Yuva Nidhi Scheme: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗಧಿ! ಬೇಕಾದ ದಾಖಲೆಗಳೇನು?
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಜಾರಿಗೆ ದಿನಾಂಕ ನಿಗಧಿಯಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಯುವನಿಧಿ ಕೂಡ ಒಂದಾಗಿದೆ. ಯುವನಿಧಿ ಗ್ಯಾರಂಟಿಯು ಪದವೀಧರ ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಯೋಜನೆಯಾಗಿದೆ.
ಹೌದು, ಯುವನಿಧಿ ಯೋಜನೆ (Yuva Nidhi) ಜಾರಿಗೆ ಕೊನಗೂ ದಿನಾಂಕ ನಿಗಧಿ ಮಾಡಲಾಗಿದೆ. ಸರ್ಕಾರ ನೀಡಿರುವ ಮಾಹಿತಿಯಂತೆ ಇದೇ ಡಿಸೆಂಬರ್ 21ರಿಂದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹಾಗಾದ್ರೆ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ದಾಖಲೆಗಳೇನು? ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಐದು ಭರವಸೆಗಳಲ್ಲಿ ಯುವನಿಧಿ ಕೂಡ ಒಂದಾಗಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ಸರ್ಕಾರ ಇದೀಗ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ. ಈ ಯೋಜನೆಯಡಿಯಲ್ಲಿ ಸುಮಾರು 5 ಲಕ್ಷ ಅಭ್ಯರ್ಥಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಯುವನಿಧಿ ಯೋಜನೆಯು ಹೆಸರೇ ಸೂಚಿಸುವಂತೆ ಯುವಜನರಿಗೆ ಆರ್ಥಿಕ ಸಹಾಯ ಮಾಡಲಿದೆ.
ಯುವನಿಧಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಯುವನಿಧಿ ಯೋಜನೆಗೆ 2022-23ರಲ್ಲಿ ತೇರ್ಗಡೆಯಾದ ಪದವೀಧರ ಹಾಗೂ ಡಿಪ್ಲೊಮ ಉತ್ತೀರ್ಣರಾದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ ತಾವು ಉತ್ತೀರ್ಣರಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ದಿನಾಂಕದಿಂದ ತಾವು ಉದ್ಯೋಗ ಸಿಗುವವರೆಗೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಇಲ್ಲವೇ ಎರಡು ವರ್ಷ ಗರಿಷ್ಠ ಅವಧಿಯ ವರೆಗೆ ಮಾತ್ರ ಸೌಲಭ್ಯ ಪಡೆದುಕೊಳ್ಳಬಹುದು.

ಇನ್ನು ಈ ಯೋಜನೆಯು ಕರ್ನಾಟಕ ರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅವಕಾಶ ಸಿಗಲಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಯುವನಿಧಿ ಯೋಜನೆಯ ಹಣವನ್ನು ಡಿಬಿಟಿ ಮೂಲಕ ಒದಗಿಸಲಾಗುತ್ತದೆ ಎನ್ನಲಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಇದರ ಬಗ್ಗೆ ಗಮನವಿರಲಿ
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರು ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದುಕೊಂಡಿದ್ದರೂ ಕೂಡ ಯುವನಿಧಿ ಯೋಜನೆಯ ಲಾಭವನ್ನು ಮುಂದುವರೆಸಿಕೊಂಡು ಹೋದರೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. ಅಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ನಿರುದ್ಯೋಗಿಗಳೆಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು, ಇದಕ್ಕಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ.
ಇದಲ್ಲದೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ತಾವು ಉತ್ತೀರ್ಣರಾದ ದಿನಾಂಕದಿಂದ 6 ತಿಂಗಳ ವರೆಗಿನ ತಮ್ಮ ಅಧಿಕೃತ ಬ್ಯಾಂಕ್ ಖಾತೆಯ ವಹಿವಾಟು ಸ್ಟೇಟ್‌ಮೆಂಟ್ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಇದು ಕಡ್ಡಾಯವಾಗಿದ್ದು, ಒಂದು ವೇಳೆ ಬ್ಯಾಂಕ್ ಪ್ರತಿ ಸಲ್ಲಿಸದಿದ್ದರೆ ಅರ್ಜಿ ತಿರಸ್ಕಾರವಾಗುತ್ತದೆ.

ಯುವನಿಧಿಗೆ ಯಾರು ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ
* ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.
* ಅಪ್ರೆಂಟಿಸ್ ಹುದ್ದೆಯಲ್ಲಿರುವವರಿಗೆ ಇದರ ಲಾಭ ದೊರೆಯದು.
* ಸರ್ಕಾರಿ ಮತ್ತು ಖಾಸಗಿ ವಲಯ ಉದ್ಯೋಗ ಪಡೆದಿರುವವರು.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಯುವನಿಧಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ನೀವು ಸೇವಾಸಿಂಧು ಪೋರ್ಟಲ್ https://sevasindhu.karnataka.gov.inಗೆ ಬೇಟಿ ನೀಡಬೇಕಾಗುತ್ತದೆ.
ಯುವನಿಧಿ ಹಣ ಬರುವುದು ಯಾವಾಗ?
ಇನ್ನು ಈ ಯೋಜನೆಯೆ ಮೊದಲ ಕಂತಿನ ಹಣ 2024 ರ ಜನವರಿ ತಿಂಗಳಿಂದಲೇ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ. ಇದು 2022-23ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೊಮ ನಿರುದ್ಯೋಗಿಗಳಿಗೆ ಅನ್ವಯವಾಗಲಿದೆ. ಅಂದರೆ ಈ ಸಾಲಿನಲ್ಲಿ ಉತೀರ್ಣವಾಗಿರುವ ಪದವೀಧರ ಹಾಗೂ ಡಿಪ್ಲೊಮ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಸಲುವಾಗಿಯೇ ಈ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಯುವ ನಿಧಿ ಯೋಜನೆಯಲ್ಲಿ ಲಭ್ಯವಾಗುವ ಹಣ ಎಷ್ಟು?
ಪದವೀಧರ ನಿರುದ್ಯೋಗಿಗಳಿಗೆ: ಮಾಸಿಕ 3000ರೂ.
ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ: ಮಾಸಿಕ 1500ರೂ.


Click it and Unblock the Notifications








