ಇನ್ಮುಂದೆ ವಾಟ್ಸ್‌ಆಪ್‌ನಲ್ಲಿ ಬೇಕಾಬಿಟ್ಟಿ ಮೆಸೇಜ್ ಫಾರ್‌ವರ್ಡ್ ಮಾಡಂಗಿಲ್ಲ..!
ಸಾಮಾಜಿಕ ಮಾಧ್ಯಮಗಳಿಂದ ದೇಶದಲ್ಲಿ ದಿನಕ್ಕೊಂದು ಸಮಸ್ಯೆ ಸೃಷ್ಟಿಯಾಗುತ್ತಿರುವುದರಿಂದ ಸುಪ್ರೀ ಕೋರ್ಟ್ ವಾಟ್ಸ್‌ಆಪ್‌ಗೆ ಕೆಲದಿನಗಳಿಂದ ಸೂಚನೆಗಳನ್ನು ನೀಡುತ್ತಲೆ ಬಂದಿದೆ. ಹಾಗೆಯೇ ಗುರುವಾರವೂ ಕೂಡ ಕೇಂದ್ರ ಸರ್ಕಾರ ವಾಟ್ಸ್‌ಆಪ್ ಫಾರ್‌ವರ್ಡ್ ವಿಡಿಯೋ ಹಾಗೂ ಮೆಸೇಜ್‌ಗಳಿಂದ ದೇಶದಲ್ಲಿ ಅಭದ್ರತೆ ಸೃಷ್ಟಿಯಾಗುತ್ತಿದೆ ಇದನ್ನು ಪರಿಹರಿಸುವಂತೆ ವಾಟ್ಸ್‌ಆಪ್‌ಗೆ ಮತ್ತೊಂದು ಸೂಚನೆ ನೀಡಿ ನೋಟಿಸ್ ಜಾರಿ ಮಾಡಿತ್ತು.

ಆದ್ದರಿಂದ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಅನೇಕ ಮಹತ್ವದ ಬದಲಾವಣೆಗಳನ್ನು ಕೈಗೊಂಡಿದ್ದು, ಇನ್ಮುಂದೆ ಬೇಕಾ ಬಿಟ್ಟಿ ಮೆಸೇಜ್‌ಗಳನ್ನು ಫಾರ್‌ವರ್ಡ್ ಮಾಡುವುದನ್ನು ನಿರ್ಬಂಧಿಸಲು ಮುಂದಾಗಿದೆ. ಇದಕ್ಕೂ ಮುಂಚೆ ಫಾರ್‌ವರ್ಡ್ ಲೇಬಲ್ ಫೀಚರ್ ತಂದಿದ್ದ ವಾಟ್ಸ್‌ಆಪ್ ಈಗ ಫಾರ್‌ವರ್ಡ್ ಮೆಸೇಜ್‌ಗಳಿಗೂ ನಿರ್ಬಂಧ ವಿಧಿಸುವ ಯೋಚನೆ ಮಾಡಿದೆ. ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಾಟ್ಸ್‌ಆಪ್ ಈ ನಿರ್ಧಾರವನ್ನು ತಿಳಿಸಿದೆ.

ಫಾರ್‌ವರ್ಡ್‌ಗೆ ಮಿತಿ
ಸುಪ್ರೀಂ ಕೋರ್ಟ್ ಸೂಚನೆಯನ್ವಯ ವಾಟ್ಸ್‌ಆಪ್ ತನ್ನ ಫೀಚರ್‌ಗಳಲ್ಲಿ ಬದಲಾವಣೆಯನ್ನು ತಂದಿದ್ದು, ಒಂದು ಬಾರಿಗೆ ಕೇವಲ 5 ಜನಕ್ಕೆ ಮಾತ್ರ ಫಾರ್‌ವರ್ಡ್ ಮಾಡುವ ಅವಕಾಶ ನೀಡಿದೆ. ಇದಕ್ಕೂ ಮುಂಚೆ ಯಾವುದೇ ಮಿತಿಯನ್ನು ಫಾರ್‌ವರ್ಡ್ ಮೆಸೇಜ್‌ಗಳ ಮೇಲೆ ವಾಟ್ಸ್‌ಆಪ್ ವಿಧಿಸಿದ್ದಿಲ್ಲ.

ತಕ್ಷಣ ಫಾರ್‌ವರ್ಡ್ ಬಟನ್ ಇರುವುದಿಲ್ಲ
ಫಾರ್‌ವರ್ಡ್ ಮೆಸೇಜ್‌ಗಳಿಗೆ ಮಿತಿ ವಿಧಿಸಿರುವ ವಾಟ್ಸ್‌ಆಪ್ ಇನ್ನು ಪರಿಣಾಮಕಾರಿಯಾಗಲು ಕ್ವಿಕ್ ಫಾರ್‌ವರ್ಡ್ ಬಟನ್‌ನ್ನು ಫೀಚರ್‌ನಿಂದ ತೆಗೆದುಹಾಕುತ್ತಿದೆ. ಇದು ಮೀಡಿಯಾ ಮೆಸೇಜ್‌ಗಳನ್ನು ತಕ್ಷಣ ಫಾರ್‌ವರ್ಡ್ ಮಾಡುವ ಅವಕಾಶವನ್ನು ನೀಡಿತ್ತು.

ಫಾರ್‌ವರ್ಡ್ ಲೇಬಲ್
ವಾರದ ಹಿಂದೆ ವಾಟ್ಸ್‌ಆಪ್ ಹೊಸ ಫೀಚರ್ ಫಾರ್‌ವರ್ಡ್ ಲೇಬಲ್‌ನ್ನು ಭಾರತದಲ್ಲಿ ಪರಿಚಯಿಸಿತ್ತು. ಇದರಿಂದ ಯಾರೇ ಮೆಸೇಜ್ ಫಾರ್‌ವರ್ಡ್ ಮಾಡಿದರು ನಿಮಗೆ ಫಾರ್‌ವರ್ಡ್ ಲೇಬಲ್ ಮೆಸೇಜ್ ಮೇಲೆ ಕಾಣುತ್ತಿತ್ತು. ಇದರಿಂದ ಫಾರ್‌ವರ್ಡ್ ಮೆಸೇಜ್‌ಗಳ ಹಾವಳಿ ಸ್ವಲ್ಪ ಕಡಿಮೆಯಾಗಿತ್ತು. ಈ ಫೀಚರ್‌ನಿಂದ ಜನ ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ತಿಳಿದುಕೊಳ್ಳುವ ಸಾಧ್ಯತೆಯನ್ನು ವಾಟ್ಸ್‌ಆಪ್ ನೀಡಿತ್ತು.

ಅತಿ ಹೆಚ್ಚು ಫಾರ್‌ವರ್ಡ್ ಮಾಡುವ ದೇಶ ಭಾರತ
ವಾಟ್ಸ್‌ಆಪ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಇನ್ನೊಂದು ಅಂಶ ಬಯಲಾಗಿದ್ದು, ಇಡೀ ವಿಶದ್ವದಲ್ಲಿಯೇ ಅತಿ ಹೆಚ್ಚು ಜನ ಪೋಟೋ, ವಿಡಿಯೋ ಮತ್ತು ಮೆಸೇಜ್‌ಗಳನ್ನು ಫಾರ್‌ವರ್ಡ್ ಮಾಡುವುದು ಭಾರತದಲ್ಲಿಯೇ ಎಂದಿದೆ.

ಸರ್ಕಾರದಿಂದ ಒತ್ತಡ
ಗುರುವಾರ ಭಾರತ ಸರ್ಕಾರ ವಾಟ್ಸ್‌ಆಪ್‌ಗೆ ಎರಡನೇ ಪತ್ರ ಬರೆದಿತ್ತು. ದೇಶದಲ್ಲಿ ಹಠಾತ್ ಘಟನೆಗಳನ್ನು ಪ್ರಚೋದಿಸುವ ವದಂತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಣೆಗಾರಿಕೆ ಮತ್ತು ಕಾನೂನನ್ನು ಜಾರಿಗೊಳಿಸಲು ಅನುಕೂಲವಾಗುವಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿತ್ತು. ಈ ಪತ್ರಕ್ಕೆ ಮಣಿದಿರುವ ವಾಟ್ಸ್‌ಆಪ್ ಫಾರ್‌ವರ್ಡ್‌ಗೆ ಮಿತಿ ಹೇರುವ ನಿರ್ಧಾರಕ್ಕೆ ಬಂದಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದಿಂದ ಎಚ್ಚರಿಕೆ
ಜುಲೈ ತಿಂಗಳ ಮೊದಲ ವಾರದಲ್ಲಿಯೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ವಾಟ್ಸ್‌ಆಪ್‌ಗೆ ಗಾಳಿ ಸುದ್ದಿಗಳ ಬೇಜವಾಬ್ದಾರಿ ಹಾಗೂ ಪ್ರಚೋದನಕಾರಿ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಉತ್ತರ ನೀಡಿದ ವಾಟ್ಸ್‌ಆಪ್ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿ, ಸತ್ಯಾಸತ್ಯತೆಯ ಅರಿವನ್ನು ಜನರಿಗೆ ಮೂಡಿಸುವ ಫೀಚರ್ ಪರಿಚಯಿಸುತ್ತೇವೆ ಎಂದಿತ್ತು.

ಕಾನೂನು ಕ್ರಮದ ಸೂಚನೆ ನೀಡಿದ ವಾಟ್ಸ್‌ಆಪ್
ಪ್ರಚೋದನೆ ಹಾಗೂ ಗಾಳಿಸುದ್ದಿಗಳ ಸಂದೇಶಗಳನ್ನು ಪತ್ತೆ ಹಚ್ಚಬೇಕಾದ ಫೀಚರ್ ತರುವ ಅವಶ್ಯಕತಯಿದ್ದು, ಇದನ್ನು ಕಾನೂನು ಜಾರಿ ಮಾಡುವ ಸಂಸ್ಥೆಗಳು ಕೋರಿದ್ದೇವೆ. ವದಂತಿಗಳನ್ನು ಹಾಗೂ ನಕಲಿ ಸುದ್ದಿಗಳ ಪ್ರಸರಣಕ್ಕೆ ಬಳಸುವ ಮಾಧ್ಯಮವು ತನ್ನ ಹೊಣೆಗಾರಿಕೆ ಹಾಗೂ ಜವಾಬ್ದಾರಿಯನ್ನು ತಪ್ಪಲು ಸಾಧ್ಯವಿಲ್ಲ. ಇಂತಹ ಸುದ್ದಿಗಳನ್ನು ಹರಡುವವರು ನಂತರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪರೋಕ್ಷ ಸೂಚನೆಯನ್ನು ವಾಟ್ಸ್‌ಆಪ್ ನೀಡಿದೆ.

ಕನಿಷ್ಠ 31 ಜನರ ಸಾವಿಗೆ ಕಾರಣವಾದ ವಾಟ್ಸ್‌ಆಪ್
ವಾಟ್ಸ್‌ಆಪ್ ಮೂಲಕ ಹರಡಿದ ವದಂತಿಗಳಿಂದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿ 10 ರಾಜ್ಯಗಳಲ್ಲಿ ಕಳೆದ ಒಂದು ವರ್ಷದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಮಕ್ಕಳ ಕಳ್ಳರ ವದಂತಿಯಿಂದ ಬೀದರ್‌ನಲ್ಲಿ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮೊಹಮ್ಮದ್ ಅಜಮ್‌ನನ್ನು ಕೊಲ್ಲಲಾಯಿತು. ದೇಶದಲ್ಲಿ ವಾಟ್ಸ್‌ಆಪ್‌ನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ವಿಷಾದಿಸುತ್ತೇವೆ ಎಂದು ವಾಟ್ಸ್‌ಆಪ್ ಹೇಳಿದೆ.

ಪರೀಕ್ಷಾರ್ಥ ಪ್ರಯೋಗ
ವಾಟ್ಸ್‌ಆಪ್ ಹೊಸ ಫೀಚರ್‌ಗಳು ಭಾರತದ ಎಲ್ಲಾ ಬಳಕೆದಾರರಿಗೆ ಲಭ್ಯವಿದ್ದು, ಪರೀಕ್ಷಾರ್ಥ ಪ್ರಯೋಗವನ್ನು ವಾಟ್ಸ್‌ಆಪ್ ಆರಂಭಿಸಿದೆ ಇದರಿಂದ ದೇಶದಲ್ಲಿ ಹೆಚ್ಚುತ್ತಿರುವ ವದಂತಿಗಳನ್ನು ತಡೆಯಲು ಸಹಾಯವಾಗುತ್ತದೆ ಎಂದು ವಾಟ್ಸ್‌ಆಪ್ ನಂಬಿದೆ. ತನ್ನ ಹೇಳಿಕೆಯಲ್ಲಿ ಗ್ರಾಹಕರ ಭದ್ರತೆಯೇ ನಮಗೆ ಮುಖ್ಯ, ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮುಂದುವರೆಯುತ್ತದೆ ಹಾಗೂ ಗ್ರಾಹಕರ ಸುರಕ್ಷತೆಗೆ ಬೇಕಾದ ಇಂತಹ ಫೀಚರ್‌ಗಳನ್ನು ಜಾರಿಗೆ ತರಲು ವಾಟ್ಸ್‌ಆಪ್ ಯಾವಾಗಲೂ ಬದ್ಧ ಎಂದು ಹೇಳಿದೆ.


Click it and Unblock the Notifications



