ನಿಮ್ಮ ಫೋನ್ ಸಂಖ್ಯೆ ಬ್ಲಾಕ್ ಮಾಡಿದ್ರೂ ಸಹ ಅವರಿಗೆ ನೀವು ಕರೆ ಮಾಡಬಹುದು, ಹೇಗೆ ಗೊತ್ತಾ!?
ಸ್ಮಾರ್ಟ್‌ಫೋನ್ (Smartphone) ಬಳಕೆದಾರರಿಗೆ ನಕಲಿ ಕರೆಗಳು ಅಥವಾ ಇಷ್ಟ ಇಲ್ಲದಿರುವವರ ಫೋನ್ ಸಂಖ್ಯೆಗಳನ್ನು ಬ್ಲಾಕ್(phone number block) ಮಾಡಲು ಅನುಮತಿ ನೀಡಲಾಗುತ್ತದೆ. ಒಂದು ಒಂದರ್ಥದಲ್ಲಿ ಉಪಯೋಗವಾದರೂ ಸಹ ಕೆಲವರು ಅನಗತ್ಯವಾಗಿ ನಂಬರ್‌ಗಳನ್ನು ಬ್ಲಾಕ್ ಮಾಡುತ್ತಾರೆ. ಅಂದರೆ ನಿಮ್ಮಿಂದ ಸಾಲ ಪಡೆದವರು ಅಥವಾ ನಿಮ್ಮ ತಮಾಷೆ ಮಾಡಲು ನಿಮ್ಮ ಪ್ರೀತಿ ಪಾತ್ರರು ನಿಮ್ಮ ನಂಬರ್ ಅನ್ನು ಬ್ಲಾಕ್ ಮಾಡುವುದು ಸಾಮಾನ್ಯ. ಅದಾಗ್ಯೂ ನೀವು ಅವರಿಗೆ ಕರೆ ಮಾಡಬಹುದು.
ಹೌದು, ನಂಬರ್ ಬ್ಲಾಕ್ ಮಾಡಿದ್ರೂ ಅದೇಗೆ ಕರೆ ಮಾಡಬಹುದು ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಆದರೆ, ಇದು ಸಾಧ್ಯ, ಯಾರೇ ಆದರೂ ಸಹ ನಿಮ್ಮ ಫೋನ್ ಸಂಖ್ಯೆಯನ್ನು ನಿರ್ಬಂಧಿಸಿದ್ದರೂ ಈ ಐಡಿಯಾ ಬಳಕೆ ಮಾಡಿಕೊಂಡು ಅವರಿಗೆ ಕರೆ ಮಾಡಬಹುದು. ಈ ಮೂಲಕ ಅವರಿಗೆ ಶಾಕ್ ನೀಡಬಹುದು. ಹಾಗಿದ್ರೆ, ಬ್ಲಾಕ್ ಮಾಡಲಾದ ಫೋನ್‌ಗಳಿಗೆ ಕರೆ ಮಾಡುವುದು ಹೇಗೆ?, ಇದಕ್ಕಾಗಿ ಏನು ಮಾಡಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಯಾರಾದರೂ ನಿಮ್ಮ ಸಂಖ್ಯೆಯನ್ನು ನಿರ್ಬಂಧಿಸಿದ್ದಾರೆ ಯಾವುದೇ ಚಿಂತೆ ಮಾಡಬೇಡಿ. ಮೊದಲೇ ತಿಳಿಸಿದಂತೆ ಕೆಲವು ಕಾರಣಗಳಿಗಾಗಿ ಫೋನ್ ಸಂಖ್ಯೆಯನ್ನು ನಿರ್ಬಂಧಿಸುವುದು ಸಾಮಾನ್ಯವಾದ ವಿಚಾರ. ಆದರೆ, ತುರ್ತಾಗಿ ಅವರಿಗೆ ಕರೆ ಮಾಡಿ ಏನೋ ವಿಷಯ ಹೇಳಬೇಕು ಎಂದುಕೊಂಡಿದ್ದರೆ ಅಥವಾ ಫೋನ್ ಸಂಖ್ಯೆಯನ್ನು ಯಾಕೆ ಬ್ಲಾಕ್ ಮಾಡಿದ್ದೀರಾ ಎಂದು ಮಾಹಿತಿ ತಿಳಿದುಕೊಳ್ಳುವುದಕ್ಕಾದರೂ ಅವರಿಗೆ ಕರೆ ಮಾಡಬೇಕು ಎಂದುಕೊಂಡಿದ್ದರೆ ನೀವು ಈ ಆಪ್ ಬಳಕೆ ಮಾಡಬೇಕಿದೆ.
ಇಂಡಿಕಾಲ್ ಆಪ್(IndyCall) : ಈ ಆಪ್ ಅನ್ನು ನಿಮ್ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀವು ನಿಮಗೆ ಬೇಕಾದವರಿಗೆ ಕರೆ ಮಾಡಬಹುದು. ಈ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇದ್ದು, ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದಾದ ಬಳಿಕ ನೀವು ಆಪ್ ಅನ್ನು ಓಪನ್ ಮಾಡಿ ಅಗತ್ಯವಿರುವ ಅನುಮತಿಗಳನ್ನು ನೀಡಬೇಕಾಗುತ್ತದೆ. ಇದಿಷ್ಟು ಮಾಡಿದ ಮೇಲೆ ಲಾಗಿನ್ ಅನ್ನು ಕ್ಲಿಕ್ ಮಾಡಿ ಆಪ್‌ಗೆ ಎಂಟ್ರಿ ಪಡೆದುಕೊಳ್ಳಬಹುದು.
ಈ ವೇಳೆ ನೀವು ಲಾಗ್ ಇನ್ ಮಾಡಲು ಬಯಸುವ ಗೂಗಲ್ ಖಾತೆಯನ್ನು ಆಯ್ಕೆ ಮಾಡಬೇಕಿದೆ. ಲಾಗ್ ಇನ್ ಮಾಡಿದ ನಂತರ ಕರೆಗಳನ್ನು ಮಾಡಲು ಕೆಲವು ಕ್ರೆಡಿಟ್‌ಗಳನ್ನು ಗಳಿಸುವ ಅಗತ್ಯವಿದೆ. ಆ ಆಪ್‌ನಲ್ಲಿ ಜಾಹೀರಾತುಗಳನ್ನು ವೀಕ್ಷಿಸುವ ಮೂಲಕ ನೀವು ಈ ಕ್ರೆಡಿಟ್‌ಗಳನ್ನು ಪಡೆದುಕೊಳ್ಳಬೇಕಿದೆ. ಈ ಮೂಲಕ ನೀವು ಎಷ್ಟು ಅಂಕ ಪಡೆಯುತ್ತೀರೋ ಅಷ್ಟು ಹೊತ್ತು ಕರೆ ಮಾಡಲು ಅನುಕೂಲ ಮಾಡಿಕೊಡುತ್ತದೆ.
ಈ ಕ್ರೆಡಿಟ್‌ಗಳನ್ನು ಗಳಿಸಲು ಮೇಲಿನ ಬಲ ಮೂಲೆಯಲ್ಲಿರುವ ಗೆಟ್ ಮಿನಿಟ್ಸ್ (Get minutes) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನಷ್ಟು ಉಚಿತ ನಿಮಿಷಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಈ ಕ್ರೆಡಿಟ್‌ಗಳನ್ನು ಬಳಕೆ ಮಾಡಿಕೊಂಡು ನಿಮ್ಮನ್ನು ನಿರ್ಬಂಧಿಸಿದ ವ್ಯಕ್ತಿಯ ಸಂಖ್ಯೆಯನ್ನು ಡಯಲ್ ಮಾಡಬಹುದು ಮತ್ತು ಅವರ ಜೊತೆ ಸಂವಹನ ನಡೆಸಬಹುದಾಗಿದೆ.
ಇನ್ನು ಇಂಡಿಕಾಲ್ ಆಪ್‌ನ ಇನ್ನೊಂದು ಪ್ರಯೋಜನವೆಂದರೆ, ನಿಮ್ಮ ಫೋನ್ ಸಂಖ್ಯೆಯ ಬದಲಿಗೆ ನೀವು ಇನ್ನೊಂದು ಕರೆ ಮಾಡುವ ಐಡಿ ಸಂಖ್ಯೆಯನ್ನು ಹೊಂದಿಸಬಹುದು. ಈ ಆಯ್ಕೆಯ ಮೂಲಕ ನೀವು ಪ್ರತಿ ಬಾರಿಯೂ ಬೇರೆ ಸಂಖ್ಯೆಯಿಂದ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಗೆ ಕರೆ ಮಾಡಬಹುದು. ಇದರಿಂದ ಕರೆ ಸ್ವೀಕಾರ ಮಾಡಿದ ವ್ಯಕ್ತಿಗೆ ಯಾರು ಕರೆ ಮಾಡಿದ್ದಾರೆ ಎನ್ನುವುದೇ ತಿಳಿಯುವುದಿಲ್ಲ.
ದೂಸ್ರಾ ಆಪ್(Doosra APP): ನಿಮ್ಮ ಫೋನ್ ಸಂಖ್ಯೆಯನ್ನು ತೋರಿಸದೆಯೇ ಯಾರಿಗಾದರೂ ಕರೆ ಮಾಡಬೇಕು ಎಂದರೆ ಈ ಆಪ್ ಉತ್ತಮವಾಗಿದೆ. ಖಾಸಗಿ ಸಂಖ್ಯೆಯ ಮೂಲಕ ಕರೆ ಮಾಡುವ ಆಪ್‌ಗಳಲ್ಲಿ ಈ ಆಪ್ ಸಹ ಒಂದಾಗಿದ್ದು, ನಿಮ್ಮ ಸಂಖ್ಯೆಯನ್ನು ನಿರ್ಬಂಧಿಸಿದ ಯಾರಿಗಾದರೂ ಕರೆ ಮಾಡಲು ಇದು ಅನುಮತಿಸುತ್ತದೆ. ಇದನ್ನೂ ಸಹ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
ಈ ಆಪ್ ಅನ್ನು ಓಪನ್ ಮಾಡಿದ ನಂತರ ಮತ್ತು ಅಗತ್ಯ ಅನುಮತಿಗಳನ್ನು ನೀಡಬೇಕಿದೆ. ಈ ವೇಳೆ ನೀವು ಗೆಟ್ ದೂಸ್ರಾ ನಂಬರ್ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಖಾಸಗಿ ಸಂಖ್ಯೆಯನ್ನು ನೀಡಲಾಗುತ್ತದೆ. ನಿಮ್ಮನ್ನು ನಿರ್ಬಂಧಿಸಿದ ವ್ಯಕ್ತಿಗೆ ಕರೆ ಮಾಡಲು ನೀವು ಅದನ್ನು ಖರೀದಿಸಬಹುದು. ಈ ವಿಧಾನವನ್ನು ಬಳಸಲು ನೀವು ಸ್ವಲ್ಪ ಮೊತ್ತವನ್ನು ಪಾವತಿಸಬೇಕಿದೆ. ನೀವು ತಿಂಗಳಿಗೆ 83 ರೂಪಾಯಿಗಳಿಗೆ ಈ ಸಂಖ್ಯೆಯನ್ನು ಪಡೆಯಬಹುದು.
ಯೋಜನೆಯನ್ನು ಆಯ್ಕೆ ಮಾಡಿದ ನಂತರ ನೀವು ಯಾವುದೇ ದಾಖಲೆಯೊಂದಿಗೆ ಇ-ಕೆವೈಸಿ ಪ್ರಕ್ರಿಯೆ ನಡೆಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೆ ಖಾಸಗಿ ಸಂಖ್ಯೆಯನ್ನು ನೀಡಲಾಗುತ್ತದೆ. ಈಗ ನೀವು ಈ ಖಾಸಗಿ ಸಂಖ್ಯೆಯಿಂದ ಯಾವುದೇ ತೊಂದರೆಯಿಲ್ಲದೆ ನಿಮ್ಮನ್ನು ನಿರ್ಬಂಧಿಸಿದ ವ್ಯಕ್ತಿಗೆ ಅಥವಾ ಯಾರಿಗೇ ಆದರೂ ಸಹ ಕರೆ ಮಾಡಬಹುದಾಗಿದೆ.

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ಆಪ್‌ಗಳು ಎಷ್ಟು ಉಪಯುಕ್ತವೋ ಅಷ್ಟೇ ದುರುಪಯೋಗಕ್ಕೂ ಕಾರಣವಾಗುತ್ತವೆ. ಪರಿಣಾಮ ನೀವು ಈ ಆಪ್ ಅನ್ನು ಉತ್ತಮವಾಗಿ ಬಳಕೆ ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಬದಲಾಗಿ ಯಾರ್ಯಾರಿಗೋ ಕರೆ ಮಾಡಿ ಏನಾದರೂ ತೊಂದರೆ ನೀಡಿದರೆ ನೀವು ಪೊಲೀಸ್ ಅತಿಥಿ ಆಗುವುದಂತೂ ಪಕ್ಕಾ. ಹೀಗಾಗಿ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮುನ್ನ ಯೋಚಿಸಿ ಮುಂದುವರೆಯಿರಿ.


Click it and Unblock the Notifications








