'ರೆಡ್ಮಿ ನೋಟ್' ಸರಣಿಯಲ್ಲಿ ಊಹಿಸಲಾಗದಂತಹ ದಾಖಲೆ ಸೃಷ್ಟಿಸಿತು ಶಿಯೋಮಿ!
ಚೀನಾದ ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ತನ್ನ ಉಪ-ಬ್ರಾಂಡ್ 'ರೆಡ್‌ಮಿ ನೋಟ್' ಸರಣಿಯಲ್ಲಿ ದಾಖಲೆ ಪ್ರಮಾಣದ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಶಿಯೋಮಿ 2014ರಲ್ಲಿ ತನ್ನ ರೆಡ್‌ಮಿ ನೋಟ್ ಸರಣಿ ಲೈನ್-ಅಪ್ ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಜಾಗತಿಕವಾಗಿ 100 ಮಿಲಿಯನ್‌ಗಿಂತಲೂ(ಒಂದು ಕೋಟಿಗೂ ಹೆಚ್ಚು) ಹೆಚ್ಚು ರೆಡ್‌ಮಿ ನೋಟ್ ಫೋನ್‌ಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಈ ಬಗ್ಗೆ ಶಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಹೌದು, ಶಿಯೋಮಿ ತನ್ನ ಉಪಬ್ರ್ಯಾಂಡ್ ಆಗಿರುವ ರೆಡ್‌ಮಿ ನೋಟ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ರೆಡ್‌ಮಿ ನೋಟ್ ಬ್ರ್ಯಾಂಡ್ ಅಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಮತ್ತು ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿ ಶಿಯೋಮಿ ವಿಶ್ವದಾದ್ಯಂತ ಹೆಸರುಗಳಿಸಿದೆ. ಇದೀಗ ಈ ಸಾಧನೆ ಮುಗಿಲು ಮುಟ್ಟಿದ್ದು, ಜಾಗತಿಕವಾಗಿ 100 ಮಿಲಿಯನ್‌ಗಿಂತಲೂ(ಒಂದು ಕೋಟಿಗೂ ಹೆಚ್ಚು) ಹೆಚ್ಚು ರೆಡ್‌ಮಿ ನೋಟ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ಈ ಸಾಧನೆಯ ಬಗ್ಗೆ ಮನು ಕುಮಾರ್ ಜೈನ್ ಅವರು ಕೊಂಡಾಡಿದ್ದಾರೆ.
#RedmiNote Seriesನ ಅದ್ಭುತ ಯಶಸ್ಸಿಗೆ ನಾನು ವೈಯಕ್ತಿಕವಾಗಿ ಮಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. 100 ಮಿಲಿಯನ್ #RedmiNote ಫೋನ್‌ಗಳನ್ನು ನಾವು ಜಗತ್ತಿನಾದ್ಯಂತ ಮಾರಾಟ ಮಾಡಿದ್ದೇವೆ. ಇಂದು ಕೂಡ ನಾವು ನಮ್ಮ ಅತ್ಯುತ್ತಮ #RedmiNote ನೊಂದಿಗೆ ಬಂದಿದ್ದೇವೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಶಿಯೋಮಿ ಕಂಪನಿ ಭಾರತದಲ್ಲಿ ನೆನ್ನೆಯಷ್ಟೇ ಬಿಡುಗಡೆ ಮಾಡಿದ ರೆಡ್‌ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ ಬಗೆಗೆ ಉಲ್ಲೇಖಿಸಿರುವ ಅವರು ರೆಡ್‌ಮಿ ನೋಟ್ 8 ಪ್ರೊ ಕ್ಯಾಮೆರಾದ ಬಗ್ಗೆ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಚೀನಾದಂತಹ ಬೆಲೆ-ಸೂಕ್ಷ್ಮ ಮಾರುಕಟ್ಟೆಗಳಲ್ಲಿ ರೆಡ್‌ಮಿ ನೋಟ್ ಸರಣಿಯು ವಿಶೇಷವಾಗಿ ಯಶಸ್ವಿಯಾಗಿದೆ. ಇನ್ನು ಇತ್ತೀಚಿನ ರೆಡ್‌ಮಿ ನೋಟ್ ಸರಣಿಯ ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಎರಡೂ ಫೋನ್‌ಗಳನ್ನು ಆಗಸ್ಟ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಅಕ್ಟೋಬರ್ 16ರಂದು ಭಾರತೀಯ ಮಾರುಕಟ್ಟೆಗೆ ಎರಡೂ ಫೋನ್‌ಗಳು ಔಪಚಾರಿಕವಾಗಿ ಪ್ರವೇಶಿಸಿವೆ. ಫೋನ್‌ಗಳು ಹೆಲಿಯೊ ಜಿ 90 ಟಿ, 64MP ಕ್ವಾಡ್-ಕ್ಯಾಮೆರಾ ಸೆಟಪ್, 4,500mAh ಬ್ಯಾಟರಿ ಮತ್ತು 20MP ಸೆಲ್ಫೀ ಕ್ಯಾಮೆರಾದಂತಹ ಫೀಚರ್ಸ್ ಹೊತ್ತಿವೆ.
ರೆಡ್ಮಿ ನೋಟ್ 8 ಎರಡಡು ರೂಪಾಂತರಗಳಲ್ಲಿ ಹಾಗೂ ರೆಡ್ಮಿ ನೋಟ್ 8 ಪ್ರೊ ಮೂರು ರೂಪಾಂತರಗಳೊಂದಿಗೆ ಭಾರತದಕ್ಕೆ ಎಂಟ್ರಿ ನೀಡಿವೆ. 4 ಜಿಬಿ RAM + 64 ಜಿಬಿ ಸಂಗ್ರಹ ಮಾದರಿಯ ರೆಡ್ಮಿ ನೋಟ್ 8 ಬೆಲೆ 9,999 ರೂ.ಗಳಾದರೆ, 6 ಜಿಬಿ RAM + 128 ಜಿಬಿ ಮಾದರಿಯ ಫೋನ್ ಬೆಲೆ ಕೇವಲ 12,999 ರೂ.ಗಳಾಗಿವೆ. ಹಾಗೆಯೇ, 6 ಜಿಬಿ RAM + 64 ಜಿಬಿ ಮೆಮೊರಿ ಮಾದರಿಯ ರೆಡ್ಮಿ ನೋಟ್ 8 ಪ್ರೊ 14,999 ರೂ., 6 ಜಿಬಿ RAM + 128 ಜಿಬಿ ಬೆಲೆ 15,999 ರೂ. ಮತ್ತು 8 ಜಿಬಿ RAM+ 128 ಜಿಬಿ ಮಾದರಿ ಫೋನಿನ ಬೆಲೆ ಕೇವಲ 17,999 ರೂ.ಗಳಾಗಿವೆ. ಇನ್ನು ಇದೇ ಅಕ್ಟೋಬರ್ 21 ರಿಂದಲೇ ದೇಶದಲ್ಲಿ ಎಲ್ಲಾ ಮಾದರಿ ಫೋನ್‌ಗಳು ಮಾರಾಟಕ್ಕೆ ಬರುತ್ತಿವೆ.


Click it and Unblock the Notifications








