ನಿಮ್ಮ ಮನೆಯ ವೈ-ಫೈ ಅನ್ನು ಯಾರೆಲ್ಲಾ ಕದ್ದು ಬಳಕೆ ಮಾಡುತ್ತಿದ್ದಾರೆಂದು ಪತ್ತೆ ಮಾಡಲು ಹೀಗೆ ಮಾಡಿ!
ಬಹುಪಾಲು ಸ್ಮಾರ್ಟ್ಫೋನ್ ಬಳಕೆದಾರರು ಸಾಕಪ್ಪ ನಮಗೆ ಇಷ್ಟು ಇಂಟರ್ನೆಟ್ ಎಂದು ಎಂದಿಗೂ ಹೇಳುವುದಿಲ್ಲ. ಬದಲಾಗಿ ಇರುವ ಇಂಟರ್ನೆಟ್ ಅನ್ನು ಖಾಲಿಮಾಡಿ ಮಗಾ ಹಾಟ್ಸ್ಪಾಟ್ ಆನ್ ಮಾಡೋ ಎಂದು ಸ್ನೇಹಿತರ ಬಳಿ ಕೇಳುವ ಅದೆಷ್ಟೋ ಸ್ನೇಹಿತರನ್ನು ನೀವು ನೋಡಿರಬಹುದು. ಈ ನಡುವೆ ಕೆಲವರು ಹ್ಯಾಕಿಂಗ್ ಮೂಲಕ ಇತರರ ವೈ-ಫೈ ಅನ್ನು ಬಳಕೆ ಮಾಡುವುದು ಸಹ ಸಾಮಾನ್ಯವಾಗಿದೆ.
ಹೌದು, ನಿಮ್ಮ ಸ್ಮಾರ್ಟ್ಡಿವೈಸ್ನಲ್ಲಿನ ಇಂಟರ್ನೆಟ್ ಇದ್ದಕ್ಕಿದ್ದಂತೆ ನಿಧಾನವಾದರೆ ನೀವು ನೆಟ್ವರ್ಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಂದುಕೊಂಡು ಸುಮ್ಮನೆ ಇರಬಹುದು.ಆದರೆ, ನಿತ್ಯವೂ ಇದೇ ರೀತಿಯಾದರೆ ನಿಮ್ಮ ವೈ-ಫೈ ಅನ್ನು ಯಾರೋ ಕಾಣದ ವ್ಯಕ್ತಿಗಳು ಬಳಕೆ ಮಾಡುತ್ತಿದ್ದಾರೆ ಎಂದರ್ಥ. ಆದರೆ, ಇದೇ ನಿಖರ ಕಾರಣ ಎಂದೂ ಸಹ ಹೇಳಲಾಗದು. ಈ ನಡುವೆ ನಿಮ್ಮ ವೈ-ಫೈ ಅನ್ನು ಯಾರಾದರೂ ಬಳಕೆ ಮಾಡುತ್ತಿದ್ದರೆ ಅದನ್ನು ಹೇಗೆ ಪತ್ತೆ ಮಾಡುವುದು? ಹಾಗೂ ಅದನ್ನು ಹೇಗೆ ಸ್ಟಾಪ್ ಮಾಡುವುದು? ಎನ್ನುವುದನ್ನು ತಿಳಿದುಕೊಳ್ಳಿ.

ನಿಮ್ಮ ವೈ-ಫೈ ಅನ್ನು ಬೇರೆಯವರು ಬಳಕೆ ಮಾಡುತ್ತಿದ್ದಾರೆಂದು ಹೇಗೆ ತಿಳಿದುಕೊಳ್ಳುವುದು?: ಮೊದಲೇ ತಿಳಿಸಿದಂತೆ ನಿಮ್ಮ ಇಂಟರ್ನೆಟ್ ವೇಗ ಕಡಿಮೆಯಿದ್ದರೆ ಇದು ಒಂದು ಪ್ರಮುಖ ಮುನ್ಸೂಚನೆ ಆಗಿದೆ. ಜೊತೆಗೆ ನಿಮ್ಮ ಮನೆಯ ವೈ-ಫೈಗೆ ಸಂಪರ್ಕಗೊಂಡಿರುವ ಎಲ್ಲಾ ಸ್ಮಾರ್ಟ್ಡಿವೈಸ್ ವಿವರ ತಿಳಿಯಬೇಕು ಎಂದರೆ ನಿಮ್ಮ ವೈ-ಫೈ ಅನ್ನು ಸೆಟ್ ಮಾಡಿದ್ದಾಗ ಅಥವಾ ನಿಮ್ಮ ಪಾಸ್ವರ್ಡ್ ಅನ್ನು ಕೊನೆಯದಾಗಿ ಬದಲಾವಣೆ ಮಾಡಿದಾಗ ನೀವು ಬಳಕೆ ಮಾಡಿದ್ದ ರೂಟರ್ ಅಪ್ಲಿಕೇಶನ್ ಅನ್ನು ಲೋಡ್ ಮಾಡಬೇಕಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಅಂದರೆ ರೂಟರ್ನಿಂದ ವೆಬ್ ವಿಳಾಸವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮಗೆ ಲಾಗಿನ್ ವಿವರ ಅಗತ್ಯ ಇದ್ದು, ಈ ಮಾಹಿತಿ ರೂಟರ್ನಲ್ಲಿ ಕಂಡುಬರುತ್ತದೆ. ಡಿವೈಸ್ಗಳಿಗೆ ಸಂಪರ್ಕಿಸಲು ನಿಮಗೆ ಅನುಮತಿಸುವ ರೂಟರ್ನ ಕೆಳಭಾಗದಲ್ಲಿ ವೆಬ್ ವಿಳಾಸ ಸಹ ಇರಲಿದೆ. ಇದು ಒಂದು ಮಾರ್ಗವಾದರೆ ಮತ್ತೊಂದು ಮಾರ್ಗದಲ್ಲಿ ಇನ್ನಷ್ಟು ಸರಳವಾಗಿ ಬಿಟ್ಟಿ ವೈ-ಫೈ ಬಳಕೆಮಾಡುವರನ್ನು ಪತ್ತೆ ಮಾಡಬಹುದು.
ನಿಮ್ಮ ವೈ-ಫೈಗೆ ಸಂಪರ್ಕ ಇರುವ ನಿಮ್ಮ ಮನೆಯಲ್ಲಿನ ಯಾವುದಾದರೂ ಡಿವೈಸ್ ಅನ್ನು ಅನ್ಪ್ಲಗ್ ಮಾಡಿದ ನಂತರ ಅಥವಾ ಆಫ್ ಮಾಡಿದ ನಂತರ ನಿಮ್ಮ ರೂಟರ್ನಲ್ಲಿ ಮಿನುಗುವ ಹಸಿರು ದೀಪ ಕಂಡುಬಂದರೆ ನಿಮ್ಮ ವೈ-ಫೈ ಅನ್ನು ಯಾರೋ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ಈ ವೇಳೆ ಮಿನುಗುವ ಲೈಟ್ ಇಲ್ಲ ಎಂದಾದರೆ ನೆಟ್ವರ್ಕ್ ಸಮಸ್ಯೆಯಿಂದ ಈ ರೀತಿಯ ಆಗುತ್ತಿದೆ ಎಂದುಕೊಳ್ಳಬಹುದು.

ಇದನ್ನು ಪಿಗ್ಗಿಬ್ಯಾಕಿಂಗ್ ಎಂದು ಕರೆಯಲಾಗುತ್ತದೆ: ನಿಮ್ಮ ಅನುಮತಿಯಿಲ್ಲದೆ ಯಾರಾದರೂ ನಿಮ್ಮ ವೈ-ಫೈ ನೆಟ್ವರ್ಕ್ಗೆ ಸಂಪರ್ಕಿಸಿದಾಗ ಅದನ್ನು ಪಿಗ್ಗಿಬ್ಯಾಕಿಂಗ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಪಿಗ್ಗಿಬ್ಯಾಕಿಂಗ್ ಪ್ರಕರಣಗಳು ನೆರೆಹೊರೆಯವರಿಂದಲೇ ಆಗುತ್ತವೆ. ಅವರು ವೈ-ಫೈಗಾಗಿ ಹಣ ಪಾವತಿಸಲು ಬಯಸದ ಕಾರಣ ಈ ರೀತಿ ಮಾಡುತ್ತಿರುತ್ತಾರೆ. ಹಾಗೆಯೇ ಇದೊಂದು ಹ್ಯಾಕರ್ಸ್ಗಳ ಕೈಚಳಕ ಎಂದೂ ಸಹ ಊಹಿಸಬಹುದು.
ವೈ-ಫೈ ಬಳಕೆದಾರರಿಂದ ಎಚ್ಚರಿಕೆ ವಹಿಸುವುದು ಹೇಗೆ?: ನೀವು ವೈ-ಫೈ ಮತ್ತು ರೂಟರ್ ಅನ್ನು ಪ್ರವೇಶಿಸಲು ಬಲವಾದ ಪಾಸ್ವರ್ಡ್ ಅನ್ನು ಸೆಟ್ ಮಾಡಬೇಕಾಗುತ್ತದೆ. ಇದರಲ್ಲಿ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣ ಕಡ್ಡಾಯವಾಗಿ ಇರಲಿ. ಇದು ನಿಮಗೂ ಕೂಡ ಸರಿಯಾಗಿ ನೆನಪಾಗಬಾರದು ಆ ರೀತಿಯಲ್ಲಿ ಇರಲಿ. ಯಾವುದೇ ಕಾರಣಕ್ಕೂ ಫೋನ್ ಸಂಖ್ಯೆ, ಜನ್ಮ ದಿನಾಂಕದಂತಹ ಸುಲಭ ಪಾಸ್ವರ್ಡ್ ಬೇಡ.
ಯಾರಾದರೂ ನಿಮ್ಮ ವೈ-ಫೈ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ ಹೊಸದಾಗಿ ಮತ್ತೆ ಡಿವೈಸ್ಗಳನ್ನು ಸೆಟ್ ಮಾಡಿ. ಜೊತೆಗೆ ವರ್ಷಕ್ಕೆ ಎರಡು ಬಾರಿ ಇದನ್ನು ಮಾಡುತ್ತಾ ಬಂದರೆ ಖಂಡಿತಾ ಯಾರೂ ಸಹ ವೈ-ಫೈ ಅನ್ನು ಕದಿಯಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಯಾವೆಲ್ಲಾ ಡಿವೈಸ್ಗಳಿಗೆ ಇದು ಕನೆಕ್ಟ್ ಆಗಿದೆ ಎನ್ನುವುದನ್ನು ಎಲ್ಲಿಯಾದರೂ ಬರೆದಿಟ್ಟುಕೊಳ್ಳಿ.

ಇನ್ನೊಂದು ಪ್ರಮುಖ ವಿಷಯ ಏನೆಂದರೆ ನಿಮ್ಮ ಲಾಗಿನ್ ಮಾಹಿತಿಯನ್ನು ನಿಮ್ಮ ಮನೆಯವರು ಮತ್ತು ನೀವು ನಂಬುವ ಜನರೊಂದಿಗೆ ಮಾತ್ರ ಶೇರ್ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ವೈ-ಫೈ ರಕ್ಷಣೆಯನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು. ಈ ಮೇಲೆ ತಿಳಿಸಿದ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಖಂಡಿತಾ ನೀವು ಹಣ ಖರ್ಚು ಮಾಡಿ ಬಳಕೆ ಮಾಡುವ ವೈ-ಫೈ ಅನ್ನು ಬಿಟ್ಟಿಯಾಗಿ ಯಾರೂ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.


Click it and Unblock the Notifications