Whatsapp ನಿಂದ ಪ್ರೀಮಿಯಂ ಚಂದಾದಾರಿಕೆ ಯೋಜನೆ ಪರಿಚಯ ಸಾಧ್ಯತೆ!
ಮೆಟಾ ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ವೇದಿಕೆ Whatsapp ಇನ್ನಷ್ಟು ಆಕರ್ಷಕವಾಗಿರುವಂತಹ ಹೊಸ ಐಚ್ಛಿಕ ಪ್ರೀಮಿಯಂ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸುವ ಸಾಧ್ಯತೆ ಇದೆ. , ಬಳಕೆದಾರರಿಗೆ ಹೆಚ್ಚುವರಿ ವೈಯಕ್ತೀಕರಣ ಮತ್ತು ಉತ್ಪಾದಕತೆ ಸಂಬಂಧಿತ ವೈಶಿಷ್ಟ್ಯಗಳನ್ನು ನೀಡುವ ಉದ್ದೇಶವನ್ನು Whatsapp ಹೊಂದಿದ್ದು, ಈ ಪ್ರೀಮಿಯಂ ಯೋಜನೆಯಡಿ ಬಳಕೆದಾರರಿಗೆ ಹಲವು ವಿಶೇಷ ವೈಶಿಷ್ಟ್ಯಗಳು ಸಿಗುವ ನಿರೀಕ್ಷೆ ಇದೆ. ಹಾಗಾದರೆ, Whatsapp ಪ್ರೀಮಿಯಂ ಚಂದಾದಾರಿಕೆಯಲ್ಲಿ ಏನೆಲ್ಲಾ ಇರಬಹುದು ಎಂಬುದನ್ನು ನೋಡೋಣ ಬನ್ನಿ.
ಇತ್ತೀಚಿನ ವರದಿಗಳ ಪ್ರಕಾರ, ಈ ಹೊಸ Whatsapp ಪ್ರೀಮಿಯಂ ಚಂದಾದಾರಿಕೆಯ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. Whatsapp ಇದನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಮೊದಲಿಗೆ ವೇಟ್‌ಲಿಸ್ಟ್ ವ್ಯವಸ್ಥೆಯ ಮೂಲಕ ಬಳಕೆದಾರರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ವೇಟ್‌ಲಿಸ್ಟ್ ಹೆಸರು ನೋಂದಾಯಿಸಿದ ಬಳಕೆದಾರರಿಗೆ, ಸಬ್‌ಸ್ಕ್ರಿಪ್ಶನ್ ಅಧಿಕೃತವಾಗಿ ಲಭ್ಯವಾದಾಗ ಸೂಚನೆ ಬರಲಿದೆ. ನಂತರ ಅವರು ಬಯಸಿದರೆ ಪೇಯ್ಡ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.
WABetaInfo ವರದಿಯ ಪ್ರಕಾರ, ಈ ಪ್ರೀಮಿಯಂ ಯೋಜನೆಯಡಿ ಬಳಕೆದಾರರಿಗೆ ಎಕ್ಸ್‌ಕ್ಲೂಸಿವ್ ಸ್ಟಿಕ್ಕರ್‌ಗಳು, ಹೊಸ ಆಪ್ ಥೀಮ್‌ಗಳು ಮತ್ತು ಮೂರುಕ್ಕಿಂತ ಹೆಚ್ಚು ಚಾಟ್‌ಗಳನ್ನು ಪಿನ್ ಮಾಡುವ ಅವಕಾಶ ಸೇರಿರಬಹುದು. ಜೊತೆಗೆ, ವಿಭಿನ್ನ ಚಾಟ್ ರಿಂಗ್‌ಟೋನ್‌ಗಳು ಮತ್ತು ಆಪ್ ಐಕಾನ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯೂ ಇರಲಿದೆ. ಇದರಿಂದ ಬಳಕೆದಾರರು ತಮ್ಮ Whatsapp ಅನುಭವವನ್ನು ಹೆಚ್ಚು ವೈಯಕ್ತಿಕವಾಗಿ ರೂಪಿಸಿಕೊಳ್ಳಬಹುದು ಎನ್ನಲಾಗಿದೆ.

ಭವಿಷ್ಯದಲ್ಲಿ ಈ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ಹೊಸ ವೈಶಿಷ್ಟ್ಯಗಳನ್ನು ಸೇರಿಸಬಹುದು ಅಥವಾ ಕೆಲವು ಫೀಚರ್‌ಗಳನ್ನು ಬದಲಾಯಿಸಬಹುದು. ಈ ಯೋಜನೆಯ ದರ ಇನ್ನೂ ಘೋಷಣೆಯಾಗಿಲ್ಲ ಮತ್ತು ಅದು ಪ್ರತಿ ದೇಶದ ಮಾರುಕಟ್ಟೆ ಪರಿಸ್ಥಿತಿಯಂತೆ ವಿಭಿನ್ನವಾಗುವ ಸಾಧ್ಯತೆ ಇದೆ. ಕೆಲವು ವರದಿಗಳು ಸೂಚಿಸಿರುಂತೆ, Whatsapp ತನ್ನ ಗ್ರಾಹಕರಿಗೆ ಹೆಸರಿಸದ ಹೊಸ ಅಪ್‌ಡೇಟ್‌ಗಳನ್ನು ಸಹ ತರುವ ಸಾಧ್ಯತೆ ಇದೆ. ಆದರೆ,
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಹೊಸ ಚಂದಾದಾರಿಕೆ ಯೋಜನೆಯು, Whatsappನ 'Updates' ಟ್ಯಾಬ್‌ಗೆ ಸಂಬಂಧಿಸಿದ ಜಾಹೀರಾತು ರಹಿತ (Ad-free) ಪ್ಲಾನ್‌ನಿಂದ ಸಂಪೂರ್ಣವಾಗಿ ಬೇರೆ. ಯೂರೋಪ್ ಮತ್ತು ಯುಕೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿಯಲ್ಲಿರುವ ಆ ಯೋಜನೆಯ ಉದ್ದೇಶ, ಅಪ್ಡೇಟ್ಸ್ ವಿಭಾಗದಲ್ಲಿನ ಜಾಹೀರಾತುಗಳು ಮತ್ತು ಪ್ರಚಾರಾತ್ಮಕ ಚಾನೆಲ್‌ಗಳನ್ನು ತೆಗೆದುಹಾಕುವುದಾಗಿದೆ. ಎರಡೂ ಯೋಜನೆಗಳು ಬಳಕೆದಾರರಿಗೆ ಸಂಪೂರ್ಣವಾಗಿ ಐಚ್ಛಿಕವಾಗಿರುತ್ತವೆ ಎಂದು ವರದಿಯು ಹೇಳಿದೆ.
Whatsapp ಬೀಟಾ ಅಪ್ಡೇಟ್‌ಗಳನ್ನು ಗಮನಿಸುವ WABetaInfo ವರದಿಯಂತೆ, ಆಂಡ್ರಾಯ್ಡ್‌ನ Whatsapp ಬೆಟಾ ಆವೃತ್ತಿ 2.26.4.8 ನಲ್ಲಿ ಈ ಹೊಸ ಸಬ್‌ಸ್ಕ್ರಿಪ್ಶನ್ ಕುರಿತು ಮಾಹಿತಿ ಕಂಡುಬಂದಿದೆ. ಈ ಆವೃತ್ತಿ ಗೂಗಲ್ ಪ್ಲೇ ಬೆಟಾ ಪ್ರೋಗ್ರಾಂ ಮೂಲಕ ಲಭ್ಯವಿದ್ದರೂ, ಸಾಮಾನ್ಯ ಬಳಕೆದಾರರಿಗೆ ಈ ವೈಶಿಷ್ಟ್ಯಗಳು ಇನ್ನೂ ಸಕ್ರಿಯವಾಗಿಲ್ಲ. ಇದರಿಂದಾಗಿ, Whatsapp ಇನ್ನೂ ಅಂತಿಮ ಪರೀಕ್ಷೆ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ.
Whatsapp ಪೇಯ್ಡ್ ಚಂದಾದಾರಿಕೆಯು ಬಳಕೆದಾರರ ಗೌಪ್ಯತೆ ಅಥವಾ ಭದ್ರತೆಯನ್ನು ಯಾವುದೇ ರೀತಿಯಲ್ಲಿ ಹಾನಿಗೊಳಿಸುವುದಿಲ್ಲ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸೇರಿದಂತೆ ಮೂಲಭೂತ ಭದ್ರತಾ ವೈಶಿಷ್ಟ್ಯಗಳು ಎಲ್ಲ ಬಳಕೆದಾರರಿಗೂ ಉಚಿತವಾಗಿಯೇ ಮುಂದುವರಿಯುತ್ತವೆ. ಈ ಹೊಸ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಸಾರ್ವಜನಿಕವಾಗಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಕಂಪನಿ ಇನ್ನೂ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ, ಆದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications








