ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಚೀನಾದಿಂದ ಬೆದರಿಕೆಯಂತೆ..!
ಫೇಸ್ ಬುಕ್ ಅಂದರೆ ಅದೆಷ್ಟೋ ಮಂದಿಗೆ ನೆಚ್ಚಿನ ಸಾಮಾಜಿಕ ಜಾಲತಾಣ. ಆದರೆ ಇದರ ಮಾಲೀಕನಿಗೆ ಇತ್ತೀಚೆಗೆ ಯಾಕೋ ಸಮಸ್ಯೆ ಮೇಲೆ ಸಮಸ್ಯೆಗಳು ಎದುರಾಗುತ್ತಲೇ ಇದೆ. ಫೇಸ್ ಬುಕ್ ಗೆ ದೃಷ್ಟಿ ಆಗಿದೆಯೋ ಏನೋ ಗೊತ್ತಿಲ್ಲ. ಒಂದಲ್ಲ ಒಂದು ಸಮಸ್ಯೆ ಫೇಸ್ ಬುಕ್ ಸಂಸ್ಥೆಯನ್ನು ಕಾಡುತ್ತಲೇ ಇದೆ. ಸಮಸ್ಯೆ ಎಂಬ ಸುನಾಮಿ ಅದನ್ನು ಆಕ್ರಮಿಸುತ್ತಲೇ ಇದೆ ಮತ್ತು ಅದರ ಮಾಲೀಕ ಜ್ಯೂಕ್ ಬರ್ಗ್ ಆ ಸಮಸ್ಯೆಯನ್ನು ನಿಭಾಯಿಸುವುದರಲ್ಲಿ ಸಾಕಾಗಿ ಹೋಗಿದ್ದಾರೆ ಎಂದು ಅನ್ನಿಸುತ್ತದೆ.
ಯಾಕೆಂದರೆ ಇತ್ತೀಚೆಗೆ ಹಲವು ದಿನಗಳಿಂದ ಫೇಸ್ ಬುಕ್ ಮೇಲೆ ದತ್ತಾಂಶ ಹಗರಣ, ಫೇಕ್ ನ್ಯೂಸ್ ಹಬ್ಬಿಸಿದ ಆರೋಪ, ಅಧಿಕಾರಿಗಳ ಮುಂದೆ ಹಲವು ಬಾರಿ ವಿಚಾರಣೆ, ಟೆಕ್ ಪರಿಶುದ್ಧರಿಂದ ತಪ್ಪಿಸಿಕೊಳ್ಳುವುದು ಹೀಗೆ ಜ್ಯೂಕ್ ಬರ್ಗ್ ತಲೆಯ ಮೇಲೆ ಸಮಸ್ಯೆಯ ಸುಳಿ ಸುತ್ತುತ್ತಲೇ ಇದೆ.

ಇತ್ತೀಗೆ ಫೇಸ್ ಬುಕ್ ಸಿಇಓ ಜ್ಯೂಕ್ ಬರ್ಗ್ ರ ಸಂದರ್ಶನವೊಂದು ನಡೆದಿತ್ತು. ಇದರಲ್ಲಿ ಅವರು ಫೇಸ್ ಬುಕ್ ನ ಮುಂದಿನ ಭವಿಷ್ಯ ಮತ್ತು ಅದರ ಮಾರ್ಗದರ್ಶಕರ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇಂತಹ ಹಲವು ವಿಚಾರಗಳು ಸಂದರ್ಶನದಲ್ಲಿ ಇದ್ದರೂ ಕೂಡ ಎಲ್ಲರ ಕಣ್ಣು ಕುಕ್ಕುವಂತೆ ಅಥವಾ ಮನಸ್ಸಿಗೆ ನಾಟುವಂತೆ ಮಾಡಿದ ಒಂದು ವಿಷಯ ಜ್ಯೂಕ್ ಬರ್ಗ್ ಗೆ ಫೇಸ್ ಬುಕ್ ಕೆಲಸ ನಿರ್ವಹಿಸದ ಪ್ರದೇಶಗಳಿಂದ ಬರುತ್ತಿರುವ ಬೆದರಿಕೆಗಳ ಬಗ್ಗೆ. ಫೇಸ್ ಬುಕ್ ಕೆಲಸ ನಿರ್ವಹಿಸದ ಪ್ರದೇಶ ಅಂದ್ರೆ ಅದು ಮತ್ತಿನ್ನು ಯಾವುದೂ ಅಲ್ಲ, ಚೀನಾ!!!
ಎಸ್.ನಾವು ಹೇಳುತ್ತಿರುವುದು ನಿಜ. ಚೀನಾದಲ್ಲಿ ಫೇಸ್ ಬುಕ್ ಕೆಲಸ ಮಾಡುವುದಿಲ್ಲ. ಸಂಪೂರ್ಣವಾಗಿ ಫೇಸ್ ಬುಕ್ ನ್ನು ಚೀನಾದಲ್ಲಿ ಬ್ಯಾನ್ ಮಾಡಲಾಗಿದೆ. ಚೀನಾದಲ್ಲಿ ಫೇಸ್ ಬುಕ್ ಬಳಕೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿ ಜ್ಯೂಕ್ ಬರ್ಗ್ ಈ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ,ದೀರ್ಘಕಾಲದ ಆಲೋಚನೆ ಎಂಬಂತ ಉತ್ತರವನ್ನು ನೀಡಿದರು.
ಸಂದರ್ಶನದ ಉದ್ದಕ್ಕೂ ಇಡೀ ವಿಶ್ವವನ್ನು ಒಟ್ಟಿಗೆ ತರುವ ಉದ್ದೇಶ ಹೊಂದಲಾಗಿದೆ ಎಂಬುದನ್ನು ಪದೇ ಪದೇ ಪುನರುಚ್ಛರಿಸಿದರು. ಅವರು ಒಂದು ದೊಡ್ಡ ದೇಶವನ್ನು ಬಿಡುವುದು ಕಷ್ಟ ಎಂಬುದನ್ನು ಕೂಡ ಒಪ್ಪಿಕೊಂಡರು ಜೊತೆಗೆ ಅದನ್ನು ಸೇರಿಸುವುದು ಕೂಡ ಅಷ್ಟು ಸುಲಭವಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ ಯಾಕೆಂದರೆ ಈಗಾಗಲೇ ಅವರು ಸಾಕಷ್ಟು ಬೆದರಿಕೆಯನ್ನ ಚೀನಾ ಕಂಪೆನಿಗಳಿಂದ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಫೇಸ್ ಬುಕ್ ದಿನದಿಂದ ದಿನಕ್ಕೆ ಪ್ರಸಿದ್ಧಿಯಾಗುತ್ತಿದೆ ಮತ್ತು ಅದರ ಹೆಸರನ್ನು ಕೆಡಿಸಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಜ್ಯೂಕ್ ಬರ್ಗ್ ಚೀನಾದ ತಂತ್ರಜ್ಞಾನ ಕಂಪೆನಿಗಳು ಮತ್ತು ಸಾಮಾಜಿಕ ಜಾಲತಾಣಗಳು ಹಾಗೆ ಮಾಡುವುದರಿಂದ ಏನನ್ನೂ ಸಾಧಿಸಲಾರವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರ ಪ್ರಕಾರ, ಯಾವುದೇ ಸರ್ಕಾರ ಫೇಸ್ ಬುಕ್ ನ ಚುಣಾವಣಾ ಹಸ್ತಕ್ಷೇಪ ಮತ್ತು ಭಯೋತ್ಪಾದಕ ಚಟುವಟಿಕೆಯ ಬಗ್ಗೆ ಚಿಂತಿಸುತ್ತದೆ ಎಂದಾದರೆ, ಅದಕ್ಕಿಂತ ಹೆಚ್ಚು ಆ ಸರ್ಕಾರ ಚಿಂತಿಸಬೇಕಾಗಿರುವುದು ಚೀನಾದ ಕಂಪೆನಿಯೊಂದಿಗಿನ ವ್ಯವಹಾರದ ಬಗ್ಗೆ ಎಂದು ತಿಳಿಸುತ್ತಾರೆ. ಅಂದರೆ ಚೀನಾದೊಂದಿನ ವ್ಯವಹಾರವನ್ನು ಅವರು ಮೋಸದ ವ್ಯವಹಾರ ಎಂದೇ ಪರಿಗಣಿಸಿದಂತೆ ಕಾಣುತ್ತದೆ.

ಜ್ಯೂಕ್ ಬರ್ಗ್ ಹೇಳುವಂತೆ, ಒಂದು ವೇಳೆ ಫೇಸ್ ಬುಕ್ ನಲ್ಲಿ ಏನಾದರೂ ತಪ್ಪಾದರೆ, ಖಂಡಿತ ಫೇಸ್ ಬುಕ್ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ಹಂತದವರೆಗೆ ಸರ್ಕಾರದೊಡನೆ ಕೈಜೋಡಿಸುತ್ತದೆ. ಆದರೆ ಚೀನಾ ಕಂಪೆನಿಯಿಂದ ಅದನ್ನು ಯಾವ ಕಾರಣಕ್ಕೂ ನಿರೀಕ್ಷಿಸಲು ಸಾಧ್ಯವಿಲ್ಲ ಅನ್ನುವುದು ಅವರ ಅಭಿಪ್ರಾಯ. ಒಟ್ಟಾರೆ ಫೇಸ್ ಬುಕ್ ಮಾಲೀಕ ಚೀನಾ ಒಂದು ನಂಬಿಕೆ ದ್ರೋಹ ಮಾಡುವ ದೇಶ ಎಂಬುದನ್ನು ಪರೋಕ್ಷವಾಗಿ ಚಾಟಿ ಬೀಸಿ ಹೇಳಿದಂತಿದೆ.
ಫೇಸ್ಬುಕ್ ಮಾಲೀಕರೇ ಹೀಗೆ ಹೇಳುತ್ತಿದ್ದಾರೆ ಎಂದರೆ ಭಾರತ ಚೀನಾದೊಂದಿಗೆ ವ್ಯವಹಾರ ಮಾಡುವಾಗ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳಿತಲ್ಲವೇ?


Click it and Unblock the Notifications








