ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ?...286 ದಿನ ಸ್ಪೇಸ್‌ನಲ್ಲಿ ಕಳೆದ ಸುನೀತಾ ಹೇಳಿದ್ದು ಹೀಗೆ!
ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? ಎಂಬ ಪ್ರಶ್ನೆಗೆ ನಾಲ್ಕು ದಶಕಗಳ ಹಿಂದೆ ಮೊದಲು ಉತ್ತರಿಸಿದ್ದು ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ ಅವರು. ಅಂದು ರಾಕೇಶ್ ಶರ್ಮಾ ಅವರಲ್ಲಿ ಈ ಪ್ರಶ್ನೆಯನ್ನು ಕೇಳಿದಾಗ, '"ಸಾರೆ ಜಹಾನ್ ಸೆ ಅಚ್ಚಾ" ಎಂದು ಹೇಳಿದ್ದರು. ಇದೀಗ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರಿಗೆ ಕೇಳಲಾದ ಇದೇ ಪ್ರಶ್ನೆಗೆ 'ಅದ್ಭುತ... ಭಾರತ ಅದ್ಭುತವಾಗಿದೆ' ಎಂದು ಹೇಳಿದ್ದಾರೆ. ಹೌದು, ಸುನೀತಾ ವಿಲಿಯಮ್ಸ್ ಅವರು ಬರೋಬ್ಬರಿ 286 ದಿನಗಳ ಬಾಹ್ಯಾಕಾಶ ವಾಸದ ನಂತರ ಕಳೆದ ವಾರವಷ್ಟೇ ಭೂಮಿಗೆ ಮರಳಿದ್ದಾರೆ. ಇದೀಗ ಆರೋಗ್ಯದಲ್ಲಿ ಚೇತರಿಸಿಕೊಂಡಿರುವ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಅವರಿಗೆ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? ಎಂದು ಪ್ರಶ್ನಿಸಲಾಯಿತು. ಈ ವೇಳೆ "ಅದ್ಭುತ, ಕೇವಲ ಅದ್ಭುತ," ಎಂದು ಅವರು ಉತ್ತರಿಸಿದ್ದಾರೆ.
ಬಾಹ್ಯಾಕಾಶದಲ್ಲಿ 286 ದಿನಗಳ ವಾಸ್ತವ್ಯದಿಂದ ಹಿಂತಿರುಗಿ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂದು ಕೇಳಿದಾಗ. "ಭಾರತ ಅದ್ಭುತವಾಗಿದೆ. ನಾವು ಹಿಮಾಲಯದ ಮೇಲೆ ಹೋದಾಗಲೆಲ್ಲಾ, ಬುಚ್ (ವಿಲ್ಮೋರ್, ಸಹ ಗಗನಯಾತ್ರಿ) ಅದ್ಭುತ ಚಿತ್ರಗಳನ್ನು ತೆಗೆದರು, ಅದು ಅದ್ಭುತವಾಗಿದೆ,". "ನೀವು ಗುಜರಾತ್ ಮತ್ತು ಮುಂಬೈ ಕಡೆಗೆ ಸಾಗಿದಾಗ, ಮೀನುಗಾರರ ದೋಣಿಗಳು ನಿಮ್ಮ ಕಣ್ಣಮುಂದೆ ಕಾಣಿಸುತ್ತವೆ. ಅದು ದೀಪಸ್ಥಂಬದಿಂದ ಮೂಡಿಬಂದ ಬೆಳಕಿನಂತೆ ಕಾಣುತ್ತದೆ. ಭಾರತದಲ್ಲಿ, ದೊಡ್ಡ ನಗರಗಳಿಂದ ಸಣ್ಣ ನಗರಗಳ ನಡುವಿನ ಬೆಳಕಿನ ವ್ಯತ್ಯಾಸಗಳು ಮತ್ತು ಹಿಮಾಲಯದಲ್ಲಿ ರಾತ್ರಿ ಮತ್ತು ಹಗಲಿನ ವೇಳೆ ಕಂಡು ಬರುವ ಬೆಳವಣಿಗೆಗಳು ನಿಜಕ್ಕೂ ಅದ್ಭುತ. ಪಶ್ಚಿಮದಲ್ಲಿ ಮೀನುಗಾರಿಕಾ ದೋಣಿಗಳಿಂದ ಹಿಡಿದು ಉತ್ತರದ ಭವ್ಯ ಹಿಮಾಲಯದವರೆಗೆ ನೋಡಿದಾಗ, ನಾನು ಮನೆಯಲ್ಲಿ ಇಲ್ಲದಿದ್ದರೂ, ಮನೆಯಲ್ಲಿಯೇ ಇರುವ ಅನುಭವವಾಯಿತು" ಎಂದು ಹೇಳಿದ್ದಾರೆ.

ತನ್ನ ಭಾರತೀಯ ಬೇರುಗಳ ಬಗ್ಗೆ ಆಗಾಗ್ಗೆ ಮಾತನಾಡುವ ಯುಎಸ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು, ಮೇಲಿನಿಂದ ಭಾರತೀಯ ಭೂದೃಶ್ಯದ ನೋಟದಿಂದ ಮೋಡಿಮಾಡಲ್ಪಟ್ಟಿದ್ದಾಗಿ ತಿಳಿಸಿದ್ದಾರೆ. ಪಶ್ಚಿಮದಲ್ಲಿ ಮೀನುಗಾರಿಕಾ ನೌಕಾಪಡೆಗಳಿಂದ ಹಿಡಿದು ಉತ್ತರದ ಭವ್ಯ ಹಿಮಾಲಯದವರೆಗೆ, ಅದು ಅವರಿಗೆ ಮನೆಯಿಂದ ದೂರವಿರುವ ಮನೆಯಾಗಿತ್ತು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಈ ವರ್ಷ, ಭಾರತೀಯ ಗಗನಯಾತ್ರಿಯರಾದ ಸುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿರುವ ಆಕ್ಸಿಯಮ್ ಮಿಷನ್ ಬಗ್ಗೆ ಕೂಡ ಸುನೀತಾ ವಿಲಿಯಮ್ಸ್ ಉತ್ಸಾಹದಿಂದ ಮಾತನಾಡಿದ್ದಾರೆ. ಭಾರತವು ಅದ್ಭುತವಾದ ಪ್ರಜಾಪ್ರಭುತ್ವವನ್ನು ಹೊಂದಿರುವ ದೊಡ್ಡ ದೇಶವಾಗಿದೆ. ಬಾಹ್ಯಾಕಾಶದಲ್ಲಿ ಹೆಜ್ಜೆ ಹಾಕಲು ಅವರು ಮಾಡುತ್ತಿರುವ ಪ್ರಯತ್ನಗಳ ಭಾಗವಾಗಲು ಮತ್ತು ಅವರಿಗೆ ಸಹಕರಿಸಲು ನಾನು ಇಷ್ಟಪಡುತ್ತೇನೆ" ಎಂದು ಅವರು ಹೇಳಿದ್ದಾರೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕೇವಲ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತಾರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಬಾಹ್ಯಾಕಾಶ ನೌಕೆಯು ಹಿಂತಿರುಗಿದ ಕಾರಣ, ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿಯೇ ಸಿಲುಕಿಕೊಂಡರು. ಕೊನೆಗೆ, ಇದೇ ಮಾರ್ಚ್ 19 ರಂದು, ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರೂ ಭೂಮಿಗೆ ಮರಳಿದರು. ಇನ್ನು ಸಾರ್ವಜನಿಕವಾಗಿ ಪ್ರಶ್ನೆಗಳಿಗೆ ಉತ್ತರಿಸುವ ವೇಳೆಯಲ್ಲ, ಸುನೀತಾ ವಿಲಿಯಮ್ಸ್ ಅವರ ಕುಟುಂಬ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಿ "ಸಮೋಸಾ ಪಾರ್ಟಿ ಮಾಡುತ್ತೇವೆ":ಎಂದು ಹೇಳಿದೆ. ಹಾಗೂ ಸುನೀತಾ ವಿಲಿಯಮ್ಸ್ ಅವರು ತಮ್ಮ ಸಹಗಗನಯಾತ್ರಿಯಾದ ಬುಚ್ ವಿಲ್ಮೋರ್ ಅವರನ್ನು ಖಂಡಿತವಾಗಿ ಭಾರತಕ್ಕೆ ಕರೆತಂದು, ಅವರಿಗೆ ಮಸಾಲೆಯುಕ್ತ ಆಹಾರ ತಿನ್ನಿಸುತ್ತೇನೆ ಎಂದು ಹೇಳಿ ಮುಗುಳ್ನಕ್ಕಿದ್ದಾರೆ.


Click it and Unblock the Notifications








