ವಾಟ್ಸಾಪ್‌ನಿಂದ ಬಿಗ್ ಶಾಕ್!..29 ಲಕ್ಷಕ್ಕೂ ಹೆಚ್ಚು ಭಾರತೀಯ ಅಕೌಂಟ್ ಬ್ಯಾನ್!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶ್ ವಾಟ್ಸಾಪ್ 2023 ಜನವರಿ ತಿಂಗಳ ಬಳಕೆದಾರರ ಸುರಕ್ಷತೆಯ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಸಾಕಷ್ಟು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದು, 29 ಲಕ್ಷಕ್ಕೂ ಅಧಿಕ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ವಾಟ್ಸಾಪ್ ಹೇಳಿಕೊಂಡಿದೆ.
ಹೌದು, ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ವಾಟ್ಸಾಪ್ ಮುಂದುವರೆಸಿದೆ. ಇದರ ಪರಿಣಾಮ ಭಾರತದಲ್ಲಿ ಜನವರಿ ತಿಂಗಳಿನಲ್ಲಿ 29 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳು ಬ್ಯಾನ್ ಆಗಿವೆ. ಹಾಗಾದ್ರೆ ವಾಟ್ಸಾಪ್‌ನ ಜನವರಿ ತಿಂಗಳ ವರದಿಯಲ್ಲಿ ಏನೆಲ್ಲಾ ಕ್ರಮಗಳನ್ನು ತೆಗದುಕೊಳ್ಳಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಜನವರಿಯಲ್ಲಿ 29 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ಬ್ಯಾನ್ ಮಾಡಿದೆ. ಈ ಮೂಲಕ ಹೊಸ ವರ್ಷದ ಸಮಯದಲ್ಲಿ ಭಾರತೀಯರಿಗೆ ಬಿಗ್ ಶಾಕ್ ನೀಡಿರೋದು ಬಹಿರಂಗವಾಗಿದೆ. ಹಾಗಂತ ಈ ಅಕೌಂಟ್‌ಗಳನ್ನು ಸುಖಾಸುಮ್ಮನೇ ಬ್ಯಾನ್ ಮಾಡಲಾಗಿಲ್ಲ. ಬದಲಿಗೆ ಬಳಕೆದಾರು ಮಾಡಿದ ರಿಪೋರ್ಟ್ ಹಾಗೂ ಹೊಸ ಐಟಿ ನಿಯಮಗಳ ಅನ್ವಯ ವಾಟ್ಸಾಪ್ ಈ ಕ್ರಮ ಕೈಗೊಂಡಿದೆ. ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಬಳಕೆದಾರರ ಸುರಕ್ಷತೆಗಾಗಿ ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ವರದಿ ನೀಡುವುದು ಕಡ್ಡಾಯವಾಗಿದೆ.
ಇನ್ನು ಭಾರತ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ನಿಯಮ 4(1)(ಡಿ) ಅಡಿಯಲ್ಲಿ ವಾಟ್ಸಾಪ್ ಈ ಅಕೌಂಟ್ ಬ್ಯಾನ್ ಮಾಡಿದೆ. ಜನವರಿ 1 ರಿಂದ ಜನವರಿ 31, 2023 ರ ನಡುವೆ ಈ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರಿಂದ ಕುಂದುಕೊರತೆಗಳನ್ನು ಸ್ವೀಕರಿಸಿದ ನಂತರ ಈ ಖಾತೆಗಳಿಗೆ ಬ್ಯಾನ್ ಬಿಸಿ ಮುಟ್ಟಿಸಲಾಗಿದೆ. ಭಾರತದ ಕಾನೂನುಗಳನ್ನು ಅಥವಾ ವಾಟ್ಸಾಪ್ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣಕ್ಕಾಗಿ ಈ ರೀತಿಯ ಕ್ರಮ ಕೈಗೊಂಡಿರುವುದಾಗಿ ವಾಟ್ಸಾಪ್ ಹೇಳಿದೆ.

ಇನ್ನು ವಾಟ್ಸಾಪ್ ಜನವರಿಯಲ್ಲಿ ಬ್ಯಾನ್ ಮಾಡಿರುವ 2,918,000 ಬ್ಯಾನ್ ಅಕೌಂಟ್‌ಗಳಲ್ಲಿ ಯಾವುದೇ ರಿಪೋರ್ಟ್‌ಗಳನ್ನು ಸ್ವೀಕರಿಸುವ ಮೊದಲು ಸುಮಾರು 1,038,000 ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ವರದಿಯಾಗಿದೆ. ಅಲ್ಲದೆ ಈ ಸಮಯದಲ್ಲಿ ವಾಟ್ಸಾಪ್ 1461 ದೂರು ವರದಿಗಳನ್ನು ಸ್ವೀಕರಿಸಿದೆ, ಇದರಲ್ಲಿ 1337 ಬ್ಯಾನ್ ಮೇಲ್ಮನವಿಗಳನ್ನು ಮಾಡಲಾಗಿದೆ. ಆದರೆ ಈ ದೂರುಗಳಲ್ಲಿ ಕೇವಲ 191 ಅಕೌಂಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ 7 ಸುರಕ್ಷತೆ ಸಂಬಂಧಿತ ರಿಪೋರ್ಟ್‌ಗಳನ್ನು ಕೂಡ ಸ್ವೀಕರಿಸಿದೆ ಆದರೆ ಅವುಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ವಾಟ್ಸಾಪ್ ಪ್ರತಿ ತಿಂಗಳು ನೀಡುವ ತನ್ನ ಮಾಸಿಕ ವರದಿಯಲ್ಲಿ ಲಕ್ಷಗಟ್ಟಲೇ ಭಾರತೀಯ ಖಾತೆಗಳನ್ನು ಬ್ಯಾನ್ ಮಾಡುತ್ತಲೇ ಬಂದಿದೆ. ದುರುಪಯೋಗವನ್ನು ತಡೆಗಟ್ಟುವ ಹಾಗೂ ಎಂಡ್ ಟು ಎಂಡ್ ಎನ್‌ಕ್ರಿಪ್ಯನ್ ಮೆಸೇಜಿಂಗ್ ಸೇವೆ ನೀಡುವ ಭಾಗವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ವಾಟ್ಸಾಪ್ ಹೇಳಿದೆ. ನಾವು ಬಳಕೆದಾರರ ಪ್ರತಿಕ್ರಿಯೆಗೆ ಹೆಚ್ಚು ಗಮನ ನೀಡುತ್ತೇವೆ ಮತ್ತು ತಪ್ಪು ಮಾಹಿತಿಯನ್ನು ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.

ಇನ್ನು ವಾಟ್ಸಾಪ್ ಶೀಘ್ರದಲ್ಲೇ ಎಡಿಟ್ ಸೆಂಡ್ ಮೆಸೇಜ್ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್ ಮಾಡಿರುವ ಮೆಸೇಜ್ ಅನ್ನು ಎಡಿಟ್ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಕಳುಹಿಸಿದ ಸಮದೇಶದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಎಡಿಟ್ ಮಾಡುವುದಕ್ಕೆ ಸಾದ್ಯವಾಗಲಿದೆ. ಆದರಿಂದ ನಿಮಗೆ ಆಗಬಹುದಾದ ಮುಜುಗರವನ್ನು ತಪ್ಪಿಸುವುದಕ್ಕೆ ಅವಕಾಶ ನೀಡಲಿದೆ.


Click it and Unblock the Notifications








