ಭಾರತದಲ್ಲಿ ಮೇ 15 ರಂದು ವಿವೋ ವಿ50 ಎಲೈಟ್ ಬಿಡುಗಡೆ ಖಚಿತ: ಎಲ್ಲಾ ವಿವರಗಳು!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ವಿವೋ ವಿ50 ಎಲೈಟ್ ಎಂಬ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಇಂದು ಖಚಿತಪಡಿಸಿದೆ. ಭಾರತದಲ್ಲಿ ಇದೇ ಮೇ 15 ರಂದು ವಿವೋ ವಿ50 ಎಲೈಟ್ ಆವೃತ್ತಿಯ ಬಿಡುಗಡೆಯನ್ನು ತನ್ನ ಅಧಿಕೃತ ಎಕ್ಸ್ ಪೋಸ್ಟ್ ಮೂಲಕ ಕಂಪೆನಿಯು ದೃಢಪಡಿಸಿದೆ. ಆದರೆ, ಈ ಸ್ಮಾರ್ಟ್‌ಫೋನ್ ಕುರಿತು ವಿವೋ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಹೊಸ ಮಾದರಿಯು ವಿಭಿನ್ನ ವಿನ್ಯಾಸದೊಂದಿಗೆ ಬರಲಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿರುವ ವಿವೋ ವಿ50 ಮಾದರಿಯ ಪ್ರಮುಖ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ವಿವೋ ವಿ50 ಎಲೈಟ್ ಕುರಿತಾದ ಈ ನಿಗೂಢತೆಯು ಸ್ಮಾರ್ಟ್‌ಫೋನ್ ವಲಯದಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಹಾಗಾದರೆ, ವಿವೋ ವಿ50 ಎಲೈಟ್, ವಿವೋ ವಿ50 ಮತ್ತು ವಿ50ಇ ಗಿಂತ ಹೇಗೆ ಭಿನ್ನವಾಗಿರಬಹುದು? ಎಂಬುದನ್ನು ನೋಡೋಣ ಬನ್ನಿ.
ವಿವೋ ವಿ50 ಎಲೈಟ್: ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು
ವಿವೋ ವಿ50 ಎಲೈಟ್ ಸ್ಮಾರ್ಟ್‌ಫೋನ್‌ನ ನಿರ್ದಿಷ್ಟ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, ಇದು ವಿಭಿನ್ನ ವಿನ್ಯಾಸದೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬದಲಾವಣೆಯು ವಿ ಸರಣಿಯ ಫೋನ್‌ಗಳಿಗೆ ಹೊಸತನವನ್ನು ನೀಡುವ ಸಾಧ್ಯತೆ ಇದೆ. ಇದಲ್ಲದೆ, ವಿವೋ ವಿ50 ಎಲೈಟ್ ಮಾದರಿಯು ವಿವೋ ವಿ50 ರಲ್ಲಿರುವಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ. ಅದರಂತೆ, ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್, 6.77-ಇಂಚಿನ ಬಾಗಿದ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು ಇತರ ಉನ್ನತ ದರ್ಜೆಯ ವೈಶಿಷ್ಟ್ಯಗಳನ್ನು ನಾವು ನಿರೀಕ್ಷಿಸಬಹುದು. ವಿನ್ಯಾಸದ ದೃಷ್ಟಿಯಿಂದ ನೋಡುವುದಾದರೆ, ವಿವೋ ವಿ50 ತನ್ನ ನಯವಾದ ವಿನ್ಯಾಸ ಮತ್ತು ಹಿಂಭಾಗದ ಫಲಕದಲ್ಲಿನ 3D-ಸ್ಟಾರ್ ತಂತ್ರಜ್ಞಾನದೊಂದಿಗೆ ಗಮನ ಸೆಳೆದಿದೆ. ಹೀಗಾಗಿ, ವಿವೋ ವಿ50 ಎಲೈಟ್ ವಿನ್ಯಾಸದ ವಿಷಯದಲ್ಲಿ ಇನ್ನಷ್ಟು ಹೊಸತನವನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸ ವಿವೋ ವಿ50 ಎಲೈಟ್ ಸ್ಮಾರ್ಟ್‌ಫೋನಿನ ಆಗಮನಕ್ಕೂ ಮೊದಲೇ ಬಿಡುಗಡೆಯಾಗಿರುವ ವಿವೋ ವಿ50 ಸ್ಮಾರ್ಟ್‌ಫೋನಿನ ವಿಶೇಷಣಗಳ ಕುರಿತು ಮಾತನಾಡುವುದಾದರೆ, ಈ ವಿವೋ ವಿ50 ಫೋನ್ 120Hz ರಿಫ್ರೆಶ್ ದರ ಮತ್ತು 4500nits ಗರಿಷ್ಠ ಹೊಳಪಿನೊಂದಿಗೆ 6.77-ಇಂಚಿನ FHD+ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, ಇದು ZEISS ಸಹಯೋಗದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ OIS ನೊಂದಿಗೆ 50MP ಮುಖ್ಯ ಕ್ಯಾಮೆರಾ ಮತ್ತು 50MP ಅಲ್ಟ್ರಾವೈಡ್ ಕ್ಯಾಮೆರಾ ಸೇರಿವೆ. ಮುಂಭಾಗದಲ್ಲಿ, 50MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. ಭಾರತದಲ್ಲಿ ಈ ವಿವೋ ವಿ50 ಸ್ಮಾರ್ಟ್‌ಫೋನ್ ಅನ್ನು 8GB + 128GB ರೂಪಾಂತರಕ್ಕೆ ರೂ. 34,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ವಿವೋ ವಿ50 ಎಲೈಟ್: ಸಂಭಾವ್ಯ ಬೆಲೆ ಎಷ್ಟು?
ಮುಂಬರುವ ಹೊಸ ವಿವೋ ವಿ50 ಎಲೈಟ್ ಸ್ಮಾರ್ಟ್‌ಫೋನ್ ಕೂಡ ವಿವೋ ವಿ50 ಸ್ಮಾರ್ಟ್‌ಫೋನಿನ ಅದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದ್ದರೆ, ಬೆಲೆಯಲ್ಲಿ ಗಣನೀಯ ಏರಿಕೆ ಇರುವುದಿಲ್ಲ ಎಂದು ನಾವು ನಿರೀಕ್ಷಿಸಬಹುದು. ವಿವೋ ವಿ50 ಎಲೈಟ್ ಎಂಬ ಹೊಸ ಹೆಸರು ಮತ್ತು ವದಂತಿಯ ವಿನ್ಯಾಸ ಬದಲಾವಣೆಗಳಿಂದಾಗಿ ಈ ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ, ಕೆಲ ವರದಿಗಳು ತಿಳಿಸಿರುವಂತೆ, ಈ ಸ್ಮಾರ್ಟ್‌ಫೋನ್ ಬೆಲೆಯು 40 ಸಾವಿರ ರೂ.ಗಳನ್ನು ದಾಟುವುದಿಲ್ಲ ಎಂದು ಹೇಳಿವೆ. ಒಟ್ಟಾರೆಯಾಗಿ, ವಿವೋ ವಿ50 ಎಲೈಟ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಮೇ 15 ರಂದು ಈ ಸ್ಮಾರ್ಟ್‌ಫೋನ್‌ನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವವರೆಗೆ ಕಾಯೋಣ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








