KFC ಹೆಸರಿನಲ್ಲಿ ಮಹಿಳೆಗೆ 14 ಲಕ್ಷ ರೂ. ಪಂಗನಾಮ ಹಾಕಿದ ವಂಚಕ!
ಕೆಎಫ್‌ಸಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಒಂದು ಸಲವಾದರೂ ಕೆಎಫ್‌ಸಿಗೆ ಹೋಗಿ ಟೆಸ್ಟ್ ಮಾಡಿ ಬರಬೇಕು ಅಂತಾ ಅನ್ಕೋತಾರೆ. ಇದೇ ಕಾರಣಕ್ಕೆ ಸ್ವಂತ ಉದ್ಯಮ ಮಾಡಲು ಬಯಸೋರು ಕೆಎಫ್‌ಸಿ ರೆಸ್ಟೋರೆಂಟ್ ಇಡುವುದಕ್ಕೆ ಬಯಸುತ್ತಾರೆ. ಹೀಗೆ ಕೆಎಫ್‌ಸಿ ರೆಸ್ಟೋರೆಂಟ್ ತೆರೆಯಲು ಹೋದ ಮಹಿಳೆಯೊಬ್ಬಳು ಇದೀಗ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ.
ಹೌದು, ತಮಿಳುನಾಡಿನ ಮಹಿಳೆಯೊಬ್ಬಳು KFC ರೆಸ್ಟೋರೆಂಟ್ ಫ್ರಾಂಚೈಸಿ ತೆರೆಯುವುದಕ್ಕೆ ಹೋಗಿ ಆನ್‌ಲೈನ್ ಸ್ಕ್ಯಾಮರ್‌ಗಳಿಂದ ಮೋಸ ಹೋಗಿದ್ದಾರೆ. KFC ರೆಸ್ಟೋರೆಂಟ್ ತೆರೆಯುವುದಕ್ಕೆ ಮಾಹಿತಿ ತಿಳಿಯಲು ಆನ್‌ಲೈನ್ ಸರ್ಚ್ ಮಾಡಿದ ಮಹಿಳೆಗೆ ವಂಚಕರು 14 ಲಕ್ಷ ರೂ ವಂಚಿಸಿದ್ದಾರೆ. ಹಾಗಾದ್ರೆ ತಮಿಳುನಾಡಿನ ಮಹಿಳೆ KFC ಹೆಸರಿನಲ್ಲಿ ಮೋಸ ಹೋಗಿದ್ದು ಹೇಗೆ? ಇದೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

KFC ರೆಸ್ಟೋರೆಂಟ್ ಫ್ರಾಂಚೈಸಿ ತೆರೆಯುವುದಕ್ಕೆ ಅವಕಾಶ ಪಡೆಯುವುದಕ್ಕೆ ಹಲವು ಮಂದಿ ಪ್ರಯತ್ನಿಸುತ್ತಲೇ ಇರುತ್ತಾರೆ. ಇದಕ್ಕಾಗಿ ಹಲವು ಮಂದಿ ಅರ್ಜಿ ಸಲ್ಲಿಸುವುದು ಸಾಮಾನ್ಯವಾಗಿದೆ. ಆದರೆ ಕೆಲವರು KFC ರೆಸ್ಟೋರೆಂಟ್ ಫ್ರಾಂಚೈಸಿ ಅರ್ಜಿ ಸಲ್ಲಿಸುವವರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೊಯಮತ್ತೂರು ನಗರದ ವಿ ಪ್ರಯದರ್ಶಿನಿ ಎಂಬ 22 ವರ್ಷದ ಮಹಿಳೆ KFC ರೆಸ್ಟೋರೆಂಟ್ ತೆರೆಯಲು ಅವಕಾಶ ಪಡೆಯಲು ಹೋಗಿ ಹಣ ಕಳೆದುಕೊಂಡಿದ್ದಾಳೆ.

ಅಷ್ಟಕ್ಕೂ ಇಲ್ಲಿ ನಡೆದಿದ್ದೇನು?
ಆನ್‌ಲೈನ್‌ನಲ್ಲಿ KFC ರೆಸ್ಟೋರೆಂಟ್ ಚೈನ್ ಫ್ರಾಂಚೈಸಿ ಪಡೆಯುವುದು ಹೇಗೆ ಎಂದು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಆನ್‌ಲೈನ್ ಸರ್ಚ್‌ನಲ್ಲಿ KFC ಫ್ರಾಂಚೈಸಿಗಾಗಿ ಎಂಬ ಜಾಹಿರಾತು ಒಂದು ಕಾಣಿಸಿದೆ. ಕೂಡಲೇ ಆ ಜಾಹಿರಾತು ಮೇಲೆ ಕ್ಲಿಕ್ ಮಾಡಿದ ಸಂತ್ರಸ್ಥೆ ಅಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾಳೆ. ಕರೆ ಸ್ವಿಕರಿಸಿದ ವ್ಯಕ್ತಿಯೊಬ್ಬ ಆಕೆಗೆ ಫ್ರಾಂಚೈಸಿ ಕೊಡಿಸುವುದಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಸಂತ್ರಸ್ಥೆ ಹಣ ಕಳೆದುಕೊಂಡು ಕಂಗಾಲಾಗಿದ್ದಾಳೆ.
KFC ಹೆಸರಿನಲ್ಲಿ ವಂಚಿಸಿದ್ದು ಹೇಗೆ?
ಫ್ರಾಂಚೈಸಿ ತೆರೆಯಲು ಸಹಾಯ ಮಾಡುವುದಾಗಿ ಹೇಳಿದ ವ್ಯಕ್ತಿ ಸಂತ್ರಸ್ಥೆಗೆ KFC ಲೋಗೋ ಇರುವ ಅಪ್ಲಿಕೇಶನ್ ಒಂದನ್ನು ಇ-ಮೇಲ್ ಮಾಡಿದ್ದಾನೆ. ಅಲ್ಲದೆ ಅಲ್ಲಿ ವಿವರಗಳನ್ನು ಭರ್ತಿ ಮಾಡುವುದಕ್ಕೆ ಸೂಚಿಸಿದ್ದಾನೆ. ಹಾಗೆಯೇ ಫ್ರಾಂಚೈಸಿ ಅನುಮತಿ ಪಡೆಯಲು 1.5 ಲಕ್ಷವನ್ನು ವರ್ಗಾಯಿಸಲು ಹೇಳಿದ್ದಾನೆ. ಇದೆಲ್ಲವನ್ನು ನಂಬಿದ ಸಂತ್ರಸ್ಥೆ ಫೆಬ್ರವರಿ 14 ರಂದು ಹಣ ವರ್ಗಾವಣೆ ಮಾಡಿದ್ದಾಳೆ. ನಂತರ ನಿಮ್ಮ ಪ್ರದೇಶದ ಸಮೀಕ್ಷೆಯಲ್ಲಿ ಫ್ರಾಂಚೈಸಿ ತೆರೆಯಲು ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ. ಅದರಂತೆ ಫೆಬ್ರವರಿ 14 ರಿಂದ ಮಾರ್ಚ್ 23 ರ ನಡುವೆ ಒಟ್ಟು 14.09 ಲಕ್ಷ ರೂಪಾಯಿಯನ್ನು ಸಂತ್ರಸ್ಥೆ ನಾಲ್ಕು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಹೀಗೆ 14.09 ಲಕ್ಷ ಹಣ ವರ್ಗಾವಣೆ ನಂತರ ವಂಚಕ ಸಂತ್ರಸ್ಥೆಗೆ ಒಂದು ಒಪ್ಪಂದ ಪತ್ರವನ್ನು ಕಳುಹಿಸಿದ್ದಾನೆ. ಆದರೆ ಆತ ಕಳುಹಿಸಿದ ಪತ್ರ ಫೇಕ್ ಆಗಿದ್ದು, ಇದರಿಂದ ತಾನು ಮೋಸ ಹೋಗಿರುವುದು ಸಂತ್ರಸ್ಥೆಗೆ ತಿಳಿದಿದೆ. ಕೂಡಲೇ ಸಂತ್ರಸ್ಥೆ ವಂಚಕನ ಸಂಖ್ಯೆಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ಪ್ರಿಯದರ್ಶಿನಿ ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 465 ಮತ್ತು 468 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Click it and Unblock the Notifications








