ಉಮಾಂಗ್ ಆಪ್‌ನಲ್ಲಿ ಪ್ಯಾನ್ ಕಾರ್ಡ್ ಸೇವೆ ಪಡೆಯುವುದೇಗೆ?; ಇಲ್ಲಿದೆ ಸರಳ ಮಾರ್ಗ
ಪ್ಯಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಣೆ ಆಗುತ್ತಿದ್ದಂತೆ ಈವರೆಗೂ ಲಿಂಕ್ ಮಾಡಿಸದ ಅದೆಷ್ಟೋ ಜನರು ತಮಗೆ ಸಾಧ್ಯವಾದಷ್ಟು ಬೇಗ ಪ್ಯಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸುತ್ತಿದ್ದಾರೆ. ಈ ನಡುವೆ ನಿಮ್ಮ ಪ್ಯಾನ್‌ಕಾರ್ಡ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನೀವು ಈ ಆಪ್ ಅನ್ನು ಬಳಕೆ ಮಾಡಬಹುದು.
ಹೌದು, ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಲು ಹಾಗೂ ದಾಖಲೆಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಲು ಅಗತ್ಯ ಆಪ್‌ಗಳಿದ್ದು, ಅದರಲ್ಲಿ ಉಮಾಂಗ್ (UMANG) ಆಪ್ ಪ್ರಮುಖವಾಗಿದೆ. ಆಡಳಿತ ದೃಷ್ಟಿಯಿಂದ ಈ ಆಪ್ ಸಾಕಷ್ಟು ಸಹಕಾರಿಯಾಗಿದ್ದು, ಸರ್ಕಾರಿ ಸಂಬಂಧಿತ ಸೇವೆಗಳಿಗೆ ಸುಲಭ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಡಿಜಿಟಲ್ ಮಿಷನ್‌ನ ಭಾಗವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗಿದ್ರೆ, ಈ ಆಪ್ ಮೂಲಕ ಯಾವೆಲ್ಲಾ ಪ್ಯಾನ್ ಕಾರ್ಡ್ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

ಉಮಾಂಗ್‌ನಲ್ಲಿ ಪ್ಯಾನ್‌ಕಾರ್ಡ್ ಪರಿಶೀಲನೆ: ಇಪಿಎಫ್‌ಒ, ಭಾರತೀಯ ರೈಲ್ವೆ ಸೇವೆಗಳು ಮತ್ತು ಡಿಜಿಲಾಕರ್‌ನಂತಹ ಇತರ ಸೇವೆಗಳಂತೆ ಉಮಾಂಗ್ ಆಪ್ ಪ್ಯಾನ್ ಕಾರ್ಡ್ ಸಂಬಂಧ ಭಾರತದ ಪ್ರಜೆಗಳಿಗೆ ವಿಶೇಷವಾದ ಸೇವೆ ನೀಡುತ್ತಿದೆ. ಅದರಲ್ಲೂ ಪ್ಯಾನ್ ಕಾರ್ಡ್ ವಿಷಯ ಸದ್ಯಕ್ಕೆ ಭಾರೀ ಚರ್ಚೆಯಲ್ಲಿದೆ. ಈ ನಡುವೆ ನೀವು ಈ ಆಪ್ ಬಳಕೆ ಮಾಡಿಕೊಂಡು ಪ್ಯಾನ್ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳುವುದರ ಜೊತೆಗೆ ಹೊಸದಾಗಿ ಅರ್ಜಿ ಸಹ ಸಲ್ಲಿಸಬಹುದು, ಹಾಗೆಯೇ ಪ್ಯಾನ್ ಕಾರ್ಡ್‌ನಲ್ಲಿ ತಿದ್ದುಪಡಿಯನ್ನು ಮಾಡಬಹುದು.
ಪ್ಯಾನ್ ಕಾರ್ಡ್ ಸಂಬಂಧಿ ಏನೆಲ್ಲಾ ಸೌಲಭ್ಯ ಲಭ್ಯ? : ನೀವು ಈ ಆಪ್‌ನಲ್ಲಿ ಪ್ರಮುಖವಾಗಿ ನಾಲ್ಕು ಸೇವೆಗಳನ್ನು ಪಡೆದುಕೊಳ್ಳಬಹುದು. ಅದರಲ್ಲಿ ಹೊಸ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಆಯ್ಕೆ, ಪ್ಯಾನ್ ಸಂಬಂಧಿತ ಪ್ರಶ್ನೆಗಳನ್ನು ಕೇಳುವುದು (ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ) ಹಾಗೂ ಹತ್ತಿರದ ಕೇಂದ್ರವನ್ನು ಪತ್ತೆ ಮಾಡುವ ಆಯ್ಕೆ, ಪ್ಯಾನ್ ಕಾರ್ಡ್‌ನಲ್ಲಿ ತಿದ್ದುಪಡಿ ಅಥವಾ ಬದಲಾವಣೆಗಾಗಿ ವಿನಂತಿ ಸೇವೆಯನ್ನು ಇದರಿಂದ ಪಡೆದುಕೊಳ್ಳಬಹುದಾಗಿದೆ.
ಪ್ಯಾನ್ ಅಪ್ಲಿಕೇಶನ್ ಟ್ರ್ಯಾಕ್ ಮಾಡಲು ಹೀಗೆ ಮಾಡಿ: ಮೊದಲು ಪ್ಯಾನ್‌ಕಾರ್ಡ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಪ್ಯಾನ್ ವಿಚಾರಣೆ (PAN Query) ಮೇಲೆ ಟ್ಯಾಪ್ ಮಾಡಿ ಅದರಲ್ಲಿ ಟ್ರ್ಯಾಕ್ ಯುವರ್ ಪ್ಯಾನ್ ಕಾರ್ಡ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ಅಪ್ಲಿಕೇಶನ್ ನಂಬರ್ ಅನ್ನು ನಮೂದಿಸಿ ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ಲಭ್ಯವಾಗುತ್ತದೆ.
ಈ ಉಮಾಂಗ್ ಆಪ್ ಬಳಕೆ ಮಾಡುವುದು ಹೇಗೆ?: ಸಾಮಾನ್ಯವಾಗಿ ಎಲ್ಲಾ ಆಪ್‌ಗಳನ್ನು ಬಳಕೆ ಮಾಡುವ ಹಾಗೆಯೇ ಈ ಆಪ್‌ಅನ್ನು ಸಹ ಅತ್ಯಂತ ಸರಳವಾಗಿ ಬಳಕೆ ಮಾಡಬಹುದು. ಆದರೆ, ಪ್ಯಾನ್ ವಿಭಾಗದಲ್ಲಿ ಈ ಸೇವೆ ಪಡೆಯಬೇಕು ಎಂದರೆ ನೀವು ಮೊದಲು ಆಪ್ ಅನ್ನು ಓಪನ್ ಮಾಡಿ ಲಾಗಿನ್ ಆದ ನಂತರ ಮೈ ಪ್ಯಾನ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಆಪ್ ಬಳಕೆ ಮಾಡಲು ಈ ಸೇವೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಾದರೆ ವೆಬ್‌ಸೈಟ್ ಮೂಲಕವೂ ಈ ಸೇವೆ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು https://web.umang.gov.in/landing/ ಅನ್ನು ಬಳಕೆ ಮಾಡಿಕೊಳ್ಳಬಹುದು. ನಂತರ ಲಾಗಿನ್ ಅಥವಾ ರಿಜಿಸ್ಟರ್ ಎಂಬ ನೀಲಿ ಬಟನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಇದಾದ ಬಳಿಕ ಓಟಿಪಿ ಅಥವಾ ಎಂ ಪಿನ್ ಬಳಕೆ ಮಾಡಿಕೊಂಡು ಲಾಗಿನ್ ಪ್ರಕ್ರಿಯೆ ನಡೆಸಬಹುದು. ಇದಕ್ಕೆ ನಿಮ್ಮ ಫೋನ್‌ನಂಬರ್ ಬಳಕೆ ಮಾಡಿಕೊಳ್ಳಬೇಕಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಓಟಿಪಿಯನ್ನು ಕೇಳಲಾದ ಜಾಗದಲ್ಲಿ ಎಂಟ್ರಿ ಮಾಡುವ ಮೂಲಕ ಮುಂದಿನ ಹಂತಕ್ಕೆ ತಲುಪಬಹುದು. ಈ ಮೂಲಕ ಅಗತ್ಯ ಇರುವ ಸರ್ಕಾರ ದಾಖಲೆಗಳನ್ನು ಹಾಗೂ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








