಳು, ಅಹಿತಕರ ಚಟುವಟಿಕೆಗಳು ಇತ್ಯಾದಿ ತಮ್ಮ ಹೆಸರಿಗೆ ಕಳಂಕ ತರುವ ಕೆಲಸಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿದೆ. ಅದಕ್ಕೆ ಟ್ವೀಟರ್ ಕೂಡ ಹೊರತಾಗಿಲ್ಲ.

ತನ್ನ ಭದ್ರತೆಯ ನಿಟ್ಟಿನಲ್ಲಿ ಟ್ವೀಟರ್ ಸುಮಾರು 1,43000 ಆಪ್ ಗಳನ್ನು ಟ್ವೀಟರ್ ನಿಂದ ತೆಗೆದುಹಾಕಿದೆಯಂತೆ. ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಫ್ರಿಲ್ ನಿಂದ ಈ ಕಾರ್ಯವನ್ನು ಆರಂಭಿಸಿದ್ದು, ಸ್ವಯಂಚಾಲಿತ ಅಕೌಂಟ್ ಗಳಿಂದ ಇಷ್ಟೊಂದು ದೊಡ್ಡ ಮೊತ್ತದ ಅನಗತ್ಯ ಆಪ್ ಗಳನ್ನು ತೆಗೆದು ಹಾಕಲಾಗಿದೆ ಎಂದು ಟ್ವೀಟರ್ ಪ್ರಕಟಪಡಿಸಿದೆ.
ಸ್ಯಾನ್ ಫ್ರ್ಯಾನ್ಸಿಸ್ಕೋ ಮೂಲದ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್ ಹೇಳುವಂತೆ ತನ್ನ ಎಪಿಐ(ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್)ಗೆ ಡೆವಲಪರ್ ಗಳು ಸ್ವಯಂಚಾಲಿತವಾಗಿ ಟ್ವೀಟರ್ ಪೋಸ್ಟ್ ಗಳನ್ನು ಮಾಡುವುದನ್ನು ಇನ್ನು ಮುಂದೆ ಬಿಗಿಗೊಳಿಸಿ, ಫೇಕ್ ಅಪ್ಲಿಕೇಷನ್ ಗಳನ್ನು ತಡೆಯಲಾಗುವುದು ಎಂದು ತಿಳಿಸಿದೆ.
ಟ್ವೀಟರ್ ನ್ನು ಉತ್ತಮ ಸ್ಥಾನಕ್ಕೆ ಏರಿಸಬಲ್ಲ ಯಾವುದೇ ಫ್ಲಾಟ್ ಫಾರ್ಮ್ ಗೆ ನಾವು ಬೆಂಬಲ ನೀಡುತ್ತೇವೆ. ಅಂತಹ ವಸ್ತುಗಳನ್ನು ಅಭಿವೃದ್ಧಿ ಪಡಿಸುವ ಡೆವಲಪರ್ ಗಳಿಗೆ ಸ್ವಾಗತವಿದೆ ಎಂಬ ಹೇಳಿಕೆಯನ್ನು ಟ್ವೀಟರ್ ನ ಹಿರಿಯ ಉತ್ಪನ್ನ ನಿರ್ವಹಣೆ ನಿರ್ದೇಶಕ ರಾಬ್ ಜಾನ್ಸನ್ ತಿಳಿಸಿದ್ದಾರೆ.
ಟ್ವೀಟರ್ ನಲ್ಲಿ ಸಾರ್ವಜನಿಕರು ಎದುರಿಸುವ ಸ್ಪ್ಯಾಮ್ ಮತ್ತು ದುರುದ್ದೇಶಪೂರಿತ ಯಾವುದೇ ಚಟುವಟಿಕೆ ಮತ್ತು ಗೌಪ್ಯತೆಯ ಕೆಲವು ವಿಚಾರಗಳನ್ನು ನಿರ್ವಹಿಸುವುದು ಒಂದು ಸವಾಲಾಗಿದ್ದು, ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತು ಟ್ವೀಟರ್ ಖಾತೆಗಳ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಖಂಡಿತ ಟ್ವೀಟರ್ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚೆಗೆ ಅಧಿಕಗೊಂಡಿರುವ ಕೆಲವು ಅಸಹನೀಯ ಮತ್ತು ಅನಾವಶ್ಯಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲಾ ಫ್ಲ್ಯಾಟ್ ಫಾರ್ಮ್ ನಲ್ಲೂ ಕೂಡ ಸುರಕ್ಷತಾ ಕ್ರಮಗಳು ಹೆಚ್ಚಾಗುತ್ತಿದೆ ಅದಕ್ಕೆ ಟ್ವೀಟರ್ ಕೂಡ ಹೊರತಾಗಿಲ್ಲ.
ಟ್ವೀಟರ್ ಮೂಲಕ ಸ್ಪ್ಯಾಮ್ ಮೆಸೇಜ್ ಗಳನ್ನು ಹರಡುವುದು, ದುರುದ್ದೇಶಪೂರಿತ ಚಟುವಟಿಕೆಗಳನ್ನು ಮಾಡುವುದು ಮತ್ತು ನಮ್ಮ ಖಾತೆಯ ಮಂದಿಗೆ ತೊಂದರೆ ನೀಡುವ ಯಾವುದೇ ಕೆಲಸವನ್ನು ಟ್ವೀಟರ್ ಸಹಿಸುವುದಿಲ್ಲ ಎಂದು ಟ್ವೀಟರ್ ಅಧಿಕಾರಿಗಳು ತಿಳಿಸಿದ್ದಾರೆ. ಫೇಕ್ ಆಪ್ ಗಳು ಮತ್ತು ತೊಂದರೆದಾಯಕವಾಗಿರುವ ಆಪ್ ಗಳನ್ನು ತೆಗೆಯುವ ನಿಟ್ಟಿನಲ್ಲಿ ನಮ್ಮ ಕಾರ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕುಗೊಳ್ಳಲಿದೆ ಎಂಬ ಸೂಚನೆಯನ್ನೂ ಕೂಡ ಅವರು ನೀಡಿದ್ದಾರೆ.

ಈಗಾಗಲೇ ಹಿಂತೆಗೆದುಕೊಂಡಿರುವ ಆಪ್ ಗಳ ಬಗ್ಗೆ ಟ್ವೀಟರ್ ನಿಂದ ಯಾವುದೇ ವಿವರಣೆ ಸಿಕ್ಕಿಲ್ಲ. ಆದರೆ ಟ್ವೀಟರ್ ಹಿಂತೆಗೆದುಕೊಂಡ ಆಪ್ ಗಳಿಂದ ಮರುಅವಕಾಶಕ್ಕಾಗಿ ಒತ್ತಡ ಕೇಳಿಬರುತ್ತಿದೆಯಂತೆ. ರಾಜಕೀಯ ದುರುದ್ದೇಶ ಅಥವಾ ತಪ್ಪು ಕಲ್ಪನೆಗಳನ್ನು ಹರಡುವಿಕೆ ಜೊತೆಗೆ ದುರುದ್ದೇಶಪೂರಿತ ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಟ್ವೀಟರ್ ನಲ್ಲಿ ಯಾವುದೇ ಆಪ್ ನ್ನು ಸೃಷ್ಟಿ ಮಾಡುವುದೇ ಆದರೆ ಹೊಸ ಅಪ್ಲಿಕೇಷನ್ ಪ್ರೊಸೆಸ್ ನ್ನು ಅನುಸರಿಸಬೇಕು ಮತ್ತು ಹೇಗೆ ಅವರು ಆ ಅಪ್ಲಿಕೇಷನ್ ಮೂಲಕ ಸೇವೆಯನ್ನು ನೀಡುತ್ತಾರೆ ಎಂಬ ವಿವರವನ್ನು ನೀಡಬೇಕು.
ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಟ್ವೀಟರ್ ಬದ್ಧವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬ ಡೆವಲರ್ ಗಳು ಟ್ವೀಟರ್ ಎಪಿಐ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಸಹಕಾರ ನೀಡಬೇಕು. ಟ್ವೀಟರ್ ಸೇವೆಗಳಿಂದ ಯಾವುದೇ ಕೆಟ್ಟ ಪರಿಣಾಮವೂ ಆಗಬಾರದು ಎಂಬುದು ಟ್ವೀಟರ್ ನ ಉದ್ದೇಶವಾಗಿದೆ.
ಸ್ವಯಂಚಾಲಿತ ಖಾತೆಗಳು ಯಾವಾಗಲೂ ದುರುದ್ದೇಶದಿಂದ ಕೂಡಿರುವುದಿಲ್ಲ. ಕೆಲವು ತುರ್ತು ಎಚ್ಚರಿಕೆಗಳನ್ನು ನೀಡುವ ಉದ್ದೇಶದಿಂದ ನಿರ್ಮಿಸಿರುವ ಖಾತೆಗಳಾಗಿರುತ್ತವೆ. ಕಲಾ ಪ್ರದರ್ಶನಗಳು ಅಥವಾ ನೆಟ್ ಫ್ಲಿಕ್ಸ್ ಕಾರ್ಯಕ್ರಮದ ವಿವರಗಳಿಗಾಗಿ ತೆರೆಯಲಾಗಿರುತ್ತದೆ. ಆದರೆ ಇಂತಹದ್ದೇ ಕೆಲವು ಖಾತೆಗಳು ಟ್ವೀಟರ್ ನ ಹೆಸರಿಗೆ ಕಳಂಕ ತಂದ ಹಿನ್ನೆಲೆಯಲ್ಲಿ ಈ ಚಟುವಟಿಕೆಯನ್ನು ನಡೆಸಲಾಗಿದೆ ಎಂದು ಟ್ವೀಟರ್ ಹೇಳಿದೆ.
ಒಟ್ಟಾರೆ ಮೋಸ, ವಂಚನೆ, ತಪ್ಪು ಮಾಹಿತಿ, ಸಮಾಜಕ್ಕೆ ಕೆಟ್ಟ ಸಂದೇಶ ಸಾರುವ ಯಾವುದೇ ಚಟುವಟಿಕೆಗಳಿಗೆ ಟ್ವೀಟರ್ ಅವಕಾಶ ಕಲ್ಪಿಸುವುದಿಲ್ಲ ಎಂಬುದು ಮಾತ್ರ ಸತ್ಯ .


Click it and Unblock the Notifications








