ವಿಶ್ವದ ಮೊದಲ 108MP ಕ್ಯಾಮೆರಾ ಹೊಂದಿರುವ ಶಿಯೋಮಿ ಫೋನ್ ಹೆಸರು ಅಧಿಕೃತ!!
ಶಿಯೋಮಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನಿನಲ್ಲಿ 108MP ಸಾಮರ್ಥ್ಯದ ಉನ್ನತ ಗುಣಮಟ್ಟದ ಕ್ಯಾಮೆರಾ ವ್ಯವಸ್ಥೆ ಇರಲಿದೆ ಎಂಬ ಸುದ್ದಿ ಇತ್ತೀಚಿಗಷ್ಟೇ ವೈರಲ್ ಆಗಿತ್ತು. ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ 108MP ಸೆನ್ಸಾರ್ ಕ್ಯಾಮೆರಾ ಹೊತ್ತು ಬರಲಿರುವ ಸ್ಮಾರ್ಟ್‌ಫೋನ್ ಯಾವುದು ಎಂಬುದನ್ನು ಶಿಯೋಮಿ ಕಂಪೆನಿ ಬಹಿರಂಗಪಡಿಸಿದೆ. ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ಶಿಯೋಮಿ ತನ್ನ ಭವಿಷ್ಯದ 'ಮಿ ನೋಟ್ 10' ಸ್ಮಾರ್ಟ್‌ಫೋನಿನಲ್ಲಿ 108MP ಸೆನ್ಸಾರ್ ಕ್ಯಾಮೆರಾ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ.

ಹೌದು, ಸ್ಯಾಮ್‌ಸಂಗ್‌ನ 108MP ಐಸೊಸೆಲ್ ಬ್ರೈಟ್ ಎಚ್‌ಎಂಎಕ್ಸ್ ಕ್ಯಾಮೆರಾ ಸೆನ್ಸಾರ್‌ನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸುವ ಕಾರ್ಯವನ್ನು ಶಿಯೋಮಿ ಪ್ರಾರಂಭಿಸಿರುವುದು ಈ ಹಿಂದೆಯೇ ಬಹಿರಂಗವಾಗಿತ್ತು. ಅದರಂತೆ, ಇದಿಗ ಶಿಯೋಮಿಯ ಅಧಿಕೃತ ಖಾತೆಯಿಂದ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾದ ಟೀಸರ್‌ನಲ್ಲಿ ಮಿ ನೋಟ್ 10 108M ಕ್ಯಾಮೆರಾದೊಂದಿಗೆ ಬರುತ್ತಿದೆ ಎಂದು ಖಚಿತಪಡಿದೆ. ಅಂದರೆ, ಶಿಯೋಮಿಯ ಮಿ ನೋಟ್ 10 ವಿಶ್ವದ ಮೊದಲ 108 ಎಂಪಿ ಪೆಂಟಾ ಕ್ಯಾಮೆರಾ ಫೋನ್ ಆಗಿರುತ್ತದೆ ಎಂಬುದನ್ನು ನಾವು ತಿಳಿಯಬಹುದಾಗಿದೆ.

ವಿಶೇಷವೆಂದರೆ, ಶಿಯೋಮಿ ಇಂದು ಟೀಸರ್ ಬಿಡುಗಡೆ ಮಾಡಿರುವ ಹಾಗೂ ನವೆಂಬರ್ 5 ರಂದು ಬಿಡುಗಡೆಗೆ ಸಜ್ಜಾಗಿರುವ ಮಿ ಸಿಸಿ 9 ಪ್ರೊ ಒಂದೇ ಎಂದು ಹೇಳಲಾಗಿದ್ದು, ಚೀನಾದಲ್ಲಿ ಬಿಡುಗಡೆಯಾಗುತ್ತಿರುವ ಮಿ ಸಿಸಿ 9 ಪ್ರೊ 108 ಎಂಪಿ ಪೆಂಟಾ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ವದಂತಿಗಳು ಹೇಳಿವೆ. ಇದೇ ಹೋಲಿಕೆಯನ್ನು ಆಧರಿಸಿ, ಮಿ ನೋಟ್ 10 ಮಿ ಸಿಸಿ 9 ಪ್ರೊನ ಅಂತರರಾಷ್ಟ್ರೀಯ ಆವೃತ್ತಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲು ನಾವು ನವೆಂಬರ್ 5 ರ ವರೆಗೆ ಕಾಯಬೇಕಿರುವುದು ಸ್ಪಷ್ಟ.

ಇನ್ನು 108MP ಸೆನ್ಸಾರ್ ಕ್ಯಾಮೆರಾ ವಿಷಯದ ಬಗ್ಗೆ ಮಾತನಾಡುವುದಾದರೆ, ಈಗಾಗಲೇ ಐಸೊಸೆಲ್ ಬ್ರೈಟ್ ಎಚ್‌ಎಂಎಕ್ಸ್ ಕ್ಯಾಮೆರಾ ಸಂವೇದಕದ ಸಾಮೂಹಿಕ ಉತ್ಪಾದನೆಯನ್ನು ಸ್ಯಾಮ್‌ಸಂಗ್ ಪ್ರಾರಂಭಿಸಿ ವಿತರಣೆ ಕೂಡ ಮಾಡಿದೆ ಎಂದುವರದಿಗಳು ಹೇಳಿವೆ. ಈ ಹೊಸ ಸೆನ್ಸಾರ್ 12032×9024 ಪಿಕ್ಸೆಲ್ ರೆಸಲ್ಯೂಶನ್‌ನಲ್ಲಿ 108MP ದರ್ಜೆಯ ಫೋಟೋಗಳನ್ನು ಸೆರೆಹಿಡಿಯುತ್ತದೆ. ಇನ್ನು, ಹೊಸ ಸೆನ್ಸಾರ್ 64MP ಸೆನ್ಸಾರ್‌ನ ಮುಂದಿನ ಆವೃತ್ತಿ ಎಂಬಂತೆ 0.8 ಮೈಕ್ರೊಮೀಟರ್ (µm) ಪಿಕ್ಸೆಲ್ ಗಾತ್ರದೊಂದಿಗೆ ಬರಲಿದೆ ಎಂದು ಹೇಳಲಾಗಿದೆ.

ಶಿಯೋಮಿ ಅಧಿಕೃತವಾಗಿ ಹೇಳಿರುವಂತೆ ಮಿ ನೋಟ್ 10 108MP ಸೆನ್ಸಾರ್ ಕ್ಯಾಮೆರಾ ಹೊಂದಿರುತ್ತದೆ. ಇದು ಸ್ನಾಪ್‌ಡ್ರಾಗನ್ 730 ಜಿ ಗಿಂತ ಕಡಿಮೆ-ಶಕ್ತಿಯುತ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಅಥವಾ ಹೆಚ್ಚು ಶಕ್ತಿಶಾಲಿ (ಸ್ನಾಪ್‌ಡ್ರಾಗನ್ 855) ಅನ್ನು ಸಹ ಹೊಂದಬಹುದು. ಇದು ಕೇವಲ ಊಹಾಪೋಹಗಳು ಮಾತ್ರ. ಫಲಿತಾಂಶವು ವಿಭಿನ್ನವಾಗಿರಬಹುದು. ಇದರ ಜೊತೆಗೆ ಮತ್ತೊಂದು ವದಂತಿ ಎಂದರೆ, ಮಿ ನೋಟ್ 10 ರ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ ಆದರೆ, ಅದು ನವೆಂಬರ್‌ನಲ್ಲಿಯೂ ಇರಬೇಕು ಎನ್ನುತ್ತಿವೆ ವರದಿಗಳು.


Click it and Unblock the Notifications