WhatsApp: ಒಂದು ತಿಂಗಳ ಅವಧಿಯಲ್ಲಿ 71 ಲಕ್ಷ ವಾಟ್ಸಾಪ್ ಅಕೌಂಟ್ ಬ್ಯಾನ್: ಕಾರಣ ಇಲ್ಲಿದೆ?
ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಶಾಕಿಂಗ್ ನ್ಯೂಸ್ ನೀಡಿದೆ. ಭಾರತದ ಹೊಸ ಐಟಿ ನಿಯಮದ ಅನ್ವಯ ಪ್ರತಿ ತಿಂಗಳು ಅನುಸರಣಾ ವರದಿ ಬಿಡುಗಡೆ ಮಾಡಬೇಕಿದೆ. ಅದರಂತೆ ಇದೀಗ ನವೆಂಬರ್ 2023ರ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಬೆಚ್ಚಿ ಬೀಳಿಸುವ ಸಂಗತಿಗಳಿದ್ದು, ಭಾರತದಲ್ಲಿ 71 ಲಕ್ಷ ಖಾತೆಗಳನ್ನು ನಿಷೇಧಿಸಿರುವುದಾಗಿ ಹೇಳಿದೆ.
ಹೌದು, ವಾಟ್ಸಾಪ್ ನವೆಂಬರ್ 2023ರ ಮಾಸಿಕ ವರದಿಯನ್ನು ಪ್ರಕಟಿಸಿದೆ. ಎಂದಿನಂತೆ ಐಟಿ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ವಾಟ್ಸಾಪ್ ನಿಯಮಗಳಿಗೆ ವಿರುದ್ಧವಾಗಿರುವ ಖಾತೆಗಳನ್ನು ಬ್ಯಾನ್ ಮಾಡಿದೆ. ಇದರಲ್ಲಿ ವಂಚನೆ ಮಾಡುವ ಉದ್ದೇಶಕ್ಕಾಗಿ ರಚನೆಯಾಘಿರುವ ವಾಟ್ಸಾಪ್ ಅಕೌಂಟ್‌ಗಳು, ಬಳಕೆದಾರರ ರಿಪೋರ್ಟ್ ಮಾಡಿರುವ ಅಕೌಂಟ್‌ಗಳು ಸೇರಿವೆ. ಹಾಗಾದ್ರೆ ವಾಟ್ಸಾಪ್ ಬಿಡುಗಡೆ ಮಾಡಿರುವ ನವೆಂಬರ್ 2023ರ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೊಸ ಐಟಿ ನಿಯಮಗಳು 2021ರ ಅನ್ವಯ ಭಾರತದಲ್ಲಿ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣಾ ವರದಿಯನ್ನು ನೀಡುವುದು ಕಡ್ಡಾಯವಾಗಿದೆ. ಬಳಕೆದಾರರ ಕುಂದುಕೊರತೆಗಳನ್ನು ಬಗೆಹರಿಸುವುದಕ್ಕೆ ತಾವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಬೇಕಿದೆ. ಅದರಂತೆ ಪ್ರತಿ ತಿಂಗಳ ವರದಿ ನೀಡುತ್ತಾ ಬಂದಿರುವ ವಾಟ್ಸಾಪ್ ಇದೀಗ ನವೆಂಬರ್ 2023 ರಲ್ಲಿ ಭಾರತದಲ್ಲಿ 71 ಲಕ್ಷ ಖಾತೆಗಳನ್ನು ನಿಷೇಧಿಸಿರುವುದಾಗಿ ಹೇಳಿದೆ.
ನವೆಂಬರ್ 2023ರಲ್ಲಿ ಭಾರತದಲ್ಲಿ 71 ಲಕ್ಷಕ್ಕೂ ಹೆಚ್ಚು ಸಂಶಯಾಸ್ಪದ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿದೆ. ಇದು ನವೆಂಬರ್ 1 ರಿಂದ ನವೆಂಬರ್ 30 ರ ಅವಧಿಯಲ್ಲಿ ನಡೆದಿದೆ. ಇನ್ನು ಈ ಅವಧಿಯಲ್ಲಿ ವಾಟ್ಸಾಪ್ ಬಳಕೆದಾರರಿಂದ ಸ್ವೀಕರಿಸಿದ ವರದಿಗಳ ಮೇಲೆ ಕೂಡ ಕ್ರಮ ಕೈಗೊಂಡಿದೆ. ಯಾವುದೇ ವರದಿಗಳನ್ನು ಸ್ವೀಕರಿಸುವ ಮೊದಲು 19,54,000 ಖಾತೆಗಳನ್ನು ಬ್ಯಾನ್ ಮಾಡಿದೆ. ಬಳಕೆದಾರರಿಂದ 8,841 ದೂರು ವರದಿಗಳನ್ನು ನಿರ್ವಹಿಸಿದೆ ಎಂದು ವರದಿ ತಿಳಿಸಿದೆ.

ನಿಮಗೆಲ್ಲಾ ತಿಳಿದಿರುವಂತೆ ಕೇಂದ್ರ ಸರ್ಕಾರವು ಕುಂದುಕೊರತೆ ಮೇಲ್ಮನವಿ ಸಮಿತಿ (GAC) ಅನ್ನು ಪರಿಚಯಿಸಿದೆ. ಇದು ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಷಯ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎತ್ತಿರುವ ಕಳವಳಗಳನ್ನು ಪರಿಹರಿಸಲಿದೆ. ಈ ಪ್ಯಾನಲ್ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮಾಡಿದ ನಿರ್ಧಾರಗಳನ್ನು ವಿರೋಧಿಸುವ ಬಳಕೆದಾರರ ಮನವಿಗಳನ್ನು ನಿರ್ವಹಿಸುತ್ತದೆ.
ಇನ್ನು ವಾಟ್ಸಾಪ್ ಶೀಘ್ರದಲ್ಲೇ ತನ್ನ ಚಾಟ್ ಬ್ಯಾಕ್‌ಅಪ್ ವಿಧಾನದಲ್ಲಿ ಬದಲಾವಣೆ ತರಲಿದೆ. ಇಷ್ಟು ದಿನ ಉಚಿತವಾಗಿ ಗೂಗಲ್ ಡ್ರೈವ್‌ನಲ್ಲಿ ಚಾಟ್ ಬ್ಯಾಕಪ್ ಮಾಡುತ್ತಿದ್ದ ಬಳಕೆದಾರರು ಇನ್ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ಗೂಗಲ್ ಡ್ರೈವ್ ನೀಡುವ ಉಚಿತ 15GB ಕೋಟಾದ ನಂತರದ ಸ್ಟೋರೇಜ್ ಶುಲ್ಕವಿಧಿಸಲಾಗುತ್ತದೆ. ಹೆಚ್ಚುವರಿ ಚಾಟ್ ಬ್ಯಾಕ್‌ಅಪ್ ಮಾಡಲು ಬಯಸಿದರೆ Google One ಜೊತೆಗೆ WhatsApp ಮೂಲಕ ಹೆಚ್ಚುವರಿ ಸ್ಟೋರೇಜ್ ಮಾಡುವುದಕ್ಕೆ ಮುಂದಾಗಬೇಕಾಗುತ್ತದೆ.

ಇದಲ್ಲದೆ ವಾಟ್ಸಾಪ್ ತೀರಾ ಇತ್ತೀಚಿಗೆ ಹೊಸದಾಗಿ ಬಳಕೆದಾರರಿಗೆ ಚಾಟ್‌ಗಳನ್ನು ಪಿನ್ ಮಾಡಲು ಅವಕಾಶ ನೀಡಿದೆ. ಅದರಂತೆ ಇನ್ಮುಂದೆ ವಾಟ್ಸಾಪ್ ಬಳಕೆದಾರರು ಎಮೋಜಿಗಳು, ಸ್ಥಳಗಳು ಮತ್ತು ಚಿತ್ರಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಸಂದೇಶಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ. ಆದರೆ ಒಂದು ಸಮಯದಲ್ಲಿ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಲು ಅನುಮತಿಸುತ್ತದೆ.
ವಾಟ್ಸಾಪ್ ಪರಿಚಯಿಸಿರುವ ಹೊಸ ಪಿನ್ ಆಯ್ಕೆಯು ಟೆಲಿಗ್ರಾಮ್‌ಗಿಂತ ಭಿನ್ನವಾಗಿದೆ. ಏಕೆಂದರೆ ಟೆಲಿಗ್ರಾಮ್‌ನಲ್ಲಿರುವ ಪಿನ್ ಆಯ್ಕೆಯು ಬಹು ಸಂದೇಶಗಳನ್ನು ಪಿನ್ ಮಾಡಲು ಅವಕಾಶ ನೀಡಿದರೆ ವಾಟ್ಸಾಪ್ ಏಕಕಾಲದಲ್ಲಿ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಲು ಅವಕಾಶ ನೀಡಲಿದೆ. ಇನ್ನು ಆಂಡ್ರಾಯ್ಡ್‌ನಲ್ಲಿ ಚಾಟ್ ಅನ್ನು ಪಿನ್ ಮಾಡಲು, ಸಂದೇಶವನ್ನು ಲಾಂಗ್ ಪ್ರೆಸ್ ಮಾಡಬೇಕಾಗುತ್ತದೆ. ನಂತರ ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ಕಾಣಿಸುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ 'ಪಿನ್' ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.


Click it and Unblock the Notifications








