ಖರೀದಿಸಿದ ಕೇವಲ ಒಂದೇ ತಿಂಗಳಿನಲ್ಲಿ ಶಿಯೋಮಿ ಫೋನ್ ಸ್ಪೋಟ!
ಭಾರತದ ನಂ 1 ಮೊಬೈಲ್ ಕಂಪೆನಿಯಾಗಿ ಗುರುತಿಸಿಕೊಂಡಿರುವ ಶಿಯೋಮಿಯ ಇತ್ತೀಚಿನ ಸ್ಮಾರ್ಟ್‌ಫೋನ್ ಒಂದು ಸ್ಪೋಟಗೊಂಡಿರುವ ಪ್ರಕರಣ ವರದಿಯಾಗಿದೆ. ಇತ್ತೀಚಿಗಷ್ಟೇ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿ ಸಂಚಲನ ಮೂಡಿಸಿರುವ ಶಿಯೋಮಿ 'ರೆಡ್ ಮಿ ನೋಟ್' ಸರಣಿಯ 'ರೆಡ್ ಮಿ ನೋಟ್ 7S' ಸ್ಮಾರ್ಟ್‌ಫೋನ್ ಸ್ಪೋಟಗೊಂಡಿರುವುದಾಗಿ ತಿಳಿದುಬಂದಿದ್ದು, ಮೊಬೈಲ್ ಖರೀದಿಸಿದ ಕೇವಲ ಒಂದೇ ತಿಂಗಳಿನಲ್ಲಿ ಮೊಬೈಲ್ ಸ್ಪೋಟವಾಗಿದೆ ಎಂದು ಮೊಬೈಲ್ ಮಾಲಿಕ ಹೇಳಿದ್ದಾರೆ.

ಹೌದು, ಮುಂಬಯಿಯ ಗ್ರಾಹಕರೋರ್ವರು ತಾವು ಹೊಸದಾಗಿ ಖರೀದಿಸಿದ ಫೋನ್ ಸ್ಪೋಟಗೊಂಡಿದೆ ಎಂದು ಫೇಸ್‌ಬುಕ್‌ನಲ್ಲಿ ಆಳಲು ತೋಡಿಕೊಂಡಿದ್ದಾರೆ. ಈಶ್ವರ್ ಚೌಹಾಣ್ ಎಂಬ ವ್ಯಕ್ತಿ ಆಕ್ಟೋಬರ್ ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ರೆಡ್ ಮಿ ನೋಟ್ 7S ಸ್ಮಾರ್ಟ್‌ಫೋನ್ ಖರೀದಿಸಿದ್ದರು. ಆದರೆ, ನವೆಂಬರ್ ಮೊದಲ ವಾರದಲ್ಲಿ ಟೇಬಲ್ ಮೇಲಿರಿಸಿದ್ದ ಸ್ಮಾರ್ಟ್‌ಫೋನ್‌ನಿಂದ ಹೊಗೆ ಏಳಲಾರಂಭಿಸಿ ಸುಟ್ಟು ಹೋಗಿತ್ತು ಎಂದು ಅವರು ಹೇಳಿಕೊಂಡಿರುವುದನ್ನು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ತನ್ನ ಹೊಸ ಸ್ಮಾರ್ಟ್‌ಫೋನನ್ನು ಟೇಬಲ್ ಮೇಲಿರಿಸಿದ್ದ ಸಂದರ್ಭದಲ್ಲಿ ಫೋನನ್ನು ಚಾರ್ಜ್ ಮಾಡುತ್ತಿರಲಿಲ್ಲ, ಅದರ ಜೊತೆಗೆ ಕೆಳಗಡೆಯೂ ಬೀಳಿಸಿಲ್ಲ. ಆದರೂ, ಸ್ಮಾರ್ಟ್‌ಫೋನ್ ಸುಟ್ಟು ಹೋಗಿದೆ ಎಂದು ಚೌಹಾಣ್ ಬರೆದುಕೊಂಡಿದ್ದಾರೆ. ಇನ್ನು ಥಾಣೆಯಲ್ಲಿನ ಶಿಯೋಮಿ ಅಧಿಕೃತ ಸೆಂಟರ್‌ಗೆ ತೆರಳಿ ಈ ಫೋನ್ ಸ್ಫೋಟದ ಕುರಿತು ಮಾಹಿತಿಯೂ ನೀಡಿದ್ದರು. ಆ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿಯಲ್ಲಿ ಸಮಸ್ಯೆ ಇತ್ತು ಎಂದು ಸೆಂಟರ್‌ನವರೇ ತಿಳಿಸಿದ್ದಾಗಿ ಈಶ್ವರ್ ಅವರು ಬರೆದುಕೊಂಡಿದ್ದಾರೆ.

ಆದರೆ, ಈ ಗುರುತರ ಆರೋಪವನ್ನು ಶಿಯೋಮಿ ಕಂಪೆನಿ ನಿರಾಕರಿಸಿದ್ದು, ಬಾಹ್ಯ ಒತ್ತಡದಿಂದ ಮತ್ತು ಗ್ರಾಹಕರು ಅಜಾಗರೂಕತೆಯಿಂದ ಬಳಸಿದ್ದರಿಂದ ಫೋನ್‌ಗೆ ಹಾನಿಯಾಗಿರಬಹುದು ಇದಕ್ಕೆ ಗ್ರಾಹಕರ ನಿರ್ಲಕ್ಷ್ಯವೇ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಪ್ರಮುಖ ಕಾರಣ ಎಂದು ಕಂಪೆನಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದೆ. ಪ್ರತಿ ಬಾರಿ ತನ್ನ ಕಂಪೆನಿಯ ಸ್ಮಾರ್ಟ್‌ಫೋನ್ ಸ್ಪೋಟವಾದಗಲೆಲ್ಲಾ ಶಿಯೋಮಿ ಕಂಪೆನಿ ಇದೇ ರೀತಿ ಪ್ರತಿಕ್ರಿಯೆ ನೀಡಿ ನುಣುಚಿಕೊಳ್ಳುತ್ತಿರುವುದನ್ನು ನಾವು ನೋಡಬಹುದಾಗಿದೆ.

ಇನ್ನು ಯಾವುದೇ ಸ್ಮಾರ್ಟ್‌ಫೋನ್ ಸ್ಪೋಟವಾಗಲೂ ಬಳಕೆದಾರರ ಕಾರಣ ಕೂಡ ಇರಬಹುದು. ಸ್ಮಾರ್ಟ್‌ಫೋನನ್ನು ಕಳಪೆ ಚಾರ್ಜರ್‌ನಿಂದ ಜಾರ್ಜ್ ಮಾಡುವುದು, ಸ್ಮಾರ್ಟ್‌ಫೋನನ್ನು ಮೇಲಿನಿಂದ ಬೀಳಿಸುವುದು, ನೇರವಾಗಿ ಬಿಸಿಲಿಗೆ ಹೆಚ್ಚು ಕಾಲ ಇಡುವುದು ಮತ್ತು ಚಾರ್ಜ್ ಹಾಕಿಕೊಂಡು ಫೋನನ್ನು ಬಳಸುವುದು ಸ್ಮಾರ್ಟ್‌ಫೋನ್ ಸ್ಪೋಟಕ್ಕೆ ಕಾರಣವಾಗುತ್ತದೆ. ಹಾಗಾಗಿ, ಇಂತಹ ತಪ್ಪುಗಳನ್ನು ಎಂದಿಗೂ ಮಾಡದಿರಿ. ಇಲ್ಲವಾದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಕೂಡ ಸ್ಪೋಟಗಂಡರೆ ಆಶ್ಚರ್ಯವೇನಿಲ್ಲ.


Click it and Unblock the Notifications








