ಇನ್ಮುಂದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆಗೆ 'ಡಿಜಿಟಲ್ ಟೋಕನ್'!
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಡೇಟಾವನ್ನು ಕದ್ದು ವಂಚಿಸುತ್ತಿದ್ದ ಸೈಬರ್ ವಂಚಕರಿಗೆ ಬ್ರೇಕ್ ಹಾಕಲು ಆರ್‌ಬಿಐ ಮುಂದಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆಗೆ ಅನುಕೂಲವಾಗುವ ಹೊಸ ಪದ್ಧತಿಗೆ ಆರ್‌ಬಿಐ ಅನುಮತಿ ನೀಡಿದ್ದು, ಇದು ನಿರಾತಂಕವಾಗಿ ಕಾರ್ಡ್ ಬಳಕೆಗೆ ಹಾದಿ ಸುಗಮಗೊಳಿಸಲಿದ್ದು, ಗೇಮ್ ಚೇಂಜರ್ ಆಗುವ ಸಾಧ್ಯತೆ ಇದೆ.
ಹೌದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಾರ್ಡ್‌ಗಳು ಸೈಬರ್ ದಾಳಿಗೆ ಗುರಿಯಾಗುವ ಅಪಾಯವನ್ನೂ ತಡೆಯಬಹುದಾದ ಹೊಸ ವ್ಯವಸ್ಥೆ ಅಳವಡಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿಸಿದೆ. ಹಾಗಾಗಿ ಇನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಳ ಸುರಕ್ಷತೆಗೆ ಹೊಸ 'ಡಿಜಿಟಲ್ ಟೋಕನ್' ಪದ್ಧತಿಯು ಜಾರಿಗೆ ಬರಲಿದೆ.

ಈ ಡಿಜಿಟಲ್ ಟೋಕನ್‌ಗಳು ಅತ್ಯಧಿಕ ಭದ್ರತೆಯ ಅಂಶಗಳನ್ನು ಒಳಗೊಂಡಿದ್ದು, ಒಂದು ಸಲ ಟೋಕನ್ ಬಿಡುಗಡೆಯಾದ ನಂತರ ಅದರ ಬಳಕೆದಾರ ಹೊರತುಪಡಿಸಿ, ಬ್ಯಾಂಕ್ ಸಿಬ್ಬಂದಿ ಸೇರಿ ಬೇರೆ ಯಾರಿಗೂ ಅದನ್ನು ಭೇದಿಸಲಿ ಮತ್ತು ಮೂಲ ಕಾರ್ಡ್‌ನ ಸಂಖ್ಯೆ ಪತ್ತೆ ಹಚ್ಚಲು ಸಾಧ್ಯವಿಲ್ಲ. ಜತೆಗೆ ಪ್ರತಿ ವರ್ಗಾವಣೆಯಲ್ಲೂ ಈ 16 ಅಂಕಿಗಳು ಬದಲಾಗುತ್ತಿರುತ್ತವೆ ಎನ್ನಲಾಗಿದೆ.
ಇದರಿಂದಾಗಿ ಪ್ರತಿವ್ಯವಹಾರದಲ್ಲಿಯೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರಿಗೆ ಸಾಕಷ್ಟು ಸುರಕ್ಷತೆ ದೊರಕಲಿದೆ ಎಂದು ಹೇಳಲಾಗಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ವೇಳೆ, ಕಾರ್ಡ್ ಸಂಖ್ಯೆಯ ಬದಲಿಗೆ ಬ್ಯಾಂಕ್‌ಗಳು ಬಿಡುಗಡೆಗೊಳಿಸುವ 16 ಅಂಕಿಗಳ ಕೋಡ್ ಸಹ ಬದಲಾಗುವುದು ಗ್ರಾಹಕರಿಗೆ ಹೆಚ್ಚು ಸುರಕ್ಷತೆಯನ್ನು ಖಾತ್ರಿಗೊಳಿಸಿದೆ.

ಇದುವರೆಗೆ ಯುಪಿಐ ಮತ್ತು ಐಎಂಪಿಎಸ್ ವಿಧಾನದಲ್ಲಿ ಇಂಥ ಸುರಕ್ಷತಾ ಕ್ರಮವಿತ್ತು. ಇದೀಗ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯಲ್ಲೂ ಇದು ಲಭಿಸಲಿದೆ. ಇಎಂವಿ ಕಾರ್ಡ್ ಪಿನ್ ಬಳಕೆಯಿಂದ ಎಟಿಎಂಗಳಲ್ಲಿ ಸೈಬರ್ ದಾಳಿ ಅಪಾಯ ಕಡಿಮೆಯಾಗಿದೆ. ಆನ್‌ಲೈನ್ ಸಾಧನಗಳಲ್ಲಿ ಕಾರ್ಡ್ ಬಳಕೆಯ ವೇಳೆ ಸುರಕ್ಷತೆಗೆ ಈ ಟೋಕನ್ ಪದ್ಧತಿ ಬಹು ಉಪಯುಕ್ತವಾಗಲಿದೆ.


Click it and Unblock the Notifications








