ನಿಮ್ಮ ಕಲ್ಪನೆಗೂ ಸಿಗದ ನೂತನ ತಂತ್ರಜ್ಞಾನ ಈ 'ಬಿಹೇವಿಯರಲ್ ಬಯೊಮೆಟ್ರಿಕ್ಸ್'!!
ಈ ತಂತ್ರಜ್ಞಾನ ಪ್ರಪಂಚದ ಆಳ ಅಗಲಗಳನ್ನು ಅರ್ಥಮಾಡಿಕೊಳ್ಳಲು ಇಡೀ ಜೀವನ ಕೂಡ ಸಾಕಾಗದು ಎಂದು ಅನಿಸಿಸುವುದು ಸಾಮಾನ್ಯ. ಏಕೆಂದರೆ, ಈ ಹೊತ್ತಿಗಾಗಲೇ ತಂತ್ರಜ್ಞಾನ ಆ ರೀತಿಯಲ್ಲಿ ಬೆಳೆದುಬಿಟ್ಟಿದೆ. ನಮಗೆ ತಿಳಿಯದಂತೆ ನಮ್ಮ ಊಹೆಗೂ ಸಿಗದಂತೆ ತಂತ್ರಜ್ಞಾನ ನಮ್ಮನ್ನಾವರಿಸಿದೆ. ಇದಕ್ಕೆ ಹೊಸ ಉದಾಹರಣೆ ಎಂದರೆ 'ಬಿಹೇವಿಯರಲ್ ಬಯೊಮೆಟ್ರಿಕ್ಸ್'!
ಹೌದು, ಇಂತಹದೊಂದು ಶಬ್ದ ನಿಮ್ಮ ಕಿವಿಗೆ ಬಿದ್ದಾಕ್ಷಣ 'ಬಯೊಮೆಟ್ರಿಕ್ಸ್' ಎಂಬ ಪದ ಮಾತ್ರ ನಿಮ್ಮ ಕಲ್ಪನೆಗೆ ಮೂಡುತ್ತದೆ. ಆದರೆ, 'ಬಿಹೇವಿಯರಲ್ ಬಯೊಮೆಟ್ರಿಕ್ಸ್' ಎಂಬ ತಂತ್ರಜ್ಞಾನ ನಿಮ್ಮ ಊಹೆಯನ್ನು ಸಹ ಮೀರಿದೆ. ಇದರ ಬಗ್ಗೆ ನೀವು ತಿಳಿದರೆ, ಈ ರೀತಿಯಾದ ಒಂದು ತಂತ್ರಜ್ಞಾನ ನಮ್ಮ ನಡುವೆ ಇದೆಯಾ ಎಂಬ ಅನುಮಾನ ಖಂಡಿತಾ ನಿಮ್ಮನ್ನು ಮೂಡುತ್ತದೆ.

ಹಾಗಾಗಿಯೇ, ಇಂದಿನ ನಮ್ಮ ಲೇಖನದಲ್ಲಿ 'ಬಿಹೇವಿಯರಲ್ ಬಯೊಮೆಟ್ರಿಕ್ಸ್' ವಿಷಯವನ್ನು ನಾವು ಆರಿಸಿಕೊಂಡಿದ್ದೇವೆ. ಸೈಬರ್ ಕಳ್ಳರಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ ಹುಟ್ಟಿರುವ ಈ ತಂತ್ರಜ್ಞಾನ ಸೈಬರ್ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸಲಿದೆ. ಹಾಗಾದರೆ, ಏನಿದು ಭವಿಷ್ಯದ 'ಬಿಹೇವಿಯರಲ್ ಬಯೊಮೆಟ್ರಿಕ್ಸ್' ತಂತ್ರಜ್ಞಾನ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಬಿಹೇವಿಯರಲ್ ಬಯೊಮೆಟ್ರಿಕ್ಸ್
ನೀವು ಎಲ್ಲೋ ಕುಳಿತು ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ನಿಮ್ಮ ದೈಹಿಕ ಚಲನವಲನಗಳನ್ನು ಗಮನಿಸಿ ನಿಮ್ಮನ್ನು ಗುರುತಿಸುವ ಹೊಸ ತಂತ್ರಜ್ಞಾನಕ್ಕೆ ಬಿಹೇವಿಯರಲ್ ಬಯೊಮೆಟ್ರಿಕ್ಸ್ ಎಂದು ಕರೆಯುತ್ತಾರೆ. ನಿಮ್ಮನ್ನು ನೇರವಾಗಿ ನೋಡದೇ, ನೀವೇ ಆ ವ್ಯಕ್ತಿ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವ ವ್ಯವಸ್ಥೆ ಇದಾಗಿದೆ.!

ಸೆನ್ಸರ್‌ಗಳು ಸೆರೆಹಿಡಿಯುತ್ತದೆ.!
ಬ್ಯಾಂಕುಗಳು ತಮ್ಮ ಗ್ರಾಹಕರು ವೆಬ್‌ಸೈಟ್ ಅಥವಾ ಆಪ್ ಬಳಸುವಾಗ ತೋರಿಸುವ ಅವರ ನಡವಳಿಕೆ ಮತ್ತು ದೈಹಿಕ ಭಂಗಿಗಳನ್ನು ದಾಖಲಿಸುತ್ತಿದ್ದಾರೆ. ನಿಮ್ಮ ಫೋನ್‌ಗಳಲ್ಲಿನ ಸೆನ್ಸರ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿನ ಕೋಡ್‌ಗಳ ಆಧಾರದ ಮೇಲೆ ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದು ಬಿಹೇವಿಯರಲ್ ಬಯೊಮೆಟ್ರಿಕ್ಸ್ ಸರಳ ವಿವರಣೆಯಾಗಿದೆ.

ಉದಾಹರಣೆ ಹೀಗಿದೆ!
ಉದಾಹರಣೆಗೆ, ಬ್ಯಾಂಕ್ ಗ್ರಾಹಕನೊಬ್ಬ ಆನ್‌ಲೈನ್‌ನಲ್ಲಿ ತನ್ನ ಖಾತೆ ಓಪನ್ ಮಾಡಿದರೆ, ಈ ಬಿಹೇವಿಯರಲ್ ಬಯೊಮೆಟ್ರಿಕ್ ತಂತ್ರಾಂಶವು ಆತನಸಂವಹನ ಹಾವಭಾವಗಳನ್ನು ದಾಖಲಿಸುತ್ತದೆ. ಗ್ರಾಹಕ ಫೋನ್ ಹಿಡಿದುಕೊಳ್ಳುವ ರೀತಿ, ಸ್ವೈಪ್ ಮಾಡಲು ಯಾವ ಬೆರಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎಂಬುದರ ಆಧಾರದ ಮೇಲೆ ಆತನನ್ನು ಗುರುತಿಸುತ್ತದೆ.

ಇದರಿಂದ ಏನು ಪ್ರಯೋಜನ?
ಬಿಲಿಯನ್‌ಗಟ್ಟಲೇ ಪಾಸ್‌ವರ್ಡ್‌ಗಳು ಮತ್ತು ಇತರೆ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸೈಬರ್ ಕಳ್ಳರಿಂದ ಗ್ರಾಹಕರನ್ನು ರಕ್ಷಿಸುವ ಅತ್ಯಂತ ಸುರಕ್ಷಿತ ತಂತ್ರಜ್ಞಾನ ಇದಾಗಿದೆ. ಗ್ರಾಹಕನು ಫೋನ್ ಹಿಡಿದುಕೊಳ್ಳುವ ರೀತಿ, ಸ್ವೈಪ್ ಮಾಡುವ ಚಲನವಲನಗಳನ್ನು ಗುರುತಿಸಿ ಸೈಬರ್ ಕ್ರಿಮಿನಲ್‌ಗಳನ್ನು ಹೆಕ್ಕಿ ತೆಗೆಯಬಹುದಾದ ತಂತ್ರಜ್ಞಾನ ಇದಾಗಿದೆ.

ದತ್ತಾಂಶ ಕಾಣುವುದಿಲ್ಲ
ನಿಮ್ಮ ದೈಹಿಕ ಚಲನವಲನಗಳನ್ನು ಗಮನಿಸುತ್ತಿರುವವರಿಗೆ ಅದರ ದತ್ತಾಂಶಗಳು ಕಾಣಿಸುವುದಿಲ್ಲ. ನಿಮ್ಮ ಫೋನ್‌ಗಳಲ್ಲಿನ ಸೆನ್ಸರ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿನ ಕೋಡ್‌ಗಳ ಆಧಾರದ ಮೇಲೆ ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಅಷ್ಟೆ. ಆದರೆ, ಇಲ್ಲಿರುವ ಮತ್ತೊಂದು ಸಮಸ್ಯೆ ಎಂದರೆ, ಈ ತಂತ್ರಜ್ಞಾನವೇ ಕ್ರಿಮಿನಲ್‌ಗಳ ಕೈಗೆ ಸಿಕ್ಕರೆ ಎಂಬ ಭೀತಿ ಕೂಡ ಇದೆ.!


Click it and Unblock the Notifications








