ಬಹುನಿರೀಕ್ಷಿತ ವಾಟ್ಸ್‌ಆಪ್ ಪಾವತಿ ಸೇವೆ ಆರಂಭಕ್ಕೆ ಕೂಡಿಬಂತು ಕಾಲ!
ಕಳೆದ ವರ್ಷ ಬೇಟಾ ವರ್ಷನ್‌ನಲ್ಲಿ ಮಾತ್ರವೇ ಪಾವತಿ ಆಯ್ಕೆಗೆ ಚಾಲನೆ ನೀಡಿದ್ದ ವಾಟ್ಸ್ಆಪ್ ಇದೀಗ ಅಧಿಕೃತವಾಗಿ ಪಾವತಿ ಸೇವೆಯನ್ನು ಜಾರಿಗೊಳಿಸಲು ಮುಂದಾಗಿದೆ. ಬಹುನಿರೀಕ್ಷಿತ ವಾಟ್ಸ್‌ಆಪ್ ಪಾವತಿ ಸೇವೆಯು ಮುಂದಿನ ಎರಡು ತಿಂಗಳ ಒಳಗಾಗಿ ಆರಂಭವಾಗಲಿದೆ ಎಂದು ಇದೀಗ ತಿಳಿದುಬಂದಿದ್ದು, ಈ ಬಗ್ಗೆ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಮಾಹಿತಿ ನೀಡಿದೆ. ಪೇಮೆಂಟ್ ಆಯ್ಕೆ ಜಾರಿಗೊಳಿಸುವ ಮುನ್ನ ವಾಟ್ಸ್‌ಆಪ್‌ನ ಡೇಟಾ ಲೋಕಲೈಸೇಷನ್ ನಿಯಮಗಳನ್ನು ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಹೌದು, ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಎರಡು ತಿಂಗಳಲ್ಲಿ ಭಾರತದಲ್ಲಿಯೇ ದತ್ತಾಂಶ ಸಂಗ್ರಹಕ್ಕೆ ಸಂಬಂಧಿಸಿದಂತೆ ಆರ್‌ಬಿಐನ ಅನುಮತಿ ಪಡೆದುಕೊಳ್ಳಲಿದೆ. ಇದರಿಂದ, ಈಗಾಗಲೇ ವಿಳಂಬವಾಗಿರುವ ಪಾವತಿ ಸೇವೆಗೆ ಚಾಲನೆ ಸಿಗಲಿದೆ ಎಂದು ಎನ್‌ಸಿಪಿಐ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನೀತಿ ಅನ್ವಯ ಹಣಕಾಸು ವಹಿವಾಟಿನ ದತ್ತಾಂಶವನ್ನು ಭಾರತದಲ್ಲಿಯೇ ಸಂಗ್ರಹಿಸಿ ಇಡಬೇಕು. ಈ ಬಗ್ಗೆ ವರದಿ ಬಂದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ನೀತಿ ಅನ್ವಯ ಹಣಕಾಸು ವಹಿವಾಟಿನ ದತ್ತಾಂಶವನ್ನು ಭಾರತದಲ್ಲಿಯೇ ಸಂಗ್ರಹಿಸಿ ಇಡಬೇಕು. ಈ ಕುರಿತು ಆರ್‌ಬಿಐನಿಂದ ಅನುಮತಿ ಪಡೆದಿರುವ ಕಂಪನಿಯೊಂದು ವಾಟ್ಸ್‌ಆಪ್‌ನ ಡೇಟಾ ಲೋಕಲೈಸೇಷನ್ ನಿಯಮಗಳನ್ನು ಪರಿಶೀಲನೆ ನಡೆಸುತ್ತಿದೆ. ಈ ಬಗ್ಗೆ ವರದಿ ಬಂದ ಬಳಿಕ ವಾಟ್ಸ್ಆಪ್ ಪಾವತಿ ಸೇವೆ ಅಧಿಕೃತವಾಗಿ ಆರಂಭವಾಗಲಿದೆ. ನಂತರ ಭಾರತದಲ್ಲಿ ಸುಮಾರು 30 ಕೋಟಿಗೂ ಹೆಚ್ಚು ಬಳಕೆದಾರರು ವಾಟ್ಸ್ಆಪ್‌ನಲ್ಲಿ ಪಾವತಿ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ

ಈಗಾಗಲೇ ಭಾರತದಲ್ಲಿ ಪ್ರಾಯೋಗಿಕ ಹಂತದ ಪಾವತಿ ಸೇವೆಯನ್ನು ಆರಂಭಿಸಿರುವ ವಾಟ್ಸ್‌ಆಪ್, ತನ್ನ ಸೇವೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ನೀತಿಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆರಂಭಿಸಿದೆ. ಇದಾದ ನಂತರ ಪಾವತಿ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಸಿದ್ಧತೆ ನಡೆಯುತ್ತಿದೆ. ಅದರ ಭಾಗವಾಗಿ ಸೇವೆ ಮತ್ತು ಖಾಸಗಿ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗುತ್ತಿದೆ. ಸದ್ಯ 10 ಲಕ್ಷಕ್ಕೂ ಅಧಿಕ ಮಂದಿ ಪ್ರಾಯೋಗಿಕ ಹಂತದ ಪಾವತಿ ಸೇವೆ ಬಳಸುತ್ತಿದ್ದಾರೆ ಎಂದು ವಾಟ್ಸ್ಆಪ್ ಮಾಹಿತಿ ನೀಡಿದೆ.

ಭಾರತದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆ 30 ಕೋಟಿಗೂ ಹೆಚ್ಚಿರುವುದರಿಂದ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗುವ ನಿರೀಕ್ಷೆ ಇದೆ. 30 ಕೋಟಿ ಭಾರತೀಯರೆಲ್ಲರೂ ವಾಟ್ಸ್ಆಪ್ ಪಾವತಿ ಸೇವೆ ಬಳಸಲ ಆರಂಭಿಸಿದರೆ, ಚೀನಾದ ವಿ-ಚಾಟ್ ಅನ್ನು ಹಿಂದಿಕ್ಕಲು ಮತ್ತು ಬಹಳ ಮುಖ್ಯವಾಗಿ ನಗದು ರಹಿತ ಪಾವತಿ ವ್ಯವಸ್ಥೆ ಸಾಕಾರವಾಗುವತ್ತ ಮಹತ್ವದ ಹೆಜ್ಜೆ ಇಟ್ಟಂತಾಗಲಿದೆ. ಮತ್ತು ದೇಶದ ಆರ್ಥಿಕತೆಯಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ನಗದು ವಹಿವಾಟಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳು ಸಹ ಹೆಚ್ಚಿವೆ.


Click it and Unblock the Notifications








