ಡೀಪ್ ಫೇಕ್: ಎಲ್ಲಾ ಯೂಟ್ಯೂಬ್ ಕ್ರಿಯೇಟರ್‌ಗಳು ನೋಡಲೇಬೇಕಾದ ಸುದ್ದಿ ಇದು!
ತಂತ್ರಜ್ಞಾನದ ಶಕ್ತಿ ಹೆಚ್ಚಾದಂತೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಕುತಂತ್ರ ಶಕ್ತಿಗಳು ಸಹ ಹೆಚ್ಚಾಗುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ 'ಡೀಪ್ ಫೇಕ್' ತಂತ್ರಜ್ಞಾನ.! ಮುಖ, ಧ್ವನಿ ಅಥವಾ ರೂಪವನ್ನು ನಕಲಿ ತಂತ್ರಜ್ಞಾನ ಮೂಲಕ ದುರುಪಯೋಗಪಡಿಸಿಕೊಳ್ಳುವವರ( ಇದನ್ನೇ ಸಾಮಾನ್ಯವಾಗಿ ಡೀಪ್‌ಫೇಕ್ ಎನ್ನುತ್ತಾರೆ) ಸಂಖ್ಯೆ ಹೆಚ್ಚಾಗಿತ್ತು. ಅದರಲ್ಲೂ ಜನಪ್ರಿಯ ಯೂಟ್ಯೂಬ್ ಕ್ರಿಯೇಟರ್‌ಗಳ ಚಿತ್ರ, ಧ್ವನಿ ಮತ್ತು ಅವರ ರೂಪವನ್ನು ಬಳಸಿಕೊಂಡು ಮೋಸಮಾಡುವ ಪ್ರಕರಣಗಳು ಕಂಡುಬಂದಿದ್ದವು.
ಇದೀಗ ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ನ ಕ್ರಿಯೇಟರ್‌ಗಳ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ "ಲೈಕ್ನೆಸ್ ಡಿಟೆಕ್ಷನ್ ಟೂಲ್"(likeness detection tool) ಅನ್ನು ಪರಿಚಯಿಸಿದೆ. ಈ ಉಪಕರಣದ ಮುಖ್ಯ ಉದ್ದೇಶ, ಯಾರಾದರೂ ಕ್ರಿಯೇಟರ್‌ಗಳ ಮುಖ, ಧ್ವನಿ ಅಥವಾ ರೂಪವನ್ನು ನಕಲಿ ತಂತ್ರಜ್ಞಾನ (ಡೀಪ್‌ಫೇಕ್) ಮೂಲಕ ದುರುಪಯೋಗ ಪಡಿಸದಂತೆ ತಡೆಯುವುದಾಗಿದೆ. ಹಾಗಾದರೆ, ಏನಿದು ಹೊಸ ಟೂಲ್?, ಹೇಗೆ ಸಹಾಯವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಇದೀಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ ಸದಸ್ಯರು "ಲೈಕ್ನೆಸ್ ಡಿಟೆಕ್ಷನ್ ಟೂಲ್" ಎಂಬ ಹೊಸ ಟೂಲ್ ಕಾಣಿಸಿಕೊಂಡಿದೆ. ಈ ಉಪಕರಣವನ್ನು ನೀವು "ಕಂಟೆಂಟ್ ಐಡಿ" ವಿಭಾಗದಲ್ಲಿಯೇ ಕಾಣಬಹುದು. ಇಲ್ಲಿ ಕ್ರಿಯೇಟರ್‌ಗಳು ತಮ್ಮ ಹಕ್ಕುಸ್ವಾಮ್ಯ ವಿಷಯವನ್ನು ನಿರ್ವಹಿಸಬಹುದು. ಅಂದರೆ, ಒಂದು ವೈಯಕ್ತಿಕ ದೃಢೀಕರಣ ಪ್ರಕ್ರಿಯೆ ಮೂಲಕ ಈ ಸಾಧನವನ್ನು ಆಕ್ಟಿವೇಟ್ ಆಡಬಹುದು. ಈ ಸಾಧನ ಸಕ್ರಿಯವಾದ ನಂತರ, ಯೂಟ್ಯೂಬ್ ಕ್ರಿಯೇಟರ್‌ಗಳ ಮುಖ ಅಥವಾ ಧ್ವನಿಯನ್ನು ಬಳಸಿರುವ ಸಾಧ್ಯತೆಯಿರುವ AI-ನಿರ್ಮಿತ ವಿಡಿಯೋಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ.

ಡೀಪ್‌ಫೇಕ್ ಪತ್ತೆ ಹೇಗೆ ನಡೆಯುತ್ತದೆ?
ಯೂಟ್ಯೂಬ್ ಕ್ರಿಯೇಟರ್‌ಗಳು ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ (ID) ಮತ್ತು ಒಂದು ವೀಡಿಯೋ ಸೆಲ್ಫಿ ಸಲ್ಲಿಸುವುದು ಅಗತ್ಯ. ಈ ಮಾಹಿತಿಯನ್ನು ಗೂಗಲ್‌ನ ಸುರಕ್ಷಿತ ಸರ್ವರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಸಾಧನ ಸಕ್ರಿಯವಾದ ನಂತರ, ಡೀಪ್‌ಫೇಕ್ ಸಾಧ್ಯತೆಯಿರುವ AI-ನಿರ್ಮಿತ ವಿಡಿಯೋಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ. ಈ ವಿಡಿಯೋಗಳನ್ನು ಒಂದು ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ, ಅಲ್ಲಿ ಅವುಗಳನ್ನು ಪ್ರಾಥಮ್ಯ ಕ್ರಮದಲ್ಲಿ ವರ್ಗೀಕರಿಸಲಾಗುತ್ತದೆ.ಅಂದರೆ ಹೆಚ್ಚು ಹಾನಿಕಾರಕ ಅಥವಾ ಜನಪ್ರಿಯ ಡೀಪ್‌ಫೇಕ್‌ಗಳನ್ನು ಮೊದಲು ತೋರಿಸಲಾಗುತ್ತದೆ.
ಇದಾದ ನಂತರ, ಪತ್ತೆಯಾದ ವಿಡಿಯೋ ಕುರಿತು ಕ್ರಿಯೇಟರ್‌ಗಳು ಎರಡು ಆಯ್ಕೆಗಳನ್ನು ಹೊಂದಿರುತ್ತಾರೆ. ಅದನ್ನು ಅಳಿಸುವ ವಿನಂತಿ (Removal Request) ಅಥವಾ ಸಂಗ್ರಹಿಸಲು (Archive). ಯೂಟ್ಯೂಬ್ ಈ ವಿನಂತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಕ್ರಿಯೇಟರ್‌ಗಳು ತಮ್ಮ ಇಚ್ಛೆಯ ಮೇರೆಗೆ ಉಪಕರಣವನ್ನು ನಿಷ್ಕ್ರಿಯಗೊಳಿಸಬಹುದು, ಮತ್ತು ಅದಾದ 24 ಗಂಟೆಗಳೊಳಗೆ ಅವರ ಡೇಟಾ ಪ್ರಕ್ರಿಯೆ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ ದೃಢೀಕರಣ ಪೂರ್ಣಗೊಂಡ ಬಳಿಕ ಮಾತ್ರ ಕ್ರಿಯೇಟರ್‌ಗಳು ಉಪಕರಣವನ್ನು ಬಳಸಬಹುದು.
ಡಿಜಿಟಲ್ ಪ್ರಪಂಚಕ್ಕೆ ಇದು ಹೊಸ ಭದ್ರತೆ!
ಡಿಜಿಟಲ್ ಪ್ರಪಂಚದ ಅತ್ಯಂತ ಭಯಾನಕ ಅಂಶವಾಗಿ ಡೀಪ್ ಫೇಕ್ ಹೊರಹೊಮ್ಮಿತ್ತು. ಸೆಲೆಬ್ರಿಟಿ ಅಥವಾ ಇನ್ಯಾವ ಜನಪ್ರಿಯ ವ್ಯಕ್ತಿಗಳ ಮುಖ, ಧ್ವನಿ ಅಥವಾ ರೂಪವನ್ನು ನಕಲಿ ತಂತ್ರಜ್ಞಾನದ ಮೂಲಕ ಬಳಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿದ್ದವು. ಇದೀಗ ಯೂಟ್ಯೂಬ್ ಈ ಹೊಸ AI ತಂತ್ರಜ್ಞಾನದ ಮೂಲಕ ಕ್ರಿಯೇಟರ್‌ಗಳ ಡಿಜಿಟಲ್ ಗುರುತನ್ನು ಕಾಪಾಡುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಡೀಪ್‌ಫೇಕ್ ವೀಡಿಯೊಗಳು ವೇಗವಾಗಿ ಹರಡುತ್ತಿರುವ ಈ ಡಿಜಿಟಲ್ ಯುಗದಲ್ಲಿ, ಈ ಉಪಕರಣವು ಕ್ರಿಯೇಟರ್‌ಗಳಿಗೆ ವಿಶ್ವಾಸ, ಭದ್ರತೆ ಮತ್ತು ಪಾರದರ್ಶಕತೆಯ ಹೊಸ ಆಯಾಮ ತರುವ ನಿರೀಕ್ಷೆ ಮೂಡಿಸಿದೆ.
ಗಮನಿಸಿ: ಈ ಹೊಸ ಸಾಧನವನ್ನು ಪ್ರಾರಂಭಿಕ ಹಂತದಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ ಸದಸ್ಯರಿಗೆ ಮಾತ್ರ ಲಭ್ಯವಾಗುತ್ತದೆ. ಮುಂದಿನ ಹಂತಗಳಲ್ಲಿ ಇತರ ಕ್ರಿಯೇಟರ್‌ಗಳಿಗೂ ಇದು ವಿಸ್ತರಿಸಲಾಗುತ್ತದೆ.


Click it and Unblock the Notifications








