ನಿಮ್ಮ ಮಕ್ಕಳ ಮೊಬೈಲ್ ಮೋಹಕ್ಕೆ ಕಡಿವಾಣ ಹಾಕುವ ಆಪ್ ಇದು!
ಇಂದಿನ ಮಕ್ಕಳು ಶಾಲಾ ಪಠ್ಯಪುಸ್ತಕಗಳಿಗಿಂತಲೂ ಬಲು ಹೆಚ್ಚಾಗಿ ಈ ಮೊಬೈಲ್ ಎಂಬ ಮಾಯಾಂಗನೆಯನ್ನು ಹಚ್ಚಿಕೊಂಡುಬಿಟ್ಟಿವೆ. ಮಕ್ಕಳು ಇಂಟರ್ನೆಟ್ ಅನ್ನು ಒಳ್ಳೆಯ ವಿಷಯಗಳಿಗೆ ಬಳಕೆ ಮಾಡಿದರೆ ಅದು ಅವರ ಭವಿಷ್ಯದ ಬೆಳವಣಿಗೆಗೆ ಸಹಕಾರಿ. ಹಾಗೆಯೇ, ಅವರು ಅದನ್ನು ಕೆಟ್ಟದಕ್ಕೆ ಬಳಕೆ ಮಾಡಿದರೆ ಅವರ ಭವಿಷ್ಯಕ್ಕೆ ಮಾರಕ. ಇದು ಮಕ್ಕಳು ಬಳಕೆ ಮಾಡಬೇಕೆ ಅಥವಾ ಮಾಡಬಾರದೇ ಎಂಬ ಬಹುತೇಕ ಪೋಷಕರ ಯಕ್ಷ ಪ್ರಶ್ನೆಗೆ ಉತ್ತರ ಎಂದರೆ ತಪ್ಪಾಗಲಾರದು. ಈ ಪ್ರಶ್ನೆಗೆ ಖಂಡಿತವಾಗಿ ಸ್ಪಷ್ಟ ಉತ್ತರ ನಿಮಗೆ ದೊರೆಯುತ್ತದೆ.

ಏಕೆಂದರೆ, ಮಕ್ಕಳು ಅವರ ಮೊಬೈಲ್‌ನಲ್ಲಿ ಹೇಗೆಲ್ಲಾ ಇಂಟರ್ನೆಟ್ ಬಳಕೆ ಮಾಡುತ್ತಾರೆ ಎಂಬುದನ್ನು ನಿಮ್ಮ ಮೊಬೈಲ್‌ನಲ್ಲಿ ನೋಡಬಹುದಾಗಿದೆ. ನಿಮ್ಮ ಮಕ್ಕಳು ಹೇಗೆಲ್ಲಾ ಇಂಟರ್ನೆಟ್ ಬಳಕೆ ಮಾಡುತ್ತಾರೆ ಎಂಬುದನ್ನು ನೋಡುವುದಕ್ಕಾಗಿಯೇ ಆಪ್ ಒಂದು ಇದೆ. ಈ ಆಪ್ ಅನ್ನು ಸಹಾಯದಿಂದ ಮಕ್ಕಳ ಮೊಬೈಲ್ ಬಳಕೆ ಮೇಲೆ ನೀವೇ ನಿಗಾವಹಿಸಬಹುದಾಗಿದೆ. ಹಾಗಾದರೆ, ಯಾವುದು ಆ ಆಪ್?, ಆ ಆಪ್ ಕೆಲಸ ಮಾಡುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಫ್ಯಾಮಿಲಿ ಲಿಂಕ್ ಆಪ್! (familylink)
ಮಕ್ಕಳು ಅವರ ಮೊಬೈಲ್‌ನಲ್ಲಿ ಹೇಗೆಲ್ಲಾ ಇಂಟರ್ನೆಟ್ ಬಳಕೆ ಮಾಡುತ್ತಾರೆ ಎಂಬುದನ್ನು ಪೋಷಕರು ತಿಳಿಯುದಕ್ಕಾಗಿ 'ಫ್ಯಾಮಿಲಿ ಲಿಂಕ್' ಎನ್ನುವ ಆಪ್ ಅಭಿವೃದ್ದಿಯಾಗಿದೆ. ಈ ಆಪ್‌ನಲ್ಲಿ ಮಕ್ಕಳ ಮೇಲೆ ನಿಗಾವಹಿಸಲು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಆಪ್ ಇದ್ದರೆ, ನಿಮ್ಮ ಮೊಬೈಲ್‌ನಿಂದಲೇ ನಿಮ್ಮ ಮಕ್ಕಳ ಮೊಬೈಲ್ ಅನ್ನು ನಿಯಂತ್ರಿಸಬಹುದಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ ಆಪ್?
ಮಕ್ಕಳು ಮೊಬೈಲ್‌ನಲ್ಲಿ ಯಾವುದಾದರೂ ವಿಡಿಯೋ ನೋಡುತ್ತಿದ್ದರೆ ಅಥವಾ ಗೇಮ್‌ಗಳಲ್ಲಿಯೇ ಕಾಲ ಕಳೆಯುತ್ತಿದ್ದರೆ ನೀವೇ ಅವುಗಳನ್ನು ನಿಮ್ಮ ಮೊಬೈಲ್‌ನಿಂದಲೇ ಸ್ಥಗಿತ ಗೊಳಿಸಬಹುದಾಗಿದೆ. ಮಕ್ಕಳು ಮಲಗುವ ಮತ್ತು ಓದುವ ವೇಳೆಯಲ್ಲಿ ಅವರು ಫೋನ್ ಬಳಸುತ್ತಿದ್ದರೆ, ನಿಮ್ಮ ಮೊಬೈಲ್‌ನಿಂದ ಅವರ ಮೊಬೈಲ್ ಅನ್ನು ಸ್ವಿಚ್‌ಆಫ್ ಮಾಡಬಹುದು.

ಆಪ್ ಬಳಕೆ ಹೇಗೆ?
ಫ್ಯಾಮಿಲಿ ಲಿಂಕ್ ಆಪ್ ಅನ್ನು ತೆರೆದು ಮಕ್ಕಳಿಗಾಗಿ ಗೂಗಲ್ ಅಕೌಂಟ್ ರಚಿಸಿಕೊಳ್ಳಬೇಕು. ಅಂದರೆ, ಅವರ ಹೆಸರು ಮತ್ತು ಜನ್ಮದಿನಾಂಕ ದಾಖಲಿಸಿ ಖಾತೆ ತೆರೆಯಬೇಕು. ನಂತರ ಮಕ್ಕಳು ಆಂಡ್ರಾಯ್ಡ್ ಡಿವೈಸ್‌ನಲ್ಲಿ ಲಾಗಿನ್ ಆದ ಕೂಡಲೇ, ಅದರ ಮಾಹಿತಿ ಪೋಷಕರ ಇ-ಮೇಲ್‌ಗೆ ಬರುತ್ತದೆ. ಇದು ಅವರ ಮೊಬೈಲ್‌ನಲ್ಲಿ ನಿಮ್ಮ ಖಾತೆಯನ್ನು ಸಪೋರ್ಟ್ ಮಾಡಲಿದೆ.

ಸಂಪೂರ್ಣ ಮಾಹಿತಿ ಲಭಿಸುತ್ತದೆ.
ಆಪ್‌ಗೆ ಲಾಗಿನ್ ಆದ ನಂತರ ನಿಮ್ಮ ಮಗುವಿನ ಪ್ರೊಪೈಲ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮಕ್ಕಳು ಇಂಟರ್‌ನೆಟ್‌ನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ. ಯಾವ ಚಿತ್ರ, ವಿಡಿಯೊ ಡೌನ್‌ಲೋಡ್ ಮಾಡುತ್ತಿದ್ದಾರೆ ಮತ್ತು ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬುದನ್ನು ಸಹ ನೋಡಬಹುದು.

ಕನಿಷ್ಠ 13 ವರ್ಷ ಆಗಿರಬೇಕು.
ನೀವು ಫ್ಯಾಮಿಲಿ ಲಿಂಕ್‌ಗೆ ನಿಮ್ಮ ಮಕ್ಕಳನ್ನು ಸೇರ್ಪಡೆ ಮಾಡಬೇಕಾದರೆ ಮಕ್ಕಳಿಗೆ ಕನಿಷ್ಠ 13 ವರ್ಷ ಆಗಿರಬೇಕು ಎಂಬ ನಿಯಮವಿದೆ. ಮಕ್ಕಳ ಆನ್‌ಲೈನ್ ಖಾಸಗೀತನ ರಕ್ಷಣೆ ಕಾಯ್ದೆ ಅನುಸಾರ 13 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಅಥವಾ ದತ್ತಾಂಶವನ್ನು ಒಪ್ಪಿಗೆ ಇಲ್ಲದೆಯೇ ಸಂಗ್ರಹಿಸುವಂತಿಲ್ಲ. ಇದು ಕಾನೂನಿಗೆ ವಿರುದ್ದವಾದುದು.

ಡೌನ್‌ಲೋಡ್ ಮಾಡುವುದು ಹೇಗೆ?
ಈ ಆಪ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಳ್ಳುವುದು ಸ್ವಲ್ಪ ಕಿರಿಕಿರಿ ಕೆಲಸ ಎನ್ನಬಹುದು. https://families.google.com/familylink ಲಿಂಕ್‌ನಿಂದ ಗೂಗಲ್ ವೆಬ್‌ಪೇಜ್‌ನಿಂದ ಇದಕ್ಕೆ ಸಂಬಂಧಿಸಿದ ಇ-ಮೇಲ್ ಲಿಂಕ್ ಬಳಕೆದಾರನಿಗೆ ಬರಬೇಕು. ನಂತರವೇ ಈ ಆಪ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications








