ಈ ದೇವಾಲಯಗಳ ದರ್ಶನಕ್ಕೆ 'ಆಪ್' ಸೇವೆ; ಇವುಗಳಿಂದ ಏನೆಲ್ಲಾ ಪ್ರಯೋಜನ?
ಇಂದು ಧಾರ್ಮಿಕತೆಗೂ ಹಾಗೂ ತಂತ್ರಜ್ಞಾನಕ್ಕೂ ಉತ್ತಮ ಸಂಬಂಧ ಏರ್ಪಟ್ಟಿದೆ. ದೇಶದಲ್ಲಿರುವ ಹಲವಾರು ಪ್ರಮುಖ ದೇವಾಲಯ ಹಾಗೂ ಧಾರ್ಮಿಕ ಸಂಬಂಧಿ ಮಾಹಿತಿಯನ್ನು ನಾವು ಕ್ಷಣ ಮಾತ್ರದಲ್ಲಿ ಸ್ಮಾರ್ಟ್‌ಫೋನ್ ಅಥವಾ ಇನ್ನಿತರೆ ಸ್ಮಾರ್ಟ್‌ಡಿವೈಸ್‌ಗಳ ಮೂಲಕ ತಿಳಿದುಕೊಳ್ಳಬಹುದು. ಅದಾಗ್ಯೂ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು ಎಂದವರಿಗೂ ಇಂದು ತಂತ್ರಜ್ಞಾನ ತನ್ನದೇ ಆದ ರೀತಿಯಲ್ಲಿ ಸಹಾಯಕವಾಗಿದೆ.

ಹೌದು, ಇಂದು ದೇಶದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಬೇಕು ಎಂದರೆ ಆ ದೇವಾಲಯಕ್ಕೆ ಸಂಬಂಧಿಸಿದ ಆಪ್ ಅಥವಾ ವೆಬ್‌ಸೈಟ್ ಗೆ ಭೇಟಿ ನೀಡಬೇಕಿದೆ. ಯಾಕೆಂದರೆ ಭಕ್ತರ ಸಂಖ್ಯೆ ಹೆಚ್ಚಾದರಂತೆ ಆಡಳಿತ ಮಂಡಳಿಗೆ ನಿಯಂತ್ರಣ ಕಷ್ಟದ ಕೆಲಸವಾಗುತ್ತದೆ. ಈ ಕಾರಣಕ್ಕೆ ಭಕ್ತರು ಯಾವೆಲ್ಲಾ ದೇವಾಲಯಗಳಿಗೆ ಹೋಗುವ ಮುನ್ನ ಆಪ್ ಮೂಲಕ ನೋಂದಣಿ ಮಾಡಬೇಕು ಅಥವಾ ಇದ್ದಲ್ಲಿಯೇ ದರ್ಶನ ಪಡೆಯಲು ಯಾವೆಲ್ಲಾ ದೇವಾಲಯಗಳು ಅನುವು ಮಾಡಿಕೊಟ್ಟಿವೆ ಎಂಬ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.
ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ
ಅಯ್ಯಪ್ಪನ ದರ್ಶನ ಪಡೆಯಬೇಕು ಎಂದರೆ ಕಡ್ಡಾಯವಾಗಿ ಭಕ್ತರು ಆಪ್ ಮೂಲಕ ಅಥವಾ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಅದರಲ್ಲೂ ಅತೀ ಹೆಚ್ಚಾಗಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇವಸ್ಥಾನ ಇದಾಗಿದೆ ಎಂದು ಹೇಳಬಹುದು. ಇನ್ನು ಈ ಆಪ್ ಮೂಲಕ ವಸತಿಯನ್ನು ಕಾಯ್ದಿರಿಸುವ ಆಯ್ಕೆಯೂ ಸಹ ಇದೆ. ಅದರಂತೆ ಮಲಯಾಳಂ, ಇಂಗ್ಲಿಷ್ ಮತ್ತು ತಮಿಳು ಭಾಷೆಗಳ ಸೌಲಭ್ಯವನ್ನು ಈ ಆಪ್‌ನಲ್ಲಿ ನೀಡಲಾಗಿದ್ದು, Sabarimala Sri Ayyappa Temple ಎಂದು ಪ್ಲೇಸ್ಟೋರ್‌ನಲ್ಲಿ ಸರ್ಚ್ ಮಾಡಿದರೆ ನಿಮಗೆ ಈ ಆಪ್ ಲಭ್ಯ.

ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ
ಕಾಶಿ ವಿಶ್ವನಾಥನನ್ನು ನೋಡಲು ದೇಶದ ಹಲವಾರು ಮೂಲೆಗಳಿಂದ ಭಕ್ತರು ಹೋಗುತ್ತಾರೆ. ಅದರಲ್ಲೂ ಕರ್ನಾಟಕದಿಂದಲೂ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುವುದು ಸಾಮಾನ್ಯ ಸಂಗತಿ. ಇನ್ನು ಈ ವಿಶ್ವನಾಥನ ದರ್ಶನ ಮಾಡುವ ಮುನ್ನ ಕಾಶಿ ವಿಶ್ವನಾಥ ದೇವಸ್ಥಾನದ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ. ಆಪ್ ಮೂಲಕ ಭಕ್ತರು ಆರತಿ, ರುದ್ರಾಭಿಷೇಕ, ದರ್ಶನ ಮತ್ತು ಮಹಾದೇವ ಪೂಜೆಯನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ. ಹಾಗೆಯೇ ಆರತಿಯ ನೇರಪ್ರಸಾರ ವೀಕ್ಷಿಸುವ ಆಯ್ಕೆ ಸಹ ಲಭ್ಯವಿದ್ದು, ಈ ಅಪ್ಲಿಕೇಶನ್ ಬಳಕೆ ತುಂಬಾ ಸರಳವಾವಾಗಿದೆ. Shri Kashi Vishwanath temple trust ಹೆಸರಿನಲ್ಲಿ ಪ್ಲೇ ಸ್ಟೋರ್‌ನಲ್ಲಿ ಈ ಆಪ್ ಲಭ್ಯ.
ಮುಂಬೈ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ
ಕರ್ನಾಟಕದ ಅಥವಾ ಇನ್ಯಾವುದೇ ರಾಜ್ಯದಿಂದ ಮುಂಬೈಗೆ ಸುಲಭವಾಗಿ ತಲುಪಲು ಸಾಧ್ಯವಿಲ್ಲ. ಅದರಲ್ಲೂ ವಯಸ್ಸಾದವರು ಹಾಗೂ ಮಕ್ಕಳಿಗೆ ಈ ಪ್ರಖ್ಯಾತ ಮುಂಬೈ ಶ್ರೀ ಸಿದ್ಧಿವಿನಾಯಕ ಗಣಪತಿಯ ದರ್ಶನ ಮಾಡಿಸಲು ಭಕ್ತರು ಆಪ್ ಬಳಕೆ ಮಾಡಬಹುದಾಗಿದೆ. ಈ ಆಪ್ ಮೂಲಕ ಸಿದ್ಧಿವಿನಾಯಕ ಗಣಪತಿ ದೇವಸ್ಥಾನದ ನೇರ ವರ್ಚುವಲ್ ದರ್ಶನವನ್ನು ಪಡೆಯಬಹುದಾಗಿದೆ. ಹಾಗೆಯೇ ದೇವಸ್ಥಾನಕ್ಕೆ ನೀವು ಏನಾದರೂ ದೇಣಿಗೆ ನೀಡಬೇಕು ಎಂದರೆ ಅದಕ್ಕೂ ಆಯ್ಕೆ ನೀಡಲಾಗಿದೆ. ಇನ್ನು ಈ ಆಪ್ ಅನ್ನು ನೀವು ದೇವಾಲಯದ ಅಧಿಕೃತ ವೆಬ್‌ಸೈಟ್‌ಗೆ ತೆರಳುವ ಮೂಲಕ Shri Siddhivinayak Ganpati temple ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಶಿರಡಿ ಸಾಯಿಬಾಬಾ ದೇವಸ್ಥಾನ
ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಜಗತ್ತಿನ ಮೂಲೆ ಮೂಲೆಯಿಂದಲೂ ಭಕ್ತರು ಆಗಮಿಸುತ್ತಾರೆ. ಈ ಕಾರಣಕ್ಕಾಗಿಯೇ ದೇವಸ್ಥಾನ ಮಂಡಳಿ ಆಪ್ ನಿರ್ಮಾಣ ಮಾಡಿದ್ದು, ಈ ಮೂಲಕ ಭಕ್ತರು ಆರತಿಯ ದರ್ಶನಕ್ಕಾಗಿ ಹಾಗೂ ವಸತಿಯನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಆಪ್ ಮೂಲಕ ಭಕ್ತರು ದೇಣಿಗೆಯನ್ನೂ ನೀಡಬಹುದು. ಇನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ Shri Saibaba Sansthan Shridi ಎಂದು ಸರ್ಚ್ ಮಾಡಿದರೆ ಲಭ್ಯವಾಗಲಿದೆ.
ವಿಜಯವಾಡದ ಕನಕ ದುರ್ಗಾ ದೇವಸ್ಥಾನ
ವಿಜಯವಾಡದ ಕನಕ ದುರ್ಗಾ ದೇವಸ್ಥಾನಕ್ಕೂ ಸಹ ಭಕ್ತರು ಸುಲಭವಾಗಿ ಹಾಗೂ ಬೇಕೆಂದ ಸಮಯದಲ್ಲಿ ದರ್ಶನ ಪಡೆಯಲು ಬರಬಹುದು. ಇದಕ್ಕಾಗಿ ಆಪ್ ನಿರ್ಮಾಣ ಮಾಡಲಾಗಿದ್ದು, ಯಾತ್ರಾರ್ಥಿಗಳಿಗೆ ದರ್ಶನ ಹಾಗೂ ಇನ್ನಿತರೆ ಸೇವೆಯನ್ನು ಕಾಯ್ದಿರಿಸಲು ಮತ್ತು ದೇಣಿಗೆ ನೀಡಲು ಈ ಆಪ್ ಅನುಮತಿಸುತ್ತದೆ. ಹಾಗೆಯೇ ಈ ಆಪ್ ಮೂಲಕ ಬಳಕೆದಾರರು ದೇವಾಲಯಕ್ಕೆ ಸಂಬಂಧಿಸಿದ ಪುಸ್ತಕಗಳು, ಆಧ್ಯಾತ್ಮಿಕ ವಸ್ತುಗಳು ಮತ್ತು ಇತರ ಸಣ್ಣ ಕರಕುಶಲ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಇನ್ನು ಆಂಡ್ರಾಯ್ಡ್ ಬಳಕೆದಾರರು Kanaka Durga temple Vijayawada ಎಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹುಡುಕಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








