ಭಾರತದಲ್ಲಿ ನಾಲ್ಕು ತಿಂಗಳಲ್ಲಿ 50 ಲಕ್ಷ ಫೋನ್ ಮಾರಾಟ ಮಾಡಿದ ಶಿಯೋಮಿ!
ಭಾರತದಲ್ಲಿ ಶಿಯೋಮಿ ಫೋನ್ ಗಳು ಅದೆಷ್ಟು ಪ್ರಸಿದ್ಧಿ ಪಡೆದಿವೆ ಎಂಬುದಕ್ಕೆ ಇದೇ ಸಾಕ್ಷಿ. ಕೇವಲ ನಾಲ್ಕೇ ತಿಂಗಳಲ್ಲಿ ಶಿಯೋಮಿಯ 50 ಲಕ್ಷ ಫೋನ್ ಗಳು ಭಾರತದಲ್ಲಿ ಮಾರಾಟವಾಗಿದೆ.ಶಿಯೋಮಿಯ ಯಾವ ಮಾಡೆಲ್ ನ ಫೋನ್ ಇಷ್ಟು ಮಾರಾಟವಾಗಿರೋದು ಎಂದು ಕೇಳುತ್ತಿದ್ದೀರಾ? ಅದು ಮತ್ತಿನ್ಯಾವುದೂ ಅಲ್ಲ, ಸಾಕಷ್ಟು ಟಾಕ್ ಹುಟ್ಟಿಸಿದ್ದ ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ. ಗುರುವಾರ ಶಿಯೋಮಿ ಕಂಪೆನಿಯೇ ಈ ಪ್ರಕಟಣೆಯನ್ನು ಹೊರಡಿಸಿದೆ.

ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ ಗಳು ಬಿಡುಗಡೆಗೊಂಡಿದ್ದು ಇದೇ ವರ್ಷದ ಫೆಬ್ರವರಿಯಲ್ಲಿ. ಅಂದರೆ ಈ ಫೋನ್ ಗಳು ಕೇವಲ ನಾಲ್ಕೇ ತಿಂಗಳಲ್ಲಿ ಬರೋಬ್ಬರಿ ಲಾಭ ಗಳಿಸಿದೆ ಮತ್ತು ಗ್ರಾಹಕರನ್ನು ಸೆಳೆದಿದೆ.
ಇದು ರೆಡ್ಮಿ ನೋಟ್ 4 ಮಾಡೆಲ್ ಇಷ್ಟು ಮೊತ್ತದಲ್ಲಿ ಮಾರಾಟ ಕಾಣಲು 6 ತಿಂಗಳು ಬೇಕಾಗಿತ್ತಂತೆ. ಆದರೆ ರೆಡ್ಮಿ ನೋಟ್ 4 ಒಂದೇ ಫೋನ್ ಆಗಿತ್ತು, ರೆಡ್ಮಿ ನೋಟ್ 5 ನಲ್ಲಿ ಎರಡು ಸಿರೀಸ್ ಮೊಬೈಲ್ ಗಳಿವೆ ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ.
ಪ್ರತ್ಯೇಕವಾಗಿ ಈ ಎರಡೂ ಮೊಬೈಲ್ ಗಳು ಎಷ್ಟು ಮಾರಾಟವಾಗಿದೆ ಎಂಬುದನ್ನು ಶಿಯೋಮಿ ತಿಳಿಸಿಲ್ಲ. ಎರಡನ್ನೂ ಒಟ್ಟು ಸೇರಿಸಿ 50 ಲಕ್ಷ ಮಾರಾಟ ಕಂಡಿರುವ ಬಗ್ಗೆ ಮಾತ್ರ ಮಾಹಿತಿ ನೀಡಿದೆ.
ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ ನ ಎಲ್ಲಾ ವೇರಿಯಂಟ್ ನ ಸ್ಮಾರ್ಟ್ ಫೋನ್ ಗಳು ಬಹಳಷ್ಟು ಪ್ರಸಿದ್ಧಿಯನ್ನು ಪಡೆದು ಹೆಚ್ಚಿನ ರೆಡ್ಮಿ ಅಭಿಮಾನಿಗಳ ಹುಟ್ಟಿಗೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ನಾವು ಈ ಎರಡೂ ಫೋನ್ ಗಳ ತಯಾರಿಕೆಯನ್ನು ಹೆಚ್ಚಿಸಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಶ್ರಮಿಸಿದ್ದೇವೆ ಮತ್ತು ಗ್ರಾಹಕರ ಕೈಗೆ ವೇಗವಾಗಿ ಫೋನ್ ಗಳು ಲಭ್ಯವಾಗುವಂತೆ ಮಾಡಿದ್ದೇವೆ ಎಂಬ ಹೇಳಿಕೆಯನ್ನು ಶಿಯೋಮಿ ನೀಡಿದೆ.
ರೆಡ್ಮಿ ನೋಟ್ 5 3ಜಿಬಿ RAM ಮತ್ತು 32ಜಿಬಿ ಸ್ಟೋರೇಜ್ ವೇರಿಯಂಟ್ ನ ಬೆಲೆ ರೂಪಾಯಿ 9,999. ಟಾಪ್ ಎಂಡ್ ವರ್ಷನ್ 4ಜಿಬಿ RAM ಮತ್ತು 64GB ಸ್ಟೋರೇಜ್ ನ ಬೆಲೆ 11,999 ರುಪಾಯಿ. ರೆಡ್ಮಿ ನೋಟ್ 5 ಪ್ರೋ ಆರಂಭಿಕ ಬೆಲೆ 14,999 ರುಪಾಯಿ ಅಂದರೆ ಅದು 4ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ಅವಕಾಶವನ್ನು ಹೊಂದಿದೆ. ಟಾಪ್ ಎಂಡ್ ವರ್ಷನ್ 6ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ಇರುವ ಮೊಬೈಲ್ 16,999 ರುಪಾಯಿಗೆ ಮಾರಾಟ ಕಂಡಿವೆ.
ಒಟ್ಟಾರೆ ಈ ಹಿಂದೆ ಬಿಡುಗಡೆಗೊಂಡಿದ್ದ ಶಿಯೋಮಿಯ ರೆಡ್ಮಿ ಸಿರೀಸ್ ಮೊಬೈಲ್ ಗಳಿಗಿಂತ ಈ ಎರಡೂ ಮೊಬೈಲ್ ಗಳು ಹೆಚ್ಚು ಜನರನ್ನು ಕಡಿಮೆ ಸಮಯದಲ್ಲಿ ತಲುಪಲು ಸಾಧ್ಯವಾಗಿದೆ. ರೆಡ್ಮಿ ನೋಟ್ 3 ಮತ್ತು ರೆಡ್ಮಿ ನೋಡ್ 4 ಗಳು ಪ್ರಸಿದ್ಧಿ ಪಡೆದು ಮಾರಾಟ ಕಂಡಿದ್ದರೂ ಕೂಡ ಈ ವೇಗದಲ್ಲಿ ಮಾರಾಟವಾಗಿರಲಿಲ್ಲ. ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ ಗಳು ಭಾರತೀಯರನ್ನು ಅದೇನು ಮೋಡಿ ಮಾಡಿದೆಯೋ ಗೊತ್ತಿಲ್ಲ. ಒಟ್ಟಾರೆ ಜನ ಮರುಳೋ ಜಾತ್ರೆ ಮರುಳೋ ಅನ್ನುವಂತೆ ಈ ಮೊಬೈಲ್ ಗಳ ಖರೀದಿಯ ಭರಾಟೆ ಜೋರಾಗಿದೆ.
ಹಾಗಾದ್ರೆ ಕಂಪೆನಿಯು ಒಟ್ಟು ಎಷ್ಟು ಮೊತ್ತದ ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ ಮೊಬೈಲ್ ನ್ನು ಮಾರಾಟ ಮಾಡಿದೆ ಶಿಯೋಮಿ ನೀವೇ ಲೆಕ್ಕ ಹಾಕಿಕೊಳ್ಳಿ. ಆದರೆ ಒಟ್ಟಾರೆ ಇಷ್ಟು ದೊಡ್ಡ ಮೊತ್ತದ ಭಾರತೀಯರ ಹಣ ಚೀನಾ ಕಂಪೆನಿಯೊಂದರ ಪಾಲಾಗಿದೆ. ಹೀಗೆ ನಾವು ಚೀನಾ ವಸ್ತುಗಳನ್ನು ಇಷ್ಟರ ಮಟ್ಟಿಗೆ ಖರೀದಿಸುವುದು ಎಷ್ಟು ಸರಿ ಎಂಬುದನ್ನ ಜನಸಾಮಾನ್ಯರೇ ಯೋಚಿಸಬೇಕು.


Click it and Unblock the Notifications








