ಸ್ಮಾರ್ಟ್ ಕ್ಯಾಮೆರಾ ನಿರ್ಮಿಸಲು ಮುಂದಾದ ಶಿಯೋಮಿ: ದೊಡ್ಡ ಕಂಪನಿಗೆ ಗಾಳ ಹಾಕಿದೆ...!
ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಶಿಯೋಮಿ, ದಿನಕ್ಕೊಂದು ಹೊಸ ವಿಚಾರಕ್ಕೆ ಸುದ್ದಿಯಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ವಸ್ತುಗಳನ್ನು ಬಿಡುಗಡೆ ಮಾಡುತ್ತಾ ಯಶಸ್ಸು ಸಾಧಿಸುತ್ತಿರುವ ಶಿಯೋಮಿ, ಜಾಗತಿಕವಾಗಿ 5ನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾಕರ ಕಂಪನಿ ಎನ್ನುವ ಪಟ್ಟವನ್ನು ಪಡೆದುಕೊಂಡಿದೆ.

ಇದೇ ಸಂದರ್ಭದಲ್ಲಿ ಶಿಯೋಮಿ ಪಾಳಯದಿಂದ ಸುದ್ದಿಯೊಂದು ಬಂದಿದ್ದು, ಕ್ಯಾಮೆರಾ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಸೆಳೆದಿರುವ ಗೋ ಪ್ರೋ ಕ್ಯಾಮೆರಾ ಕಂಪನಿಯನ್ನು ಶಿಯೋಮಿ ಕೊಂಡುಕೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ಈ ಕುರಿತು ಒಂದು ಸುತ್ತಿನ ಮಾತುಕತೆಯೂ ನಡೆದಿದ್ದು, ಶಿಯೋಮಿ ದೊಡ್ಡ ಮೊತ್ತದ ಆಫರ್ ವೊಂದನ್ನು ಗೋ ಪ್ರೋಗೆ ನೀಡಿದೆ ಎನ್ನಲಾಗಿದೆ.
ಈಗಾಗಲೇ ಆಕ್ಷನ್ ಕ್ಯಾಮೆರಾ ವಿಭಾಗದಲ್ಲಿ ಹೊಸ ಭಾಷ್ಯವನ್ನು ಬರೆದಿರುವ ಗೋ ಪ್ರೋ, ಭಾರತ ಸೇರಿದಂತೆ ಜಾಗತಿಕವಾಗಿ ಖ್ಯಾತಿಯನ್ನು ಗಳಿಸಿಕೊಂಡಿದೆ. ಸದ್ಯ ತನ್ನ ಉದ್ಯಮವನ್ನು ವಿಸ್ತರಿಸಿಕೊಳ್ಳಲು, ಪಾಲುದಾರಿಕೆಯನ್ನು ಇಲ್ಲವೇ ಇನ್ನೊಂದು ಕಂಪನಿಯೊಂದಿಗೆ ವಿಲೀನವಾಗಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಕಂಪನಿಯ CEO ನಿಕ್ ಸಂದರ್ಶವೊಂದರಲ್ಲಿ ಮಾಹಿತಿಯನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಶಿಯೋಮಿ ಸದ್ಯ ಗೋ ಪ್ರೋವನ್ನು ತನ್ನ ಒಡಲಿಗೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ.

ಮಾರುಕಟ್ಟೆಗೆ ವಿವಿಧ ಉತ್ಪನ್ನಗಳನ್ನು ತನ್ನದೇ ಶೈಲಿಯಲ್ಲಿ ಪರಿಚಯ ಮಾಡುತ್ತಿರುವ ಶಿಯೋಮಿ, ಗೋ ಪ್ರೋವನ್ನು ಕೊಳ್ಳುಲು ಮುಂದಾಗಿರುವುದು ಆಚ್ಚರ್ಯಕ್ಕೆ ಕಾರಣವಾಗಿದೆ. ಶಿಯೋಮಿ ಕ್ಯಾಮೆರಾ ವಿಭಾಗಕ್ಕೂ ಕೈ ಹಾಕಲು ಚಿಂತನೆ ನಡೆಸಿತ್ತು, ಆದರೆ ಈಗ ಅದನ್ನು ಬಿಟ್ಟು ಗೋ ಪ್ರೋ ಕೊಳ್ಳಲು ಮುಂದಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ಶಿಯೋಮಿ ಒಂದು ವೇಳೆ ಗೋ ಪ್ರೋವನ್ನು ಕೊಂಡುಕೊಳ್ಳದೆ ಇದ್ದರೇ, ತನ್ನದೇ ಆಕ್ಷನ್ ಕ್ಯಾಮೆರಾವನ್ನು ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸಲಿದೆ. ಇದಲ್ಲದೇ ಕ್ಯಾಮೆರಾದಲ್ಲಿ ಢ್ರೋಣ್ ಹೆಚ್ಚು ಸದ್ದು ಮಾಡುತ್ತಿದ್ದು, ಆ ವಿಭಾಗದಲ್ಲಿಯೂ ಮೂಗು ತೂರಿಸಲು ಈಗಾಗಲೇ ತಯಾರಿಯನ್ನು ನಡೆಸಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಹವಾ ಎಬ್ಬಿಸುತ್ತಿರುವ ಶಿಯೋಮಿ. ಶೀಘ್ರವೇ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯನ್ನು ಹೊಂದಲಿದೆ.


Click it and Unblock the Notifications








