ವಾಟ್ಸ್‌ಆಪ್‌ನಲ್ಲಿ ಬಂತು ಅಪ್‌ಡೇಟ್..! 5 ಜನಕ್ಕೆ ಮಾತ್ರ ಮೆಸೇಜ್ ಫಾರ್ವರ್ಡ್..!
ವಾಟ್ಸ್ ಆಪ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು ಭಾರತದಲ್ಲಿ ಬಹಳ ಮುಖ್ಯವಾಗಿದೆ. ಈಗಾಗಲೇ ಇಂತಹ ಸುದ್ದಿಗಳು ದೇಶದ ಕೆಲವು ಪ್ರದೇಶಗಳಿಗೆ ಸಮಸ್ಯೆಗಳಿಗೆ ಕಾರಣವಾಗಿದೆ. ಇಂತಹ ಘಟನೆಗಳು ಜರುಗಿದ ಮಾಹಿತಿ ತಿಳಿಯುತ್ತಿದ್ದಂತೆ ಸರ್ಕಾರವು ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಬಳಿ ಇಂತಹ ಸುಳ್ಳು ಸುದ್ದಿಗಳು ಹರಿದಾಡದಂತೆ ಕಡಿವಾಣ ಹಾಕಲು ಹೇಳಿತ್ತು ಮತ್ತು ಇದರಿಂದ ಯಾವ ವ್ಯಕ್ತಿಯೂ ಪ್ರಚೋದನೆಗೆ ಒಳಪಡದಂತೆ ನೋಡಿಕೊಳ್ಳಬೇಕು ಎಂದು ಕೋರಿತ್ತು.

ವಾಟ್ಸ್ ಆಪ್ ಕೂಡ ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದು ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದಕ್ಕೆ ಮುಂದಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ ಆಗಿದೆ. ಸದ್ಯ ವಾಟ್ಸ್ ಆಪ್ ಒಂದು ಮೆಸೇಜ್ ನ್ನು 20 ಜನರಿಗೆ ಕಳಿಸಲು ಅವಕಾಶ ಕಲ್ಪಿಸಿದ್ದನ್ನು ಈಗ ತಗ್ಗಿಸಿದ್ದು ಈಗ ಕೇವಲ 5 ಮಂದಿಗೆ ಮಾತ್ರ ಒಮ್ಮೆಲೆ ಫಾರ್ವರ್ಡ್ ಮಾಡಲು ಅವಕಾಶ ನೀಡುತ್ತಿದೆ.
ಈ ಹೊಸ ಅಪ್ ಡೇಟ್ ನಿಂದಾಗಿ ಸುಳ್ಳು ಸುದ್ದಿಗಳು ಹರಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಮತ್ತು ವಾಟ್ಸ್ ಆಪ್ ಫ್ಲ್ಯಾಟ್ ಫಾರ್ಮ್ ಮೂಲಕ ತಪ್ಪು ಮಾಹಿತಿಗಳಿಗೆ ಕಡಿವಾಣ ಬೀಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಇದರರ್ಥ ಮೊದಲಿನಂತೆಯೇ ಈಗ ಪುನಃ ವಾಟ್ಸ್ ಆಪ್ ಫಾರ್ವರ್ಡ್ ವೈಶಿಷ್ಟ್ಯತೆಯೂ 5 ಜನರಿಗೆ ಮಾತ್ರ ಸೀಮಿತವಾಗಲಿದೆ.ಈಗಾಗಲೇ ಈ ವೈಶಿಷ್ಟ್ಯೆತೆಯು ಬಿಡುಗಡೆಗೊಂಡಿದ್ದು ಕೆಲವೇ ದಿನದಲ್ಲಿ ಎಲ್ಲಾ ಬಳಕೆದಾರಗಿಗೂ ಅಂದರೆ ಸುಮಾರು 200 ಮಿಲಿಯನ್ ಭಾರತೀಯ ಬಳಕೆದಾರರಿಗೆ ಅಪ್ ಡೇಟ್ ಆಗಲಿದೆ. ಈ ಬದಲಾವಣೆಯನ್ನು ನೀವು ವಾಟ್ಸ್ ಆಪ್ ನಲ್ಲಿ ನಿರೀಕ್ಷಿಸಬೇಕು ಎಂದರೆ ಕೂಡಲೇ ವಾಟ್ಸ್ ಆಪ್ ಅಪ್ ಡೇಟ್ ಮಾಡಿಕೊಳ್ಳಬೇಕು. ಲೇಟೆಸ್ಟ್ ವರ್ಷನ್ ನಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ.
ಈ ಫಾರ್ವರ್ಡ್ ಮೆಸೇಜ್ ಲಿಮಿಟ್ ಕೇವಲ ಭಾರತೀಯ ಬಳಕೆದಾರರಿಗೆ ಮಾತ್ರ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಇತರೆ ದೇಶದ ಬಳಕೆದಾರರಿಗೆ ವಾಟ್ಸ್ ಆಪ್ 20 ಮೆಸೇಜ್ ಗಳನ್ನು ಒಮ್ಮೆಲೆ ಫಾರ್ವರ್ಡ್ ಮಾಡಲು ಅವಕಾಶ ನೀಡುತ್ತದೆ. ವಿಶ್ವದ ಇತರೆ ಭಾಗದ ಜನರಿಗೆ ಹೋಲಿಸಿದರೆ ಭಾರತೀಯರು ಅತೀಹೆಚ್ಚು ಮೆಸೇಜ್, ಫೋಟೋ ಮತ್ತು ವೀಡಿಯೋಗಳನ್ನು ಪಾರ್ವರ್ಡ್ ಮಾಡುತ್ತಾರಂತೆ.
ಇದರ ಜೊತೆಗೆ ವಾಟ್ಸ್ ಆಪ್ ಒಂದು ಹೊಸ ವೀಡಿಯೋವನ್ನು ಕೂಡ ಬಳಕೆದಾರರಿಗೆ ತೋರಿಸಲಿದ್ದು ಇದರಲ್ಲಿ ಸುಳ್ಳು ಸುದ್ದಿಗಳು ಮತ್ತು ತಪ್ಪು ಸುದ್ದಿಗಳ ಬಗೆಗಿನ ಮಾಹಿತಿಯನ್ನು ನೀಡಿ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಈ ವಾರ ಅಪ್ ಡೇಟ್ ಆಗಿರುವ ವಾಟ್ಸ್ ಆಪ್ ನಲ್ಲಿ ಫಾರ್ವರ್ಡ್ ಲೇಬಲ್ ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಂಶವಿರುತ್ತದೆ ಎಂಬುದನ್ನು ವಾಟ್ಸ್ ಆಪ್ ಸಂಸ್ಥೆಯೇ ಖಾತ್ರಿ ಪಡಿಸಿದೆ. ಬಳಕೆದಾರರ ಜಾಗೃತಿ ಮತ್ತು ಭದ್ರತೆ ನಮ್ಮ ಜವಾಬ್ದಾರಿಯಾಗಿದೆ ಆ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಾಟ್ಸ್ ಆಪ್ ಸಂಸ್ಥೆ ಹೇಳಿದೆ.
ಕಳೆದವಾರವಷ್ಟೇ, ಡಾಟ್(Department of Telecommunications) ಒಂದು ವೇಳೆ ವಾಟ್ಸ್ ಆಪ್, ಫೇಸ್ ಬುಕ್, ಟೆಲಿಗ್ರಾಂ ಮತ್ತು ಇನ್ಸ್ಟಾಗ್ರಾಂನ್ನು ತಪ್ಪಾಗಿ ಯಾರೇ ಬಳಕೆ ಮಾಡುತ್ತಿರುವುದನ್ನು ಕಂಡುಹಿಡಿಯಲು ಸೂಚನೆ ನೀಡಿತ್ತು.
ಅದಕ್ಕೆ ಉತ್ತರವಾಗಿ ಫೇಕ್ ನ್ಯೂಸ್ ಗಳನ್ನು ತಡೆಯುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾವನ್ನು ಬ್ಲಾಕ್ ಮಾಡುವ ಬದಲಾಗಿ ಹೆಚ್ಚು ಪರಿಣಾಮಕಾರಿಯಾಗಿರುವ ಮಾರ್ಗವನ್ನು ಕಂಡು ಹಿಡಿದಿರುವ ಬಗ್ಗೆ Cellular Operators Association of India (COAI) ಸಲಹೆಯನ್ನು ನೀಡಿದೆ. ಒಟ್ಟಾರೆ ಇನ್ನು ಮುಂದೆ ಭಾರತದಲ್ಲಿ ಯಾವುದೇ ಸುಳ್ಳು ಸುದ್ದಿಗಳೂ ಕೂಡ ಹರಿದಾಡಬಾರದು ಎಂಬ ಉದ್ದೇಶದಿಂದ ಒಳ್ಳೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ.


Click it and Unblock the Notifications



