ಹಿ ಹಿ ಹಿ :) ಆಕಾಶ್ 2 ಟ್ಯಾಬ್ಲೆಟ್ ಅಂದರೆ ಏನು ?

Posted By: Varun
ಹಿ ಹಿ ಹಿ :) ಆಕಾಶ್ 2 ಟ್ಯಾಬ್ಲೆಟ್ ಅಂದರೆ ಏನು ?
ಯಡಿಯೂರಪ್ಪ ನಾನು ಸಿಎಂ ಆಗಲ್ಲ ಅಂತಾ ಹೇಳಿದ್ರೂ ನಂಬಬಹುದು, ದೇವೇಗೌಡ್ರು ನಾನು ರಾಜಕೀಯ ಸನ್ಯಾಸತ್ವ ತಗೋತೀನಿ ಅಂದ್ರೂ ಆಶ್ಚರ್ಯ ಆಗದೆ ಇರಬಹುದು, ತೆಂಡೂಲ್ಕರ್ ಇನ್ನೂ ಹತ್ತು ವರ್ಷ ದೇಶಕ್ಕೆ ಆಡ್ತೀನಿ ಅಂತೆ ಘೋಷಣೆ ಮಾಡಿದರೂ ಅರಗಿಸಿಕೊಳ್ಳಬಹುದು, ಆದರೆ ಆಕಾಶ್ 2 ಟ್ಯಾಬ್ಲೆಟ್ ಬರುತ್ತೆ ಅಂದ್ರೆ ಮಾತ್ರ ಜನ ಪಕ ಪಕ ಅಂತ ನಕ್ಬಿಡ್ತಾರೆ.ಯಾಕೆ ಅಂದ್ರೆ ಅಷ್ಟು ಬೇಜಾರ್ ಆಗೋಗಿದೆ ಸರ್ಕಾರದ ಆಕಾಶ್ 2 ಅಗ್ಗದ ಟ್ಯಾಬ್ಲೆಟ್ ಗೆ ಕಾದೂ ಕಾದೂ.

ಈಗ ಮತ್ತೊಂದು ಜೋಕ್ ಏನಂದರೆ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶವಿರುವ ಆಕಾಶ್ 2 ಟ್ಯಾಬ್ಲೆಟ್ ಆಗಸ್ಟ್ ತಿಂಗಳಿಗೆ ಬರಲಿದೆ ಅಂತ ಸುದ್ದಿ ಬಂದಿದೆ.

ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ ಇರೋ ಟ್ಯಾಬ್ಲೆಟ್ ಅನ್ನೇ ಬಿಡುಗಡೆ ಮಾಡದ ಸರ್ಕಾರ, ಏಪ್ರಿಲ್ ತಿಂಗಳಿಂದ ಕಾಗೆ, ಗಿಳಿ, ಆಸ್ಟ್ರಿಚ್ ನಂತಹ ಪಕ್ಷಿಗಳನ್ನ ಹಾರಿಸುತ್ತಾ ಬಂದಿರುವಾಗ ಇನ್ನು ಆಂಡ್ರಾಯ್ಡ್ 4.0ತಂತ್ರಾಂಶದ ಟ್ಯಾಬ್ಲೆಟ್ ಅನ್ನು ಆಗಸ್ಟ್ ಗೆ ಕೊಡ್ತೀವಿ ಅಂದ್ರೆ ನಂಬಕ್ಕೆ ಆಯ್ತದ ಸಿವ.

ಹೋದ ವರ್ಷ ಆಕಾಶ್ 1 ಅನ್ನು ಹೆಂಗೋ ಹರಸಾಹಸ ಮಾಡಿ ಬಿಡುಗಡೆ ಮಾಡಿದ್ದ ಸರ್ಕಾರ, ಅಸಮರ್ಪಕವಾಗಿ ಕೆಲಸ ಮಾಡದ ಟ್ಯಾಬ್ಲೆಟ್ ಹೊರ ತಂದಿದ್ದರಿಂದ ಕಂಡ ಕಂಡವರ ಬಾಯಿಂದ ಛೀ ಥೂ ಅಂತ ಎಂಟಾಣಿ ರಾಜೂ ಸುಪಾರಿ, ಪಾನ್ ಪರಾಗ್ ಅಷ್ಟೇ ಅಲ್ಲದೆ ಬರಿ ಎಂಜಲಿನಿಂದಲೂ ಉಗಿಸಿಕೊಂಡಿತ್ತು.

ಈ ಅವಮಾನದಿಂದ ಸಾವರಿಸಿಕೊಂಡು, ಮುಂದಿನ ಆವೃತ್ತಿಯಲ್ಲಿ ಎಲ್ಲಾ ದೋಷ ಸರಿ ಪಡಿಸ್ತೀವಿ (ಏನೋ ಸರ್ಪದೋಷ ಕ್ಲಿಯರ್ ಮಾಡ್ಸಿ ಮದ್ವೆ ಮಾಡ್ಸಿ ಕೊಡ್ತೀವಿ ಅಂತ ಗಂಡಿನ ಕಡೆಯವರಿಗೆ ಹೇಳೋ ಥರ) ಅಂತ ಬೇರೆ ಕಿಸಿದರು.

ಆದ್ರೆ ಮತ್ತದೇ ರಾಮಾಯಣ ಶುರುವಾಯ್ತು ನೋಡಿ. ಆಕಾಶ್ ಉತ್ಪಾದನೆ ಮಾಡುತ್ತಿದ್ದ ಡೇಟಾವಿಂಡ್, ಕ್ವಾಡ್ ಎಂಬ ಕಂಪನಿಗೆ ಸರಿಯಾಗಿ ಹಣ ಪಾವತಿಸದ ಕಾರಣ ಉತ್ಪಾದನೆ ಬೇರೆ ಮಧ್ಯದಲ್ಲಿ ನಿಂತ್ಹೋಗಿತ್ತು. ಆದರೂ ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಅನ್ನೋ ಥರ ಕಪಿಲ್ ಸಿಬಾಲ್ ಸಾಹೇಬ್ರು ಮತ್ತೆ ಭರವಸೆ ಕೊಟ್ಟು ಮೇ ತಿಂಗಳಲ್ಲಿ ಬಿಡ್ತೀವಿ ಅಂದ್ರು.

ಮೇ ತಿಂಗಳು ಕಾದ್ವಿ, ಜೂನ್ ತಿಂಗಳೂ ಮುಗೀತಾ ಬಂತು, ಆದ್ರೆ ಸಾವಿರಾರು ಮಂದಿ ಬುಕ್ ಮಾಡಿದ ಆಕಾಶ್ ಟ್ಯಾಬ್ಲೆಟ್ ಬರಲೇ ಇಲ್ಲ. ರೈತ ಮುಂಗಾರು ಮಳೆ ನೆಚ್ಚಿಕೊಬಾರದು ಅನ್ನೋ ಥರಾ ವಿಶ್ವದ ಅತೀ ಅಗ್ಗದ ಟ್ಯಾಬ್ಲೆಟ್ ಬರುತ್ತೆ ಅಂತ ಇಷ್ಟ ಪಟ್ಟು ಬುಕ್ ಮಾಡಿರೋರು ಬೇಜಾರ್ ಆಗಿ, ಯಾವ್ದೋ ಹುಂಡಿಗೆ ಕಾಸು ಹಾಕಿದೀವಿ ಅಂತ ಮರೆಯೋ ಥರ ಆಗಿದೆ.

ಇಷ್ಟೆಲ್ಲಾ ಸಹಿಸಿಕೊಂಡಿರೋ ಗ್ರಾಹಕ ಈಗ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕೊಡ್ತೀವಿ ಅಂದ್ರೆ ಯಾವ ತಲೆ ಮಾಸಿರೋನೂ ನಂಬಕ್ಕೆ ಆಗಲ್ಲ.ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

*ವರುಣ್ ಆದಿತ್ಯ

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot