'ಡಿಟಿಹೆಚ್ ಮತ್ತು ಕೇಬಲ್' ನಿಯಮ ಬದಲಾವಣೆ!..ಬೆಚ್ಚಿಬಿದ್ದ ಕೇಬಲ್ ಮಾಲಿಕರು!!
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಅಧಿಸೂಚನೆ ಪ್ರಕಾರ ಇದೇ ಡಿಸೆಂಬರ್ 29 ರಿಂದ ಕೇಬಲ್ ಸೇವೆಗಳಲ್ಲಿ ಭಾರೀ ಬದಲಾವಣೆಯಾಗುವುದು ನಿಮಗೀಗಾಗಲೇ ತಿಳಿದಿರಬಹುದು. ಈ ನಿಯಮದಿಂದ ಇನ್ನು ಮುಂದೆ ಗ್ರಾಹಕರು ಆಯ್ಕೆ ಮಾಡಿಕೊಂಡ ಚಾನೆಲ್ಗಳಿಗೆ ಮಾತ್ರ ದರ ಪಾವತಿಸಿದರೆ ಸಾಕು. ಹೊಸವರ್ಷದಿಂದ ನಿಮ್ಮ ಕೇಬಲ್ ಹಾಗೂ ಡಿಟಿಎಚ್ ಮಾಸಿಕ ದರ ಬದಲಾಗಲಿದ್ದು, ಹೊಸ ದರಗಳು ಜನವರಿ 1 ರಿಂದ ಜಾರಿಯಾಗಲಿವೆ. ಇದು ಹಲವು ಗೊಂದಲಗಳನ್ನು ಸಹ ಮೂಡಿಸಿದೆ.
ಹೌದು, ಟೆಲಿಕಾಂ ಅಕ್ರಮ ಸಕ್ರಮಗಳಿಗೆ ಕತ್ತರಿ ಹಾಕಿ ಡಿಟಿಎಚ್ ಮತ್ತು ಕೇಬಲ್ ವಿತರಕರಿಗೆ ದಿಗಿಲು ಮೂಡಿಸಿದ್ದ ಟ್ರಾಯ್, ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಟ್ರಾಯ್ ನಿಯಮದಂತೆ ಇನ್ನು ಮುಂದೆ ಡಿಟಿಎಚ್ ಮತ್ತು ಕೇಬಲ್ ಸೇವೆಗಳೂ ಸಹ ಬೇಡಿಕೆ ಅನ್ವಯ ಲಭ್ಯವಾಗಲಿದೆ. 2016ರಲ್ಲೇ ಬೇಡಿಕೆಗೆ ಅನುಗುಣವಾಗಿ ಡಿಟಿಎಚ್ ಮತ್ತು ಕೇಬಲ್ ಸೇವೆಗಳು ಸಿಗುವಂತೆ ಮಾಡಲು ಯೋಜಿಸಿದ್ದ ಟ್ರಾಯ್ ಇದೀಗ ಕಾರ್ಯಗತಿಗೊಳಿಸಲಿದೆ.

ಗ್ರಾಹಕರಿಗೆ ಅನಗತ್ಯ ಚಾನೆಲ್ ಸೇವೆಯನ್ನು ತಪ್ಪಿಸಲು ಹಾಗೂ ಅವರ ಇಷ್ಟದ ವಾಹಿನಿ ನೋಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಹೊಸ ದರ ಜಾರಿಗೊಳಿಸಲಾಗಿದೆ' ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಈ ಬಗ್ಗೆ ತಿಳಿಸಿದ್ದಾರೆ. ಆದರೆ, ಇದರಿಂದ ಕೇಬಲ್ ಬಿಲ್‌ಗಳು ಮಾತ್ರ ಗಗನಕ್ಕೇ ಏರಲಿವೆ ಎಂಬ ಮಾತುಗಳು ಸಹ ಇವೆ. ಹಾಗಾದರೆ, ಕೇಬಲ್ ಬಿಲ್‌ಗಳು ಎಷ್ಟು ಹೆಚ್ಚಾಗಬಹುದು? ಇದು ಟಿವಿ ವೀಕ್ಷಕರಿಗೆ ಉತ್ತಮವೇ? ಕೇಬಲ್ ಮಾಲಿಕರು ಏನೆಂದು ಹೇಳುತ್ತಿದ್ದಾರೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮ?
ಈ ಮೊದಲು ಕೇಬಲ್ ಮತ್ತು ಡಿಟಿಹೆಚ್ ಮಾಲಿಕರು ಹಣ ನಿಗದಿ ಮಾಡುತ್ತಿದ್ದರು. ಆದರೆ, ಈಗ ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುವಂತಹ ಆಯ್ಕೆಯನ್ನು ಈ ತರಲಾಗಿದೆ. ಇದರಿಂದ, ಟಿವಿ ಗ್ರಾಹಕ ತನಗೆ ಬೇಕಾದ ಒಂದು ಚಾನೆಲ್ ಪಡೆಯಲು ಇಡೀ ಗುಂಪನ್ನು ಅಥವಾ ಪ್ರೀಮಿಯಂ ಚಾನೆಲ್‌ಗಳ ಸಮೂಹವನ್ನು ಕೊಳ್ಳುವುದರಿಂದ ಪಾರಾಗಬಹುದಾಗಿದ್ದು, ತನ್ನ ಇಚ್ಚೆಯ ಟಿವಿ ಚಾನಲ್ ಅನ್ನು ಚಾನಲ್‌ಗೆ ಹಣನೀಡಿ ನೋಡಬಹುದಾಗಿದೆ. ಇದು ಡಿ. 29 ರಿಂದ ಜಾರಿಯಾಗುತ್ತಿದೆ.

ನೂತನ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳಲ್ಲಿ ಏನೆಲ್ಲಾ ಇರಲಿದೆ?
ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುವಂತಹ ಆಯ್ಕೆಯನ್ನು ಈ ತರಲಾಗಿದೆ. ಈ ಚಾನೆಲ್‌ಗಳ ಗುಂಪು ರೂಪಿಸುವ ಹೊಣೆ ವಿತರಕರದ್ದಾಗಿದೆ. ಆದರೆ, ಪೇ ಚಾನೆಲ್‌ಗಳನ್ನು ಉಚಿತ ಚಾನೆಲ್‌ಗಳೊಂದಿಗೆ ಜೋಡಿಸಿ ಗುಂಪು ರಚಿಸುವಂತಿಲ್ಲ ಎಂಬುದಾಗಿ ನಿಯಮದಲ್ಲಿ ಹೇಳಲಾಗಿದೆ. ಅಲ್ಲದೆ ಎಸ್‌ಡಿ ಮತ್ತು ಹೈ ಹೆಚ್‌ಡಿ ಚಾನೆಲ್‌ಗಳನ್ನು ಪ್ರತ್ಯೇಕ ಗುಂಪುಗಳಲ್ಲಿ ನೀಡಬೇಕು. 19 ರೂ.ಗಳಿಗಿಂತ ಹೆಚ್ಚು ದರವಿರುವ ಚಾನೆಲ್‌ಗಳನ್ನು ಗ್ರಾಹಕರಿಗೆ ಪ್ರತ್ಯೇಕ ನೀಡಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

130 ರೂ.ಗಳಿಗೆ ನಿಗದಿ ಸೇವೆ!
ನೂತನ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳು ಜಾರಿಯಾದರೂ 100 'ಉಚಿತ' ಚಾನೆಲ್‌ಗಳು ಗ್ರಾಹಕರಿಗೆ ಲಭ್ಯವಿರಲಿವೆ. ದೂರದರ್ಶನ, ಸ್ಟಾರ್ ಭಾರತ್, ಝೀ ಅನ್ಮೋಲ್ ರೀತಿಯ 100 'ಉಚಿತ' ಚಾನೆಲ್‌ಗಳು ಗ್ರಾಹಕರಿಗೆ ಲಭ್ಯವಿರಲಿದೆ. ಇದಕ್ಕೆ ಕೊಡಬೇಕಾದ ನಿರ್ವಹಣಾ ಮೊತ್ತ 130 ರೂ. ಎಂದು ನಿಗದಿಪಡಿಸಲಾಗಿದೆ. ಗ್ರಾಹಕರಿಗೆ ಇದು ಅತ್ಯುತ್ತಮವಾಗಿದ್ದು, ಕೇಬಲ್ ಮಾಲಿಕರಿಗೆ ಹೆಚ್ಚು ಹೊಡೆತ ಬೀಳಲಿದೆ. ಇವೆಲ್ಲವಕ್ಕಿಂತ ಚಾನೆಲ್‌ಗಳ ದರವನ್ನು ಪ್ರಸಾರ ಸಂಸ್ಥೆಗಳು ನಿರ್ಧರಿಸುವುದರಿಂದ ಕೇಬಲ್ ಬಿಲ್ ಕೂಡ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಇದು ಟಿವಿ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ತನ್ನ ಇಚ್ಚೆಯ ಟಿವಿ ಚಾನೆಲ್ ಆಯ್ಕೆ!
ಟ್ರಾಯ್ ಹೊರಡಿಸಿರುವ ಹೊಸ ನಿಯಮದಿಂದ ಅನಗತ್ಯ ಚಾನೆಲ್ಗಳ ಚಂದಾ ಕಟ್ಟುವುದು ತಪ್ಪಲಿದೆ ಎಂದು ಹೇಳಬಹುದು. ಏಕೆಂದರೆ, ಟಿವಿ ಚಾನೆಲ್‌ಗಳ ದರವನ್ನು ಆಯಾ ಪ್ರಸಾರ ಸಂಸ್ಥೆಗಳು ನಿರ್ಧರಿಸಲಿರುವುದರಿಂದ ಎಲ್ಲ ಚಾನೆಲ್‌ಗಳು ತನ್ನ ಎ-ಲಾ-ಕಾರ್ಟೆ ದರವನ್ನು ಪರೀಷ್ಕರಿಸಲಿವೆ. ಗ್ರಾಹಕರು ಬೇಕಾದ ಚಾನಲ್ ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾದ ಆಯ್ಕೆ ಇನ್ನು ಸಿಗಲಿದೆ. ಹಾಗಾಗಿ, ಜನವರಿಯಿಂದ ಹೊಸ ದರಗಳನ್ನು ನೀಡಬೇಕಾಗುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಲಾಭವಾಗುವ ಲಕ್ಷಣಗಳನ್ನು ಹೊಂದಿದ್ದರೂ ಸಹ, ಕೆಲವೊಮ್ಮೆ ಇದರಿಂದ ಟಿವಿ ವೀಕ್ಷಕರಿಗೆ ತೊಂದರೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಇದು ಕೇಬಲ್ ಮಾಲಿಕರಿಗೆ ಉರುಳು!
ಆಯಾ ಪ್ರಸಾರ ಸಂಸ್ಥೆಗಳಿಗೆ ನೀಡಿದೆ. ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್‌ನ್ನು ವಿತರಕರಿಗೆ ಬಿಡಿಯಾಗಿ ನೀಡುವ ಆಯ್ಕೆಯನ್ನು ಒದಗಿಸಿರುವುದು ಕೇಬಲ್ ಮಾಲಿಕರಿಗೆ ಉರುಳಾಗಿದೆ. ಕೇವಲ 130 ರೂ.ಗೆ ಕೇಬಲ್ ಸೇವೆಯನ್ನು ನೀಡಬೇಕಾದ ಪರಿಸ್ಥಿತಿ ಅವರಿಗೆ ಬರುತ್ತದೆ ಎಂದು ಹೇಳಲಾಗಿದೆ. ಗ್ರಾಹಕರಿಗೆ ಹೆಚ್ಚೇನು ಉಪಯೋಗವಾಗದ ಈ ನಿಯಮದಿಂದ ಟಿವಿ ವೀಕ್ಷಕ ಹಾಗೂ ಪ್ರಸಾರಕರ ನಡುವೆ ದಲ್ಲಾಳಿಗಳಂತೆ ಇದ್ದ ಕೇಬಲ್ ಮಾಲಿಕರಿಗೆ ಇದು ನುಂಗಲಾರದ ತುತ್ತಾಗಬಹುದು. ಇದರಿಂದ ಕೇಬಲ್ ಸೇವೆಯಲ್ಲಿ ವ್ಯತ್ಯಾಸ ಕೂಡ ಆಗಬಹುದು ಮತ್ತು ಪ್ರಸ್ತುತ ಉದ್ಯಮ ನೆಲ ಕಚ್ಚಬಹುದು ಎಂದು ಅಭಿಪ್ರಾಯಪಡಲಾಗಿದೆ.

ಕೇಬಲ್ ಮಾಲಿಕರು ಹೇಳುವುದೇನು?
ಸರ್ಕಾರದ ಹೊಸ ನಿಯಮದಿಂದ ಈಗ ಟಿವಿ ಚಾನೆಲ್ಗಳ ಪ್ರಸಾರಕರು ಹೆಗ್ಗಿಲ್ಲದೆ ಹೊಸದಾಗಿ ಪ್ರಕಟಿಸುತ್ತಿರುವ ಚಾನೆಲ್ಗಳ ದರವನ್ನು ಕಂಡ ಗ್ರಾಹಕರು ಹಾಗೂ ಕೇಬಲ್ ಟಿವಿ ಆಪರೇಟರ್ಗಳು ಬೆಚ್ಚಿ ಬಿದ್ದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಮನೊರಂಜನೆ ಬಯಸುವ ಪ್ರತಿ ಕುಟುಂಬಕ್ಕೆ ಕಡಿಮೆ ದರದಲ್ಲಿ ಚಾನೆಲ್ಗಳನ್ನು ನೀಡುತ್ತ ಬದುಕು ಕಟ್ಟಿಕೊಂಡ ಈ ಕೇಬಲ್ ಉದ್ಯಮದ ಸಾವಿರಾರು ಉದ್ಯೋಗಿಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ಒಂದು ಕಾಲದಲ್ಲಿ ಬಡವರು ಉಳ್ಳವರ ಮನೆಗಳಿಗೋಗಿ ಟಿವಿ ವೀಕ್ಷಿಸುತ್ತಿದ್ದರು. ಆದರೆ ಆ ಕಾಲ ಮತ್ತೆ ಮರಳಿ ಬಂದರು ಆಶ್ಚರ್ಯವಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಮತ್ತು ಡಿಟಿಎಚ್ ನವರ ತಾಳಕ್ಕೆ ಕುಣಿಯದೆ ಚಾನೆಲ್ಗಳ ಪ್ರಸಾರಕರಿಗೆ ಮೂಗುದಾರ ಹಾಕಲಿ. ತಕ್ಷಣ ಪ್ರಸಾರಕರ ಸಭೆ ಕರೆದು ಚಾನೆಲ್ಗಳನ್ನು ಕಡಿಮೆ ದರದಲ್ಲಿ ನಿಗದಿಗೊಳಿಸಿ ಗ್ರಾಹಕರ ಹಾಗೂ ಕೇಬಲ್ ಟಿವಿ ಉದ್ಯೋಗಿಗಳ ಹಿತ ಕಾಯಲಿ ಎಂದು ಕೇಬಲ್ ಮಾಲಿಕರು ಹೇಳಿದ್ದಾರೆ.

ಟಿವಿ ವೀಕ್ಷಕರಿಗೆ ಇದು ವರವೂ ಹೌದು, ಶಾಪವೂ ಹೌದು!!
ಟ್ರಾಯ್‌ನ ನೂತನ ಕೇಬಲ್ ಮತ್ತು ಡಿಟಿಹೆಚ್ ನಿಯಮ ಗ್ರಾಹಕರಿಗೆ ಹೆಚ್ಚು ಲಾಭವಾಗುವಂತೆ ಕಾಣುತ್ತಿದೆ. ಗ್ರಾಹಕರು 130 ರೂಪಾಯಿಗೆ 100 ಉಚಿತ ಚಾನಲ್‌ಗಳನ್ನು ಪಡೆಯುತ್ತಾರೆ. ಇದರ ಮೇಲೆ ತಮಗೆ ಬೇಕಾದ 4 ರಿಂದ 5 ಚಾನೆಲ್‌ಗಳು ಬೇಕಾದಾಗ ಅವುಗಳಿಗೆ ಹಣ ಪಾವತಿಸಿ ವೀಕ್ಷಿಸಬಹುದು. ಇದರಿಂದ 200 ರೂಪಾಯಿಯ ಒಳಗೆ ಟಿವಿ ಗ್ರಾಹಕನೋರ್ವನ ಇಚ್ಚಾನುಸಾರ ಟಿವಿ ವೀಕ್ಷಣೆ ಸಾಧ್ಯವಾಗುತ್ತದೆ. ಆದರೆ, ಎಲ್ಲಾ ಚಾನಲ್‌ಗಳನ್ನು ನೋಡಲು ಈಗ 350 ರಿಂದ 400 ರೂ. ಹಣ ಪಾವತಿ ಮಾಡುತ್ತಿರುವವರು 1000 ರೂ.ಗಿಂತ ಹೆಚ್ಚು ಹಣವನ್ನು ತೆರಬೇಕಾಗುತ್ತದೆ. ಆದರೆ, ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡುವ ಟ್ವಿಸ್ಟ್ ಇಲ್ಲೂ ಕೂಡ ಇದೆ.

ಮಾಲಿಕರು ಖತಂ..ಗ್ರಾಹಕರು ಫುಲ್ ಖುಷ್ ಆಗಬಹುದು!
ಎಲ್ಲಾ ಚಾನಲ್‌ಗಳನ್ನು ನೋಡುವ ಸಲುವಾಗಿ ಹಣ ಪಾವತಿ ಮಾಡಲು ಯಾರೂ ಮುಂದಾಗದಿದ್ದರೆ ಅಥವಾ ಟಿವಿ ಪ್ರಸಾರಕರ ಮಧ್ಯೆ ಪೈಪೋಟಿ ಏರ್ಪಟ್ಟರೆ ಪಾವತಿ ಮಾಡಬೇಕಾದ ಟಿವಿ ಚಾನಲ್ ಬೆಲೆಗಳು ಕೂಡ ಇಳಿಕೆಯಾಗುತ್ತವೆ. ಕೇಬಲ್ ಆದಾಯಕ್ಕಿಂತ ಜಾಹಿರಾತನ್ನು ನಂಬಿಕೊಂಡಿರುವ ಪ್ರಸಾರಕರು ತಮ್ಮ ಚಾನಲ್‌ಗಳನ್ನು ಉಚಿತವಾಗಿ ಪ್ರಸಾರ ಮಾಡಬಹುದು. ಆದರೆ, ಜನರು ನೋಡೇ ನೋಡುತ್ತಾರೆ ಎಂಬ ಕಾರ್ಯಕ್ರಮಗಳು ( ಕ್ರಿಕೆಟ್, ರಿಯಾಲಿಟಿ ಶೋ) ಬರುವಾಗ ಚಾನಲ್ ದರಗಳು ಹೆಚ್ಚಾಗುವ ಸಂಭವ ಕೂಡ ಇದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಟ್ರಾಯ್ ಏನು ಮಾಡಲಿದೆ ಎಂದು ಕಾದು ನೋಡಬೇಕು. ಒಟ್ಟಿನಲ್ಲಿ ಏನೇ ಆದರೂ, ಕೇಬಲ್ ಮಾಲಿಕರಿಗಿದು ಸಂಕಷ್ಟದ ಸಮಯ.!


Click it and Unblock the Notifications








