ಕೊನೆಗೂ ಫ್ಲಿಪ್‌ಕಾರ್ಟ್ ಖರೀದಿಸಿದ ವಾಲ್‌ಮಾರ್ಟ್: ಮಾರಾಟವಾದ ಬೆಲೆ ಎಷ್ಟು..?
ಭಾರತದ ವಿಶಾಲ ಮಾರುಕಟ್ಟೆಯಲ್ಲಿ ತನ್ನ ಅದೃಷ್ಠ ಪರೀಕ್ಷೆಗೆ ವಿಶ್ವದ ಅತೀ ದೊಡ್ಡ ಚಿಲ್ಲರೆ ಮಾರಾಟಗಾರ ವಾಲ್‌ಮಾರ್ಟ್ ಬಹುದಿನಗಳಿಂದ ಪ್ರಯತ್ನಿಸುತ್ತಿದ್ದು, ಸದ್ಯ ಇದಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತೀಯ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಕಂಪನಿಯಾಗಿ ಬಳೆದಿರುವ ಫ್ಲಿಪ್ ಕಾರ್ಟ್ ಅನ್ನು 16 ಶತಕೋಟಿ ಡಾಲರ್‌ಗೆ ಖರೀದಿಸಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದಿನಿಂದಲೂ ಫ್ಲಿಪ್‌ಕಾರ್ಟ್ ಖರೀದಿಸಲು ಅಮೆಜಾನ್ ಮತ್ತು ವಾಲ್‌ಮಾರ್ಟ್ ಸ್ಪರ್ಧೇ ನಡೆಸುತ್ತಿದ್ದವು.

ವಾಲ್‌ಮಾರ್ಟ್ ಅತೀ ಹೆಚ್ಚಿನ ಬೆಲೆಗೆ ಫ್ಲಿಪ್‌ಕಾರ್ಟ್‌ಅನ್ನು ಖರೀದಿಸಿದೆ ಎನ್ನುವ ವಿಚಾರವೂ ಅಧಿಕೃತವಾಗಿ ಘೋಷಣೆಯಾಗಿದ್ದು, ಕಳೆದ ರಾತ್ರಿ ಅಂತಿಮ ಸುತ್ತಿನ ಒಪ್ಪಂದ ನಡೆದಿದ್ದು, ಫ್ಲಿಪ್‌ಕಾರ್ಟ್‌ನ ಬಹುಪಾಲನ್ನು ಅಮೆರಿಕಾದ ವಾಲ್‌ಮಾರ್ಟ್ ಸಂಸ್ಥೆ ಖರೀದಿಸಿದೆ ಎಂದು ಸಾಫ್ಟ್ ಬ್ಯಾಂಕ್ ಸಿಇಒ ತಿಳಿಸಿದ್ದಾರೆ.

ದೊಡ್ಡ ಇ-ಕಾಮರ್ಸ್ ಸ್ವಾಧೀನ :
ಫ್ಲಿಪ್‌ಕಾರ್ಟ್‌ನ ಶೇ.77ರಷ್ಟು ಪಾಲನ್ನು ವಾಲ್‌ಮಾರ್ಟ್ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿದೆ. ಇದು ಜಗತ್ತಿನ ಅತಿ ದೊಡ್ಡ ಇ-ಕಾಮರ್ಸ್ ಸ್ವಾಧೀನ ಪ್ರಕ್ರಿಯೆಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

16 ಬಿಲಿಯನ್ ಡಾಲರ್:
ವಾಲ್‌ಮಾರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅಮೆಜಾನ್‌ಗೆ ಸೆಡ್ಡು ಹೊಡೆಯುವ ಸಲುವಾಗಿ 16 ಬಿಲಿಯನ್ ಅಮೆರಿಕನ್ ಡಾಲರ್ (ರೂ.10,79,12,00,00,000.00)ಅನ್ನು ನೀಡಿ ಖರೀದಿ ಮಾಡಿದೆ ಎನ್ನಲಾಗಿದೆ. ಇದು ವಿಶ್ವ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಮೊತ್ತದ ಖರೀದಿಯಾಗಿದೆ. ಫ್ಲಿಪ್‌ಕಾರ್ಟ್ ಮಾರುಕಟ್ಟೆ ಮೌಲ್ಯ 20 ಬಿಲಿಯ ಡಾಲರ್ ನಷ್ಟಿದೆ ಎನ್ನಲಾಗಿದೆ.

ಅಮೆಜಾನ್‌ಗೆ ಸೆಡ್ಡು:
ಈಗಾಗಲೇ ವಿಶ್ವ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ವೇಗವಾಗಿ ಬಳೆಯುತ್ತಿರುವ ಅಮೆಜಾನ್, ಭಾರತದಲ್ಲಿಯೂ ವೇಗದ ಪ್ರಗತಿಯನ್ನು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಅಮೆಜಾನ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್ ಖರೀದಿಸಿದೆ ಎನ್ನಲಾಗಿದೆ.

ಶೇ.77 ಪಾಲು:
16 ಬಿಲಿಯನ್ ಅಮೆರಿಕನ್ ಡಾಲರ್ ನೀಡಿ ಫ್ಲಿಪ್‌ಕಾರ್ಟ್ ಖರೀದಿಸಿರುವ ವಾಲ್‌ಮಾರ್ಟ್ ಶೇ.77ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಉಳಿದಂತೆ ಶೇ.23 ರಷ್ಟು ಪಾಲನ್ನು ಫ್ಲಿಪ್ ಕಾರ್ಟ್ ಸಹ ಸ್ಥಾಪಕ ಬಿನ್ನಿ ಬನ್ಸಾಲ್, ಚೀನದ ಟೆನ್ ಸೆಂಟ್ ಹೋಲ್ಡಿಂಗ್‌ಸ್ ಲಿಮಿಟೆಡ್, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಎಲ್‌ಎಲ್‌ಸಿ ಮತ್ತು ಮೈಕ್ರೋಸಾಫ್ಟ್ ಕಾರ್ಪೊರೇಶನ್ ಹೊಂದಿದೆ ಎನ್ನಲಾಗಿದೆ.


ಒಡೆತನವನ್ನು ಕಳೆದಕೊಂಡ ಸ್ಥಾಪಕರು:
ಭಾರತೀಯ ಮಾರುಕಟ್ಟೆಯಲ್ಲಿ 11 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಆರಂಭಿಸಿದ್ದ ಫ್ಲಿಪ್‌ಕಾರ್ಟ್ ದೇಶಿಯ ಮಾರುಕಟ್ಟೆಯಲ್ಲಿ ಅಮೆಜಾನ್‌ಗೆ ಸೆಡ್ಡು ಹೊಡೆಯಲು ಶಕ್ತವಾಗಿತ್ತು. ಈಗ ವಾಲ್‌ಮಾರ್ಟ್‌ಗೆ ತಮ್ಮ ಹೆಚ್ಚಿನ ಪಾಲನ್ನು ಮಾರಾಟ ಮಾಡುವ ಮೂಲಕ ತಾವೇ ಕಟ್ಟಿದ ಸಂಸ್ಥೆಯ ಒಡೆತನವನ್ನು ಕಳೆದುಕೊಂಡಿದ್ದಾರೆ.


Click it and Unblock the Notifications








